Friday, 20th September 2024

ಟಾಟಾ-ಅಂಬಾನಿ ಮಾತ್ರವಲ್ಲ, ನಡೆಯುತ್ತಿದೆ ನವೋದ್ಯಮಗಳ ಕ್ರಾಂತಿ

ಅಭಿಮತ

ಗಣೇಶ್ ಭಟ್, ವಾರಣಾಸಿ

ganeshabhatv@gmail.com

ಈ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಭಾರತದಲ್ಲಿ ಉದ್ಯಮಗಳನ್ನು ಹಾಗೂ ಉದ್ಯಮಿಗಳನ್ನು ಅಪರಾಧವೆಂಬಂತೆ ಕಾಣಲಾಗುತ್ತಿತ್ತು. ಖಾಸಗಿಯವರ ಬಳಿ ಇದ್ದ ಉದ್ಯಮಗಳನ್ನು ಸರಕಾರ ರಾಷ್ಟ್ರೀಕರಣ ಮಾಡುತ್ತಿತ್ತು. ಖಾಸಗಿಯವರಿಂದ ನಡೆಸಲ್ಪಡುತ್ತಿದ್ದ ವಿಮಾನ ಯಾನ ಸೇವೆ, ಜೀವವಿಮಾ ಸಂಸ್ಥೆ, ಬ್ಯಾಂಕ್, ಗಣಿ ಗಾರಿಕೆ ಮೊದಲಾದವುಗಳನ್ನು ಸರಕಾರ ವಶಪಡಿಸಿಕೊಂಡಿತ್ತು. ಆದರೆ ಸರಕಾರದಿಂದ ನಡೆಸಲ್ಪಡುತ್ತಿದ್ದ ಸಂಸ್ಥೆಗಳಾದರೂ ಲಾಭದಲ್ಲಿ ನಡೆಯುತ್ತಿತ್ತೇ? ಅದೂ ಇಲ್ಲ.

ಏಕಸ್ವಾಮ್ಯದ ನವರತ್ನಗಳು ಎಂದು ಕರೆಸಿಕೊಂಡಿದ್ದ ಕಂಪೆನಿಗಳು ಅವರ ಸಾಮರ್ಥ್ಯದ ಅರ್ಧ ಲಾಭವನ್ನು ಕೂಡಾ ಗಳಿಸಿಕೊಳ್ಳುತ್ತಿರಲಿಲ್ಲ. ಸರಕಾರಿ  ಬಾಬು ಗಳ ಅಸಡ್ಡೆ, ನಿಧಾನತೆ, ರಾಜಕಾರಣಿಗಳ ವಿಪರೀತ ಹಸ್ತಕ್ಷೇಪ, ಸ್ವಜನ ಪಕ್ಷಪಾತ, ಅಸಮರ್ಪಕ ನಾಯಕತ್ವ, ತಪ್ಪು ನಿರ್ಧಾರ ಹಾಗೂ ಭ್ರಷ್ಟಾಚಾರ ಗಳಿಂದ ನರಳಿ ಸರಕಾರದ ಒಡೆತನಕ್ಕೆ ಬಂದ ಸಂಸ್ಥೆಗಳು ನಷ್ಟವನ್ನು ಅನುಭವಿಸಿದವು. ಎಚ್ ಎಂ ಟಿ ಯಂತಹ ಸಂಸ್ಥೆಗಳು ಮುಚ್ಚಿ ಹೋದವು. ಉದ್ಯಮಶೀಲ ನಾಯಕತ್ವವು ಸಮಾಜವಾದೀ ಪ್ರೇರಿತ ಆರ್ಥಿಕತೆಯಿಂದ ಕರಟಿ ಹೋಗು ತ್ತಿದ್ದವು. ರಾಷ್ಟ್ರೀಕರಣ, ಲೈಸೆನ್ಸ್ ರಾಜ್, ಮಿತಿ ಮೀರಿದ ಸರಕಾರಿ ನಿಬಂಧನೆಗಳು, ತೆರಿಗೆ ಭಯೋತ್ಪಾದನೆ, ಕಾರ್ಮಿಕ ಹೋರಾಟಗಳಲ್ಲಿ ಇದ್ದ ಉದ್ಯಮಗಳೇ ನೆಲಕಚ್ಚುತ್ತಿದ್ದಾಗ ನವೋದ್ಯಮಗಳಿಗೆ ಅವಕಾಶವಾದರೂ ಎಲ್ಲಿ? ಆದರೆ ಕಾಲ ಬದಲಾಗಿದೆ.

ದೇಶದಲ್ಲಿಂದು ಉದ್ಯಮಸ್ನೇಹಿ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಇದನ್ನು ವಿರೋಧ ಪಕ್ಷಗಳು ಸೂಟ್ ಬೂಟ್ ಸರಕಾರವೆಂದು ದೂರುತ್ತಿವೆ. ಸರಕಾರವು ಟಾಟಾ ಅಂಬಾನಿ ಅದಾನಿಗಳಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಿವೆ ಎಂದು ಅರೋಪಿಸುತ್ತಿವೆ. ಆದರೆ ಭಾರತದಲ್ಲಾಗುತ್ತಿರುವ ಸಕಾರಾತ್ಮಕ ಬದಲಾವಣೆ ಗಳು ದೇಶದಲ್ಲಿ ಉದ್ಯಮಗಳ ಅಭಿವೃದ್ಧಿಗೆ ಕಾರಣವಾಗುತ್ತಿವೆ. ಇದರ ಪರಿಣಾಮವಾಗಿ ಭಾರತದಲ್ಲಿಂದು ನವೋದ್ಯಮಗಳ ಕ್ರಾಂತಿಯೇ ನಡೆಯುತ್ತಿದೆ.

ಒಂದು ಅನನ್ಯ ಉತ್ಪನ್ನ ಅಥವಾ ಸೇವೆಯನ್ನು ಅಭಿವೃದ್ಧಿಪಡಿಸಲು ಅಥವಾ ಮಾರುಕಟ್ಟೆಗೆ ತರಲು ಓರ್ವ ಉದ್ಯಮಿ ಅಥವಾ ಹಲವು ಉದ್ಯಮಿಗಳು ಸ್ಥಾಪಿಸಿದ
ಯುವ ಕಂಪನಿಯನ್ನು ಸ್ಟಾರ್ಟ್ ಅಪ್ ಅಥವಾ ನವೋದ್ಯಮ ಎಂದು ಕರೆಯುತ್ತಾರೆ. ದೇಶದಲ್ಲಿಂದು ಡಿಪಾರ್ಟ್‌ಮೆಂಟ್ ಫಾರ್ ಪ್ರಮೋಶನ್ ಆಫ್ ಇಂಡಸ್ಟ್ರಿ
ಆಂಡ್ ಇಂಟರ್ನಲ್ ಟ್ರೇಡ್(ಡಿಪಿಐಐಟಿ) ಗುರುತಿಸಿರುವಂತೆ 54805 ನವೋದ್ಯಮಗಳಿವೆ. ನವೋದ್ಯಮಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಭಾರತ
ಸರಕಾರವು ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯನ್ನು ಹಮ್ಮಿಕೊಂಡಿತು.

ಹೊಸ ಆವಿಷ್ಕಾರ, ಉದ್ಯೋಗ ನಿರ್ಮಾಣ ಹಾಗೂ ಸಂಪತ್ತಿನ ಸೃಷ್ಟಿ ಸ್ಟಾರ್ಟ್ ಅಪ್ ಇಂಡಿಯಾದ ಗುರಿಯಾಗಿದೆ. ವಾರ್ಷಿಕವಾಗಿ 100 ಕೋಟಿ ರುಪಾಯಿ ಗಳಿಂದ ಕಡಿಮೆ ವಹಿವಾಟು ಹೊಂದಿರುವ, 10 ವರ್ಷವನ್ನು ಮೀರಿರದ ಖಾಸಗಿ ನಿಯಮಿತ ನವೋದ್ಯಮಗಳು ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯ ಫಲಾನುಭವವನ್ನು ಪಡೆಯುತ್ತವೆ. ಉದ್ಯಮಿಗಳಿಗೆ ಆರಂಭಿಕ ದಿವಸಗಳಲ್ಲಿ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ದೇಶಾದ್ಯಂತ 128 ಸ್ಟಾರ್ಟ್ ಅಪ್ ಇನ್ಕ್ಯುಬೇಟರ್ ಸೆಂಟರ್‌ಗಳನ್ನು ಆರಂಭಿಸಲಾಗಿದೆ. ಈ ಇನ್ಕ್ಯುಬೇಟರ್ ಸೆಂಟರ್‌ಗಳು ವ್ಯಾಪಾರ ಹಾಗೂ ತಂತ್ರಜ್ಞಾನ ಪ್ರಪಂಚದಲ್ಲಿ ಅನುಭವವನ್ನು ಹೊಂದಿರುವ ಯುವೋದ್ಯಮ ಗಳಿಗೆ ಆರಂಭಿಕ ಪ್ರೋತ್ಸಾಹ ನಿಽ, ತಾಂತ್ರಿಕ ಬೆಂಬಲ, ಸಲಹೆ, ಸ್ಥಳಾವಕಾಶ, ಲ್ಯಾಬೋರೇಟರಿ, ಸಂಪರ್ಕ ಹಾಗೂ ಮಾರುಕಟ್ಟೆ ಅವಕಾಶಗಳನ್ನು ಒದಗಿಸಿಕೊಡುತ್ತವೆ.

ಇನ್ಕ್ಯುಬೇಟರ್ ಸೆಂಟರ್‌ಗಳು ಹೊಸ ಉದ್ಯಮಗಳಿಗೆ 2 ರಿಂದ 3 ವರ್ಷಗಳ ಕಾಲ ಬೆಂಬಲವನ್ನು ಕೊಡುತ್ತವೆ. ಡಿಪಿಐಐಟಿ ಗಳಿಂದ ಗುರುತಿಸಲ್ಪಟ್ಟ ಹೊಸ ಉದ್ಯಮಗಳಿಗೆ ಸರಕಾರವು ಸ್ಟಾರ್ಟ್ ಅಪ್ ಸೀಡ್ ಫಂಡ್(ಮೂಲ ಧನ) ಕಾರ್ಯಕ್ರಮದಡಿಯಲ್ಲಿ ಆರ್ಥಿಕ ನೆರವನ್ನು ಒದಗಿಸುತ್ತದೆ. 50 ಲಕ್ಷ ರುಪಾಯಿಗಳ ವರೆಗೆ ಸೀಡ್ ಫಂಡ್ ನೆರವನ್ನು ಕೊಡಲಾಗುತ್ತಿದೆ. ಅನುದಾನ ಅಥವಾ ಸಾಲದ ರೀತಿಯಲ್ಲಿ ಸೀಡ್ ಫಂಡ್ ಅನ್ನು ಪಡೆದುಕೊಳ್ಳಬಹುದು. ಕೇಂದ್ರ ಸರಕಾರದ ಮಿನಿಸ್ಟ್ರಿ ಆಫ್ ಇಲೆಕ್ಟ್ರಾನಿಕ್ಸ್ ಆಂಡ್ ಇನರ್ಮೇಷನ್ ಟೆಕ್ನಾಲಜಿಯು 300 ಸ್ಟಾರ್ಟ್ ಅಪ್‌ಗಳಿಗೆ ವೇಗವರ್ಧಕವಾಗಿ ಆರ್ಥಿಕ ಸಹಾಯವನ್ನು ಮಾಡುವ
ಘೋಷಣೆಯನ್ನು ಮಾಡಿದೆ.

ನವೋದ್ಯಮಗಳಲ್ಲಿ ಹೂಡಿಕೆ ಮಾಡುವ (ಆಂಜೆಲ್ ಇನ್ವೆಸ್ಟರ್) ಹೂಡಿಕೆದಾರರ ಹೂಡಿಕೆಯ ಮೇಲಿನ ತೆರಿಗೆಯಲ್ಲಿ ವಿನಾಯಿತಿಯನ್ನು ಕೊಡಲಾಗಿದೆ. ಮೊದಲು ಹೂಡಿಕೆದಾರರ ಹೂಡಿಕೆಯ ಮೊತ್ತದ ಮೇಲೆ 30% ತೆರಿಗೆಯನ್ನು ಹೇರಲಾಗುತ್ತಿತ್ತು. ಬದಲಾದ ಆದಾಯ ತೆರಿಗೆ ಕಾನೂನಿನಲ್ಲಿ ಕನಿಷ್ಠ 2 ಕೋಟಿ ರುಪಾಯಿ ಗಳನ್ನು ನವೋದ್ಯಮವೊಂದರಲ್ಲಿ ಹೂಡಿಕೆ ಮಾಡಿದಂತಹ ಆಂಜೆಲ್ ಹೂಡಿಕೆದಾರರಿಗೆ ವಾರ್ಷಿಕವಾಗಿ 25ಲಕ್ಷ ರುಪಾಯಿಗಳವರೆಗಿನ ಆದಾಯಕ್ಕೆ 3 ವರ್ಷ ಗಳ ಕಾಲ ಆದಾಯ ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತಿದೆ.

ಈ ಕ್ರಮವು ಆಂಜೆಲ್ ಹೂಡಿಕೆದಾರರಿಗೆ ನವೋದ್ಯಮಗಳಲ್ಲಿ ಹೂಡಿಕೆ ಮಾಡಲು ದೊಡ್ಡ ಮಟ್ಟಿನ ಪ್ರೋತ್ಸಾಹ ನೀಡಿದೆ. ಇದೇ ರೀತಿ ನವೋದ್ಯಮಗಳ ಆದಾಯಕ್ಕೂ 3 ವರ್ಷಗಳ ಕಾಲ ತೆರಿಗೆ ವಿನಾಯಿತಿ (ಟ್ಯಾಕ್ಸ್ ಹಾಲಿಡೇ) ನೀಡಲಾಗುತ್ತಿದೆ. ಇದೀಗ ವಿದೇಶಿ ಹೂಡಿಕೆದಾರ ಸಂಸ್ಥೆಗಳೂ ಭಾರತೀಯ ಸ್ಟಾರ್ಟ್ ಅಪ್‌ಗಳಲ್ಲಿ ನೇರ ಹೂಡಿಕೆಯನ್ನು ಮಾಡಬಹುದಾಗಿದೆ. ಭಾರತೀಯ ಸ್ಟಾರ್ಟ್ ಅಪ್ ಗಳಲ್ಲಿ ವಿದೇಶಿ ಹೂಡಿಕೆದಾರರು ದೊಡ್ಡ ಮಟ್ಟಿನ ಹೂಡಿಕೆ ಮಾಡುತ್ತಿದ್ದಾರೆ. 2019 ನೇ ಇಸವಿಯಿಂದ ಇದುವರೆಗೆ 44.4 ಶತಕೋಟಿ ಡಾಲರ್ ಗಳಷ್ಟು (3,26,487 ಕೋಟಿ ರುಪಾಯಿಗಳು) ವಿದೇಶಿ ಹೂಡಿಕೆ ಯನ್ನು ಭಾರತೀಯ ಸ್ಟಾರ್ಟ್ ಅಪ್‌ಗಳು ಆಕರ್ಷಿಸಿವೆ.

2021 ಜನವರಿಯಿಂದ ಆಗಸ್ಟ್ ವರೆಗಿನ 8 ತಿಂಗಳ ಅವಧಿಯಲ್ಲಿ ದಾಖಲೆಯ 20.2 ಶತಕೋಟಿ ಡಾಲರ್(1,48,470 ಕೋಟಿ ರು.) ಗಳ ವಿದೇಶಿ ನೇರ ಹೂಡಿಕೆ ಭಾರತೀಯ ನವೋದ್ಯಮಗಳಲ್ಲಿ ಆಗಿದೆ. ಕಳೆದ 3 ವರ್ಷಗಳಲ್ಲಿ ವಿದೇಶಿ ಹೂಡಿಕೆದಾರರು ಹಾಗೂ ಭಾರತದ ನವೋದ್ಯಮಗಳ ನಡುವೆ 2229 ಹೂಡಿಕೆಯ ಒಪ್ಪಂದಗಳಾಗಿವೆ. ಭಾರತೀಯ ಮಾರುಕಟ್ಟೆಯ ವಿಸ್ತಾರ ಹಾಗೂ ನವೋದ್ಯಮಗಳ ಸಾಮರ್ಥ್ಯಗಳು ವಿದೇಶಿ ಹೂಡಿಕೆದಾರರು ಭಾರತೀಯ ನವೋದ್ಯಮಗಳಲ್ಲಿ ಹೂಡಿಕೆ ಮಾಡುವಂತೆ ಮಾಡಿದೆ.

ವಿಶ್ವ ಬ್ಯಾಂಕ್ ಬಿಡುಗಡೆ ಮಾಡುವ ಉದ್ಯಮಸ್ನೇಹಿ ರಾಷ್ಟ್ರಗಳ ( ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಇಂಡೆಕ್ಸ್) ಸೂಚ್ಯಂಕ ಪಟ್ಟಿಯಲ್ಲಿ ಕಳೆದ 7 ವರ್ಷಗಳಲ್ಲಿ ಭಾರತವು 79 ಸ್ಥಾನಗಳಷ್ಟು ಮೇಲೇರಿ 142 ನೇ ಸ್ಥಾನದಿಂದ 63 ನೇ ಸ್ಥಾನಕ್ಕೆ ಏರಿದೆ. ಭಾರತದ ಈ ಏರಿಕೆ ಆಕಸ್ಮಿಕವಾದ ಏರಿಕೆ ಅಲ್ಲ. ವಿದ್ಯುತ್, ನೀರಾವರಿ ಹಾಗೂ ರಸ್ತೆಗಳಂತಹ ಮೂಲಭೂತ ಸೌಕರ್ಯದಲ್ಲಾದ ಸುಧಾರಣೆ, ಸರಳಗೊಂಡ ನೋಂದಾವಣಿ ನಿಯಮ, ಹೂಡಿಕೆಯ ಮೇಲಿನ ಅನಾವಶ್ಯಕ ನಿಬಂಧಗಳ ನಿವಾರಣೆ, ನಿರ್ಮಾಣ ಅನುಮತಿ, ಟ್ಯಾಕ್ಸ್ ನಿಯಮಗಳಲ್ಲಾದ ಸುಧಾರಣೆ, ಹೆಚ್ಚಿದ ಹೂಡಿಕೆದಾರರ ರಕ್ಷಣೆ, ಕಡಿಮೆಗೊಂಡ ಭ್ರಷ್ಟಾಚಾರ ಮೊದಲಾದ
ಬದಲಾವಣೆಗಳು ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಭಾರತದ ಮೇಲೆ ಹೆಚ್ಚು ಭರವಸೆಯನ್ನು ಮೂಡಿಸಿದವು ಹಾಗೂ ನವೋದ್ಯಮಗಳು ಭಾರತದಲ್ಲಿ ಹೆಚ್ಚು ಹೆಚ್ಚಾಗಿ ರೂಪುಗೊಳ್ಳಲು ಕಾರಣವಾದವು.

ಪ್ರಸ್ತುತ ಭಾರತದಲ್ಲಿ ಕಾರ್ಯಾಚರಿಸುತ್ತಿರುವ 54805 ಸ್ಟಾರ್ಟ್ ಅಪ್‌ಗಳು ಏನಿಲ್ಲವೆಂದರೂ 30 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಅಂದಾಜಿಸಲಾಗಿದೆ. ಈ ಸ್ಟಾರ್ಟ್ ಅಪ್‌ಗಳು ಕನಿಷ್ಠ 1 ಕೋಟಿ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ. ಸ್ಟಾರ್ಟ್ ಅಪ್ ಗಳಿಗೆ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಇದೆ. 2014 ರಿಂದ ಭಾರತದ ನವೋದ್ಯಮಗಳು 90 ಶತಕೋಟಿ ಡಾಲರ್ (661500 ಕೋಟಿ ರು.)ಗಳಷ್ಟು ವಿದೇಶಿ ಹೂಡಿಕೆಯನ್ನು ಗಳಿಸಿವೆ ಹಾಗೂ 300 ಶತಕೋಟಿ ಡಾಲರ್ (2200000 ಕೋಟಿ ರು.)ಗಳಷ್ಟು ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಹೊಂದಿವೆ ಎಂದರೆ ಸದ್ಯದ ಭಾರತದ ಆರ್ಥಿಕತೆಯಲ್ಲಿ ನವೋದ್ಯಮಗಳ ಪಾಲನ್ನು ಅರ್ಥ ಮಾಡಿಕೊಳ್ಳಬಹುದು.

ಒಂದು ಶತಕೋಟಿ ಡಾಲರ್ (7350 ಕೋಟಿ ರು.) ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯದ ನವೋದ್ಯಮಗಳನ್ನು ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳು ಎಂದು ಕರೆಯುತ್ತಾರೆ. ಜಾಗತಿಕವಾಗಿ 466 ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳು ಇವೆ. 122 ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳನ್ನು ಹೊಂದಿದ ಅಮೇರಿಕಾ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದ್ದರೆ, 92 ಯುನಿಕಾರ್ನ್ ಸ್ಟಾರ್ಟ್ ಅಪ್ ಗಳನ್ನು ಹೊಂದಿದ ಚೀನಾ 2 ನೇ ಸ್ಥಾನದಲ್ಲಿದೆ. 63 ಯುನಿಕಾರ್ನ್ ಸ್ಟಾರ್ಟ್ ಅಪ್ ಗಳನ್ನು ಹೊಂದಿದ ಭಾರತವು ಜಾಗತಿಕವಾಗಿ ಮೂರನೇ ಅತೀ ಹೆಚ್ಚು ಯುನಿಕಾರ್ನ್ ಸ್ಟಾರ್ಟ್ ಅಪ್ ಗಳನ್ನು ಹೊಂದಿದ ದೇಶವಾಗಿದೆ.

ಭಾರತವು 2021 ರಲ್ಲಿ ಅತೀ ಹೆಚ್ಚು ಹಾಗೂ ವೇಗವಾಗಿ ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳನ್ನು ಸೃಷ್ಟಿಸುತ್ತಿರುವ ದೇಶವಾಗಿ ಮೂಡಿಬಂದಿದೆ. 2021 ರ ಜನವರಿ ತಿಂಗಳಿಂದ ಆಗಸ್ಟ್ ತಿಂಗಳವರೆಗಿನ 8 ತಿಂಗಳುಗಳಲ್ಲಿ ಭಾರತದಲ್ಲಿ 26 ಸ್ಟಾರ್ಟ್ ಅಪ್‌ಗಳು ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳಾಗಿ ರೂಪುಗೊಂಡಿವೆ. 2025 ಇಸವಿಗಾಗುವಾಗ ಭಾರತದಲ್ಲಿ 150 ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳು ರೂಪುಗೊಳ್ಳಬಹುದು ಎಂದು ಅಂದಾಜಿಸಲಾಗುತ್ತಿದೆ. ಇದೇ ವೇಳೆಗೆ ಭಾರತದಲ್ಲಿರುವ ಸ್ಟಾರ್ಟ್ ಅಪ್ ಗಳ ಸಂಖ್ಯೆಯೂ 100000 ಕ್ಕೆ ಏರಲಿದೆ ಎನ್ನುವ ಲೆಕ್ಕಾಚಾರವಿದೆ.

ಸ್ಟಾರ್ಟ್ ಅಪ್‌ಗಳ ಮಾರುಕಟ್ಟೆ ಮೌಲ್ಯದ ಮೇಲೆ ಅವುಗಳನ್ನು ಮಿನಿಕಾರ್ನ್, ಸೂನಿಕಾರ್ನ್, ಯುನಿಕಾರ್ನ್, ಡೆಕಾಕಾರ್ನ್ ಹಾಗೂ ಹೆಕ್ಟಾಕಾರ್ನ್ ಎಂದು
ವರ್ಗೀಕರಿಸಲಾಗಿದೆ. ಭಾರತದಲ್ಲಿ ಒಂದು ದಶಲಕ್ಷ ಡಾಲರ್ (7.35 ಕೋಟಿ ರುಪಾಯಿ)ಗಿಂತ ಹೆಚ್ಚು ಮೌಲ್ಯದ ನೂರಾರು ಸ್ಟಾರ್ಟ್ ಅಪ್‌ಗಳು ಇವೆ. ಇಂತಹ ಸ್ಟಾರ್ಟ್ ಅಪ್‌ಗಳನ್ನು ಮಿನಿಕಾರ್ನ್ ಸ್ಟಾರ್ಟ್ ಅಪ್‌ಗಳು ಎಂದು ಕರೆಯಲಾಗುತ್ತದೆ. ಶೀಘ್ರದಲ್ಲೇ ಶತಕೋಟಿ ಡಾಲರ್ ಮೌಲ್ಯವನ್ನು ಪಡೆದು ಯುನಿಕಾರ್ನ್ ಸ್ಟಾರ್ಟ್ ಅಪ್ ಆಗಬಹುದಾದ ಸಾಮರ್ಥ್ಯವುಳ್ಳ ಸ್ಟಾರ್ಟ್ ಅಪ್‌ಗಳನ್ನು ಸೂನಿಕಾರ್ನ್ ಸ್ಟಾರ್ಟ್ ಅಪ್‌ಗಳೆಂದು ಕರೆಯಲಾಗುತ್ತದೆ.

ಆಕೋ ಇನ್ಶೂರೆನ್ಸ್, ಕಾರ್ ದೇಖೋ, ಕ್ಯೂರ್ ಫಿಟ್, ಮೊಬೈಲ್ ಪ್ರೀಮಿಯರ್ ಲೀಗ್, ಪ್ರಾಕ್ಟೋ, ಡನ್ಸೋ, ಮೊಬಿಕ್ವಿಕ್, ಎಮ್ ಎಕ್ಸ್ ಪ್ಲೇಯರ್, ವೇದಾಂತು,
ಮೊದಲಾದ ಸ್ಟಾರ್ಟ್ ಅಪ್ ಗಳು 800 ರಿಂದ 900 ದಶಲಕ್ಷ ಡಾಲರ್ ಮೌಲ್ಯವನ್ನು ಪಡೆದುಕೊಂಡಿದ್ದು, ವಿದೇಶಿ ಹೂಡಿಕೆಯ ಆಕರ್ಷಣೆಯ ಕೇಂದ್ರವಾಗಿ ಬೆಳೆದಿವೆ. 2021 ರ ಒಳಗೆಯೇ ಈ ಎಲ್ಲ ಸ್ಟಾರ್ಟ್ ಅಪ್‌ಗಳು ತಮ್ಮ ಮೌಲ್ಯವನ್ನು ಶತಕೋಟಿ ಡಾಲರ್ ಗೆ ಏರಿಸಿಕೊಂಡು ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳಾಗಿ ಬದಲಾಗಲಿವೆ.

2021 ರ ಡಿಸೆಂಬರ್ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ ಇನ್ನೂ 12 ಸ್ಟಾರ್ಟ್ ಅಪ್‌ಗಳು ಯುನಿಕಾರ್ನ್ ಸ್ಥಾನವನ್ನು ಗಳಿಸಿಕೊಂಡು ಭಾರತದ ಯುನಿ ಕಾರ್ನ್ ಸ್ಟಾರ್ಟ್ ಅಪ್ ಗಳ ಸಂಖ್ಯೆ 75 ಕ್ಕೆ ಏರಲಿದೆ. 10 ಶತಕೋಟಿ ಡಾಲರ್ (73500 ಕೋಟಿ ರುಪಾಯಿ)ಗಳ ಮೌಲ್ಯವನ್ನು ತಲುಪಿದ ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳನ್ನು ಡೆಕಾಕಾರ್ನ್ ಸ್ಟಾರ್ಟ್ ಅಪ್‌ಗಳು ಎಂದು ಕರೆಯಲಾಗುತ್ತದೆ. ಆನ್ಲೈನ್ ಹಣ ವಹಿವಾಟಿನ ಪೇಟಿಎಂ ತನ್ನ ಮಾರುಕಟ್ಟೆ ಮೌಲ್ಯವನ್ನು
16 ಶತಕೋಟಿ ಡಾಲರ್ (117600 ಕೋಟಿ ರುಪಾಯಿ) ಗಳಿಗೆ ಏರಿಸಿಕೊಂಡು ಡೆಕಾಕಾರ್ನ್ ಸ್ಥಾನವನ್ನು ಪಡೆದ ಭಾರತದ ಮೊದಲ ಸ್ಟಾರ್ಟ್ ಅಪ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

16.5 ಶತಕೋಟಿ ಡಾಲರ್ ಮೌಲ್ಯವನ್ನು ಪಡೆದಿರುವ ಶೈಕ್ಷಣಿಕ ಆಪ್ ಆಗಿರುವ ಬೈಜೂಸ್ ಭಾರತದಲ್ಲಿ ಅತೀ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಡೆಕಾಕಾರ್ನ್ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೋಟೆಲ್ ಗಳ ಬುಕ್ಕಿಂಗ್ ಆಪ್ ಆಗಿರುವ ಓಯೋ ಸದ್ಯದಲ್ಲೇ ಡೆಕಾಕಾರ್ನ್ ಸ್ಟಾರ್ಟ್ ಅಪ್ ಆಗಿ ಪರಿವರ್ತನೆ ಆಗಲಿದೆ. ಆನ್ ಲೈನ್ ವ್ಯಾಪಾರ ವಹಿವಾಟು, ಆನ್ ಲೈನ್ ಶಿಕ್ಷಣ, ಆನ್ ಲೈನ್ ಹಣಕಾಸು ವರ್ಗಾವಣೆ, ಇ ಕಾಮರ್ಸ್, ಪ್ರವಾಸೋದ್ಯಮ, ಇನ್ಶೂರೆನ್ಸ್, ಹೋಟೆಲ್, ಆರೋಗ್ಯ, ಕೃಷಿ, ಬಾಹ್ಯಾಕಾಶ ತಂತ್ರಜ್ಞಾನ, ವಿದ್ಯುತ್ ಉತ್ಪಾದನೆ ಹಾಗೂ ರಕ್ಷಣಾ ತಂತ್ರಜ್ಞಾನ ಕ್ಷೇತ್ರಗಳಲ್ಲೂ ನವೋದ್ಯಮಗಳು ಅಭಿವೃದ್ಧಿ ಹೊಂದುತ್ತಿವೆ.

ಪೇಟಿಎಂ, ಫೋನ್ ಪೇ, ಭಾರತ್ ಪೇ, ಬಿಲ್ ಡೆಸ್ಕ್, ನೈಕಾ, ರೇಝರ್ ಪೇ, ಕ್ರೆಡ್ ಮೊದಲಾದ ಸಂಸ್ಥೆಗಳು ಆನ್ ಲೈನ್ ಮೂಲಕ ಹಣಕಾಸು ವರ್ಗಾವಣೆ ಮಾಡುತ್ತಿರುವ ಪ್ರಮುಖ ಭಾರತೀಯ ನವೋದ್ಯಮಗಳಾಗಿವೆ. ಫಾಸ್ಟ್ ಕ್ರೈ, ಸ್ನಾಪ್ ಡೀಲ್, ಗ್ರೋಫೆರ್ಸ್, ಮೀಶೋ, ಬಿಗ್ ಬಾಸ್ಕೆಟ್, ಉಡಾನ್, ಪೇಟಿಎಂ ಮಾಲ್, ಶಾಪ್ ಕ್ಲೂಸ್ ಮೊದಲಾದ ಸಂಸ್ಥೆಗಳು ಇ-ಕಾಮರ್ಸ್ ನಿರ್ವಹಿಸುತ್ತಿರುವ ನವೋದ್ಯಮಗಳು. ಬೈಜೂಸ್, ಅನ್ ಅಕಾಡೆಮಿ, ವೇದಾಂತು, ಟಾಪರ್ ಮೊದಲಾದ ನವೋದ್ಯಮಗಳು ಶೈಕ್ಷಣಿಕ ಸೇವೆಯನ್ನು ನೀಡುತ್ತಿವೆ. ಸ್ವಿಗ್ಗಿ, ಝೊಮಾಟೋಗಳು ಸಿದ್ಧ ಆಹಾರವನ್ನು ಪೂರೈಸುವ ಸ್ಟಾರ್ಟ್ ಅಪ್ ಗಳು.

ಕ್ಯೂರ್ ಫಿಟ್, ಫಾರ್ಮೆಸಿ, ಮೆಡಿಬಡ್ಡಿ, ಎಂ ಫೋನ್ ಮೊದಲಾದ ನವೋದ್ಯಮಗಳು ಫಾರ್ಮಸಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ನಿಂಜಾಕಾರ್ಟ್, ವೇ ಕೂಲ್,
ಆಗ್ರೋಸ್ಟಾರ್, ದೆಹಾತ್, ಸ್ಟೆಲ್ಲಾಪ್ಸ್ ಮೊದಲಾದ ನವೋದ್ಯಮಗಳು ಕೃಷಿ, ಹೈನುಗಾರಿಕೆ ಕ್ಷೇತ್ರದಲ್ಲಿ ಕೆಲಸಮಾಡುತ್ತಿವೆ. ಬಿಗ್ ಬ್ಯಾಂಗ್ ಬೂಮ್ ಸೊಲ್ಯುಶನ್ಸ್,
ಸಾಗರ್ ಡಿಫೆನ್ಸ್ ಎಂಜಿನೀರಿಂಗ್, ಓಪ್ಟಿಮೈಸ್ಡ್ ಎಲೆಕ್ಟ್ರೋಟೆಕ್, ಆಜ್ಞಾಲೆನ್ಸ್, ವಿನ್ವೆಲಿ ಮೊದಲಾದ ನವೋದ್ಯಮಗಳು ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ
ಉತ್ಪಾದನೆ ಮಾಡುತ್ತಿರುವ ಸ್ಟಾರ್ಟ್ ಅಪ್‌ಗಳು.

ಭಾರತದಲ್ಲಿಂದು ಉದ್ಯಮಗಳಿಗೆ, ಹೂಡಿಕೆಗಳಿಗೆ, ಉತ್ಪಾದನೆಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸುವ ಪ್ರಯತ್ನಗಳು ನಡೆದಾಗ ಸರಕಾರವು
ಬಂಡವಾಳಶಾಹಿಗಳ ಪರವಾದ ಸರಕಾರ ಎಂದು ವಿಪಕ್ಷಗಳು ಮೂದಲಿಸುತ್ತವೆ. ಶ್ರೀಮಂತರನ್ನು ಬೆಳೆಸುವ ಸರ್ಕಾರ ಎಂದೂ ದೂರಲಾಗುತ್ತಿದೆ. ಆದರೆ ಭಾರತದ ನವೋದ್ಯಮಗಳನ್ನು ಸ್ಥಾಪಿಸಿದ ಉದ್ಯಮಿಗಳಾರೂ ಟಾಟಾ, ಅಂಬಾನಿ, ಅದಾನಿ ಕುಟುಂಬಗಳಿಂದ ಬಂದವರಲ್ಲ. ಬಹುತೇಕರು ಬಡ ಹಾಗೂ ಮಧ್ಯಮ
ಕುಟುಂಬಗಳ ಹಿನ್ನೆಲೆಯಿಂದ ಬಂದವರು. ಉದಾಹರಣೆಗೆ ಭಾರತದ ಅತೀ ದೊಡ್ಡ ನವೋದ್ಯಮಗಳಲ್ಲಿ ಒಂದಾದ ಪೇಟಿಎಂನ ಸ್ಥಾಪಕಾರಾದ ವಿಜಯ್ ಶಂಕರ್ ಶರ್ಮಾ ಉತ್ತರಪ್ರದೇಶದ ಶಾಲಾ ಅಧ್ಯಾಪಕರ ಮಗ.

ಇಂಜಿನಿಯರಿಂಗ್ ಪದವೀಧರರಾದ ಇವರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಿಂದಿ ಮಾಧ್ಯಮದಲ್ಲೇ ಆದದ್ದು. ಆನ್ ಲೈನ್ ಶೈಕ್ಷಣಿಕ ನವೋದ್ಯಮವಾದ ಬೈಜೂಸ್‌ನ ಸ್ಥಾಪಕ ಬೈಜು ರವೀಂದ್ರನ್ ಕೇರಳದ ಕಣ್ಣೂರು ಜಿಲ್ಲೆಯ ಅಝಿಕೋಡ್ ಅನ್ನುವ ಹಳ್ಳಿಯಲ್ಲಿ ಗಣಿತ ಅಧ್ಯಾಪಕಿಯ ಮಗನಾಗಿ ಜನಿಸಿ ಮಲಯಾಳಂ ಮಾಧ್ಯಮದಲ್ಲೇ ವಿದ್ಯಾಭ್ಯಾಸವನ್ನು ಪಡೆದವರು. ಟ್ವಿಟ್ಟರ್ ಗೆ ಪರ್ಯಾಯವಾಗಿ ಕೂ ಆಪ್ ಅನ್ನು ಅಭಿವೃದ್ಧಿಪಡಿಸಿದ ಅಪ್ರಮೇಯ ರಾಧಾಕೃಷ್ಣ ಅವರೂ ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರೇ. ಓಯೋ ರೂಮ್ಸ್ ನ ಸ್ಥಾಪಕ ರಿತೇಶ್ ಅಗರ್ವಾಲ್ ಸಣ್ಣ ಅಂಗಡಿ ಮಾಲಕನ ಮಗ. ಇವರೆಲ್ಲ ಪ್ರತಿಭೆ ಹಾಗೂ ಸ್ವಪ್ರಯತ್ನ ಗಳಿಂದಲೇ ಇವರು ನವೋದ್ಯಮಗಳನ್ನು ಕಟ್ಟಿದವರು ಹಾಗೂ ಬೆಳೆಯಿಸಿದವರು.

ಬಹುತೇಕರು ಐಐಟಿ, ಎನ್‌ಐ ಟಿ, ಐಐಎಂ ಪದವೀಧರರು ಹಾಗೂ ಹುಮ್ಮನಸಿನ ಯುವಕರು. ಇದೀಗ ಭಾರತದಲ್ಲಿ ಉದ್ಯಮ ಹಾಗೂ ವ್ಯವಹಾರಗಳಿಗೆ ಪೂರಕವಾದ ವಾತಾವರಣ ನಿರ್ಮಾಣ ವಾಗುತ್ತಿದೆ. ಇದರ ಪರಿಣಾಮವಾಗಿ ನವೋದ್ಯಮಗಳು ಬೆಳೆದು ಭಾರತದ ಅಭಿವೃದ್ಧಿಯ ಬೆನ್ನೆಲುಬಾಗಿ ನಿಂತಿವೆ.
ಇವು ದೇಶಕ್ಕೆ ವಿದೇಶೀ ಹೂಡಿಕೆಗಳನ್ನು ಆಕರ್ಷಿಸುತ್ತಿವೆ, ಹೊಸ ಹೊಸ ಆವಿಷ್ಕಾರಗಳಾಗುತ್ತಿದೆ, ಉದ್ಯೋಗಾರ್ಥಿಗಳಿಗೆ ಲಕ್ಷಾಂತರ ಉದ್ಯೋಗ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ.