Friday, 20th September 2024

ಯಶಸ್ಸೆಂದರೆ ಸಾಧನೆಯಲ್ಲ, ಸಾಧಿಸುತ್ತಲೇ ಇರುವುದು !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ನಾನು ಫಿನ್‌ಲ್ಯಾಂಡಿನ ರಾಜಧಾನಿ ಹೆಲ್ಸಿಂಕಿಗೆ ಹೋಗಿದ್ದೆ. ಅದು ಫಿನ್ ಲ್ಯಾಂಡಿನ ರಾಜಧಾನಿ ಎನ್ನುವುದಕ್ಕಿಂತ ನೋಕಿಯಾ ಕಂಪನಿಯ ರಾಜಧಾನಿಯಾಗಿತ್ತು. ಅದರ ಹೆಡ್ ಕ್ವಾರ್ಟರ‍್ಸ್ ಆಗಿತ್ತು. ಆ ದೇಶದ ಚಿಹ್ನೆ, ಧ್ವಜ, ಲಾಂಛನಕ್ಕಿಂತ ನೋಕಿಯಾ ಕಂಪನಿಯ ಹೆಸರೇ ಎಲ್ಲೆಡೆ ರಾರಾಜಿಸುತ್ತಿತ್ತು.

ಪ್ರತಿ ಉದ್ಯಾನವನ, ವೃತ್ತ, ಕೊಳ, ಸರೋವರ ರಸ್ತೆಯ ದೇಖರೇಖಗಳನ್ನೆಲ್ಲ ನೋಕಿಯಾ ಕಂಪನಿಯೇ ನಿರ್ವಹಿಸುತ್ತಿತ್ತು. ನೋಕಿಯಾ ಹೆಸರು ಎಷ್ಟು ಢಾಳಾಗಿ ಕಣ್ಣಿಗೆ ಕುಕ್ಕುತ್ತಿತ್ತೆಂದರೆ, ಕಣ್ಣು ಹಾಯಿಸಿದಲ್ಲೆಲ್ಲ ಆ ಹೆಸರೇ. ಅಲ್ಲಿಯ ಜನ ತಮಾಷೆಗೆ ತಮ್ಮ ದೇಶವನ್ನು ‘ಪೀಪಲ್ಸ್ ರಿಪಬ್ಲಿಕ್ ಆಫ್ ನೋಕಿಯಾ’ ಎಂದು
ಹೇಳುತ್ತಿದ್ದರು. ನಮ್ಮ ದೇಶದ ಪ್ರಧಾನಿಗಿಂತ, ಅಧ್ಯಕ್ಷರಿಗಿಂತ ನೋಕಿಯಾ ಕಂಪನಿಯ ಸಿಇಒ ಹೆಚ್ಚು ಪ್ರಭಾವ ಶಾಲಿ ಎಂದು ಅಲ್ಲಿನ ಜನ ಲೇವಡಿ ಮಾಡುತ್ತಿದ್ದರು. ಇದು ಅತಿಶಯೋಕ್ತಿಯಾಗಿದ್ದರೂ ಅಲ್ಪ, ಸ್ವಲ್ಪ ಸತ್ಯಾಂಶವೂ ಇದೆ.

ಹೆಲ್ಸಿಂಕಿಯ ಮಧ್ಯಭಾಗದಲ್ಲಿ ನೋಕಿಯಾ ಕೇಂದ್ರಕಚೇರಿ ಇಡೀ ಜಗತ್ತನ್ನು ಬೆಸೆದಿತ್ತು. Connecting people ಎಂಬ ಘೋಷವಾಕ್ಯ ಆ ಕಂಪನಿಗೆ ಅನ್ವರ್ಥಕ ವಾಗಿತ್ತು. ಮೊಬೈಲ್ ಫೋನ್ ಎಂದರೆ ನೋಕಿಯಾ ಎಂಬಂತಾಗಿತ್ತು. ನಾನು ನೋಕಿಯಾ ಕಂಪನಿಯ ಆಮಂತ್ರಣದ ಮೇರೆಗೆ ಅದರ ಪ್ರಧಾನ ಕಚೇರಿಯಲ್ಲಿ ಮೂರು ದಿನಗಳನ್ನು ಕಳೆದ ಸಂದರ್ಭದಲ್ಲಿ ಅಂದಿನ ಕಂಪನಿಯ ಮುಖ್ಯಸ್ಥರು ‘ಮುಂದಿನ ಐದು ವರ್ಷಗಳ ಅವಧಿಯಲ್ಲಿ ನೋಕಿಯಾ ಜಗತ್ತಿನ ಮೊದಲ ಮೂರು ಬ್ರ್ಯಾಂಡ್‌ಗಳ ಪೈಕಿ ಒಂದಾಗಲಿದೆ. ಜಗತ್ತಿನ ಎಲ್ಲ ದೇಶಗಳಲ್ಲೂ ಬಹುಸಂಖ್ಯಾತರು ಉಪಯೋಗಿಸುವ ಬ್ರ್ಯಾಂಡ್ ಇದಾಗಲಿದೆ.

ಭಾರತದಲ್ಲಿ ಈಗಾಗಲೇ ಶೇ. 89ರಷ್ಟು ಮಾರುಕಟ್ಟೆಯನ್ನು ನಾವು ಆಕ್ರಮಿಸಿದ್ದೇವೆ. ಪ್ರತಿಯೊಬ್ಬರ ಕೈಗೂ ನಮ್ಮ ಕಂಪನಿಯ ಫೋನನ್ನು ತಲುಪಿಸುತ್ತೇವೆ. monopoly ಎಂಬ ಪದಕ್ಕೆ ಮಾರುಕಟ್ಟೆಯಲ್ಲಿ ಯಾವ ಅರ್ಥವಿದೆ ಎಂಬುದನ್ನು ನಾವು ತೋರಿಸಿ ಕೊಡುತ್ತೇವೆ. ದೇಶದ ರಾಷ್ಟ್ರಾಧ್ಯಕ್ಷರಿಂದ ಹಿಡಿದು, ಜನಸಾ
ಮಾನ್ಯರ ತನಕ ಪ್ರತಿಯೊಬ್ಬರೂ ಯಾವುದಾದರೂ ಒಂದು ಕಂಪನಿಯ ಉತ್ಪನ್ನವನ್ನು ಉಪಯೋಗಿಸುತ್ತಿದ್ದರೆ ಅದು ನೋಕಿಯಾ ಕಂಪನಿಯ ಮೊಬೈಲ್ ಎಂದು ಅಭಿಮಾನ, ಗರ್ವದಿಂದ ಹೇಳಿದ್ದರು. ಹಾಗೆಂದು ಅದು ಬಡಬಡಿಕೆ ಯಾಗಿರಲಿಲ್ಲ. ಅದರಲ್ಲಿ ನಿಜಾಂಶವಿತ್ತು.

ನೋಕಿಯಾ ಕಂಪನಿಯ ಮೊಬೈಲು ಆ ವೇಳೆಗೆ 178 ದೇಶಗಳನ್ನು ತಲುಪಿತ್ತು ಹಾಗೂ ಆ ದೇಶಗಳಲ್ಲಿ ಮಾರುಕಟ್ಟೆ ಪ್ರಾಬಲ್ಯವನ್ನು ಮೆರೆದಿತ್ತು. ‘ನೋಕಿಯಾ ದಿಂದ ನಮ್ಮ ದೇಶವೂ ಜಗತ್ತಿಗೆ ಪರಿಚಯವಾಗುತ್ತಿದೆ. ಇದರಿಂದ ಫೋನ್ ಲ್ಯಾಂಡ್‌ನ ಸೆಯೂ ಬದಲಾಗಿದೆ. ಆಫ್ರಿಕಾದ ದೇಶಗಳಿಂದ ಹೆಲ್ಸಿಂಕಿಗೆ ವಿಮಾನ ಸಂಚಾರ ಆರಂಭವಾಗಿದ್ದರೆ, ಅದರಲ್ಲಿ ನೋಕಿಯಾ ಪಾಲೂ ಇದೆ. ‘ನೋಕಿಯಾ ಜನರನ್ನು ಮಾತ್ರ ಜೋಡಿಸಲಿಲ್ಲ, ದೇಶದೇಶವನ್ನೂ ಜೋಡಿಸಿತು’ ಎಂದು ?ನ್ನಿಶ್ ಜನ ಹೆಮ್ಮೆಯಿಂದ ಮಾತಾಡಿಕೊಳ್ಳುತ್ತಿದ್ದರು.

ಒಂದು ಕಂಪನಿ ಇಡೀ ದೇಶವನ್ನು, ಜಗತ್ತನ್ನು ವ್ಯಾಪಿಸಿಕೊಂಡ ಪರಿ ಅದು. Nokia brings you Finnish experiences ಎಂಬುದು ಆ ದೇಶದ ಪತ್ರಿಕೋ ದ್ಯಮದ ಸ್ಲೋಗನ್ ಆಗಿತ್ತು. Finland is sponsored by Nokia ಎಂದು ಹೇಳುವ ಕಾಲ ದೂರವಿಲ್ಲ ಎಂದು ?ನ್ನಿಶ್ ಮಂದಿ ಅಪಹಾಸ್ಯ ಮಾಡುತ್ತಿದ್ದರು. ನೋಕಿಯಾ ಕಂಪನಿಗೆ ಯಾವುದೇ ಲೋಗೋ (ಲಾಂಛನ) ಇರಲಿಲ್ಲ. ಅದರ ಹೆಸರೇ ಲಾಂಛನವಾಗಿತ್ತು. ಭಾರತದಲ್ಲಿ ಅನಕ್ಷರಸ್ಥರೂ ನೋಕಿಯಾ ಹೆಸರನ್ನೇ ಲಾಂಛನದಂತೆ ಗುರುತಿಸುತ್ತಿದ್ದರು. ಇದು must recognisable brand  ಎಂಬ ಅಗ್ಗಳಿಕೆಗೂ ಪಾತ್ರವಾಗಿತ್ತು. ಜಗತ್ತಿನ ಮೊಬೈಲ್ ಮಾರುಕಟ್ಟೆಯಲ್ಲಿ ಅರ್ಧ ಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದ ನೋಕಿಯಾ ಕಂಪನಿಯನ್ನು ‘ಭವಿಷ್ಯದ ನಾಯಕ’ ಎಂದೇ ಕರೆಯುತ್ತಿದ್ದರು.

ಹೆಲ್ಸಿಂಕಿಯಲ್ಲಿನ ನೋಕಿಯಾ ಕಂಪನಿಯಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಸಾವಿರಾರು ಕನ್ನಡಿಗರೂ ಅಲ್ಲಿದ್ದರು. ರಿಸರ್ಚ್ ಆಂಡ್
ಡೆವಲಪ್‌ಮೆಂಟ್ ವಿಭಾಗದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಇಂಜಿನಿಯರ್‌ಗಳಿದ್ದರು. ಬಹು ಶೀಘ್ರವಾಗಿ ಬೆಳೆಯುತ್ತಿರುವ ಹತ್ತು ಪ್ರಮುಖ ಜಾಗತಿಕ ಕಂಪನಿಗಳಲ್ಲಿ
ನೋಕಿಯಾಕ್ಕೆ ಮೂರನೇ ಸ್ಥಾನವಿತ್ತು. ‘ಒಂದು ಕಂಪನಿಯ ಅತ್ಯುನ್ನತ ಉತ್ತಂಗವೆಂದರೆ ಅದೇ ಇರಬಹುದು’ ಎಂದು ನೋಕಿಯಾ ಕಂಪನಿಯ ಪ್ರಧಾನ ಕಚೇರಿ ಯೊಳಗೆ ಇದ್ದು ಬಂದಾಗ ನನಗೆ ಅನಿಸಿತ್ತು.

ಹತ್ತು ವರ್ಷಗಳ ನಂತರ….
ಕೆಲವು ವರ್ಷಗಳ ಹಿಂದೆ ನಾನು ನೋಕಿಯಾ ಕಂಪನಿಯ ಸಿಇಒ ಸ್ಟೀಫನ್ ಇಲೋಪ್‌ನ ಕೊನೆಯ ಪತ್ರಿಕಾಗೋಷ್ಠಿಯ ವಿಡಿಯೋವನ್ನ ನೋಡುತ್ತಿದ್ದೆ. ಆತ ಮಾಧ್ಯಮ ಪ್ರತಿನಿಧಿಗಳ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಒಂದು ಹಂತದಲ್ಲಂತೂ ಆತನಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಗಂಟಲು ನಾಳಗಳು ಉಬ್ಬಿ ಬಂದಿದ್ದವು. ಭಾವನೆಗಳು ಅವನ ಬಾಯಿ ಕಟ್ಟಿದ್ದವು. ಅದಕ್ಕೂ ಕೆಲ ದಿನಗಳ ಹಿಂದೆ ಮೈಕ್ರೋಸಾಫ್ಟ್ ಕಂಪನಿ ಎಂಟು ಶತಕೋಟಿ ಡಾಲರ್‌ಗೆ ಖರೀದಿಸಿತ್ತು.
ನೋಕಿಯಾ ಕಂಪನಿಯ ಹೆಸರನ್ನು ಶವಪೆಟ್ಟಿಗೆಯೊಳಗಿಟ್ಟು ಅಂತಿಮ ಮೊಳೆ ಹೊಡೆಯಲಾಗಿತ್ತು. ನೋಕಿಯಾ ಹೋಗಿ ಮೈಕ್ರೋಸಾಪ್ಟ್ ಮೊಬೈಲ್ ಆಗಿತ್ತು.

Nokia RIP (Rest in Peace) ಎಂದು ಎಲ್ಲ ಪತ್ರಿಕೆಗಳೂ ಶ್ರದ್ಧಾಂಜಲಿ ಬರೆದಿದ್ದವು. ನೋಕಿಯಾ ಸಿಇಒ ತನ್ನ ಭಾಷಣದ ಕೊನೆಯಲ್ಲಿ We didn’t do anything wrong, but somehow, we lost ಎಂದು ಹೇಳಿದ. ಮುಂದೆ ಅವನಿಗೆ ಮಾತಾಡಲು ಆಗಲೇ ಇಲ್ಲ. ಇಷ್ಟಕ್ಕೂ ಆತ ಬೇರೆ ಮಾತಾಡುವ ಅಗತ್ಯವೇ ಇರಲಿಲ್ಲ. ಇಡೀ ಕಂಪನಿಯ ‘ಕತೆ’ಯನ್ನು ಆತ ಆ ಒಂದು ಮಾತಿನಲ್ಲಿ ಹೃದಯಸ್ಪರ್ಶಿಯಾಗಿ ಹೇಳಿದ್ದ. ‘ನಾವು ಯಾವುದೇ ತಪ್ಪನ್ನು ಮಾಡಲಿಲ್ಲ. ಆದರೂ ನಾವು ಸೋತು ಹೋದೆವು’ ಎಂಬ ಆತನ ಮಾತುಗಳು ಎಂಥವರ ಹೃದಯದಲ್ಲೂ ಭಾವತರಂಗವನ್ನು ಎಬ್ಬಿಸುವಂತಿದ್ದವು.

ಮರುದಿನ ಎಲ್ಲ ಬಿಸಿನೆಸ್ ಪತ್ರಿಕೆಗಳೂ ಸೇರಿದಂತೆ, ಎಲ್ಲ ಆತನ ಒಂದು ಮಾತಿನ ಸಾಲನ್ನೇ ಹೈಲೈಟ್ ಮಾಡಿದವು. ಇಂದಿಗೂ ಈ ಸಾಲುಗಳು ನೋಕಿಯಾ ಕಂಪನಿಯ ಚರಮಗೀತೆಯಂತೆ ಕೇಳಿಸುತ್ತದೆ. ಆತ ಹೇಳಿದ ಈ ಕೊನೆಯ ಮಾತು ಮ್ಯಾನೇಜ್ ಮೆಂಟ್ ಕ್ಲಾಸುಗಳಲ್ಲಿ ಯಾರೂ ‘ಮರೆಯಬಾರದ ಪಾಠ’ವಾಗಿದೆ.
ಮೂಲತಃ ನೋಕಿಯಾ ಅತ್ಯಂತ ಮರ್ಯಾದಸ್ಥ ಸಂಸ್ಥೆ. ಅತ್ಯುತ್ತಮ ‘ಕಾಯಕ ಸಂಸ್ಕೃತಿ’ ಇರುವ ಕಂಪನಿ. ಜಗತ್ತಿನ ಯಾವುದೇ ಸಂಸ್ಥೆಯ ಜತೆಗೆ ಪೈಪೋಟಿ ನೀಡಬಹುದಾದ ಕಂಪನಿ ಎಂಬುದರಲ್ಲಿ ಎರಡು ಮಾತಿರಲಿಲ್ಲ. ನೋಕಿಯಾ ತನ್ನ ಬಿಸಿನೆಸ್‌ನಲ್ಲಿ ಯಾವುದೇ ತಪ್ಪನ್ನೂ ಮಾಡಿರಲಿಲ್ಲ.

ಅದು ಯಾವುದೋ ಘೋರ ಪ್ರಮಾದವನ್ನು ಮಾಡಿ ತೊಂದರೆ ತಂದುಕೊಂಡಿತು ಎಂಬಂತೆಯೂ ಇರಲಿಲ್ಲ. ಹಾಗಾದರೆ ಅದರಿಂದ ಆದ ತಪ್ಪಾದರೂ ಏನು ಎಂಬ ಪ್ರಶ್ನೆ ಉದ್ಭವಿಸಬಹುದು. ಅದರಿಂದ ಆದ ತಪ್ಪನ್ನು ಹುಡುಕುವುದೇ ಕಷ್ಟ. ಕಾರಣ ಅದು ಅಂಥ ತಪ್ಪನ್ನು ಮಾಡಿರಲಿಲ್ಲ. ಅದು ಯಾವುದೇ ತಪ್ಪು ಹೆಜ್ಜೆ ಯನ್ನೂ ಇಟ್ಟಿರಲಿಲ್ಲ. ಆದರೆ ಅದರ ಸುತ್ತಲಿನ ಜಗತ್ತು ಬಹಳ ಕ್ಷಿಪ್ರವಾಗಿ ಬದಲಾಯಿತು. ಅದರ ಪ್ರತಿಸ್ಪರ್ಧಿಗಳು ತೀರ ಬಲಿಷ್ಠರಾಗಿದ್ದರು. ಕಾಲಕಾಲಕ್ಕೆ ತನ್ನ ಸುತ್ತಲಿನ ಪರಿಸರದಲ್ಲಾಗುತ್ತಿದ್ದ ಬದಲಾವಣೆಗಳನ್ನು ಅದು ಗಮನಿಸಲಿಲ್ಲ. ಕಾಲ ಕಾಲಕ್ಕೆ update ಆಗಲಿಲ್ಲ.

ತನ್ನ ಬಿಸಿನೆಸ್‌ಗೆ ಬೇಕಾದ ಹತ್ಯಾರಗಳನ್ನು ಹರಿತಗೊಳಿಸಿಕೊಳ್ಳಲಿಲ್ಲ. ಅದಕ್ಕೆ ಪೂರಕವಾಗಿ ತನ್ನ ಕಾರ್ಯಪಡೆಯನ್ನು ಸನ್ನದ್ಧಗೊಳಿಸಲಿಲ್ಲ. ದೊಡ್ಡ ಲಾಭ ಗಳಿಸುವ ಸದವಕಾಶವನ್ನು ತಪ್ಪಿಸಿಕೊಂಡಿದ್ದಷ್ಟೇ ಅಲ್ಲ. ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಅವಕಾಶದಿಂದಲೂ ವಂಚಿತವಾಯಿತು. ನೀವು ಗಂಟೆಗೆ ನೂರು ಕಿಮಿ ವೇಗದಲ್ಲಿ ನೇರ, ಸಮತಟ್ಟಾದ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದೀರಿ ಎಂದು ಭಾವಿಸಿ. ನಿಮ್ಮ ವಾಹನವೂ ಚೆನ್ನಾಗಿದೆ. ನೀವೂ ಸಹಾ ಚೆನ್ನಾಗಿಯೇ ಡ್ರೈವ್ ಮಾಡುತ್ತಿದ್ದೀರಿ. ನೀವು ಸುರಕ್ಷಿತವಾಗಿ ಊರು ಸೇರುವುದು ಗ್ಯಾರಂಟಿ. ಆದರೆ ಯಾರೋ ಗಂಟೆಗೆ ನೂರಾ ಇಪ್ಪತ್ತೈದು ಕಿಮಿ ವೇಗದಲ್ಲಿ ನಿಮ್ಮ ವಾಹನವನ್ನು ಹಿಂದಕ್ಕೆ ಹಾಕಿ ಮುಂದಕ್ಕೆ ಹೋಗಿ ಬಿಡುತ್ತಾರೆ. ಇದರಲ್ಲಿ ನಿಮ್ಮ ತಪ್ಪೇನಿದೆ? ಏನೂ ಇಲ್ಲ ತಾನೆ? ನೋಕಿಯಾ ಸ್ಥಿತಿಯೂ ಇದೆ ಆಗಿತ್ತು.

ಯಾವುದೇ ತಪ್ಪು ಮಾಡದಿದ್ದರೂ ಘೋರ ಶಿಕ್ಷೆಗೆ ಗುರಿಯಾಗಿತ್ತು. ತನ್ನ ಪಾಡಿಗೆ ತಾನು ಹೋಗುತ್ತಿದ್ದ ನೋಕಿಯಾವನ್ನು ಬೇರೆಯವರ‍್ಯಾರೋ ಓವರ್ ಟೇಕ್ ಮಾಡಿ ಮುಂದಕ್ಕೆ ಹೋಗಿಬಿಟ್ಟಿದ್ದರು. ರಾತ್ರಿ ಬೆಳಗಾಗುವುದರೊಳಗೆ ‘ಮಾರ್ಕೆಟ್ ಲೀಡರ್’ಎಂಬ ಅಭಿದಾನಕ್ಕೆ ಪಾತ್ರವಾಗಿದ್ದ ನೋಕಿಯಾ ಪೈಪೋಟಿಯ
ಓಟದಲ್ಲಿ ಹಿಂದೆ ಬಿದ್ದಿತ್ತು. ಇದಕ್ಕೆ ಯಾರನ್ನು ದೂಷಿಸುವುದು? ನಿಧಾನವಾಗಿ ಹೋದ ಪ್ರತಿಸ್ಪರ್ಧಿಗಳ ಜಾಡು ಅರಿಯದ ನಿಮ್ಮನ್ನು ದೂಷಿಸುವುದಾ? ನಿಮ್ಮನ್ನು
ಹಿಂದಕ್ಕೆ ಹಾಕಿದ ಪ್ರತಿ ಸ್ಪರ್ಧಿಗಳನ್ನು ದೂರೋಣವಾ? ಯಾರನ್ನು ದೂಷಿಸಿ ಪ್ರಯೋಜನವೇನು ಬಂತು? ಒಂದು ಸಲ ನಂಬರ್ 1 ಸ್ಥಾನದಿಂದ ಬೇರೆ ಯಾರಾದರೂ ಬಂದು ನೂಕಿದರೆ ಪುನಃ ಆ ಸ್ಥಾನ ಗಳಿಸುವುದು ಸುಲಭ ಅಲ್ಲ.

ಒಂದು ವೇಳೆ ಆ ಸ್ಥಾನ ಗಳಿಸಿದರೂ ನಿಮ್ಮ ಖದರು ಮೊದಲಿನ ಹಾಗೆ ಇರುವುದಿಲ್ಲ. ಆದರೆ ನೋಕಿಯಾ ವಿಷಯದಲ್ಲಿ ಆದದ್ದೇ ಬೇರೆ. ಅದಕ್ಕೆ ತನ್ನ ನಂಬರ್ 1 ಸ್ಥಾನವನ್ನು ಕಳೆದುಕೊಂಡ ನಂತರ ಪುನಃ ಅದನ್ನು ಗಳಿಸಲು ಸಾಧ್ಯವಾಗಲೇ ಇಲ್ಲ. ‘ಗೂಳಿ ಬಿದ್ದಾಗ ಆಳಿಗೊಂದು ಕಲ್ಲು’ ಎಂಬಂತೆ ಹೊಂಚು ಹಾಕಿ ಕುಳಿತಿದ್ದ ಪ್ರತಿ ಸ್ಪಽಗಳೆಲ್ಲ ಪುನಃ ಏಳದಂತೆ ಮರ್ಮಾಘಾತ ನೀಡಿಬಿಟ್ಟವು. ಮತ್ತೊಮ್ಮೆ ತಲೆ ಎತ್ತುವ ಅವಕಾಶವನ್ನೇ ನೀಡಲಿಲ್ಲ. ನಂ 1 ಸ್ಥಾನವನ್ನು ಮರಳಿ
ಪಡೆಯುತ್ತೇನೆಂಬ ಆತ್ಮವಿಶ್ವಾಸವೇ ಹೊರಟು ಹೋಗಿತ್ತು.

If your thoughts and mindset can not match or catch up with me, you will be eliminated  ಎಂಬ ಮಾತಿದೆ. ಅಕ್ಷರಶಃ ಈ ಮಾತು ನೋಕಿಯಾ ವಿಷಯದಲ್ಲಿ ನಿಜವಾಯಿತು. ನಮ್ಮ ಯೋಚನೆ ಮನಸ್ಥಿತಿ ಈ ಕಾಲಕ್ಕೆ ಅನುಗುಣವಾಗಿಲ್ಲದಿದ್ದರೆ ನಾವು ಸ್ಪರ್ಧೆಯಿಂದ ಹೊರಹೋಗ ಬೇಕಾಗುತ್ತದೆ. ಏಕಾಏಕಿ ನಾವು ಅಪ್ರಸ್ತುತರಾಗಬೇಕಾಗುತ್ತದೆ. ಇಂದು ನಾವು ನಂಬರ್ ೧ನೇ ಸ್ಥಾನದಲ್ಲಿದ್ದೇವೆ ಅಂದ್ರೆ ಅದು ನಮ್ಮ ಇಂದಿನ ಸಾಧನೆ. ನಾಳೆ,

ಮುಂದಿನ ತಿಂಗಳು, ಮುಂದಿನ ವರ್ಷವೂ ಅದೇ ಸ್ಥಾನದಲ್ಲಿರಬೇಕೆಂದರೆ ಆಗಲೂ ಅದೇ ಸಾಧನೆ ಮೆರೆಯಬೇಕು ಹಾಗೂ ಕಾಲಕಾಲಕ್ಕೆ ಪ್ರಸ್ತುತರಾಗಿರಬೇಕು. ಒಂದು ದಿನ ಮೈಮರೆತರೆ ಯಾರೋ ಬಂದು ಓವರ್ ಟೇಕ್ ಮಾಡಿ ಮುಂದಕ್ಕೆ ಹೋಗಿ ಬಿಡುತ್ತಾರೆ.

ನಾವು ನಮ್ಮ ಪಾಡಿಗೆ ಚಲಿಸಿದರಷ್ಟೇ ಸಾಲದು. ನಮ್ಮ ಸನಿಹ ಬೇರೆ ಯಾರೂ ಇಲ್ಲ ಅವರೆಲ್ಲರಿಗಿಂತ ಸುರಕ್ಷಿತ ಅಂತರ ಕಾಪಾಡಿಕೊಂಡಿದ್ದೇವೆಂಬು ದನ್ನು
ಖಾತರಿಪಡಿಸಿಕೊಳ್ಳ ಲೇಬೇಕು. ಇಲ್ಲದಿದ್ದರೆ ಯಾರು ಬೇಕಾದರೂ ನಮ್ಮನ್ನು ಹಿಂದಕ್ಕೆ ಹಾಕಬಹುದು. ಅಲ್ಲಿಯ ತನಕ ನಂಬರ್ ಒನ್ ಸ್ಥಾನ ಕಾಪಾಡಿಕೊಂಡು
ಬಂದಿದ್ದನ್ನು ಯಾರಿಗೋ ಕೈಯಾರ ಕೊಡಬೇಕಾಗಿ ಬರಬಹುದು. ನಾವು ಕಾಲಕಾಲಕ್ಕೆ ಬದಲಾಗುತ್ತಿರುವ ಹೊಸ ವಾತಾವರಣಕ್ಕೆ ನಮ್ಮನ್ನು ಬದಲಿಸಿಕೊಂಡು ಒಗ್ಗಿಕೊಳ್ಳಬೇಕು.

ಆಗಾಗ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿರಬೇಕು. ನಿನ್ನೆ ಇರುವ ಅನುಕೂಲಗಳು ಅಥವಾ ಲಾಭಗಳನ್ನು ನಾಳೆಯ ಟ್ರೆಂಡ್ ಗಳು ಬದಲಿಸಿ ಆಕ್ರಮಿಸಬಲ್ಲವು. ಇಂದು ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ ಅಂದರೆ ನಮ್ಮ ಪ್ರತಿಸ್ಪರ್ಧಿಗಳು ನಮಗಿಂತ ಹಿಂದಿzರೆ ಎಂದೂ ಅರ್ಥೈಸಬಹುದು. ನಾವು ಯಾವುದೇ ತಪ್ಪು ಮಾಡದಿದ್ದರೂ ಶಿಕ್ಷೆಗೆ ಗುರಿಯಾಗಬೇಕಾಗಿ ಬರಬಹುದು. ‘ವರ್ಜಿನ್’ ಕಂಪನಿಯ ಮಾಲೀಕ ರಿಚರ್ಡ್ ಬ್ರಾನ್ಸನ್ ಒಂದು ಮಾತನ್ನು ಹೇಳುತ್ತಾನೆ Success is not an achievement. Success is in achieving.  (ಯಶಸ್ಸು ಅಂದರೆ ಸಾಧನೆ ಅಲ್ಲ. ಯಶಸ್ಸು ಅಂದರೆ ಸಾಧಿಸುತ್ತಲೇ ಇರುವುದು) ಇಂದು ನಾನು ನೂರಕ್ಕೆ ನೂರು ಅಂಕ ತೆಗೆದರೆ ಅದು ಇಂದಿನ ನನ್ನ ಸಾಧನೆ. ನಾನು ನಾಳೆಯೂ ನೂರಕ್ಕೆ ನೂರು ತೆಗೆಯಬೇಕು. ನಾಳೆಯೂ ಸೆಂಚುರಿ ಹೊಡೆಯಬೇಕು. ಮುಂದಿನ ವರ್ಷವೂ ಅದೇ ಸಾಧನೆ ಮಾಡಬೇಕು.

ಇಲ್ಲದಿದ್ದರೆ ನನ್ನ ಇಂದಿನ ಸಾಧನೆ ಕೇವಲ ಆಕಸ್ಮಿಕ’ ಎಂದು ಕರೆಯಿಸಿಕೊಳ್ಳುತ್ತದೆ. ಇಂದಿನ ಸಾಧನೆಯೇ ಯಾವತ್ತಿನ ಸಾಧನೆ ಎಂದು ಸದಾ ಬೀಗುವಂತಿಲ್ಲ. ಸಾಧನೆಯ ವಾರಸುದಾರರು ಯಾರು ಬೇಕಾದರೂ ಆಗಬಹುದು. ಯಾವ ಹೊತ್ತಿನಲ್ಲಿ ಬೇಕಾದರೂ ನಮ್ಮ ಸ್ಥಾನದಲ್ಲಿ ಬೇರೆಯವರು ಬಂದು ಕುಳಿತುಕೊಳ್ಳ ಬಹುದು. ಆಗ ನಮ್ಮ ಸ್ಥಾನ ಕೈತಪ್ಪಿ ಹೋಯಿತು ಎಂದು ಪರಿತಪಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಯಾವತ್ತೂ ಈ ಜಗತ್ತು ಸಾಧಕರ ಪರವಾಗಿಯೇ ಇರುತ್ತದೆ. ಸಾಧಕನಿಗೆ ಸದಾ ಜೈಕಾರ ಹಾಕುತ್ತದೆ. ನಿನ್ನೆಯ ಸಾಧಕ ಅಥವಾ ಮಾಜಿ ಸಾಧಕನನ್ನು ಕಣ್ಣೆತ್ತಿಯೂ ನೋಡುವುದಿಲ್ಲ.

ಸಾಧನೆಯ ಪಥದಲ್ಲಿ ಸೋತವರಿಗೆ ಅಥವಾ ಮುಗ್ಗರಿಸಿದವರಿಗೆ ಹಿಡಿ ಸಾಂತ್ವನವನ್ನೂ ಹೇಳದಷ್ಟು ನಿರ್ದಯವಾಗಿರುತ್ತದೆ. ಕಾರಣ ಅವನ ಸಾಧನೆಯನ್ನು ಆಗಲೇ ಜನ ಮರೆತಿರುತ್ತಾರೆ. ನಾನು ಆಗ ಹಾಗೆ ಮಾಡಿದ್ದೆ, ಹೀಗೆ ಮಾಡಿದ್ದೆ…. ಎಂಬ ಹಳವಂಡಗಳನ್ನು ಹಳಹಳಿಸುತ್ತಿರಬೇಕಷ್ಟೇ. ಅದರಿಂದ ಯಾವ ಪ್ರಯೋಜನವೂ ಇಲ್ಲ. ಕೆಲ ಕಾಲದ ನಂತರ ಹಾಗೆ ಹೇಳುವುದನ್ನೂ ಜನ ಕೇಳುವುದಿಲ್ಲ. ಸೋತವರಿಗೆ ಸಾಂತ್ವನ ಹೇಳುವುದು ಸಹ ಅಸಹಾಯಕತೆಗೆ ಬೆಂಬಲ ನೀಡಿದಂತೆ ಎಂದು ಜನ ಭಾವಿಸುತ್ತಾರೆ. ಇದು ತಮ್ಮ ದಯನೀಯ ಸ್ಥಿತಿಯೂ ಹೌದು ಎಂದು ತಿಳಿಯುತ್ತಾರೆ. ಹೀಗಾಗಿ ಸೋತವರನ್ನು ಜನ ಮರೆಯುತ್ತಾರೆ ಮತ್ತು ತಿರಸ್ಕರಿಸುತ್ತಾರೆ.

ಇದು ಅತ್ಯಂತ ಕಟು,ಕಹಿ ಸತ್ಯ. ನಮ್ಮ ದೇವೇಗೌಡರು ತಮ್ಮ ರಾಜಕೀಯ ಜೀವನದ ಇಳಿವಯಸ್ಸಿನಲ್ಲೂ ಇಂದಿಗೂ ಪ್ರಸ್ತುತರಾಗಿದ್ದಾರೆ. ಅವರನ್ನು ಕೇಳದೆ ಅವರ ಪಕ್ಷದಲ್ಲಿ ಯಾವ ಪ್ರಮುಖ ನಿರ್ಧಾರಗಳೂ ಆಗುವುದಿಲ್ಲ. ರಾಷ್ಟ್ರ ರಾಜಕಾರಣದಲ್ಲೂ ಅವರು ಒಂದಿಂದು ರೀತಿಯಲ್ಲಿ ಪ್ರಸ್ತುತರಾಗಿದ್ದಾರೆ. ಇಲ್ಲದಿದ್ದರೆ
ಅವರೂ ಎಂದೋ ಇತಿಹಾಸದ ತಿಪ್ಪೆ ಸೇರಿಬಿಡುತ್ತಿದ್ದರು. ಒಂದು ಕಾಲಕ್ಕೆ ರಾಜನಾಗಿ, ಸಾಧನೆಯ ವೀರನಾಗಿ ಮೆರೆದವರು ಇತಿಹಾಸದ ಕಾಲ ಕಸವಾಗುವುದು
ಬದುಕಿzಗಲೇ ಸತ್ತಂತೆ. ನಮ್ಮ ಶ್ರದ್ಧಾಂಜಲಿಯನ್ನು ನಾವೇ ಬರೆದುಕೊಂಡಂತೆ.ಅದರಂಥ ಯಾತನಾಮಯ ಬದುಕು ಮತ್ತೊಂದಿಲ್ಲ.

ನಮ್ಮ ಸಾಧನೆಯೇ ನಮ್ಮನ್ನು ಕಹಿ ನೆನಪಾಗಿ ಕಾಡುತ್ತದೆ. ಇದಕ್ಕಿರುವ ಒಂದೇ ಒಂದು ಉಪಾಯವೆಂದರೆ ನಮ್ಮನ್ನು ದಿನಾ ದಿನ ಆವಿಷ್ಕಾರ ಮಾಡಿಕೊಳ್ಳು ವುದು, ಕಲಿಕೆಗೆ ಒಡ್ಡಿಕೊಳ್ಳುವುದು, ನಮ್ಮನ್ನು redefine ಮಾಡಿಕೊಳ್ಳುವುದು ಮತ್ತು ನಮ್ಮ ಅಸ್ತಿತ್ವವನ್ನು ಯಾವ ಕಾರಣಕ್ಕೂ ಕ್ಷೀಣವಾಗಲು, ದುರ್ಬಲವಾಗಲು
ಬಿಡದಿರುವುದು. ಇದಕ್ಕೆ ಸತತ ಪ್ರಯತ್ನವೊಂದೇ ಪರಿಹಾರ. ಹೀಗಾಗಿ ಪ್ರತಿದಿನವೂ ನಾವು ಹೊಸ ವಾತಾವರಣಕ್ಕೆ ತೆರೆದುಕೊಳ್ಳಲೇಬೇಕು. ಕಾಲಕಾಲಕ್ಕೆ ನಮ್ಮನ್ನು ಸುಧಾರಿಸಿಕೊಳ್ಳಬೇಕು. ಹೊಸ ತಂತ್ರಗಳಿಗೆ ನಮ್ಮನ್ನು ಈಡು ಮಾಡಿಕೊಳ್ಳಬೇಕು. ಇವೆಲ್ಲಕ್ಕಿಂತ ಮುಖ್ಯವಾಗಿ  update ಆಗಬೇಕು. ವೇಗ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ತುಸು ಹಿಂದೆ ಉಳಿದರೂ ನಾವು ಸ್ಪರ್ಧೆಯಿಂದಲೇ ಹಿಂದೆ ಸರಿಯಬೇಕಾಗಬಹುದು.

ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ನನ್ನು ಯಾರೋ ಬಂದು ಓವರ್ ಟೇಕ್ ಮಾಡಿದ ತಾಜಾ ನಿದರ್ಶನ ನಮ್ಮ ಕಣ್ಣ ಮುಂದಿದೆ. ಆಗ ನಮ್ಮದಲ್ಲದ ತಪ್ಪಿಗೆ ತಲೆದಂಡ ಕೊಡಬೇಕಾಗಿ ಬರಬಹುದು. ಯಾವ ತಪ್ಪು ಮಾಡದೆಯೂ ಶಿಕ್ಷೆ ಅನುಭವಿಸುವುದು ಘೋರ ಅನ್ಯಾಯ ಮತ್ತು ಮಹಾ ದುರಂತ.