ನವದೆಹಲಿ: ಪ್ರತಿಯೊಬ್ಬ ಹಿಂದೂಸ್ತಾನಿ ಮುಸಲ್ಮಾನರೂ ತಾವು ಆಧುನಿಕ ಧರ್ಮಾಚರಣೆ ಬಯಸುತ್ತಾರೋ, ಹಳೇ ಕಾಲದ ಅನಾಗರಿಕತೆಯನ್ನು ಬಯಸುತ್ತಾರೋ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬಾಲಿವುಡ್ ಹಿರಿಯ ನಟ ನಾಸೀರುದ್ದೀನ್ ಶಾಹ್ ಹೇಳಿದ್ದಾರೆ.
ಆರ್ಜೆ ಸಯೇಮಾ ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ವೀಡಿಯೋ ಸಂದೇಶದಲ್ಲಿ, ನಸೀರುದ್ದಿನ್ ಅವರು, ‘ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ವಾಪಸ್ಸಾಗಿರುವುದು ಇಡೀ ಜಗತ್ತಿಗೆ ಆತಂಕದ ವಿಷಯವಾಗಿರುವುದು ಸರಿಯಷ್ಟೆ. ಆದರೆ ಅದರಷ್ಟೇ ಅಪಾಯಕಾರಿ ವಿಷಯವೆಂದರೆ ಭಾರತದ ಮುಸಲ್ಮಾನರಲ್ಲಿ ಕೆಲವರು ತಾಲಿಬಾನ್ ಗೆಲುವಿನ ಬಗ್ಗೆ ಸಂಭ್ರಮ ಆಚರಿಸುತ್ತಿರುವುದು ಎಂದಿದ್ದಾರೆ.
ನಾನು ಹಿಂದೂಸ್ತಾನಿ ಮುಸಲ್ಮಾನ’ ಎಂದು ಮಿರ್ಜಾ ಗಾಲಿಬ್ರ ಪದ್ಯವೊಂದನ್ನು ಉಲ್ಲೇಖಿಸಿರುವ 71 ವರ್ಷ ವಯಸ್ಸಿನ ನಾಸಿರುದ್ದೀನ್ ಶಾಹ್, ‘ಹಿಂದೂಸ್ತಾನಿ ಇಸ್ಲಾಂ’ಗೂ ಬೇರೆ ದೇಶಗಳಲ್ಲಿ ಅಭ್ಯಾಸದಲ್ಲಿರುವ ಇಸ್ಲಾಂಗೂ ವ್ಯತ್ಯಾಸವಿದೆ ಎಂದಿದ್ದಾರೆ. ‘ನಮ್ಮ ಧರ್ಮದಲ್ಲಿ ನಾವೇ ಗುರುತಿಸಲಾಗದಷ್ಟು ಬದಲಾವಣೆ ಗಳಾಗುವ ಸಮಯವನ್ನು ದೇವರು ತರದಿರಲಿ’ ಎಂದು ಹೇಳಿದ್ದಾರೆ.