Friday, 20th September 2024

ಸ್ಕ್ರೀನ್‌ ಯುಗದ ಹೊಸ ತಳಿಯ ಮಕ್ಕಳನ್ನು ಬೆಳೆಸುವಾಗ

ಶಿಶಿರ ಕಾಲ

ಶಿಶಿರ್‌ ಹೆಗಡೆ

shishirh@gmail.com

‘ಲೋಕಾಭಿರಾಮವಾಗಿ ಮಾತನಾಡುವಾಗ ಸಾಮಾನ್ಯವಾಗಿ ನಾನು ಚಿಕ್ಕವನಿದ್ದಾಗ’ ಎಂಬ ವಾಕ್ಯದಿಂದ ಕೆಲವು ಮಾತುಕಥೆಗಳು ಶುರುವಾಗುತ್ತವೆ. ನೀವು ಏನೇ ಹೇಳಿ, ವಿವರ ಕೊಡಿ ನಮ್ಮ ಬೆಳವಣಿಗೆಯನ್ನೇ ಸೂಕ್ಷ್ಮವಾಗಿ ಗ್ರಹಿಸಿದಲ್ಲಿ ಅನುಭವಕ್ಕೆ ಇದು ಬರುತ್ತದೆ – ಚಿಕ್ಕಂದಿನಿಂದ ಸಾಯುವಲ್ಲಿಯವರೆಗೆ ನಮ್ಮೊಳ ಗಿನ ನಾವು ಯಾವತ್ತೂ ಬದಲಾಗುವುದಿಲ್ಲ. ಬದಲಾಗುವುದು ನಮ್ಮ ಸುತ್ತಲಿನ ಜನ, ಸ್ಥಿತಿ ಎಂಬಿತ್ಯಾದಿ. ನಾನು ಮೊದಲು ಹಾಗಿದ್ದೆ, ಈಗ ಹೀಗಾಗದೆ ಎಂದು ಯಾರೇ ಎಷ್ಟೇ ಬಡಬಡಾಯಿಸಿದರೂ ಅದೆಲ್ಲ ಶುದ್ಧ ಬೊಗಳೆ.

ನಾವು ಪ್ರತಿಕ್ರಿಯಿಸುವ ರೀತಿ, ನಮ್ಮ ಜಗತ್ತಿನೆಡೆಗಿನ ಜ್ಞಾನ, ನಮ್ಮ ವ್ಯವಹಾರ, ಸಹಿಷ್ಣುತೆ ಇವೆಲ್ಲ ಬದಲಾಗ ಬಹುದು. ಅಲ್ಲಿ ಒಳಗೊಬ್ಬ ಇರುವ ‘ನಾನು’ ಎಂಬ ನಾನು ಹಾಗೆಯೇ ಉಳಿದಿರುತ್ತದೆ. ಅದೆಷ್ಟೇ ವ್ಯಕ್ತಿತ್ವ ವಿಕಸನ ಕ್ಲಾಸಿನ ಭಾಷಣ, ಗುರು ಪ್ರವಚನ ಕೇಳಿ, ಅವೆಲ್ಲವಕ್ಕೆ ನಾವು ಪ್ರತಿಫಲಿಸುವ ರೀತಿ ಬದಲಿಸುವ ಶಕ್ತಿ ಇರಬಹುದು. ಆದರೆ ಅದು ಎಂದೆಂದೂ ನಮ್ಮ ಆಂತರ್ಯವನ್ನು ಬದಲಿಸುವುದಿಲ್ಲ. ಒಮ್ಮೊಮ್ಮೆ ಬದಲಾವಣೆ ಯಾದಂತೆ ಅನ್ನಿಸಿದರೂ ಅದು ಕೆಲ ಸಮಯಕ್ಕಷ್ಟೇ ಸೀಮಿತ. ಹೀಗೆ ಬದಲಾಗದ ನಮ್ಮೊಳಗಿನ ಅದನ್ನೇ ವ್ಯಕ್ತಿತ್ವ ಎನ್ನುವುದು.

ನಮ್ಮೆಲ್ಲರ ವ್ಯಕ್ತಿತ್ವ ಹುಟ್ಟುವುದೇ ಅದ್ಯಾವತ್ತೋ ಒಂದು ಡೇಟ್ ಆಫ್ ಬರ್ತ್ ಇಲ್ಲದ ದಿನದಲ್ಲಿ – ರೂಪಗೊಳ್ಳು ವುದು ಬಾಲ್ಯದಲ್ಲಿ. ಹೀಗಾಗಿಯೇ ಬಾಲ್ಯ ಮುಖ್ಯ ವಾಗುವುದು. ಬಾಲ್ಯವೇ ನಮ್ಮೆಲ್ಲರ ಜೀವನದ ಬುನಾದಿ. ಬಾಲ್ಯವೆನ್ನುವುದು ಒಂದು ಹೋಮ್ ವರ್ಕ್. ‘ಸಂತ ಕಬೀರ ಜೀನಿ ರೇ ಜೀನಿ’ ದೋಹೆಯಲ್ಲಿ ವ್ಯಕ್ತಿಯನ್ನು ಚಾದರಕ್ಕೆ ಹೋಲಿಸುತ್ತಾನೆ. ಒಂಭತ್ತು ತಿಂಗಳು ಚಾದರ ತಯಾರಿಕೆಗೆ. ‘ಜಬ ಮೊರಿ ಚಾದರ ಬನ ಘರ ಆಯೋ, ರಂಗರೇಜ್ ಕೋ ದೀನಿ’. ಚಾದರ ತಯಾರಾಗಿ ಬಂದ ನಂತರ ಅದನ್ನು ಬಣ್ಣ ಹಾಕುವ ಕೆಲಸ. ಇಲ್ಲಿ ಚಾದರಕ್ಕೆ ಬೇಸ್ ಬಣ್ಣ ಹಚ್ಚುವ, ವ್ಯಕ್ತಿತ್ವ ರೂಪಿಸುವ ಕೆಲಸ ಮನೆಯಲ್ಲಿಯೇ ಬಾಲ್ಯದಲ್ಲಿ ಆಗುವುದು.

ಮನೆಯೇ ಮೊದಲ ಪಾಠಶಾಲೆ ಎಂಬ ಅರ್ಥಕ್ಕೆ ಕೇವಲ ಎಬಿಸಿಡಿ, ಮಗ್ಗಿ ಎಂದು ಅರ್ಥೈಸುವಂತಿಲ್ಲ. ಈ ಪ್ರಕ್ರಿಯೆಯಲ್ಲಿ ಬಣ್ಣ ಹಚ್ಚುವ ಮುಂದಿನ ಕೆಲಸವೇ
ಶಿಕ್ಷಣದ್ದು. ಶಿಕ್ಷಣ ಎಂದರೆ ಶಾಲೆಯಲ್ಲಿ ಕಲಿಯುವ ಶಿಕ್ಷಣವಷ್ಟೇ ಎಂದಲ್ಲ. ಜೀವನ ಸಾಗುತ್ತ ಹೋದಂತೆ ಹಲವು ಬಣ್ಣಗಳು ಚಾದರಕ್ಕೆ ತಾಗಿಕೊಳ್ಳುತ್ತಾ ಹೋಗು ತ್ತದೆ. ಆದರೆ ಚಾದರ – ವ್ಯಕ್ತಿ ಉದ್ದಕ್ಕೂ ಒಂದೇ. ಚಾದರಕ್ಕೆ ಹೇಗೆ ಎಷ್ಟೇ ಬಣ್ಣವನ್ನು ಹಚ್ಚಿದರೂ ಅದನ್ನು ಗುರುತಿಸುವುದು ಅದರ ಬೇಸ್ ಬಣ್ಣದಿಂದಲೇ. ಬಾಲ್ಯ ಹಗೆಯೇ ಇರಲಿ – ಬೇಸ್ ಬಣ್ಣ ಚಾದರದಂತಹ ವ್ಯಕ್ತಿತ್ವದೊಳಗೆ ಪ್ರತೀ ಎಳೆಯಲ್ಲೂ ಒಂದಾಗುವುದು ಆಗಲೇ. ಆಮೇಲಿನದೆಲ್ಲ ಟಾಪ್ ಕೋಟ್.

ಘಟನೆ ಒಂದು : ಚಿಕ್ಕ ಮಗು ಮಣ್ಣಿನಲ್ಲಿ ಕೂತು ಆಡುತ್ತಿತ್ತು. ಮಗುವಿನ ತಾಯಿ ಅಯ್ಯೋ ನೋಡು ಮಣ್ಣನ್ನು ಇಡೀ ಮೈಗೆ ಮೆತ್ತಿಕೊಂಡಿದ್ದೀಯ. ‘ಬಾ ಈಚೆ, ತಗೋ ಮೊಬೈಲ್ ನೋಡ್ಕೊ’.

ಘಟನೆ ಎರಡು: ಬೇಗ ಬೇಗ ಊಟ ಮಾಡು. ಛೇ, ಇವನಂತೂ ಮೊಬೈಲ್ ಇಲ್ಲದೇ ಊಟವೇ ಮಾಡುವುದಿಲ್ಲ. ತಗೋ.

ಘಟನೆ ಮೂರು: ಸುಮ್ಮನೆ ಅಳೋದು ನಿಲ್ಲಿಸು. ನಿನ್ನ ರಗಳೆ ಜಾಸ್ತಿ ಆಗ್ತಾ ಇದೆ, ದಿನಕಳೆದಂತೆ. ತಗೋ ಮೊಬೈಲ.

ಘಟನೆ ನಾಲ್ಕು: ನಮ್ಮ ಮಗು ಎಷ್ಟು ಕ್ಲೆವರ್ ಗೊತ್ತಾ. ಅವನಿಗೆ ನನ್ನ ಮೊಬೈಲ್‌ನ ಪಾಸ್‌ವರ್ಡ್ ಕೂಡ ಗೊತ್ತು. ನನಗೆ ಪಾಸ್‌ವರ್ಡ್ ಮರೆತರೆ ಅವನಿಗೇ ಕೇಳೋದು. ಅವನೇ ಯೂ ಟ್ಯೂಬ್ ಓಪನ್ ಮಾಡಿ ಬೇಕಾದದ್ದು ಸರ್ಚ್ ಮಾಡ್ಕೋತಾನೆ. ಬಹಳ ಶಾಣೆ.

ಘಟನೆ ನೂರಾಹತ್ತು: ನನ್ನ ಮಗಳು ಅವಳೇ ಫೇಸ್‌ಬುಕ್‌ಗೆ ಹೋಗಿ ಫೋಟೋ ಹಾಕ್ತಾಳೆ ಗೊತ್ತಾ. ನಿಮ್ಮ ವಾಟ್ಸಾಪ್ ಸ್ಟೇಟಸ್ ನೋಡಿ ನನಗೆ ತೋರಿಸಿದ್ದು ಅವಳೇ.

ಘಟನೆ ಒಂದು ಸಾವಿರದ ನಾಲ್ಕುನೂರು : ಅಯ್ಯೋ ಮಗು ತುಂಬಾ ಹೊತ್ತು ಆಟವಾಡಿದೆ. ಸ್ವಲ್ಪ ಹೊತ್ತು ಟಿವಿ, ಮೊಬೈಲ್ ಕೊಡೋಣ ಪಾಪ.

ಘಟನೆ ಎರಡು ಸಾವಿರದ ಎಂಟುನೂರು: ನನ್ನ ಮಗನಿಗೆ ಆಂಡ್ರಾಯ್ಡ್ ಕೊಡಿ, ಐಫೋನ್ ಕೊಡಿ. ಲೀಲಾಜಾಲವಾಗಿ ಯೂಸ್ ಮಾಡ್ತಾನೆ ರೀ. ನನಗೇ ಬರೋಲ್ಲ. ಬಹಳ ಚಾಲಾಕಿ ಇವ್ನು. ಈಗಿನ ನೂರಕ್ಕೆ ಎಂಭತ್ತರಷ್ಟು ಮಕ್ಕಳ ಬಾಲ್ಯ ಇದೇ ಆಗಿದೆ.

ಅವಕ್ಕೊಂದು ಆತ ಗೊತ್ತಿಲ್ಲ, ಜನರ ಜತೆ ಹೇಗೆ ಮಾತನಾಡಬೇಕು ಎಂದು ಗೊತ್ತಿಲ್ಲ. ಮೊಬೈಲ್‌ನಲ್ಲಿ ಮಾತ್ರ ಪಂಟರ್. ಅವರೆಲ್ಲರ ಪಾಲಕರು ಆಗೀಗ ಇದೆಲ್ಲವನ್ನು ಹೇಳುತ್ತಾ – ನನ್ನ ಮಗ/ ಮಗಳು ಎಷ್ಟು ಹೇಳಿದರೂ ಕೇಳುವುದಿಲ್ಲ ಎಂದು ಹೇಳುವುದೂ ಕೇಳುತ್ತಿರುತ್ತೇನೆ. ನಾವು ಈಗ ಸದ್ಯ ಇಂಥzಂದು ಸ್ಕ್ರೀನ್ ಮಾನವ ತಳಿಯನ್ನು ಬೆಳೆಸುತ್ತಿದ್ದೇವೆ. ಇದೇನು ಭಾರತ ಅಥವಾ ಅಮೆರಿಕವೊಂದರ ಕಥೆಯಲ್ಲ.

ಹೆಚ್ಚು ಕಡಿಮೆ ಜಗತ್ತಿನ ಎಲ್ಲಾ ದೇಶದ ಜನರ, ಪಾಲಕರ, ಮಕ್ಕಳ ವ್ಯಥೆಯ ಕಥೆ. ಇದೆಲ್ಲ ಇದಮಿತ್ಥಮ್ ಎಂದು ನಿಮಗೆ ಅನ್ನಿಸಿದರೆ, ಇದೆಲ್ಲ ನಾನ್ಸೆ ಅಲ್ಲ, ಮಕ್ಕಳು ಮೊಬೈಲ, ಟ್ಯಾಬ್ಲೆಟ್ ಬಳಸುವುದೇ ಆಧುನಿಕತೆ ಎಂದೆನಿಸಿದರೆ ಈ ಲೇಖನವನ್ನು ಓದುವುದನ್ನು ಇಲ್ಲಿಗೇ ನಿಲ್ಲಿಸಿಬಿಡಿ. ಏಕೆಂದರೆ ನಿಮಗೆ ಮುಂದೆ ಹೇಳುವ ಯಾವ ವಿಚಾರ ಕೂಡ ಪರಿಣಾಮ ಬೀರಲಿಕ್ಕಿಲ್ಲ. ಅಥವಾ ನಿಮ್ಮಂಥವರೇ ಓದಬೇಕು.

ಸಾಮಾನ್ಯವಾಗಿ ಎಲ್ಲ ತಂದೆ ತಾಯಂದಿರಲ್ಲೂ ತನ್ನ ಮಕ್ಕಳಿಗೆ ಮೊಬೈಲ್ ಇತ್ಯಾದಿ ಸ್ಕ್ರೀನ್ – ಕೊಡಬೇಕೇ ಬೇಡವೇ, ಕೊಟ್ಟರೆ ಎಷ್ಟು ಹೊತ್ತು ಕೊಡಬೇಕು ಎಂಬಿತ್ಯಾದಿ ವಿಚಾರವಾಗಿ ಒಂದು ನಿರ್ದಿಷ್ಟತೆಯಿರುವುದಿಲ್ಲ. ಅಂದು ದ್ವಂದ್ವ ಇದ್ದೇ ಇರುತ್ತದೆ. ಸಂಪೂರ್ಣ ಕೊಡದಿದ್ದರೆ ಉಳಿದ ಮಕ್ಕಳಂತೆ ನನ್ನ ಮಗು
ಏನೋ ಒಂದನ್ನು ಮಿಸ್ ಮಾಡಿಕೊಳ್ಳಬಹುದು ಎಂದು. ಮಕ್ಕಳೆಲ್ಲ ಗುಂಪಾದಾಗ ಸಾಮಾನ್ಯವಾಗಿ ಕಾರ್ಟೂನ್ ಕ್ಯಾರೆಕ್ಟರ್ ಬಗ್ಗೆ ಮಾತನಾಡುತ್ತಿದ್ದರೆ ಅದು ನನ್ನ ಮಗುವಿಗೆ ಗೊತ್ತಿಲ್ಲವೆಂ ದಾದರೆ ಎಲ್ಲಾ ಸಾಮಾಜಿಕ ಸ್ಪರ್ಧೆಯಲ್ಲಿ ಹಿಂದೆ ಬಿದ್ದಂತೆ.

ಈ ದ್ವಂದ್ವಗಳ ನಡುವೆಯೇ ಮಗುವೊಂದು ಸ್ಕ್ರೀನ್ ಚಟಕ್ಕೆ ತಿಳಿಯದಂತೆ ಒಳಗಾಗಿಬಿಡುತ್ತದೆ. ಇದಕ್ಕೆ ಚಟ ಎನ್ನುವ ಶಬ್ದವೇ ಸರಿಯಾದದ್ದು. ಅಷ್ಟಕ್ಕೂ ಚಟ ವೆಂದರೆ ಏನು? ಚಟದ ಬಗ್ಗೆ ಸಾಮಾನ್ಯವಾಗಿ ನಮ್ಮಲ್ಲಿ ಒಂದು ತಪ್ಪು ತಿಳಿವಳಿಕೆ ಇದೆ. ಚಟವೆಂದರೆ ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಕುಡಿತ ಅಥವಾ ಧೂಮಪಾನ ಇತ್ಯಾದಿ. ಇದೆಲ್ಲ ಸಮಾಜ ಒಪ್ಪದ ಚಟಗಳು. ಇನ್ನೊಂದಿಷ್ಟು ಸಮಾಜ ಒಪ್ಪುವ ಚಟ. ಚಟವೊಂದರ ಅಡ್ಡ ಪರಿಣಾಮವೇನು? ಮುಂದೆ ಬಂದೊದ ಗಬಹುದಾದ ದೈಹಿಕ ಸಮಸ್ಯೆ ಅಲ್ಲವೇ? ಆದರೆ ಚಟವೊಂದರ ಅಡ್ಡಪರಿಣಾಮ ಅಸಲಿಗೆ ಚಟವೇ. ಅದೇ ಒಂದು ಸಮಸ್ಯೆ. ಒಂದು ಪರ್ಫೆಕ್ಟ್ ಎನ್ನುವ ಜೀವನ ನಿಮ್ಮದಾಗಿದ್ದಾಗ ಕೂಡ ಚಟವೊಂದಕ್ಕೆ ಒಳಗಾಗಬಹುದು.

ಬಾಲ್ಯ ಸರಿಯಿಲ್ಲದಿದ್ದರೆ ಮುಂದೊಂದು ದಿನ ಚಟವೊಂದನ್ನು ಹತ್ತಿಸಿಕೊಳ್ಳಬಹುದಾದ ಸಾಧ್ಯತೆ ಹೆಚ್ಚು, ನಿಜ. ಚಟ ಇನ್ಯಾವುದೋ ಕಾರಣದಿಂದ ಕೂಡ ಹತ್ತಿ ಕೊಳ್ಳಬಹುದು. ಆದರೆ ಅತ್ಯಂತ ಒಳ್ಳೆಯ ಬಾಲ್ಯ, ತಂದೆ ತಾಯಿ, ವಾತಾವರಣ, ಆರ್ಥಿಕ ಸ್ಥಿತಿ, ಕುಟುಂಬ ಹೀಗೆ ಎಲ್ಲವೂ ಅತ್ಯುತ್ತಮವಾಗಿದ್ದರೂ ಕೂಡ ಚಟವೊಂದು ತಾಗಿಕೊಳ್ಳಲು ಸಾಧ್ಯ. ಇದನ್ನು ಅರ್ಥಮಾಡಿಕೊಳ್ಳುವುದು ತೀರಾ ಮುಖ್ಯವಾಗುತ್ತದೆ. ಪ್ರತಿಯೊಬ್ಬರೂ ಚಟವೊಂದಕ್ಕೆ ಕಾರಣ ಹುಡುಕುವುದು ನೋಡುತ್ತಿರುತ್ತೇನೆ. ಸಾಮಾನ್ಯವಾಗಿ ಮಾನಸಿಕ ಒತ್ತಡದ ಕಾರಣದಿಂದ ಒಬ್ಬ ವ್ಯಕ್ತಿ ಯಾವುದೋ ಒಂದು ಚಟಕ್ಕೆ ದಾಸನಾಗುತ್ತಾನೆ ಎನ್ನುವ ಸಾಮಾನ್ಯ. ಆದರೆ ಯಾವುದೇ ಕಾರಣವೇ ಇಲ್ಲದೇ ಇದ್ದಲ್ಲಿ ಕೂಡ ಚಟವೊಂದಕ್ಕೆ ದಾಸನಾಗಬಹುದು.

ಮಕ್ಕಳಿಗೆ ಮೊಬೈಲ್ ಅಥವಾ ಸ್ಕ್ರೀನ್ ಕಣ್ಣಿಗೆ ಹಾಳು ಎನ್ನುವುದು ಗೊತ್ತು. ಇನ್ನು ಕೆಲವರಿಗೆ ಇದು ಕಣ್ಣಿಗೆ ಹಾಳು ಎನ್ನುವುದಷ್ಟೇ ಗೊತ್ತು – ಅ ಸಮಸ್ಯೆಯಿರುವುದು.
ಮಗುವೊಂದು ಒಂದು ಹದ ಮೀರಿ ಸ್ಕ್ರೀನ್ ಬಳಸಿದರೆ ಆಗುವ ಸಮಸ್ಯೆ ಕೇವಲ ಕಣ್ಣಿನದಷ್ಟೇ ಅಲ್ಲ. ಕಣ್ಣಿನ ಸಮಸ್ಯೆಯಾದರೆ ಇಂದು ಕನ್ನಡಕ ಹಾಕಿಸಿಕೊಡ ಬಹುದು ಅಥವಾ ಲೇಸರ್ ಚಿಕಿತ್ಸೆ ಮಾಡಿಸಿ ಸರಿ ಮಾಡಿಸಬಹುದು. ಆದರೆ ಸಮಸ್ಯೆ ಅದರಾಚಿನದು.

ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ತಂದೆ ತಾಯಿಗಿಂತ ಹೆಚ್ಚಿನ ಕೆಲಸ ಪ್ರಕೃತಿಯದು. More screen time means less green time ಎನ್ನುವ ಮಾತಿದೆ. ಸಾಮಾನ್ಯವಾಗಿ ನಮಗೆ ಬೇಸರವಾದಾಗ ಟಿವಿಗಿಂತ ಗಾವುದ ನಡಿಗೆ ಎಲ್ಲಿಲ್ಲದ ಹುಮ್ಮಸ್ಸನ್ನು, ಗೆಲುವನ್ನು ತುಂಬುತ್ತದೆಯಲ್ಲ – ಹಾಗೆಯೇ ಮಕ್ಕಳು ಗಾರ್ಡನ್‌ನಲ್ಲಿ, ತೋಟದಲ್ಲಿ, ಮೈದಾನದಲ್ಲಿ, ಹೀಗೆ ಹೊರ ಜಗತ್ತಿನಲ್ಲಿ ಸಮಯ ಕಳೆದಾಗ ಅವರಲ್ಲಿ ಉಂಟಾದ ಮಾನಸಿಕ ಒತ್ತಡ, ಉದ್ವೇಗ, ಆಕ್ರಮಣಶೀಲತೆ ಇವೆಲ್ಲ ಕಡಿಮೆಯಾಗಿ ನಂತರದಲ್ಲಿ ಏಕಾಗ್ರತೆಗೆ ಸಹಾಯವಾಗುತ್ತದೆ. ಹೆಚ್ಚಿಗೆ ಸ್ಕ್ರೀನ್ ಎದುರಿಗಿದ್ದಷ್ಟು ಮಕ್ಕಳು ಈ ಪ್ರಕೃತಿಯಿಂದ ದೂರವಾಗುತ್ತಾರೆ.

ವಿಜ್ಞಾನಿಗಳ, ಮನಶಾಸ್ತ್ರಜ್ಞರ ಪ್ರಕಾರ ಸ್ಕ್ರೀನ್ ಟೈಮ್ ಹೆಚ್ಚಿದಂತೆ ಇಲ್ಲಿ ತದ್ವಿರುದ್ದದ ಪರಿಣಾಮ ಶುರುವಾಗುತ್ತದೆ. ಕೈಯಲ್ಲಿ ಟಚ್ ಸ್ಕ್ರೀನ್ ಕೊಟ್ಟು ಗಮನಿಸಿದರೆ, ಮಗು ಬಳಸುವ ವಿಧಾನ ತಿಳಿಯುತ್ತದೆ. ಮಗು ಯೂಟ್ಯೂಬ್‌ನಲ್ಲಿ ವಿಡಿಯೊ ನೋಡಲು ಶುರುಮಾಡಿದರೆ ಒಂದು ವಿಡಿಯೊ ಹಚ್ಚಿ ನೋಡಿ ಮುಗಿಸುವುದರೊಳಗೆ ಇನ್ನೊಂದು ನೋಡುವ ಕಾತರತೆ ತೋರುತ್ತದೆ. ಒಂದಾದ ನಂತರ ಇನ್ನೊಂದು, ಆಮೇಲೆ ಮತ್ತೊಂದು – ಹೀಗೆ. ಈಗ ನೋಡುತ್ತಿರುವುದಕ್ಕಿಂತ ಮುಂದಿನದು ಒಳ್ಳೆಯದಿರಬಹುದು ಎಂದು. ಅದೇ ರೀತಿ ಸ್ಕ್ರೀನ್ ಗೇಮ್ ಕೂಡ. ಈ ಇದಕ್ಕಿಂತ ಮುಂದಿನದು ಒಳ್ಳೆಯದಿರಬಹುದು ಎಂಬ ಚಾಳಿ ಕ್ರಮೇಣ ಜೀವನದ ಎಲ್ಲ
ಚಟುವಟಿಕೆಗಳಿಗೂ ವಿಸ್ತರಿಸುತ್ತದೆ. ಇದರಿಂದ ತೃಪ್ತಿ ಎನ್ನುವುದೇ ಕೈಗೆ ಸಿಗುವುದಿಲ್ಲ. ಅತೃಪ್ತಿಯ ಭಾವ ಹೆಚ್ಚುತ್ತದೆ.

ಪ್ರಕೃತಿ ಮನಸ್ಸಿನ ಉದ್ವೇಗವನ್ನು ತಣಿಸುತ್ತದೆ ಆದರೆ ಸ್ಕ್ರೀನ್‌ನ ಜತೆ ಅಷ್ಟೇ ಸಮಯ ಕಳೆದ ಈ ಉದ್ವೇಗ ನಾಲ್ಕು ಪಟ್ಟು ಹೆಚ್ಚುತ್ತದೆ. ಈ ಹೆಚ್ಚಿದ ಉದ್ವೇಗ ವಿರಬಹುದು ಅಥವಾ ಏಕಾಗ್ರತೆಯ ಕೊರತೆಯಿರಬಹುದು, ಅದು ಆಗಿಂದಾಗ ಕಾಣಿಸಿಕೊಂಡುಬಿಡುವುದಿಲ್ಲ. ಕ್ರಮೇಣ ದಿನ ತಿಂಗಳು ವರ್ಷ ಕಳೆದಂತೆ ಇವೆಲ್ಲ ಮುನ್ನೆಲೆಗೆ ಬರುತ್ತದೆ. ಸಮೂಹ ಸೈಕಲಾಜಿಕಲ್ ಸಮಸ್ಯೆಯೊಂದು ಅರಿವಿಗೆ ಬರಲು ಕನಿಷ್ಠ ಇಪ್ಪತ್ತು ವರ್ಷ ಬೇಕು ಎನ್ನುವುದು ಒಂದು ನಂಬಿಕೆ. ಆದರೆ ಮೊಬೈಲ್ ಬಂದು – ಅದು ಮಕ್ಕಳ ಕೈಗೆ ಸಿಗಲು ಶುರುವಾಗಿ ಅಷ್ಟು ಸಮಯವೇ ಆಗಿಲ್ಲ. ಹೀಗೆ ಒಂದು ಅಧ್ಯಯನಕ್ಕೆ ಬೇಕಾಗುವ ಸಮಯದೊಳಗೇ ಎಲ್ಲಾ ಮೀರಿ ಸ್ಕ್ರೀನ್ ಬಳಕೆಯಾಗುತ್ತಿದೆ. ಅದರ ಅಡ್ಡ ಪರಿಣಾಮ ಈಗಾಗಲೇ ಕಾಣಿಸಿಕೊಳ್ಳುತ್ತಿದೆ ಕೂಡ.

ಇಂದಿನ ಮಕ್ಕಳಲ್ಲಿಯ, ಹದಿಹರೆಯದವರಲ್ಲಿಯ ಬಿಹೆವಿಯರಲ್ ಡಿಸಾಡರ್ರ‍ – ಅಸ್ವಾಸ್ಥ್ಯ ವರ್ತನೆಗಳಿಗೆ ಶೇ.೮೦ರಷ್ಟು ಕಾರಣವೇ ಸ್ಕ್ರೀನ್ ಟೈಮ್ ಎನ್ನುವುದು ಬೇರೆ ಯಾರದೋ ವರದಿಯಲ್ಲ. ಖುದ್ದು WHO ಹೇಳಿರುವುದು. ಏಕಾಗ್ರತೆ ಎಲ್ಲರಲ್ಲೂ ಅತ್ಯಂತ ಅವಶ್ಯಕವಾದದ್ದು. ಅದರಲ್ಲಿಯೂ ಮಕ್ಕಳಲ್ಲಿ, ಕಲಕೆಯ ಸಮಯದಲ್ಲಿ ಬಹುಮುಖ್ಯ. ಸ್ಕ್ರೀನ್ ಸಮಯ ಹೆಚ್ಚಿದಂತೆಲ್ಲ ಈ ಏಕಾಗ್ರತೆ ಕ್ಷೀಣಿಸುವುದರಿಂದ ಕೇವಲ ಅದು ಶಿಕ್ಷಣ, ಮಾರ್ಕ್ಸ್‌ಗಳ ಮೇಲಷ್ಟೇ ಪರಿಣಾಮ ಬೀರುವುದಲ್ಲ. ಬದಲಿಗೆ ಎಲ್ಲ ವ್ಯವಹಾರಗಳಲ್ಲಿಯೂ ಇದು ಅಡ್ಡ ಪರಿಣಾಮ ಬೀರಲು ಶುರುಮಾಡುತ್ತದೆ.

ಇದರಿಂದಾಗಿ ತಾನು ಉಳಿದ ಮಕ್ಕಳಷ್ಟು ಸಮರ್ಥನಲ್ಲ ಎನ್ನುವ ಭಾವನೆ ಕ್ರಮೇಣ ಬೆಳೆಯುತ್ತ ಹೋಗುತ್ತದೆ. ಒಮ್ಮೆ ಇಂತಹ ಭಾವನೆಯ ಹುಳು ತಲೆಯಲ್ಲಿ
ಹೊಕ್ಕಿತೆಂದಾದರೆ ಅದನ್ನು ಇನ್ನೊಬ್ಬರಲ್ಲಿ ಹೇಳಿಕೊಂಡು ಬಗೆಹರಿಸಿಕೊಳ್ಳುವ ಸೋಷಿಯಲ್ ಸ್ಕಿಲ್ – ಸಾಮಾಜಿಕ ಕೌಶಲ್ಯ ಸ್ಕ್ರೀನ್ ಮಕ್ಕಳಲ್ಲಿ ಬೆಳೆದಿರುವುದಿಲ್ಲ. ಏಕೆಂದರೆ ಅವರ ಹೊರ ಜಗತ್ತಿನ, ಜನರ ಜತೆಗಿನ ಒಡನಾಟ ಅದಾಗಲೇ ಸೀಮಿತ. ಇದರಿಂದಾಗಿ ಕ್ರಮೇಣ ಖಿನ್ನತೆ, ಕೀಳರಿಮೆ ಹುಟ್ಟಿಕೊಳ್ಳುತ್ತದೆ. ಅದು ಆತ್ಮಹತ್ಯೆಯವರೆಗೂ ಮುಟ್ಟಿಸಬಹುದು.

ಸ್ಕ್ರೀನ್ ನೋಡುವ ಸಮಯದಲ್ಲಿ ಓದು, ಆಟ, ಈ ಎಲ್ಲದಕ್ಕಿಂತ ಹೆಚ್ಚಿನ ಮಾನಸಿಕ ಶಕ್ತಿಯ ವ್ಯಯವಾಗುತ್ತದೆ. ಓದುವಾಗ ಅಥವಾ ಆಡುವಾಗ ಮನಸ್ಸಿಗೊಂದು ಮಿತಿ ಇದೆ ಆದರೆ ಸ್ಕ್ರೀನ್‌ನಲ್ಲಿ ಮನಸ್ಸು ಲಂಗು ಲಗಾಮಿಲ್ಲದೆ ಒಂದು ವಿಷಯ, ಚಿತ್ರದಿಂದ ಇನ್ನೊಂದಕ್ಕೆ ಹಾರುತ್ತಿರುತ್ತದೆ. ಅದನ್ನು ಅಷ್ಟೇ ವೇಗವಾಗಿ ಮನಸ್ಸು ಗ್ರಹಿಸಿ ಪ್ರೋಸೆಸ್ಸ್ ಮಾಡಬೇಕು ಮತ್ತು ಮರುಕ್ಷಣದಲ್ಲಿ ಇನ್ನೊಂದಕ್ಕೆ ಅಣಿಯಾಗಬೇಕು. ಹೀಗೆ ವ್ಯಯವಾದ ಶಕ್ತಿಯನ್ನು ನಮ್ಮ ಮನಸ್ಸು ಇನ್ನೊಂದು ಕೆಲಸದಿಂದ ಮರಳಿ ಪಡೆಯಲು ಬಯಸುತ್ತದೆ. ಆಗ ಆಗುವ ದ್ವಂದ್ವದಿಂದ ಮಗು ಹಟಮಾಡಲು ಶುರುಮಾಡುತ್ತದೆ.

ಅಥವಾ ಇನ್ನು ಕೆಲವು ಮಕ್ಕಳು ಸಿಟ್ಟಿಗೇಳುತ್ತಾರೆ. ಒಂದೆರಡು ತಾಸು ಟಿವಿ, ಮೊಬೈಲ್ ನೋಡಿದ ಮಕ್ಕಳು ನಂತರದಲ್ಲಿ ಈ ರೀತಿ ಕೋಪಕ್ಕೊಳಗಾಗುವುದು, ಉದ್ವೇಗ ಇನ್ನೊಂದು ರೀತಿಯಲ್ಲಿ ಅತ್ತು, ರಂಪಾಟ ಮಾಡಿ ಹೊರ ಹಾಕುವುದು ಹೀಗೆ ನೋಡಿದರೆ ಕಾಣಿಸಿಬಿಡುತ್ತದೆ.

ಸ್ಕ್ರೀನ್ ಆಟಗಳಿರಬಹುದು ಅಥವಾ ವಿಡಿಯೊಗಳಿರಬಹುದು, ಒಂದರಿಂದ ಒಂದಕ್ಕೆ ಹೊರಳುವಾಗ ಅದೊಂದು ರೀತಿಯ ಬೇಕು ಬೇಕು ಎನ್ನುವ ಭಾವ ಇದೆಯಲ್ಲ, ಅದಕ್ಕೆ ಮುಖ್ಯ ಕಾರಣ ಡೋಪಮೈನ್. ಚಿಕ್ಕ ಚಿಕ್ಕ ಗೆಲುವೇ ಜೀವನ ಎಂದೆಲ್ಲ ಮಾತನ್ನು ಕೇಳುತ್ತೇವೆ ಅಲ್ಲವೇ? ಒಂದು ಚಿಕ್ಕ ಗೆಲುವು, ಭಾಷಣ, ಗಾಯನ ಸ್ಪರ್ಧೆಯೊಂದರಲ್ಲಿ ಗೆದ್ದಾಗ, ಒಳ್ಳೆಯ ಮಾರ್ಕ್ಸ್ ತೆಗೆದುಕೊಂಡಾಗ, ಶಿಕ್ಷಕರು ಶಭಾಷ್ ಎಂದಾಗಲೆಲ್ಲ‘ ಉಂಟಾಗುತ್ತಿದೆಯಲ್ಲ ಆ ಚಿಕ್ಕ ಸಂತೋಷ ನಮ್ಮ ಮೆದುಳಿನಲ್ಲಿ ಡೋಪಮೈನ್ ಅನ್ನು ಹುಟ್ಟಿಹಾಕುತ್ತದೆ.

ಡೋಪಮೈನ್ ಗೆಲುವಿನ, ಸಂತೋಷದ, ಪ್ರೋತ್ಸಾಹಿಸುವ ರಾಸಾಯನಿಕ. ಪ್ರತಿ ಬಾರಿ ನಮಗೆ ಖುಷಿಯಾದಾಗ, ಗೆಲುವಾದಾಗ ಇದು ಉತ್ಪತ್ತಿಯಾಗುತ್ತದೆ. ಡೋಪಮೈನ್ ಒಂದು ನ್ಯುರೊಟ್ರಾನ್ಸ್ಮಿಟರ್ (ನರಪ್ರೇಕ್ಷಕ). ಇದು ನಮ್ಮ ನರಕೋಶ ಮತ್ತು ಮೆದುಳಿನ ಸಂದೇಹವಾಹಕ ರಾಸಾಯನಿಕ. ಆ ಕಾರಣಕ್ಕೆ ಇದನ್ನು Feel Good hormone ಎಂದು ಕೂಡ ಕರೆಯಲಾಗುತ್ತದೆ. ಏನೇ ಒಂದು ಖುಷಿಯಾಗುವ ಕೆಲಸ ನೀವು ಮಾಡಿದಾಗ ಮೆದುಳು ಇದನ್ನು ಉತ್ಪಾದಿಸುತ್ತದೆ. ಗೆzಗ, ಯಾರೋ ಬೆನ್ನು ತಟ್ಟಿದಾಗ, ಪ್ರಶಂಸೆ ಮಾಡಿದಾಗ ಅಷ್ಟೇ ಏಕೆ ಸಂಭೋಗದ ಸಮಯದಲ್ಲಿ ಕೂಡ ಇದು ಬಿಡುಗಡೆಯಾಗುತ್ತದೆ.

ಆಗ ಒಂದು ಸಾರ್ಥಕತೆಯ ಭಾವದ ಅನುಭವ ನಮಗಾಗುತ್ತದೆ. ಸ್ಕ್ರೀನ್ ನಲ್ಲಿ ಆಟವಾಡಿ ಒಂದು ಲೆವೆಲ್ ದಾಟಿದಾಗ, ಅಲ್ಲಿ ಸ್ಕ್ರೀನ್ ನಲ್ಲಿ ಎದುರಾಳಿಯನ್ನು ಹೊಡೆದಾಗ ಹೀಗೆ ಎಲ್ಲ ಸಮಯದಲ್ಲಿ ಇದೇ ರಾಸಾಯನಿಕ ಬಿಡುಗಡೆಯಾಗುತ್ತದೆ. ಸ್ಕ್ರೀನ್ ಸಮಯ ಹೆಚ್ಚಿದಂತೆಲ್ಲ ಈ ಡೋಪಮೈನ್‌ನ ಬಿಡುಗಡೆ ಹೆಚ್ಚುತ್ತದೆ. ಹಾಗಾದರೆ ಒಳ್ಳೆಯದೇ ಅಲ್ಲವೇ? ಸಮಸ್ಯೆ ಅದಲ್ಲ, ನಮ್ಮಲ್ಲಿ ಡೋಪಮೈನ್ ಅನ್ನು ಗ್ರಹಿಸುವ ವ್ಯವಸ್ಥೆಗೆ ಕೂಡ ಒಂದು ಮಿತಿಯಿದೆ, ಸುಸ್ತಾಗುತ್ತದೆ. ಅಲ್ಲದೆ ಹೆಚ್ಚಿಗೆ
ಡೋಪಮೈನ್‌ನ ಅಭ್ಯಾಸವಾಗುತ್ತದೆ. ಇದರಿಂದಾಗಿ ಚಿಕ್ಕ ಚಿಕ್ಕ ಜೀವನದ ಗೆಲುವುಗಳು ಕ್ರಮೇಣ ಸಂತೋಷವನ್ನು ನೀಡುವಲ್ಲಿ ವಿಫಲವಾಗುತ್ತದೆ. ಇದೆಲ್ಲದರ ಪರಿಣಾಮವಾಗಿ ಮನಸ್ಸು ಇನ್ನೂ ಹೆಚ್ಚಿನ ಸುಲಭದ ಖುಷಿ, ಆರಾಮದ ಗೆಲುವನ್ನು ಬಯಸುಲು ಶುರುಮಾಡುತ್ತದೆ.

ಒಂದು ವಿಡಿಯೊ ಗೇಮ್ ಆಡಿದಾಗ ಉತ್ಪಾದನೆಯಾಗುವಷ್ಟು ಸ್ಪರ್ಧೆಯಲ್ಲಿ ಗೆದ್ದಾಗ ಉತ್ಪಾದನೆಯಾಗುವುದಿಲ್ಲ. ಇದರಿಂ ದಾಗಿ ಖಿನ್ನತೆಯ ಜೊತೆ ಜೊತೆ ದುಃಖ ಮತ್ತು ಡೆಮೋಟಿವೇ ಷನ್ ಕೂಡ ಅನಾವಶ್ಯಕವಾಗಿ ಹುಟ್ಟಿಕೊಳ್ಳುತ್ತದೆ. ಸ್ಕ್ರೀನ್ ಸಮಯ ಹೆಚ್ಚಿದಂತೆ ಮೆಲಟೋನಿನ್ ಉತ್ಪಾದನೆ ಕಡಿಮೆಯಾಗಿ ನಿದ್ರೆ ಕಡಿಮೆ ಯಾಗುತ್ತದೆ ಕೂಡ. ಇದರಿಂದ ಕನಸಿನ, ಕಲ್ಪನೆಯ ಕೊರತೆ ಕೂಡ ಉಂಟಾಗುತ್ತದೆ. ನಿದ್ರೆ ಎಷ್ಟು ಮುಖ್ಯ ಎಂದು ಮತ್ತೆ ವಿವರಿಸಬೇಕಿಲ್ಲ. ಇದೆಲ್ಲದರ ಅಡ್ಡ ಪರಿಣಾಮಕ್ಕೆ ಕಾರಣವಾಗುವುದು ನಾವೆ ಮುಗ್ಧೆವೆಂದುಕೊಂಡ ಸ್ಕ್ರೀನ್.

ಇಲ್ಲಿ ಹೇಳಿರುವುದು ಸಮಸ್ಯೆಯ ಒಂದಂಶ ಮಾತ್ರ. ಸುಮ್ಮನೆ ನಿಮ್ಮ ‘ಸ್ಕ್ರೀನ್’ ಸಮಯದಲ್ಲಿ ಇದರ ಬಗ್ಗೆ ಸ್ವಲ್ಪ ಹುಡುಕಾಟ ನಡೆಸಿದರೆ ಒಂದಿಡೀ ಬ್ರಹ್ಮಾಂಡ ದಷ್ಟು ವಿಚಾರ ನಿಮ್ಮೆದುರಿಗೆ ಲಭ್ಯವಾಗುತ್ತದೆ. ಈಗೀಗ ಹದಿಹರೆಯದವರಲ್ಲಿ, ಇಪ್ಪತ್ತೈದು ವರ್ಷಕ್ಕಿಂತ ಕೆಳಗಿನವರಲ್ಲಿ ಆತ್ಮಹತ್ಯೆಗೆ ಮೂಲ ಕಾರಣ ಕೂಡ ಇದೇ ಎಂಬ ಹೆದರಿಕೆ ಹುಟ್ಟಿಸುವ ಸತ್ಯಗಳು ಹೊರಬರುತ್ತಿವೆ. ಏನೇ ಜಪ್ಪಯ್ಯ ಎಂದರೂ ಇದೊಂದರ ಪರಿಣಾಮದ ಸಂಪೂರ್ಣ ಗ್ರಹಿಕೆ ಇಂದಿನ ವಿಜ್ಞಾನಕ್ಕೆ ಕೂಡ ಸಾಧ್ಯವಿಲ್ಲ. ಎರಡು ವರ್ಷಕ್ಕಿಂತ ಚಿಕ್ಕ ಮಗುವಿಗೆ ವಿಡಿಯೊ ಕಾಲ್ ಒಂದನ್ನು ಬಿಟ್ಟು ಬೇರೆ ಯಾವುದನ್ನು ಸ್ಕ್ರೀನ್‌ನಲ್ಲಿ ತೋರಿಸಲೇಬಾರದು. ಎರಡರಿಂದ ಐದು ವರ್ಷದ ಮಕ್ಕಳಿಗೆ ಮುಕ್ಕಾಲು ಗಂಟೆಗಿಂತ ಹೆಚ್ಚಿನ ಸ್ಕ್ರೀನ್ ಸಮಯ ಸುತರಾಂ ಒಳ್ಳೆಯದಲ್ಲ.

ಐದರಿಂದ ಹದಿನಾಲ್ಕು ವರ್ಷದವರೆಗೆ ಒಂದು ತಾಸು. ನಂತರದಲ್ಲಿ ಹೆಚ್ಚೆಂದರೆ ಎರಡು ತಾಸು. ಇದು ಅಡ್ಡ ಪರಿಣಾಮಗಳನ್ನು ಅಭ್ಯಾಸ ಮಾಡಲು ಇರುವ ಕೆಲವೇ ವಿವರಗಳನ್ನು ಇಟ್ಟುಕೊಂಡು ಮಾಡಿದ ಶಿಫಾರಸ್ಸುಗಳು. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಸ್ಕ್ರೀನ್ ಎಲ್ಲ ಕಡೆಯಲ್ಲೂ ಎಲ್ಲಾ ಸಮಯದಲ್ಲೂ ಲಭ್ಯ. ಹೀಗಿರು ವಾಗ ಸ್ಕ್ರೀನ್ – ಮೊಬೈಲ್ – ಟ್ಯಾಬ್ಲೆಟ್ ಇವನ್ನೆಲ್ಲ ತೆಗೆಸಿಕೊಟ್ಟರೆ ಪಾಲಕರ ಕರ್ತವ್ಯವಾಯಿತು ಎಂದರಾಗಲಿಲ್ಲ. ಮಕ್ಕಳಿಗೆ ಯಾವುದೇ ನಿರ್ಬಂಧವಿಲ್ಲದೆ ಬೆಳೆಸಬೇಕು ಎನ್ನುವ ಮೊಂಡು ವಾದ ಮಾಡಿ ಕೂತರೆ ನೀವೇ ಕೈಯಾರೆ ವಿಷ ಕೊಡುವ ಕೆಲಸವಾಗುತ್ತದೆ.

ಸ್ಕ್ರೀನ್ ಸಮಯವನ್ನು ನಿಯಂತ್ರಿಸುವುದು ಹೇಗೆ ? ಎತ್ತ ಎನ್ನುವುದರ ಬಗ್ಗೆ ಸಾಧ್ಯವಾದರೆ ಮುಂದೊಂದು ದಿನ ಬರೆಯುತ್ತೇನೆ. ಆದರೆ ಆ ನಿಟ್ಟಿನಲ್ಲಿ ನೀವು ಇಂದೇ
ವಿಚಾರ ಮಾಡುವಂತಾಗಲಿ. ವ್ಯಕ್ತಿತ್ವವೆನ್ನುವ ಚಾದರಕ್ಕೆ ಒಂದು ಸುಂದರ ಬಣ್ಣ ಬಳಿಯಲು ಬೇಕಾಗುವ ವ್ಯವಸ್ಥೆಯ ನಿರ್ಮಾಣ ಇಂದಿನಿಂದಲೇ ನಿಮ್ಮಿಂದಾಗಲಿ. ಜೀನಿ ರೇ ಜೀನಿ.. Good Luck.