Friday, 20th September 2024

ನೂತನ ಶಿಕ್ಷಣ ನೀತಿ: ಪೂರ್ವ ತಯಾರಿ ಅಪೂರ್ಣವೆನಿಸುತ್ತಿಲ್ಲವೇ ?

ಅಭಿಪ್ರಾಯ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

sachidanandashettyc@gmail.com

ಮಹತ್ವಾಕಾಂಕ್ಷೆಯ ನೂತನ ಶಿಕ್ಷಣ ನೀತಿ ಯೋಜನೆಯನ್ನು ಅವಸರದಲ್ಲಿ ಜಾರಿಗೆ ತರಲು ಮುಂದಾಗಿರುವುದು ಪ್ರಸಕ್ತ ಸನ್ನಿವೇಶದಲ್ಲಿ ತರವಲ್ಲ. ಎಲ್ಲಾ ಕ್ಷೇತ್ರ ಗಳಿಗೂ ಭದ್ರ ಬುನಾದಿಯನ್ನೊದಗಿಸುವುದು. ಶಿಕ್ಷಣ ಕ್ಷೇತ್ರವೆಂದರೆ ತಪ್ಪಿಲ್ಲ.

ಮೂರುವರೆ ದಶಕಗಳ ಬಳಿಕ ನಾವು ಇಷ್ಟಪಟ್ಟ ಹೊಸ ಶಿಕ್ಷಣ ನೀತಿ ಜಾರಿಯಾಗಬೇಕಾಗಿದೆ. ತಾತ್ವಿಕ ನೆಲೆಯಲ್ಲಿ ನೋಡಿದಾಗ ಹೊಸ ಶಿಕ್ಷಣ ನೀತಿ (ಎನ್‌ಇಪಿ) ಹಲವು ಬಗೆಯಲ್ಲಿ ಕ್ರಾಂತಿಕಾರಿಯೆನ್ನಬಹುದು. ಮೂರು ಲಕ್ಷಕ್ಕೂ ಮಿಕ್ಕಿ ಸಲಹೆಗಳನ್ನು ಕಲೆ ಹಾಕಿ, ಕ್ರೋಢೀಕರಿಸಿ ಕೂಲಂಕುಶವಾಗಿ ವಿಮರ್ಷಿಸಲ್ಪಟ್ಟು ಪರಿಗಣಿಸ ಲಾದ ಒಂದು ಆಧಾರಪೂರಿತ ಸದೃಢ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಲಿರುವ ಅಪ್ಪಟ ಮತ್ತು ಅಸಲಿ ದಸ್ತಾವೇಜು ಎಂದರೆ ತಪ್ಪಿಲ್ಲ.

ಸ್ವಾತಂತ್ರ್ಯಾ ನಂತರ ಶಿಕ್ಷಣ ವ್ಯವಸ್ಥೆಯಲ್ಲಿ ಚಿಕ್ಕಪುಟ್ಟ, ಅರೆಬರೆ ಬದಲಾವಣೆಗಳಾದರೂ ಹೊಸ ನೀತಿಯಲ್ಲಿರು ವಷ್ಟು ಸಮಗ್ರ ವ್ಯವಹಾರಿಕ ಬದಲಾವಣೆಗಳನ್ನು ಶಿಕ್ಷಣ ನೀತಿಯಲ್ಲಿ ಅಳವಡಿಸಿಕೊಂಡಿಲ್ಲ. ಇದೀಗ ಭಾರತೀಯ ಶಿಕ್ಷಣ ಮಂಡಳಿಯು ನೀತಿಯ ಸಫಲತೆಯ ಬಗ್ಗೆ ಸರ್ವ ಪ್ರಯತ್ನ ಮಾಡುತ್ತಿದೆಯಾದರೂ, ಶಿಕ್ಷಣ ಕ್ಷೇತ್ರಕ್ಕೆ, ಶಿಕ್ಷಕರಿಗೆ, ರಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಮಾನಕ್ಕೆ ಆಸ್ಪದವಿಲ್ಲದ ಸಂದೇಶ ದೊರೆತಿಲ್ಲ. ಸ್ಪಷ್ಟ ಮಾಹಿತಿಯಿಲ್ಲ. ಸಂಪೂರ್ಣ ಶಿಕ್ಷಣ ನೀತಿಯ ಜಾರಿಗೆ ಒಟ್ಟು ಹತ್ತು ವರ್ಷಗಳನ್ನು ನಿಗದಿ ಪಡಿಸಿರುವಾಗ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ದುಡುಕಬೇಕೇ? ನೂತನ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆ ಗಳೊಂದಿಗೆ ಜಾರಿಗೆ ತರುವ ಬದಲು ತರಾತುರಿಯಲ್ಲಿ ಜಾರಿಗೆ ಕೈಯೆತ್ತುತ್ತಿರುವ ದುಡುಕು ಯಾಕೋ? ಅರ್ಥವಾಗುತ್ತಿಲ್ಲ.

ಹೊಸ ನೀತಿ ಅನುಷ್ಠಾನ ಎಲ್ಲಿಂದ, ಯಾವಾಗ, ಹೇಗೆ ಆರಂಭವಾಗುತ್ತದೆ ಎಂಬ ತಲೆಬುಡ ತಿಳಿಯದಂತಾಗಿದೆ. ಮೂಲ ಸೌಕರ್ಯ, ಪೂರ್ವಸಿದ್ಧತೆಯಿಲ್ಲದೆ, ಅದು ಕೂಡಾ ಕರೋನಾ ಹಿನ್ನೆಲೆಯಲ್ಲಿ ನಲುಗಿರುವ ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಕೂಲಂಕುಶ ನಿರ್ಧಾರವನ್ನು ತೆಗೆದುಕೊಳ್ಳುದ ಪರಿಸ್ಥಿತಿಯಲ್ಲಿರುವಾಗ, ಸದ್ಯದ ಪಾಠಪ್ರವಚನಗಳು ಮತ್ತು ಪರೀಕ್ಷೆಯ ಪರಿಸ್ಥಿತಿಯೇ ಡೋಲಾಯಮಾನವಾಗಿರವಾಗ ಘೋಷಣೆಗಾಗಿ, ಘೋಷಣೆಯೇ ಎಂದು ಆತಂಕಪಡುವಂತಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಅನಿವಾರ್ಯವೋ ಎಂಬಂತೆ ಗೋಚರವಾಗುತ್ತಿರುವ ಡಿಜಿಟಲ್ ಕಲಿಕೆಗೆ ಒತ್ತು ನೀಡುವ ಕಾರ್ಯಕ್ರಮಗಳು ಕಾಣಿಸುತ್ತಿಲ್ಲ ಮತ್ತು ಅನುಷ್ಠಾನದ ಯಶಸ್ಸಿನ ಬಗ್ಗೆ ಸಂದೇಹವಾಗುತ್ತಿದೆ.

ಯಾಕೆಂದರೆ ಈಗಿನ ವ್ಯವಸ್ಥೆಗೆ ಹೊಸ ವಿಷಯವನ್ನು ತುರುಕಿಸುವುದು ಎನ್‌ಇಪಿಯ ಉದ್ದೇಶವಲ್ಲ. ಹಾಗೆ ಮಾಡಿದಲ್ಲಿ ನೀತಿಯು ಪರಾಭವಗೊಳ್ಳುತ್ತದೆ. ಹೊಸ ಶಿಕ್ಷಣ ನೀತಿ 21ನೇ ಶತಮಾನದ ವೇಗಕ್ಕೆ ನಮ್ಮಲ್ಲಿರುವ ಅಪಾರ ಮಾನವ ಸಂಪನ್ಮೂಲವನ್ನು ಸಿದ್ಧಗೊಳಿಸುವ ಸಲುವಾಗಿ, ಯುವಜನರ ಆಕಾಂಕ್ಷೆಗನುಗುಣ ವಾಗಿ ರೂಪಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ. ಎನ್ ಇಪಿಯು ಭಾರತದಲ್ಲಿ ಬೇರೂರಿರುವ ಲಾರ್ಡ್ ಮೆಕಾಲೆಯ ಶಿಕ್ಷಣ ನೀತಿಯನ್ನು ಬುಡಮೇಲು ಮಾಡುವ ಪ್ರಯತ್ನದಲ್ಲಿದ್ದು, ತನ್ನ ಸ್ವಂತಿಕೆಯನ್ನು ಮತ್ತು ಅಸ್ಮಿತೆಯನ್ನು ಗಮನಕ್ಕೆ ತಂದುಕೊಡುವ ನಿರೂಪಣೆಯೇ ಆಗಿದೆ.

ಅಂದಿನ ಮೆಕಾಲೆಯ ಆಧುನಿಕ ಶಿಕ್ಷಣ ಅಥವಾ ಆಂಗ್ಲ ಶಿಕ್ಷಣ ವ್ಯವಸ್ಥೆಯಿಂದಾಗಿ ಶಿಕ್ಷಣವು ತನ್ನ ತನವನ್ನು ಕಳೆದುಕೊಳ್ಳುವ ಪರಾಕಷ್ಠೆಯನ್ನು ತಲುಪುತ್ತಿದೆ ಮತ್ತು ಹೊಸತಾಗಿ ರೂಪಿಸಲ್ಪಟ್ಟ ನೀತಿಯ ಅವಶ್ಯಕತೆಯು ಶಿಕ್ಷಣ ನೀತಿಯಲ್ಲಿ ಜರೂರಾಗಿ ನೆರವೇರಬೇಕು ಆದರೆ ಸಾಂಘವಾಗಿ ನೆರವೇರಬೇಕೆಂಬ ಕಳಕಳಿಯು ಸಂಬಂಧಪಟ್ಟವರ ಆದ್ಯತೆಯಾಗಬೇಕು. ನೂತನ ಶಿಕ್ಷಣ ನೀತಿಯ ಒಳನೋಟವನ್ನು ಕೂಲಂಕುಷವಾಗಿ ಗಮನಿಸಿದಾಗ ಯುವ ಜನಾಂಗದ ಭವಿಷ್ಯ ನಿರ್ಮಾಣಕ್ಕೆ ಪರಿಣಾಮಕಾರಿ ಸಾಧನವಾಗಬಲ್ಲದು ಮತ್ತು ಭವ್ಯ ಭಾರತದ ನಿರ್ಮಾಣಕ್ಕೆ ಸಹಕಾರಿಯಾಗಬಲ್ಲದು ಎಂಬುದು ಮನದಟ್ಟಾಗುತ್ತದೆ.

ಪ್ರಾಯೋಗಿಕ ಕಲಿಕೆ, ನೈತಿಕತೆ, ಸ್ವಅಸ್ಮಿತೆ, ಶಿಷ್ಟಾಚಾರ, ನಡತೆ, ಭಾವನಾತ್ಮಕ ಬೆಳವಣಿಗೆಗಳೆಲ್ಲವಕ್ಕೂ ಪೂರಕವಾಗಬಲ್ಲ ನೀತಿಯಾಗಿರುತ್ತದೆ. ಕೌಶಲಾ ಭಿವೃದ್ಧಿಗೆ ಪ್ರಾಶಸ್ತ್ಯ ನೀಡಿರುವುದು. ಇಂದಿನ ಅವಶ್ಯಕತೆ. ಹೊಸ ನೀತಿಯ ಯಶಸ್ಸಿನಿಂದ ದೇಶದ ರಾಷ್ಟ್ರ ಪ್ರೇಮಿಗಳಲ್ಲಿ ಹೆಚ್ಚಿನ ದೇಶಭಕ್ತಿಯ ಮನೋಭಾವವು ಹುಟ್ಟುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಸಮಯ ಸಂದರ್ಭ ವ್ಯತಿರಿಕ್ತವಾಗಿರುವಾಗ, ಅದೂ ಕೂಡಾ ಪೂರ್ವ ಸಿದ್ಧತೆಯಿಲ್ಲದೆ ಜಾರಿಗೊಳಿಸಲಿರುವುದು ತರವಲ್ಲ.
ಪ್ರಪ್ರಥಮವಾಗಿ ಇಲ್ಲಿ ಶಿಕ್ಷಕರು ನೀತಿಯನ್ನು ಕೂಲಂಕುಶವಾಗಿ ಅಭ್ಯಸಿಸಿಕೊಂಡು ವಿಷಯ ಮತ್ತು ವಿಚಾರಗಳನ್ನು ಸಮರ್ಪಕವಾಗಿ ತಿಳಿದುಕೊಂಡು ವೃತ್ತಿಪರ ಅಭಿವೃದ್ಧಿಯತ್ತ ಮುಖಮಾಡಬೇಕು. ಹಾಗೂ ಹೊಸ ನೀತಿಯ ಬಗೆಗಿನ ವಿವರಗಳು ವಿದ್ಯಾರ್ಥಿಯ ಆಸಕ್ತಿಗೆ ಅವೆಷ್ಟು ಹೊಂದಾಣಿಕೆ ಯಾಗುತ್ತದೆ ಮತ್ತು ಈ ನಿಟ್ಟಿನಲ್ಲಿ ಪೋಷಕರಿಗೂ ವಿಚಾರಗಳ ಬಗ್ಗೆ ತಿಳಿ ಹೇಳಬೇಕಾಗಿದೆ.

ಇದೀಗ ಕಾಲೇಜಿಗೆ ಅರ್ಜಿ ಸಲ್ಲಿಸಲು ಹೋಗುವ ವಿದ್ಯಾರ್ಥಿಗಳಿಗೆ ಎನ್‌ಇಪಿ ಅನ್ವಯ ಲಭ್ಯವಿರುವ ಕೋರ್ಸುಗಳು, ವಿಷಯಗಳು ಮತ್ತು ಇವುಗಳ ವ್ಯಾಪ್ತಿಯ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಪಠ್ಯಕ್ರಮ, ಪಠ್ಯಪುಸ್ತಕಗಳ ಬಗ್ಗೆಯೂ ಯಾವುದೇ ನಿರ್ಧಾರಗಳಿಲ್ಲ. 2021-2022ನೇ ಸಾಲಿನ ಪದವಿ ತರಗತಿಗಳಿಗೆ ಹೊಸ ನೀತಿ ಯನ್ವಯ ಪ್ರವೇಶ ಕಲ್ಪಿಸುತ್ತಿರುವುದುರ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಅಧ್ಯಾಪಕರಲ್ಲಿ ತೀವ್ರ ಗೊಂದಲವಿದೆ. 5+3+2+4- ಇಲ್ಲಿಯವರೆಗೆ ಸೆಕೆಂಡರಿ ಶಿಕ್ಷಣ, ಪ್ರಥಮ 5 ವರ್ಷದ ಮೂರು ವರ್ಷಗಳು ಪೂರ್ವ ಪ್ರಾಥಮಿಕ. 8 ನೇ ತರಗತಿಯವರಗೆ ತ್ರಿಭಾಷಾ ಸೂತ್ರ ಬಳಸಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಲಾಗಿದೆ.

ನಾಲ್ಕು ವರ್ಷದ ಡಿಗ್ರಿ ಕೋರ್ಸುಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮುಂದುವರಿಸಲು ಸಾಧ್ಯವಿಲ್ಲದಾಗ ಓದನ್ನು ನಿಲ್ಲಿಸಿ ಮುಂದೆ ಸಾಧ್ಯವಾದಾಗ ಪುನಃ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಬಹುದಾಗಿದೆ. ಹೊಸ ಶಿಕ್ಷಣ ನೀತಿಯ ಅಗತ್ಯತೆ ಮತ್ತು ಈಗ ಅನುಷ್ಠಾನಕ್ಕೆ ಸಿದ್ಧವಾಗುತ್ತಿರುವ ಕಾರ್ಯ ಸ್ವಾತಂತ್ರ್ಯ ಪೂರ್ವದ ಕೆಲ ದಶಕಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು ಎಂಬುದನ್ನು ಗಾಂಽಜಿಯವರು ದುಂಡು ಮೇಜು ಪರಿಷತ್‌ನಲ್ಲಿ ಆಡಿದ ಮಾತುಗಳಿಂದ ಅರ್ಥವಾಗುತ್ತದೆ. ಅದರ ಉಲ್ಲೇಖ ಹೀಗಿದೆ.

‘ಸುಂದರವಾದ ಭಾರತೀಯ ಶಿಕ್ಷಣವೆಂಬ ವೃಕ್ಷದ ಬುಡಕ್ಕೆ ಬ್ರಿಟಿಷರು ಕೊಡಲಿಯೇಟಿನಿಂದ ಕಡಿದುದರಿಂದ ದೇಶವು ನೂರು ವರ್ಷಗಳ ಹಿಂದಿನಿಕ್ಕಿಂತಲೂ ಹೆಚ್ಚು ಅನಕ್ಷರಸ್ಥರಾಗುವಂತಾಯಿತು’. ಇಲ್ಲಿ ವಿಶ್ವಗುರು ಭಾರತ ತನ್ನ ಧಾರ್ಮಿಕ, ತಾತ್ವಿಕ ಹಾಗೂ ಗಣಿತದ ಉತ್ಕೃಷ್ಟತೆಯಿಂದ ತಕ್ಷಶಿಲಾ, ನಲಂದಾದಂತಹ ವಿಶ್ವ ವಿದ್ಯಾನಿಲಯಗಳ ಮುಖಾಂತರ ಶಿಕ್ಷಣವನ್ನು ಪಸರಿಸಿ ವಿಶ್ವಗುರುವಾಗಿ ಮೆರೆದಿತ್ತು ಎಂಬುದನ್ನು ಇತಿಹಾಸ ಮುಖೇನ ಸ್ಮರಿಸಿಕೊಳ್ಳಬೇಕಾಗಿದೆ. ದೇಶದ ಆಧ್ಯಾತ್ಮಿಕತೆ, ವೈಚಾರಿಕತೆ, ಸಾಂಸ್ಕೃತಿಯ ಸಿರಿಯನ್ನು ಬ್ರಿಟಿಷರು ಅನಾಯಾಸವಾಗಿ ನಾಶಮಾಡಿದುದರ ಬಗ್ಗೆ ಫೆಬ್ರವರಿ 2, 1835 ರಲ್ಲಿ ಲಾರ್ಡ್ ಮೆಕಾಲೆಯು ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ಆಡಿದ ಮಾತುಗಳಿಂದ ವ್ಯಕ್ತವಾಗುತ್ತದೆ.

ಅದರ ಉಲ್ಲೇಖ ಹೀಗಿದೆ: ‘ನಾನು ಭಾರತದ ಉದ್ದಗಲದಲ್ಲಿ ಪ್ರಯಾಣಿಸಿದ್ದೇನೆ, ಆದರೆ ಈ ನಾಡಿನಲ್ಲಿ ಒಬ್ಬ ಭಿಕ್ಷುಕ, ಕಳ್ಳ ಅಥವಾ ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಒಬ್ಬನನ್ನೂ ನೋಡಲಾಗಲಿಲ್ಲ, ಅಂತಹ ಸಿರಿವಂತ ಸುಸಂಸ್ಕೃತ ನಾಡನ್ನು ನಾವು ಜಯಿಸುವುದು ಕಷ್ಟ’. ಈ ಸಮಯದಲ್ಲಿ ನಾವು ಅವರ
ಆಧ್ಯಾತ್ಮಿಕ, ಸಾಂಸ್ಕೃತಿಕ ಪರಂಪರೆಯನ್ನು ಬದಲಾಯಿಸಬೇಕಿದ್ದರೆ ಅವರ ಶಿಕ್ಷಣ ನೀತಿಯನ್ನು ಬದಲಾಯಿಸಬೇಕು.

ನಾವು ಭಾರತೀಯರ ಮನಸ್ಸಿನಲ್ಲಿ ಪರಕೀಯ ಆಂಗ್ಲಭಾಷೆ ಅವರ ಭಾಷೆಗಿಂತ ಉತ್ಕೃಷ್ಟ, ಶ್ರೇಷ್ಠ, ಗೌರವಯುತವೆಂಬುದನ್ನು ಕಾರ್ಯಗತ ಮಾಡುವುದರೊಂದಿಗೆ ಅವರ ನೆಲದಲ್ಲಿ ಅವರೇ ಅವರ ಭಾಷೆಯನ್ನು ಕಡೆಗಣಿಸುವಂತೆ ಮಾಡಬೇಕು. ಬ್ರಿಟಿಷರೇ ಸರ್ವ ಶ್ರೇಷ್ಠರು, ಇಂಗ್ಲಿಷ್ ಸರ್ವಶ್ರೇಷ್ಠ ಭಾಷೆ ಎನ್ನುವುದಕ್ಕೆ ಮುನ್ನುಡಿ ಬರೆಯಬೇಕು. ಅದನ್ನೇ ಸಾಧನವನ್ನಾಗಿ ಜಯಿಸಿದರು. ಅದರಿಂದಾಗಿ ಮುಂದಿನ ಪೀಳಿಗೆಯು ಅನಾಯಾಸವಾಗಿ ಕೇವಲ 26 ಅಕ್ಷರಗಳ ಆಂಗ್ಲಭಾಷೆಯು, ನಮ್ಮೆಲ್ಲಾ ಮಾತೃಭಾಷೆಗಿಂತ 26 ಪಟ್ಟು ಕಠಿಣವೆನಿಸಿದರೂ ಸಂಹಾರದ ದಾರಿ ತುಳಿಯಿತು.

ಇದು ಬ್ರಿಟಿಷರ ಆಂಗ್ಲ ಭಾಷೆಯು ಭಾರತವನ್ನು ಅಪೋಷಣ ತೆಗೆದುಕೊಂಡ ಕುಕೃತ್ಯದ ನಿಯಮಾವಳಿ ಮತ್ತು ನಮ್ಮ ಮಾತೃ ಭಾಷೆಗಳು ಆಂಗ್ಲ ಭಾಷೆಗೆ ಶರಣಾದ ಗತಿ. ತನ್ಮೂಲಕ ಭಾರತದ ಸ್ವಂತಿಕೆ ಬರಿದಾಯಿತು. ಅರಿವು ಮೂಡಿಸುವ ಶಿಕ್ಷಣದ ಮೂಲಗುರಿ ಅರ್ಥಹೀನವಾಗಿ ನಮಗೆ ಆಂಗ್ಲಭಾಷೆಯೇ ಪ್ರತಿಷ್ಠೆ ಯಾಯಿತು. ಹೊಸ ಶಿಕ್ಷಣ ನೀತಿಯು ತಿಳಿಹೇಳುವ ‘ಮಾತೃಭಾಷೆಯ ತಳಹಾದಿಯಿಲ್ಲದೆ ಯಾವ ಭಾಷೆಯೂ ಚಲಿಸಬಾರದು. ಮಾತೃ ಭಾಷೆಯ ವಿನಃ ಯಾವ ಭಾಷೆಯನ್ನು ಕಲಿತರೂ ಅದು ಅನುಭವಕ್ಕೆ ಪೂರಕವಾಗಲಾರದು. ಎಲ್ಲಾ ನೀತಿಗಳು ಸ್ವಾಗತಾರ್ಹ ಆದರೆ ಪೂರ್ವಸಿದ್ಧತೆ ಅಗತ್ಯ.’