Friday, 20th September 2024

ನಿಮ್ಮ ನಾಯಿಯೊಂದಿಗೆ ವಿದೇಶ ಪ್ರಯಾಣ ಮಾಡುವ ಸುಖ-ದುಃಖ

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

vbhat@me.com

ಕಳೆದ ನಾಲ್ಕೈದು ವರ್ಷಗಳ ಹಿಂದೆ, ನಾನು ಟರ್ಕಿಯಿಂದ ಇಸ್ರೇಲಿನ ಟೆಲ್ ಅವಿವ್‌ಗೆ ಪ್ರಯಾಣಿಸುತ್ತಿದ್ದೆ. ನನ್ನ ಜತೆಗಿದ್ದ ಬ್ರಿಟಿಷ್ ಪ್ರಯಾಣಿಕಳೊಬ್ಬಳು ತನ್ನ ಬ್ಯಾಗುಗಳಿಗಾಗಿ ಕಾಯುತ್ತಿದ್ದಳು. ಎಷ್ಟು ಹೊತ್ತಾದರೂ ಅವಳ ಬ್ಯಾಗು ಬರಲಿಲ್ಲ. ಎಲ್ಲರ ಬ್ಯಾಗುಗಳು ಬಂದರೂ ಅವಳದು ಮಾತ್ರ ಬಂದಿರಲಿಲ್ಲ.

ಅವಳ ಅಸಹನೆಯನ್ನು ಅವಳ ವರ್ತನೆಯಿಂದ ಗಮನಿಸಬಹುದಾಗಿತ್ತು. ತನಗೆ ಸಹಕರಿಸುವಂತೆ ಅವಳು ವಿನಂತಿಸಿದ್ದರಿಂದ ನಾನು ಅವಳ ಜತೆ ದೂರು ನೀಡಲು
ಹೋದೆ. ಆಗ ನನಗೆ ಗೊತ್ತಾಗಿದ್ದೇನೆಂದರೆ, ಅವಳ ನಾಯಿಯನ್ನು ತುಂಬಿದ ಪಂಜರ ಬಂದಿರಲಿಲ್ಲ. ಅವಳು ಯಾವ ಊರು ಅಥವಾ ದೇಶಕ್ಕೆ ಹೋಗುವುದಿದ್ದರೂ ಪ್ರಾಣ ಸಮವಾಗಿ ಪ್ರೀತಿಸುತ್ತಿದ್ದ ನಾಯಿಯನ್ನು ಜತೆಗೆ ವಿಮಾನದಲ್ಲಿ ಕರೆದುಕೊಂಡೇ ಹೋಗುತ್ತಾಳಂತೆ. ಆದರೆ ಈ ಸಲ ಅವಳ ನಾಯಿ ಆಕೆ ಬಂದಿದ್ದ ವಿಮಾನದಲ್ಲಿ ಬಂದಿರಲಿಲ್ಲ. ಅವಳ ಟೆನ್ಶನ್ ಕ್ಷಣ ಕ್ಷಣಕ್ಕೂ ಜಾಸ್ತಿ ಆಗುತ್ತಿತ್ತು. ದೂರು ಸ್ವೀಕರಿಸುವ ಕೌಂಟರಿನಲ್ಲಿದ್ದವರು ತಕ್ಷಣ ಎಲ್ಲೆಡೆ ಫೋನ್ ಮಾಡಿ
ವಿಚಾರಿಸಲಾರಂಭಿಸಿದರು.

ಅದಾಗಿ ಐದು ನಿಮಿಷಗಳ ನಂತರ, ಆಕೆಯ ನಾಯಿ ಟರ್ಕಿ ವಿಮಾನ ನಿಲ್ದಾಣದಲ್ಲಿಯೇ ಇದೆಯೆಂದು ಗೊತ್ತಾ ಯಿತು. ಲಗೇಜ್ ತುಂಬುವ ಸಿಬ್ಬಂದಿ ನಾಯಿ ಇರುವ ಪಂಜರವನ್ನು ವಿಮಾನದೊಳಕ್ಕೆ ಹಾಕದೇ ಅಲ್ಲಿಯೇ ಬಿಟ್ಟಿದ್ದ. ಅವಳು ಒಂದೇ ಸಮನೆ ಅಳಲಾರಂಭಿಸಿದಳು. ತನ್ನ ನಾಯಿಯ ಪಾಡನ್ನು ನೆನೆದು ಅಲ್ಲಿನ ಸಿಬ್ಬಂದಿ ಮೇಲೆ ಕಿರುಚುತ್ತಿದ್ದಳು. ಕನಿಷ್ಠ ಅದರ ಆರೈಕೆಯನ್ನು ಚೆನ್ನಾಗಿ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಳು. ಅವಳನ್ನು ನೋಡಿ, ಇವಳದೇ ನಾಯಿ ಪಾಡು ಆಯಿತಲ್ಲ ಎಂದು ಅಂದುಕೊಂಡೆ. ನಿನ್ನ ನಾಯಿ ನಿನಗೆ ಸುರಕ್ಷಿತ ವಾಗಿ ಸಿಗಲಿ ಎಂದು ಅವಳಿಗೆ ಶುಭ ಕೋರಿ ನಾನು ಬಂದೆ. ಮುಂದೇನಾಯಿತೋ ಗೊತ್ತಾಗಲಿಲ್ಲ. ನಿಮಗೆ ನೆನಪಿದೆಯಾ, ನಾಲ್ಕು ವರ್ಷಗಳ ಹಿಂದೆ, ಅಮೆರಿಕಾದ ಯುನೈಟೆಡ್ ಏರ್ ಲೈನ್ಸ್ ಇದೇ ಕಾರಣಕ್ಕೆ ಸುದ್ದಿ ಯಲ್ಲಿತ್ತು. ಸುಮಾರು ಒಂದು ವಾರ ಕಾಲ ಜಗತ್ತಿನಾದ್ಯಂತ ಲಕ್ಷಾಂತರ ಜನ ಏರ್ ಲೈನ್ಸ್‌ನ್ನು ತರಾಟೆಗೆ ತೆಗೆದುಕೊಂಡರು.

ಕಾರಣ ಲಂಡನ್ನಿನಿಂದ ಚಿಕಾಗೋಕ್ಕೆ ಬರುವ ಯುನೈಟೆಡ್ ಏರ್ ಲೈನ್ಸ್ ವಿಮಾನದಲ್ಲಿದ್ದ ಸೈಮನ್ ಎಂಬ ಕಪ್ಪು ಬಣ್ಣದ ದೊಡ್ಡ ಮೊಲ ಉಸಿರುಗಟ್ಟಿ ಸತ್ತು ಹೋಯಿತು. ಅದಾದ ಒಂದು ವಾರದ ನಂತರ ಹೂಸ್ಟನ್‌ದಿಂದ ಲಾಗೌರ್ಡಿಯಾ ಕ್ಕೆ ಬರುವ ಅದೇ ಯುನೈಟೆಡ್ ಏರ್ ಲೈನ್ಸ್ ವಿಮಾನದಲ್ಲಿ ಗಗನಸಖಿಯ ಅಚಾತುರ್ಯದಿಂದ ಫ್ರೆಂಚ್ ಬುಲ್ಡಾಗ್ ನಾಯಿ ಸತ್ತು ಹೋಯಿತು. ಪ್ರಯಾಣಿಕ ತನ್ನ ಕಾಲ ಬುಡದಲ್ಲಿಯೇ ಅದನ್ನು ಇಟ್ಟುಕೊಳ್ಳುತ್ತೇನೆ ಎಂದು ಪರಿಪರಿಯಾಗಿ ಹೇಳಿದರೂ ಆಕೆ ಕೇಳಲಿಲ್ಲ. ಓವರ್ ಹೆಡ್ ಕ್ಯಾಬಿನ್ ನಲ್ಲಿ ಇಡುವಂತೆ ಸೂಚಿಸಿದಳು.

ಸಹಪ್ರಯಾಣಿಕರಿಗೆ ಕಚ್ಚಬಾರದೆಂದು ನಾಯಿಯ ಮೂತಿಗೆ ಬಲೆ ಹಾಕಿದ್ದರಿಂದ ಕೂಗಲು ಸಾಧ್ಯವಾಗದೇ, ಅದು ಅಲ್ಲಿಯೇ ಸತ್ತು ಹೋಯಿತು. ಅದಾಗಿ ಮೂರು ತಿಂಗಳ ನಂತರ, ಕನ್ಸಾಸ್ ಚೀಟಿಗೆ ಹೋಗಬೇಕಾದ ಜರ್ಮನ್ ಶೆಪರ್ಡ್ ನಾಯಿ ಲಗೇಜ್ ಸಿಬ್ಬಂದಿ ಮೂರ್ಖತನದಿಂದ ಟೋಕಿಯೋಕ್ಕೆ ಹೋಯಿತು. ಕಳೆದ ವರ್ಷ ಯುನೈಟೆಡ್ ಏರ್ ಲೈನ್ಸ್ ಸುಮಾರು 75 ಸಾವಿರ ಸಾಕು ಪ್ರಾಣಿಗಳನ್ನು ಸಾಗಿಸಿದೆ. ಆದರೆ ಹದಿನೆಂಟು ಪ್ರಾಣಿಗಳು ಸತ್ತು ಹೋಗಿವೆ. ಸಾಗಿಸಿದ ಪ್ರಾಣಿ ಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆ. ಆದರೆ ಬೇರೆ ಏರ್ ಲೈನ್ಸ್ ಗಳಲ್ಲಿ ಒಂದೇ ಒಂದು ಅವಘಡ ಆಗದಂತೆ ಸಾಗಿಸಿರುವ ನಿದರ್ಶನಗಳೂ ಇವೆ.

ಎಮಿರೇಟ್ಸ್, ಕತಾರ್, ಸಿಂಗಾಪುರ್, ಮಲೇಷಿಯನ್, ಲುಫ್ತಾನ್ಸಾ, ಏರ್ ಫ್ರಾನ್ಸ್ ಮುಂತಾದ ಏರ್ ಲೈನ್ಸ್ ಗಳು ಪ್ರಯಾಣಿಕರಿಗೆ ತೋರುವ ಕಾಳಜಿ, ಎಚ್ಚರ ವನ್ನು ಸಾಕುಪ್ರಾಣಿಗಳಿಗೂ ತೋರುತ್ತವೆ. ಸಾಕು ಪ್ರಾಣಿಗಳನ್ನು ಹ್ಯಾಂಡಲ್ ಮಾಡಲೆಂದೇ ಗ್ರೌಂಡ್ ಸ್ಟಾಫ್ ಗಳನ್ನು ಈ ವಿಮಾನ ಸಂಸ್ಥೆಗಳು ಇಟ್ಟಿರುತ್ತವೆ. ನಾಯಿ, ಬೆಕ್ಕು, ಮೊಲ, ಗಿಣಿ.. ಮುಂತಾದ ಸಾಕು ಪ್ರಾಣಿ- ಪಕ್ಷಿಗಳೊಂದಿಗೆ ತೆರಳುವ ಪ್ರಯಾಣಿಕರಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತವೆ. ಅಲ್ಲದೆ ಸಾಕು ಪ್ರಾಣಿಗಳಿಗೆ ವೆಟರ್ನರಿ ವೈದ್ಯರ ಉಪಚಾರ, ಲಘು ಆಹಾರಗಳನ್ನು ನೀಡುತ್ತವೆ. ಪ್ರಾಣಿ – ಪಕ್ಷಿಗಳಿಗೆ ಸ್ವಲ್ಪ ತೊಂದರೆಯಾದರೂ ಪ್ರಾಣಿ ದಯಾ ಸಂಘ ಕೂಗೆಬ್ಬಿಸುತ್ತವೆ ಎಂಬುದು ಈ ಏರ್ ಲೈನ್ಸ್ ಗಳಿಗೆ ಗೊತ್ತು.

ಬಹುತೇಕ ಎಲ್ಲ ವಿಮಾನ ಸಂಸ್ಥೆಗಳೂ ಸಾಕುಪ್ರಾಣಿಗಳ ಸಾಗಾಟಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ನೀತಿ-ನಿಯಮಗಳನ್ನು ಹೊಂದಿವೆ. ಒಂದೊಂದು ಸಂಸ್ಥೆ ಒಂದೊಂದು ರೀತಿಯ ನಿಯಮ ಹೊಂದಿದೆ. ಭಾರತದಲ್ಲಿ ಬಹುತೇಕ ಎಲ್ಲಾ ವಿಮಾನಗಳೂ ಸಾಕುಪ್ರಾಣಿಗಳನ್ನು ವಿಮಾನದೊಳಗೆ ಸೇರಿಸಿಕೊಳ್ಳುವುದಿಲ್ಲ. ಅವುಗಳನ್ನು ಕಾರ್ಗೋ ಸೆಕ್ಷನ್ ನಲ್ಲಿಟ್ಟು ಸಾಗಿಸುತ್ತವೆ. ಕೆಲವು ವಿಮಾನಗಳಲ್ಲಿ ಸಾಕು ಪ್ರಾಣಿಗಳಿಗೆಂದೇ ಪ್ರತ್ಯೇಕ ವಿಭಾಗವೂ ಇರುತ್ತವೆ. ಅಲ್ಲಿ ಹಿತಕರ ತಾಪಮಾನ ಒದಗಿಸಲಾಗುತ್ತದೆ.

ಇನ್ನು ಕೆಲವು ವಿಮಾನಗಳು ಎಲ್ಲ ಲಗೇಜ್ ಜತೆಗೇ ಸಾಕುಪ್ರಾಣಿಗಳನ್ನು ಸಾಗಿಸುತ್ತವೆ. ಎಲ್ಲ ವಿಮಾನಗಳಲ್ಲೂ ಈ ಸೌಲಭ್ಯ ಇರುತ್ತವೆ ಎಂದು ಹೇಳಲಾಗುವು ದಿಲ್ಲ. ಸಾಮಾನು ಸರಂಜಾಮುಗಳ ಜತೆಗೇ ಸಾಕು ಪ್ರಾಣಿಗಳ ಪಂಜರವನ್ನು ಹಾಕಿ ಸಾಗಿಸುವುದುಂಟು. ಅಂಥ ಸಂದರ್ಭದಲ್ಲಿ ಪ್ರಾಣಿ-ಪಕ್ಷಿಗಳು ಉಸಿರುಗಟ್ಟಿ ಸಾಯುವುದುಂಟು. ಇಂಥ ವಿಮಾನ ಯಾನ ಸಂಸ್ಥೆಗಳು ಸಾಕುಪ್ರಾಣಿ ಸಾಗಾಟಕ್ಕೆ ಅಷ್ಟೊಂದು ಮಹತ್ವ ನೀಡುವುದಿಲ್ಲ.

ವಿಮಾನದ ಕಾರ್ಗೋ ವಿಭಾಗ ಲಗೇಜುಗಳಿಗೆಂದು ಇರುವ ತಾಣ. ಅಲ್ಲಿ ಸಾಕುಪ್ರಾಣಿಗಳಿಗೆಂದು ಪ್ರತ್ಯೇಕ ಜಾಗ ಕಲ್ಪಿಸಿದರೆ, ಅವುಗಳು ಇಲ್ಲದ ಸಂದರ್ಭದಲ್ಲಿ ಅನವಶ್ಯಕವಾಗಿ ಜಾಗ ನಿರರ್ಥಕವಾಗುತ್ತದೆ. ಕಾರಣ ಪ್ರತಿದಿನ ಯಾರೂ ಸಾಕುಪ್ರಾಣಿಗಳನ್ನು ವಿಮಾನದಲ್ಲಿ ಒಯ್ಯುವುದಿಲ್ಲ. ಹೀಗಾಗಿ ನಾಯಿ, ಬೆಕ್ಕುಗಳನ್ನು ವಿಮಾನದಲ್ಲಿ ಕರೆದೊಯ್ಯುವುದು ಸ್ವಲ್ಪ ಕಿರಿಕಿರಿಯೇ. ವಿದೇಶಗಳಲ್ಲಿ ವಿಮಾನದೊಳಗೆ ಅವುಗಳನ್ನು ಕರೆದೊಯ್ಯಲು ಅವಕಾಶವಿದೆ. ಆಗಲು ಕೆಲವು ನಿರ್ದಿಷ್ಟ
ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಾಕುಪ್ರಾಣಿಗಳನ್ನು ಸಾಕಿಸಲೆಂದೇ ತಳ್ಳುಗಾಡಿಗಳು, ಬ್ಯಾಗುಗಳನ್ನು ರಚಿಸಲಾಗಿದೆ.

ನಾಯಿಗಳ ಆಕಾರದ ಆಧಾರದಿಂದ, ವಿಮಾನದೊಳಗೆ ಅಥವಾ ಕಾರ್ಗೋ ವಿಭಾಗದೊಳಗೆ ಕರೆದೊಯ್ಯಬಹುದೇ ಎಂಬುದನ್ನು ನಿರ್ಧರಿಸಲಾಗುತ್ತದೆ. ದೊಡ್ಡ ನಾಯಿಯನ್ನು ವಿಮಾನದೊಳಗೆ ಒಯ್ಯುವುದರಿಂದ ಇತರ ಪ್ರಯಾಣಿಕರಿಗೆ ಕಿರಿಕಿರಿಯಾಗಬಹುದು. ಇನ್ನುಂಕೆಲವರು ಭಯಬೀತರಾಗಬಹುದು. ರೂಢಿ ಯಿಲ್ಲದಿದ್ದರೆ ನಾಯಿಗಳೂ ವಿಚಿತ್ರವಾಗಿ ವರ್ತಿಸಬಹುದು. ಇದರಿಂದ ವಿಮಾನದೊಳಗೆ ಆತಂಕದ ವಾತಾವರಣ ಸೃಷ್ಟಿಯಾಗಬಹುದು. ಒಂದು ಅಡಿಗಿಂತ ಎತ್ತರದ ನಾಯಿಯನ್ನು ವಿಮಾನದಲ್ಲಿ ಪ್ರಯಾಣಿಕರ ಜತೆ ಸಾಗಿಸುವುದು ಸುರಕ್ಷಿತವಲ್ಲ.

ಕೆಲವು ಪ್ರಯಾಣಿಕರು ಸಾಕುಪ್ರಾಣಿಗಳ ಜತೆ ಅದೆಷ್ಟು ಗಾಢ ಮತ್ತು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆಂದರೆ, ಎಲ್ಲಿಗೆ ಹೋಗುವುದಿದ್ದರೂ ಅದನ್ನು ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಅದರಲ್ಲೂ ವಿದೇಶಗಳಿಗೆ ಪ್ರವಾಸ ಅಥವಾ ವಿಹಾರ ಹೋಗುವಾಗಲೂ ಅದು ಇರಲೇಬೇಕು. ಇಂಥವರ ಬೇಡಿಕೆಗಳನ್ನು ಈಡೇರಿಸುವುದು ವಿಮಾನಯಾನ ಸಂಸ್ಥೆಗಳ ಜವಾಬ್ದಾರಿ.

ಸಾಕುಪ್ರಾಣಿಗಳನ್ನು ಸಾಗಿಸಲು ಅನುಮತಿ ನಿರಾಕರಿಸಿದ ಏರ್ ಲೈನ್ಸ್ ವಿರುದ್ಧ ಪ್ರಯಾಣಿಕರು ಕೋರ್ಟುಗಳಿಗೆ ಹೋದ ನಿದರ್ಶನಗಳು ಹಲವಾರು. ಸಾಕು ಪ್ರಾಣಿಗಳೆಂದರೆ ಮಕ್ಕಳಿದ್ದ ಹಾಗೆ ಎಂಬುದು ಅವರ ವಾದ. ವಿಮಾನದಲ್ಲಿ ಕರೆದೊಯ್ಯುವ ಮುನ್ನ ಕೆಲವು ಏರ್ ಲೈನ್ ಗಳು ನಾಯಿಗಳಿಗೆ ತರಬೇತಿ
ಕೊಡುವ ಸೌಲಭ್ಯವನ್ನು ಸಹ ಒದಗಿಸುತ್ತವೆ. ಪ್ರಾಣಿ ದಯಾ ಸಂಘದವರ ಪ್ರಕಾರ, ಮನುಷ್ಯರಿಗೆ ಎಷ್ಟು ಹಕ್ಕಿದೆಯೋ, ಪ್ರಾಣಿಗಳಿಗೂ ಅಷ್ಟೇ ಹಕ್ಕಿದೆ. ಹೀಗಾಗಿ ವಿಮಾನದಲ್ಲಿ ಕರೆದೊಯ್ಯುವುದಿಲ್ಲ ಎಂದು ಹೇಳುವಂತಿಲ್ಲ. ಆದರೆ ಏರ್ ಲೈನ್ ಗಳು ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಷ್ಟೆ.

ವಿಮಾನದೊಳಗೆ ನಾಯಿಯನ್ನು ಕರೆದೊಯ್ಯುವ ಸಂದರ್ಭದಲ್ಲಿ ಪೈಲಟ್ ನಿಗೆ ಮೊದಲೇ ತಿಳಿಸಿರಬೇಕು. ಪೈಲಟ್ ಕೂಡ ಇತರ ಪ್ರಯಾಣಿಕರಿಗೆ ನಾಯಿಯಿರುವುದನ್ನು ಧ್ವನಿವರ್ಧಕದ ಮೂಲಕ ತಿಳಿಸುತ್ತಾನೆ. ಒಂದೆರಡು ತಾಸಿನ ವಿಮಾನ ಪ್ರಯಾಣವಾದರೆ ಪರವಾಗಿಲ್ಲ. ಎಂಟು – ಹತ್ತು ತಾಸಿನ ಪ್ರಯಾಣವಾದರೆ ನಾಯಿಗೂ, ಸಹ ಪ್ರಯಾಣಿಕರಿಗೂ ಕಿರಿಕಿರಿ ಆಗಬಹುದು. ನಾಯಿಗಳಿಗೆಂದೇ ಪ್ರತ್ಯೇಕ ಪಾಸ್ಪೋರ್ಟನ್ನು ನೀಡಲಾಗುತ್ತದೆ. ವೆಟರಿನರಿ ವೈದ್ಯರಿಂದ ಲಸಿಕೆ ಹಾಕಿಸಿ, ಅದರ ಆರೋಗ್ಯದ ಬಗ್ಗೆ ಅವರಿಂದ ಸರ್ಟಿಫಿಕೇಟ್ ಪಡೆದರೆ ಪಾಸ್ಪೋರ್ಟ್ ನೀಡಲಾಗುತ್ತದೆ. ಮುಂದಿನ ಸಲ ನೀವು ನಾಯಿ ಯೊಂದಿಗೆ ವಿದೇಶ ಪ್ರಯಾಣ ಮಾಡಬಹುದು, ಆದರೆ ಈ ಎಲ್ಲ ಸಂಗತಿಗಳನ್ನು ಗಮನಿಸಬೇಕಷ್ಟೆ.

ಸಮಾಧಿಯಲ್ಲೊಂದು ತಂತ್ರಜ್ಞಾನ

ತಂತ್ರಜ್ಞಾನವನ್ನು ಎಲ್ಲಿ ಬೇಕಾದರೂ ಬಳಸಬಹುದು. ಜಪಾನಿನಲ್ಲಿ ಅದನ್ನು ಸಮಾಧಿ ಮೇಲೆ ನೆಡುವ ಕಲ್ಲಿಗೂ ಅನ್ವಯಿಸಿದ್ದಾರೆ. ಸಾಮಾನ್ಯವಾಗಿ ಆ ಕಲ್ಲಿನ ಮೇಲೆ ನಿಧನರಾದ ವ್ಯಕ್ತಿಯ ಹೆಸರು ಮತ್ತು ಹುಟ್ಟಿದ ಹಾಗೂ ನಿಧನ ಹೊಂದಿದ ಇಸ್ವಿಯನ್ನಷ್ಟೇ ಬರೆಯುವುದು ಸಂಪ್ರದಾಯ. ಆದರೆ ಜಪಾನಿನಲ್ಲೊಂದು ಸಮಾಽಯಿದೆ. ಅಲ್ಲಿ ನೆಟ್ಟ ಎಲ್ಲ ಕಲ್ಲುಗಳ ಮೇಲೂ, ಹೆಸರಿನ ಜತೆಗೆ ಕ್ಯೂಆರ್ ಕೋಡ್ (Quick Response Code)ಗಳನ್ನು ಕೆತ್ತಲಾಗಿದೆ.

ಯಾರಾದರೂ ಆ ಕೋಡ್ ಮೇಲೆ ಮೊಬೈಲನ್ನು ಇಟ್ಟರೆ, ಸಂಬಂಧಪಟ್ಟ ವ್ಯಕ್ತಿಯ ಫೋಟೋಗಳ ಸಹಿತ, ಸಂಪೂರ್ಣ ಜೀವನ ಚಿತ್ರಣವೇ ಮೂಡಿಬರುತ್ತದೆ. ಅಷ್ಟೊಂದು ಮಾಹಿತಿಯನ್ನು ಆ ಕಲ್ಲಿನ ಮೇಲೆ ಕೆತ್ತಲು ಸಾಧ್ಯವಿಲ್ಲ. ಆದರೆ ಈ ಕೋಡ್ ನಿಂದಾಗಿ ಆ ಎಲ್ಲಾ ವಿವರಗಳನ್ನು ನೀಡಬಹುದಾಗಿದೆ. ಅದ್ಯಾವನಿಗೆ ಈ ಸರಳ ಸಂಗತಿ ಹೊಳೆಯಿತೋ. ನಮ್ಮಲ್ಲೂ ಈ ವಿಧಾನವನ್ನು ಜಾರಿಗೆ ತರಬಹುದು. ಅದೇನೂ ಕಷ್ಟವಲ್ಲ.

ನಿರ್ಧಾರಕ್ಕೆ ಬೇಕಾದ ಸಮಯವೆಷ್ಟು ?
ಜಗತ್ತಿನ ಅತಿ ಶ್ರ ಮಂತ ವ್ಯಕ್ತಿಗಳಲ್ಲಿ ಒಬ್ಬನಾಗಿರುವ ವಾರನ್ ಬಫೆಟ್ ಅವರ ಜೀವನಕತೆಯನ್ನು ಓದುತ್ತಿದ್ದೆ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬಫೆಟ್
ತೆಗೆದುಕೊಳ್ಳುತ್ತಿದ್ದ ಅತಿ ದೀರ್ಘ ಸಮಯ ಅಂದರೆ ಅರ್ಧ ಗಂಟೆ. ಅಷ್ಟು ಸಮಯದಲ್ಲಿ ನಿರ್ಧಾರಕ್ಕೆ ಬರಲು ಸಾಧ್ಯವಾಗದಿದ್ದರೆ ಬಫೆಟ್ ನಿರ್ಧಾರ ‘ಬೇಡ’ ಅಥವಾ
ನಕಾರಾತ್ಮಕ ಎಂದೇ. ಇವಳನ್ನು ಮದುವೆ ಆಗಬೇಕಾ, ಬೇಡವಾ ಎಂದು ನಿರ್ಧರಿಸಲು ಇಪ್ಪತ್ತು ನಿಮಿಷ ತೆಗೆದುಕೊಂಡಿರಿ ಅಂತಾದರೆ ಅದು ಸುದೀರ್ಘ ಸಮಯ ವಂತೆ. ಆ ನಿರ್ಧಾರಕ್ಕೆ ಬರಲು ಎರಡು ನಿಮಿಷ ಸಾಕಂತೆ. ಬದುಕಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲು ಅಷ್ಟು ಕಡಿಮೆ ಸಮಯ ಸಾಕಾದರೆ, ಯಾವ ಬಣ್ಣದ ಕಾರನ್ನು ಖರೀದಿಸಬೇಕು ಎಂಬುದಕ್ಕೆ ಎರಡು ದಿನ, ಯಾವ ಕಾರು, ಮೊಬೈಲನ್ನು ಖರೀದಿಸಬೇಕೆಂದು ತೀರ್ಮಾನಿಸಲು ಒಂದು ವಾರ ಸಮಯ ತೆಗೆದುಕೊಳ್ಳ ಬೇಕಾ ? ಹಾಗಂತ ಬಫೆಟ್ ಕೇಳುತ್ತಾನೆ.

ಅದೆಂಥ ಜಟಿಲ ಸಂಗತಿಯೇ ಇರಬಹುದು, ನಿರ್ಧಾರಕ್ಕೆ ಬರಲು ಐದು ನಿಮಿಷ ಸಾಕು, ಆದರೆ ನಾವು ಬೇಕೆಂದೇ ಅನಿರ್ದಿಷ್ಟ ಅವಽ ತೆಗೆದುಕೊಳ್ಳುತ್ತೇವೆ. ಕೆಲವು ಸಲ ವಿನಾಕಾರಣ ಮುಂದೂಡುತ್ತೇವೆ. ನಿರ್ಧಾರ ತೆಗೆದುಕೊಳ್ಳಲು ತೊಳಲಾಡುತ್ತೇವೆ. ಕೊನೆಗೂ, ಬೇಕು ಅಥವಾ ಬೇಡ ಎಂದು ನಿರ್ಧರಿಸಲು ಸಾಧ್ಯವಾಗದೇ ಸುಮ್ಮನಿದ್ದುಬಿಡುತ್ತೇವೆ. ಇಂಥ ಸ್ಥಿತಿಯಲ್ಲಿರುವುದು ವೈಯಕ್ತಿಕ ಸೋಲು. ಇದು ಬಫಟ್ ನ ಖಚಿತ ನಿಲುವು.

ಒಮ್ಮೆ ಬಫೆಟ್ ಗೆ ಒಂದು ಫ್ಯಾಕ್ಸ್ ಬಂತು ಫಾರೆಸ್ಟ್ ರಿವರ್ ಇನ್ ಕಾರ್ಪೊರೇಟೆಡ್ ಕಂಪನಿಯ ಸಲಹೆಗಾರನ ಫಾಕ್ಸ್ ಸಂದೇಶವದು. ‘ಈ ಕಂಪನಿ ಮಾರಾಟ ಕ್ಕಿದೆ. ಎಂಟು ನೂರು ದಶಲಕ್ಷ ಡಾಲರಿಗೆ ಖರೀದಿಸಬಹುದು’ ಎಂದು ಸಲಹೆಗಾರ ತಿಳಿಸಿದ್ದ. ಜತೆಗೆ ಆ ಕಂಪನಿಯ ಕಿರು ಪರಿಚಯ ಬರೆದಿದ್ದ. ಆ ಹೆಸರಿನ ಕಂಪನಿ ಯೊಂದು ಇದೆ, ಅದು ಆ ಬಿಜಿನೆಸ್ ಮಾಡುತ್ತಿದೆ ಎಂಬುದು ಸಹ ಬಫೆಟ್ ಗೆ ಗೊತ್ತಿರಲಿಲ್ಲ. ಆದರೆ ಆ ಫ್ಯಾಕ್ಸ್ ಸಂದೇಶದಲ್ಲಿದ್ದ ಒಂದು ಸಂಗತಿ ಅವರಿಗೆ ಹಿಡಿಸಿತು. ಅದರಲ್ಲಿ ಒಂದೆಡೆ ‘ಕಂಪನಿಯು ದೊಡ್ಡ ಪ್ರಮಾಣದ ಮಾರುಕಟ್ಟೆ ಹೊಂದಿದೆ ಮತ್ತು ಸ್ವಲ್ಪ ಆರ್ಥಿಕ ಹೊರೆ ಹೊಂದಿದೆ.’ ಎಂದು ಬರೆದಿತ್ತು.

ಈ ಎರಡು ಸಾಲುಗಳನ್ನು ಓದಿ ಮುಗಿಸುವುದರೊಳಗೆ ಆ ಕಂಪನಿಯನ್ನು ಖರೀದಿಸಲೇಬೇಕು ಎಂಬ ನಿರ್ಧಾರಕ್ಕೆ ಬಫೆಟ್ ಬಂದಿದ್ದ. ಮರುದಿನವೇ ಫಾರೆಸ್ಟ್ ರಿವರ್ ಸ್ಥಾಪಕ, ಮಾಲೀಕ ಪೀಟರ್ ಕಚೇರಿಯಲ್ಲಿ ಕುಳಿತಿದ್ದ. ಬಫೆಟ್ ಒಂದು ಮೊತ್ತ ಸೂಚಿಸಿದ. ಆ ಮಾಲೀಕನ ಮುಖದಲ್ಲಿ ಸಮ್ಮತಿ ಕಾಣಲಿಲ್ಲ. ಬಫೆಟ್ ಎರಡನೇ ಮೊತ್ತ ಹೇಳಿದ. ಡೀಲ್ ಕುದುರಿತು. ಬಫೆಟ್ ತಕ್ಷಣ ಎದ್ದು ನಿಂತು ಪೀಟರ್ ಕೈಕುಲುಕಿ ಅಭಿನಂದಿಸಿದ. ಮುಂದಿನ ಮಗಳನ್ನು ನನ್ನ ಅಧಿಕಾರಿಗಳು ಕೈಗೊಳ್ಳುತ್ತಾರೆ ಎಂದು ಅಲ್ಲಿಂದ ಎದ್ದು ಬಂದ. ಕೇವಲ ಇಪ್ಪತ್ತು ನಿಮಿಷಗಳಲ್ಲಿ ಮಾತುಕತೆ, ಡೀಲು ಮುಗಿದುಹೋಯಿತು.

ಬಫೆಟ್ ನ ಮಾತು, ನಡೆವಳಿಕೆ, ನಿರ್ಧಾರ ತೆಗೆದುಕೊಳ್ಳುವ ರೀತಿ, ಕಾರ್ಯವೈಖರಿ ಕಂಡು ಪೀಟರ್ ಮೂಕವಿಸ್ಮಿತನಾದ. ಐದು ದಶಕಗಳ ಕಾಲ ಕಟ್ಟಿದ ಕಂಪನಿ ಯನ್ನು ಇಷ್ಟು ಸಲೀಸಾಗಿ ಮಾರಾಟ ಮಾಡಬಹುದು ಎಂದು ಅವನು ಕನಸು-ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಇಡೀ ವ್ಯವಹಾರದ ಬಗ್ಗೆ ಪೀಟರ್ ಹೇಳಿದ್ದು – ‘ಡ್ರೈವಿಂಗ್ ಲೈಸೆನ್ಸನ್ನು ನವೀಕರಿಸುವುದಕ್ಕಿಂತ ಸುಲಭವಾಗಿ ಕಂಪನಿಯನ್ನು ಮಾರಬಹುದು ಅಥವಾ ಖರೀದಿಸಬಹುದು ಎಂಬುದು ನನಗೆ ಗೊತ್ತಿರಲಿಲ್ಲ.’

ಮುಗಿಯದ ಮಾತುಕತೆ
ಆ ಆರೂ ಮಹಿಳೆಯರು ಒಂದೇ ಊರಿನವರು, ಆತ್ಮೀಯ ಗೆಳತಿಯರು. ಆರೂ ಜನರಿಗೆ ಎಂಟು ವರ್ಷ ಜೈಲು ಶಿಕ್ಷೆಯಾಯಿತು. ಜೈಲಿನಲ್ಲಿ ಅಷ್ಟು ವರ್ಷಗಳ ಕಾಲ ಶಿಕ್ಷೆ ಅನುಭವಿಸಿ ಬಿಡುಗಡೆಯಾದರು. ಇವರೆಲ್ಲರನ್ನೂ ಒಂದೇ ಕೋಣೆಯಲ್ಲಿ ಇರಿಸಲಾಗಿತ್ತು. ಜೈಲಿನಿಂದ ಹೊರಬರುತ್ತಿದ್ದಂತೆ ಅವರ ಸ್ವಾಗತಕ್ಕೆ ಅವರ ಸಂಬಂಧಿ ಕರು ಕಾಯುತ್ತಿದ್ದರು. ಅವರೆಲ್ಲರೂ ಪರಸ್ಪರ ಬೀಳ್ಕೊಂಡು ತಮ್ಮ ತಮ್ಮ ಮನೆಗೆ ಹೋಗುವ ಮುನ್ನ ಮಾತಾಡಿಕೊಂಡರು – ‘ನಾನು ಹೇಳ್ತಾ ಇದ್ನಲ್ಲಾ, ಆ ಕತೆ ಮುಗಿದಿಲ್ಲ, ಮುಂದೇನಾಯಿತು ಎಂಬುದನ್ನು ಫೋನಿನಲ್ಲಿ ಮಾತಾಡಿಕೊಳ್ಳೋಣ’ ಈ ಮಾತನ್ನು ಕೇಳಿದ ಒಬ್ಬಳ ಪತಿ ಮೆಲ್ಲಗೆ ಹೇಳಿದ – ‘ಇಷ್ಟು ವರ್ಷ ಒಂದೇ ಕೋಣೆಯಲ್ಲಿದ್ದೂ, ನಿಮ್ಮ ಮಾತು ಮುಗಿದಿಲ್ಲ ಅಂದ್ರೆ ಇನ್ನೂ ಐದಾರು ವರ್ಷನಾದ್ರೂ ಇದ್ದು ಬರಬೇಕಿತ್ತು, ಪಾಪ!’