Friday, 20th September 2024

ಬಾಕಾಹು ಮತ್ತು ಮೂರಕ್ಷರ ಹ್ರಸ್ವ ರೂಪಗಳ ಮಹಿಮೆ

ತಿಳಿರು ತೋರಣ

ಶ್ರೀವತ್ಸ ಜೋಶಿ

ಅದಾವ ಅಮೃತ ಗಳಿಗೆಯಲ್ಲಿ ‘ಬಾಕಾಹು’ ಎಂಬ ಹ್ರಸ್ವ ರೂಪವೇ ಅದಕ್ಕೆ ಸೂಕ್ತ ಹೆಸರೆಂದುಕೊಂಡರೋ, ಬಾಳೆ ಕಾಯಿ ಹುಡಿ ಎಂಬ ತೀರ ಸಾಮಾನ್ಯ ಪದಾರ್ಥವೊಂದು ದಿಢೀರನೆ ವರ್ಲ್ಡ್ ಫೇಮಸ್ ಆಗಿದೆ!

ಎಲ್ಲಿಯವರೆಗೆಂದರೆ ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ರೇಡಿಯೊ ಕಾರ್ಯಕ್ರಮದಲ್ಲೂ ಮೊನ್ನೆ ಅದರ ಪ್ರಸ್ತಾವವಾಗಿದೆ; ಬಾಕಾಹು ತಯಾರಿಯ ಮೂಲಕ ಸ್ವಾವಲಂಬನೆಯ ದಾರಿಯೊಂದನ್ನು ಕಂಡುಕೊಂಡಿದ್ದಕ್ಕೆ ಕರಾವಳಿ-ಮಲೆನಾಡು ಪ್ರದೇಶದ ಮಹಿಳೆಯರಿಗೆ ಅಭಿನಂದನೆ ಸಿಕ್ಕಿದೆ. ಮೋದಿಯವರೇನೋ ಭಾಷಣದಲ್ಲಿ ಬಾಕಾಹು ಎಂಬ ಹೆಸರನ್ನು ಬಳಸದೆ ‘ಕೇಲೇ ಕಾ ಆಟ್ಟಾ’ ಎಂದಷ್ಟೇ ಹೇಳಿದರು. ಆದರೆ ಈಗ ಜಗದಗಲ ಖ್ಯಾತಿ ಹರಡು ತ್ತಿರುವುದು ‘ಕೇಲೇ ಕಾ ಆಟ್ಟಾ’ ಅಂತ ಅಲ್ಲ; ‘ಬನಾನಾ ಪೌಡರ್’ ಅಂತಲೂ ಅಲ್ಲ; ಕಾಹು ಅಂತಲೇ! ಇಂಗ್ಲಿಷ್ ಪತ್ರಿಕೆಗಳೂ Bakahu ಎಂದೇ ಬರೆಯುತ್ತಿವೆ.

ಹೀಗೆ ಅಚ್ಚಕನ್ನಡ ಪದಗಳಿಂದಾದ ಹ್ರಸ್ವ ರೂಪವೊಂದು ಅಂತಾರಾಷ್ಟ್ರೀಯ ಖ್ಯಾತಿ ಗಳಿಸುತ್ತಿದೆಯೆಂದರೆ ನಾವೆಲ್ಲರೂ ಹೆಮ್ಮೆಪಡಬೇಕಾದ್ದೇ ಅಲ್ಲವೇ? ಅದೂ, ಏನೋ ಒಂದು ಹೊಸರುಚಿ ಪ್ರಯೋಗ ಅಂತ ಪ್ರಚಾರ ಗಳಿಸಿದ್ದಲ್ಲ. ಮೈದಾ ಹಿಟ್ಟು – ಗೋದಿಹಿಟ್ಟುಗಳಿಗೆ ಅತ್ಯುತ್ತಮ ಪರ್ಯಾಯವಾಗಿ, ಮೆಗ್ನೇಸಿಯಂ ಪೊಟ್ಯಾಶಿಯಂ ಮತ್ತಿತರ ಪೋಷಕಾಂಶಗಳ ಆಗರವಾಗಿ, ತಯಾರಿಸಲಿಕ್ಕೆ ಅತ್ಯಂತ ಸರಳವಾಗಿ ಒದಗಿ ಬಂದಿರುವ ಬಾಕಾಹು ದೊಡ್ಡದೊಂದು ಕೃಷಿಕ್ರಾಂತಿ ಯನ್ನೇ ಮಾಡಲಿದೆ ಎನ್ನಲಿಕ್ಕಡ್ಡಿಯಿಲ್ಲ.

ರೊಟ್ಟಿ, ಚಪಾತಿ, ಗುಳಿಯಪ್ಪ, ಉಪ್ಪಿಟ್ಟು, ದೋಸೆ, ಬರ್ಫಿ, ಉಂಡೆ, ಜಾಮೂನ್, ಶಂಕರಪೋಳೆ, ಕೋಡುಬಳೆ, ಕಪ್‌ಕೇಕ್… ಒಂದೇ ಎರಡೇ! ಬಗೆಬಗೆಯ ತಿಂಡಿತಿನಸುಗಳನ್ನು ತಯಾರಿಸಬಹುದಂತೆ ಈ ಹೊಸ ಖಾದ್ಯ ಪದಾರ್ಥದಿಂದ. ಹಾಗಾಗಿ ಇದೇನೂ ಕ್ಷಣಿಕ ಖ್ಯಾತಿ ಅಲ್ಲ, ನೀರ ಮೇಲಿನ ಗುಳ್ಳೆ ಅಲ್ಲ, ಬಾಕಾಹು Bakahu. ಹಸುವಿನ ಬಗ್ಗೆ ಪ್ರಬಂಧ ಬರೆಯಲು ಕಲಿತ ಹುಡುಗ, ತೆಂಗಿನಮರದ ಬಗ್ಗೆ ಪ್ರಬಂಧ ಬರೆಯಲು ಹೇಳಿದಾಗ ಏನು ಮಾಡಿದನೋ ಹಾಗಾಯ್ತು ಎಂದುಕೊಳ್ಳಬೇಡಿ. ಆದರೆ ಬಾಕಾಹುವನ್ನು ಅಲ್ಲಿಗೇ ಬಿಟ್ಟು ನಾನೀಗ ಮೂರಕ್ಷರದ ಹ್ರಸ್ವ ರೂಪಗಳ ಮಹಿಮೆಯ ಬಗ್ಗೆ ಇಂದಿನ ಅಂಕಣವನ್ನು ಮುಂದು ವರಿಸುವವನಿದ್ದೇನೆ.

ತನ್ಮೂಲಕ ಬಾಕಾಹುವಿನ ಖ್ಯಾತಿಗೆ, ಜನಮನ್ನಣೆಗೆ ಮೂರಕ್ಷರದ ಹ್ರಸ್ವ ರೂಪವೂ ಒಂದು ಮುಖ್ಯ ಕಾರಣವಾಗಲಿದೆ ಎಂಬ ಒಂದು ಥಿಯರಿಯನ್ನು ಮಂಡಿಸು ವವನಿದ್ದೇನೆ. ನೀವಿದನ್ನು ಒಪ್ಪಲೇಬೇಕೆಂದೇನಿಲ್ಲ, ಆದರೆ ಬಾಕಾಹು ಫುಡ್ ಫಾರ್ ತಾಟು ಆದಂತೆ ನಿಮಗಿದು ಫುಡ್ ಫಾರ್ ಥಾಟು ಆದರೆ ಒಳ್ಳೆಯದೇ.
ಮೂರಕ್ಷರದ ಹ್ರಸ್ವ ರೂಪಗಳದು ಒಂದು ಅದ್ಭುತ ಪ್ರಪಂಚ. ಹೇಗೆಂದು ತಿಳಿದುಕೊಳ್ಳಲಿಕ್ಕೆ ನಮ್ಮ ಕನ್ನಡದ ಸುಪ್ರಸಿದ್ಧ ಕವಿ-ಸಾಹಿತಿಗಳದೊಂದು ಪಟ್ಟಿ ಮಾಡುವಾ. ಕುವೆಂಪು, ತೀನಂಶ್ರೀ, ಪುತಿನ, ತರಾಸು, ಅರಾಸೇ, ಅನಕೃ, ದೇಜಗೌ, ಪೂಚಂತೇ, ಬಿಎಂಶ್ರೀ, ಕೆಎಸ್‌ನ, ಡಿವಿಜಿ, ಜಿಎಸ್‌ಎಸ್, ಸಿಪಿಕೆ… ಅರೆರೆ!

ಇದೇನಿದು ಎಲ್ಲರೂ ಮೂರಕ್ಷರ ಹ್ರಸ್ವ ರೂಪದ ಹೆಸರಿನವರು! ಈ ಹ್ರಸ್ವ ರೂಪದಿಂದಲೇ ಪ್ರಖ್ಯಾತರಾದವರು! ಈಗ, ಇದೇ ಪಟ್ಟಿಯನ್ನು ಒಮ್ಮೆ ಈ ರೀತಿ ಓದಿಕೊಳ್ಳಿ: ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ, ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ, ಪುರೋಹಿತ ತಿರುನಾರಾಯಣ ನರಸಿಂಹಾಚಾರ್, ತಳುಕಿನ ರಾಮ ಸ್ವಾಮಯ್ಯ ಸುಬ್ಬರಾವ್, ಅಣಜಿ ರಾಮಣ್ಣ ಸೇತೂರಾಮರಾವ್, ಅರಕಲಗೂಡು ನರಸಿಂಗರಾಯ ಕೃಷ್ಣರಾಯ, ದೇವೇಗೌಡ ಜವರೇ ಗೌಡ, ಪೂರ್ಣಚಂದ್ರ ತೇಜಸ್ವಿ, ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ, ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ, ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ, ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ, ಚಿಕ್ಕನಾಯಕನಹಳ್ಳಿ ಪುಟ್ಟೇಗೌಡ ಕೃಷ್ಣಕುಮಾರ್… ಇಲ್ಲ, ಏನೋ ಒಂದು ಅಪರಿಚಿತ ಭಾವನೆ ಪೂರ್ಣರೂಪದ ಈ ಹೆಸರುಗಳನ್ನು ಓದಿದಾಗ.

ಸಾಹಿತ್ಯದ ಗಂಧಗಾಳಿ ಇಲ್ಲದವರಂತೂ ಇದೊಂದು ವೋಟರ್ ಲಿಸ್ಟ್‌ನಂತೆ ಕೇಳಿಸುತ್ತದೆ ಅಂದುಕೊಂಡರೂ ಆಶ್ಚರ್ಯವಿಲ್ಲ. ಸ್ವಾರಸ್ಯವೆಂದರೆ, ಸಾಹಿತ್ಯದ ಅಭಿರುಚಿ ಇರುವವರಿಗೂ- ಕುವೆಂಪು ಎಂದಾಗ ಮನದಲ್ಲಿ ಮೂಡುವ ಗೌರವಭಾವ, ನಮ್ಮ ಕನ್ನಡದ ರಸಋಷಿ ಮೊತ್ತಮೊದಲ ಜ್ಞಾನಪೀಠಿ ಎಂಬ ಪ್ರೀತ್ಯಭಿ ಮಾನ, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಎನ್ನುವಾಗ ಬರುವುದಿಲ್ಲ. ಡಿವಿಜಿ ಎಂದಾಗ ಮನದೊಳಗೇ ಝಗ್ಗನೆ ಬೆಳಗುವ ಕಗ್ಗದ ಸಾಲುಗಳು ಮತ್ತು ದಾರ್ಶನಿಕನೊಬ್ಬನ ಮೇರು ರೂಪ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಎನ್ನುವಾಗ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡುವುದಿಲ್ಲ.

ಕೆಎಸ್‌ನ ಎಂದಾಗ ಮೂಗಿಗೆ ಅಡರುವ ಮಲ್ಲಿಗೆಯ ಕವಿತೆಗಳ ಹಿತವಾದ ಘಮ ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ ಎಂದಾಗ ಸುಳಿಯುವುದಿಲ್ಲ. ಸಿಪಿಕೆ ಎಂದಾಗ ತತ್‌ಕ್ಷಣವೇ ನೆನಪಾಗುವ ‘ವಿದ್ಯುದಾಲಿಂಗನಕೆ ಸಿಕ್ಕಿ ಸತ್ತಿದೆ ಕಾಗೆ’ ಪದ್ಯ ಚಿಕ್ಕನಾಯಕನ ಹಳ್ಳಿ ಪುಟ್ಟೇಗೌಡ ಕೃಷ್ಣಕುಮಾರ್ ಎಂದಾಗ ಊಹುಂ. ತರಾಸು ಎಂದೊಡನೆ ಕಣ್ಮುಂದೆ ಬರುವ ಚಿತ್ರದುರ್ಗದ ಕೋಟೆಯಾಗಲೀ, ದುರ್ಗಾಸ್ತಮಾನ ಹಂಸಗೀತೆ ನಾಗರಹಾವು ಮುಂತಾದ ಕಾದಂಬರಿಗಳ ನೆನಪಾ ಗಲೀ, ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್ ಎನ್ನುವಾಗ ಬರುವುದೇ ಇಲ್ಲ!

ಇದೇ, ಮೂರಕ್ಷರದ ಹ್ರಸ್ವ ರೂಪಗಳ ಮಹಿಮೆ. ಹಾಗಂತ ಸೂಕ್ಷ್ಮವಾಗಿ, ಗಮನಿಸಿದರೆ ಈ ಕನ್ನಡದ ಕವಿಶ್ರೇಷ್ಠರ ಹ್ರಸ್ವ ನಾಮಗಳಲ್ಲಿ ಡಿವಿಜಿ ಜಿಎಸ್‌ಎಸ್ ಸಿಪಿಕೆ
ಮೊದಲಾದ ಕೆಲವು, ಇಂಗ್ಲಿಷ್ ಇನಿಷಿಯಲ್ ಗಳಾಗಿ ಮೂರಕ್ಷರ ಆದಂಥವೂ ಇವೆ. ಬಿಎಂಶ್ರೀ, ಕೆಎಸ್‌ನ ಮುಂತಾದುವು ಕನ್ನಡ-ಆಂಗ್ಲ ಮಿಶ್ರತಳಿಯವೂ ಇವೆ. ಅಂದರೆ ಭಾಷೆಯ ಹಂಗಿಲ್ಲದೆ, ನಿರ್ಬಂಧವಿಲ್ಲದೆ ಇವು ರಾರಾಜಿಸಿವೆ. ಇಂಗ್ಲಿಷ್ ಅಕ್ಷರಗಳಾದರೂ ಸರಿ, ಮೂರಕ್ಷರ ಹ್ರಸ್ವ ರೂಪದಿಂದ ಖ್ಯಾತನಾಮರಾದ
ಕನ್ನಡಿಗರು ಇನ್ನೂ ಅನೇಕರು ಸಿಗುತ್ತಾರೆ.

ಇಲ್ಲೂ ಅಷ್ಟೇ, ತೀರ್ಥಹಳ್ಳಿ ಸೂರ್ಯನಾರಾಯಣ ರಾಮಚಂದ್ರರಾವ್ ಎಂದರೆ ಯಾರು ಅಂತ ಥಟ್ಟನೆ ಗೊತ್ತಾಗಲಿಕ್ಕಿಲ್ಲ; ‘ಟಿಯೆಸ್ಸಾರ್’ ಎಂದೊಡನೆ ಐದಾರು ದಶಕಗಳ ಹಿಂದೆ ನಿಜಾರ್ಥದಲ್ಲಿ ಅತ್ಯಂತ ವಿಶ್ವಾಸಾರ್ಹ ಆಗಿದ್ದ ಪ್ರಜಾವಾಣಿ ಪತ್ರಿಕೆ ಕಣ್ಮುಂದೆ ಬರುತ್ತದೆ, ಛೂಬಾಣ ನಗು ತರಿಸುತ್ತದೆ! ಯಳಂದೂರು ನಾರಾಯಣಮೂರ್ತಿ ಕೃಷ್ಣಮೂರ್ತಿ ಎಂದರೆ ಯಾರು ಅಂತ ಥಟ್ಟನೆ ಗೊತ್ತಾಗಲಿಕ್ಕಿಲ್ಲ; ‘ವೈಎನ್ ಕೆ’ ಎಂದೊಡನೆ ಕಣ್ಮುಂದೆ ವಂಡರ್ ಕಣ್ಣಿನ ಪನ್ -ಡಿತ! ಗುಂಡು ಹಾಕದ ಆಸಾಮಿಯೂ ಗುಂಡು ಹಾಕುವ ಆಸಾಮಿಯೂ ಆಗಬಲ್ಲ ಶ್ರೀಮಾನ್ ‘ಘಾ’, ವಿಶ್ವಾಮಿತ್ರ-ಮೇನಕೆ, ಡ್ಯಾನ್ಸ್ ಮಾಡೋದು ಏನಕೆ, ಆಸ್ಕ್ ಮಿಸ್ಟರ್ ವೈಎನ್‌ಕೆ!

ಹಾಗೆಯೇ ಗುಡ್ಡೆಹಿತ್ಲು ತಿಮ್ಮಪ್ಪಯ್ಯ ನಾರಾಯಣರಾವ್ ಎಂದರೆ ಯಾರು ಅಂತ ಗೊತ್ತಾಗದಿದ್ದರೂ ಜಿಟಿಎನ್ ಎಂದೊಡನೆ ವಿಜ್ಞಾನ ಬರಹಗಳು, ಆಕಾಶವಾಣಿಯ
ಮೂಲಕ ಆಕಾಶದಲ್ಲಿ ನಕ್ಷತ್ರವೀಕ್ಷಣೆ… ಎಲ್ಲ ನೆನಪಾಗುತ್ತವೆ. ಇದೂ ಮೂರಕ್ಷರದ ಹ್ರಸ್ವ ರೂಪಗಳ ಮಹಿಮೆಯೇ. ಮೇಲಿನ ಎಲ್ಲ ಉದಾಹರಣೆಗಳಲ್ಲೂ ಮೂರಕ್ಷರದ ಹ್ರಸ್ವ ರೂಪ ಆಗಿರುವುದು ಆಯಾ ವ್ಯಕ್ತಿಗಳ ಹುಟ್ಟೂರಿನ ಹೆಸರಿನ ಮೊದಲಕ್ಷರ, ತಂದೆಯ ಹೆಸರಿನ ಮೊದಲಕ್ಷರ, ಮತ್ತು ಸ್ವಂತ ಹೆಸರಿನ ಮೊದಲಕ್ಷರ ಸೇರಿರುವುದರಿಂದ. ಇದಕ್ಕೆ ಅಪವಾದವಾಗಿ ಒಂದೆರಡು ಉದಾಹರಣೆಗಳನ್ನು ಈಗ ನೋಡೋಣ.

ಪ್ರಸಕ್ತ ಸಂದರ್ಭದಲ್ಲಿ ಕನ್ನಡದ ಶ್ರೇಷ್ಠ ಸಾಹಿತಿ ಬಹುಶ್ರುತ ಕವಿ ಎನಿಸಿರುವ ಡಾ.ಎಚ್‌ಎಸ್‌ವಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊದಿಗ್ಗೆರೆ ಗ್ರಾಮದಲ್ಲಿ. ತಂದೆ ನಾರಾಯಣ ಭಟ್ಟರು ಮತ್ತು ತಾಯಿ ನಾಗರತ್ನಮ್ಮ. ಎಚ್‌ಎಸ್‌ವಿ ಎಂಬ ಮೂರಕ್ಷರದಲ್ಲಿ ಎಚ್ ಅಂದರೆ ಹೊದಿಗ್ಗೆರೆ. ವಿ ಅಂದರೆ ವೆಂಕಟೇಶಮೂರ್ತಿ. ಮತ್ತೆ ನಡುವಿನ ಎಸ್ ಹೇಗೆ ಬಂತು? ಅದರ ವಿವರ ಹೀಗೆ: ಬಾಲ್ಯದಲ್ಲಿ ಅವರ ಹೆಸರು ಶ್ರೀನಿವಾಸ ಎಂದು ಇದ್ದದ್ದಂತೆ.

ಜನನ ದಾಖಲೆಯಲ್ಲೂ ಅದೇ ಇದ್ದಿರಬಹುದು. ಅಮೇಲೆ ಅವರ ಪ್ರೀತಿಯ ಅಜ್ಜಿಯವರ ಆಶೆಯಂತೆ ಹೆಸರನ್ನು ‘ವೆಂಕಟೇಶಮೂರ್ತಿ’ ಎಂದು ಬದಲಾಯಿಸಿದ್ದಂತೆ. ಜನನದಾಖಲೆ ಸರಿಪಡಿಸುವುದು ಬೇಡವೆಂದು ‘ಹೊದಿಗ್ಗೆರೆ ಶ್ರೀನಿವಾಸ ವೆಂಕಟೇಶಮೂರ್ತಿ’ ರ್ಣ ಹೆಸರಾಯಿತು; ಎಚ್‌ಎಸ್‌ವಿ ಎಂದು ಹ್ರಸ್ವ ರೂಪವಾಯಿತು. ಆ ಹ್ರಸ್ವ ರೂಪದಿಂದಲೇ ಚಿನ್ನಾರಿ ಮುತ್ತನ ಹಾಡುಗಳೂ, ತೂಗುಮಂಚದಲ್ಲಿ ಕೂತ ರಾಧೆ-ಶ್ಯಾಮರ ಪಿಸುಮಾತುಗಳೂ ನಮಗೆ ಅತ್ಯಂತ ಆಪ್ತವೆನಿಸಿದುವು. ಇನ್ನೊಂದು ಉದಾಹರಣೆ ಕನ್ನಡ ಚಿತ್ರರಂಗದಲ್ಲೊಬ್ಬ ಶ್ರೇಷ್ಠ ನಿರ್ದೇಶಕನಾಗಿ, ಸಾಹಿತಿಯಾಗಿ ಸಾರ್ಥಕ ಸೇವೆಗೈದ ಕುಮಾರಸ್ವಾಮಿ ರವಿ ಸೀತಾರಾಮ ಶಾಸ್ತ್ರೀ.

ಯಥಾವತ್ತಾಗಿ ಆ ಹೆಸರು ವಿಶೇಷವಾದುದೇನನ್ನೂ ನೆನಪಿಸಲಿಕ್ಕಿಲ್ಲ, ಅದನ್ನೇ ‘ಕು.ರ.ಸೀ’ ಎಂದು ಹೇಳಿನೋಡಿ. ಮೆಲ್ಲುಸಿರೀ ಸವಿಗಾನ ಕಿವಿಗಳಲ್ಲಿ ಗುಂಯ್‌ ಗುಡುತ್ತದೆ; ತುಟಿಯ ಮೇಲೆ ತುಂಟ ಕಿರುನಗೆ ಮೂಡುತ್ತದೆ; ಬಿಂಕದ ಸಿಂಗಾರಿ ಮೈ ಡೊಂಕಿನ ವೈಯಾರಿ ಕುಣಿಯತೊಡಗುತ್ತಾಳೆ; ರಾಮನ ಅವತಾರ ರಘುಕುಲ ಸೋಮನ ಅವತಾರವೂ ಕಣ್ಮುಂದೆ ಬರುತ್ತದೆ! ‘ಕು.ರ.ಸ್ತ್ರೀ’ಯಲ್ಲಿ ಕು ಎಂದರೆ ತಂದೆಯ ಹೆಸರು ಕುಮಾರಸ್ವಾಮಿ. ಸೀತಾರಾಮ ಎಂದು ಅಜ್ಜನ ಹೆಸರೇ ಮೊಮ್ಮಗನಿಗೂ ಬಂದದ್ದು. ಮತ್ತೆ ನಡುವಿನ ರವಿ ಯಾರು? ತಂದೆ ಕುಮಾರಸ್ವಾಮಿಯವರು ನವಗ್ರಹ ಹೋಮ ಮಾಡುವಾಗ ರವಿಕುಂಡದಿಂದ ಎದ್ದ ಬೆಳಕಿನ ಜ್ವಾಲೆ ಅವರ ಧರ್ಮಪತ್ನಿ ಸುಬ್ಬಮ್ಮನವರ ಗರ್ಭವನ್ನು ಪ್ರವೇಶಿಸಿದಂತೆ ಭಾಸವಾಯಿತಂತೆ.

ಹೀಗಾಗಿ ಜನಿಸಿದ ಮಗನಿಗೆ ರವಿ ಎಂದೇ ಹೆಸರಿಡಬೇಕು ಎನ್ನುವ ಸಂಕಲ್ಪ ಅವರಲ್ಲಿ ಮೂಡಿತಂತೆ. ಆದರೆ ಅಜ್ಜನ ಹೆಸರನ್ನಿಡುವುದೆಂದು ಮೊದಲೇ ನಿರ್ಧರಿಸಿ ಆಗಿತ್ತು. ಪೂರ್ಣರೂಪವಾಗಿ ಕುಮಾರಸ್ವಾಮಿ ರವಿ ಸೀತಾರಾಮ ಶಾಸ್ತ್ರೀ ಎಂದು ಹೆಸರಾಯಿತು. ‘ಕು.ರ.ಸೀ’ ಹುಟ್ಟಿದರು. ‘ತನಾಶಿ’ ಎಂಬ ಮೂರಕ್ಷರದ ಹ್ರಸ್ವ ರೂಪವನ್ನು ಕಾವ್ಯನಾಮವಾಗಿರಿಸಿರುವ ಸಜ್ಜನ ಕನ್ನಡಿಗರೊಬ್ಬರ ಬಗ್ಗೆಯೂ ಇಲ್ಲಿ ಉಲ್ಲೇಖಿಸಲೇಬೇಕು. ನನಗವರ ಪರಿಚಯ ವಾಟ್ಸಪ್ ಮೂಲಕ ಆದದ್ದು. ಮಂಕುತಿಮ್ಮನ ಕಗ್ಗ, ಮರುಳಮುನಿಯನ ಕಗ್ಗ ಮತ್ತಿತರ ಡಿವಿಜಿ ವಿಚಾರಧಾರೆಗಳ ವಿನಿಮಯವಾಗುವ ‘ಡಿವಿಜಿ ಬಳಗ’ ಎಂಬ ವಾಟ್ಸಪ್ ಗ್ರೂಪಿನಲ್ಲಿ. ಮೂಲತಃ
ಮಂಡ್ಯದವರಾಗಿ ಈಗ ಕಾರ್ಯನಿಮಿತ್ತ ಬೆಳಗಾವಿಯಲ್ಲಿರುವ ಅವರ ಪೂರ್ಣ ಹೆಸರು ತಡಗವಾಡಿ ನಾರಾಯಣ ಶಿವಕುಮಾರ್.

ಮಂಡ್ಯ ಜಿಲ್ಲೆಯ ತಡಗವಾಡಿ ಅವರ ಕುಟುಂಬದ ಮೂಲ ಊರು ಅಂತೆ. ತಂದೆಯ ಹೆಸರು ನಾರಾಯಣ. ತಾಯಿಯ ಹೆಸರು ಪದ್ಮಾವತಿ. ಶಿವಕುಮಾರ್
ಅವರು ಕಗ್ಗದ ಸರಳಸುಂದರ ವಿಶ್ಲೇಷಣೆ ಮಾಡುತ್ತಾರೆ. ತಾವೂ ಛಂದೋಬದ್ಧ ಮೌಲ್ಯಯುತ ಕವಿತೆಗಳನ್ನು ಬರೆಯುತ್ತಾರೆ. ದಿನಕ್ಕೊಂದು ಭಾಮಿನಿ ಷಟ್ಪದಿ ಬರೆದು ವಾಟ್ಸಪ್‌ನಲ್ಲಿ ಸಾಹಿತ್ಯಾಸಕ್ತರೊಡನೆ ಹಂಚಿಕೊಳ್ಳುತ್ತಾರೆ. ಭಾಮಿನಿ ಷಟ್ಪದಿ ರಚನೆಯ ಹುಚ್ಚನ್ನು ಕನಿಷ್ಠ ನೂರು ಮಂದಿಗಾದರೂ ಹಚ್ಚಿ ಅವರನ್ನೂ ಆ ಕಲೆಯಲ್ಲಿ ಪಳಗಿಸಿರುವ ಶ್ರೇಯ ಶಿವಕುಮಾರ್ ರದು. ಆರಂಭದಲ್ಲಿ ‘ಪದ್ಮಿನೀಸುತ’ ಎಂದು ತಾಯಿಯ ನೆನಪಲ್ಲಿ, ಆಮೇಲೆ ‘ಟಿಎನ್ನೆಸ್’ ಎಂದು ಪೆನ್‌ನೇಮ್
ಇಟ್ಟುಕೊಂಡು ಬರೆಯುತ್ತಿದ್ದರಂತೆ.

ಒಮ್ಮೆ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರು ‘ನಿಮ್ಮಲ್ಲೊಬ್ಬ ಸಹೃದಯಿ ಕ್ರಿಯಾಶೀಲ ಬರಹಗಾರನಿದ್ದಾನೆ. ತೀನಂಶ್ರೀಯವರೆಲ್ಲ ಕನ್ನಡ ಅಕ್ಷರಗಳಿಂದಾದ ಹ್ರಸ್ವ ರೂಪವನ್ನು ಕಾವ್ಯನಾಮವಾಗಿಟ್ಟುಕೊಂಡಂತೆ ನೀವೂ ‘ತನಾಶಿ’ ಎಂದು ಬಳಸಿರಿ. ಅದರಲ್ಲಿ ಮತ್ತೂ ಒಂದು ಸೊಗಸೆಂದರೆ ಮೊದಲಕ್ಷರ ಅ-ಕಾರ, ಎರಡನೆಯದು ಆ-ಕಾರ, ಮೂರನೆಯದು ಇ-ಕಾರ ಇದ್ದು ಆಕರ್ಷಕವಾಗಿದೆ!’ ಎಂದು ಶಿವಕುಮಾರ್‌ಗೆ ಸಲಹೆ ಕೊಟ್ಟರು. ಹಾಗೆ ‘ತನಾಶಿ’ ಹ್ರಸ್ವ ರೂಪ
ಉದಯವಾಯಿತು.

ಇದುವರೆಗೂ ವ್ಯಕ್ತಿಗಳ ಹೆಸರುಗಳು ಮೂರಕ್ಷರ ಹ್ರಸ್ವ ರೂಪದಲ್ಲಿ ಪ್ರಖ್ಯಾತವಾಗಿರುವುದರ ಬಗ್ಗೆಯಷ್ಟೇ ನೋಡಿದೆವು. ಆಸಕ್ತಿಯಿಂದ ಗಮನಿಸಿದರೆ ಬೇರೆ ಹಲವು ಸಂದರ್ಭಗಳಲ್ಲೂ ನಮಗೆ ಮೂರಕ್ಷರ ಹ್ರಸ್ವ ರೂಪಗಳು ಎದುರಾಗುವುದು ಗೊತ್ತಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಗಣಿತದಲ್ಲಿ ಬರುವ ಮಸಾಅ (ಮಹತ್ತಮ ಸಾಮಾನ್ಯ ಅಪವರ್ತನ) ಮತ್ತು ಲಸಾಅ (ಲಘುತಮ ಸಾಮಾನ್ಯ ಅಪವರ್ತ್ಯ)ಗಳು ಚಿರಪರಿಚಿತ. ಅಂತೆಯೇ ಪ್ರಮೇಯವನ್ನು ಸಾಧಿಸಿ ಕೊನೆಯಲ್ಲಿ ಬರೆಯುವ ‘ಇಸ್ಥಾಬೇ’ (ಇದನ್ನೇ ಸ್ಥಾಪಿಸಬೇಕಿತ್ತು) ಎಂಬ ಮೂರಕ್ಷರ ಹ್ರಸ್ವ ರೂಪ.

ನೌಕರಿಯ ವಿಷಯಕ್ಕೆ ಬರುವುದಾದರೆ- ಪ್ರದಗು (ಪ್ರಥಮ ದರ್ಜೆ ಗುಮಾಸ್ತ) ಮತ್ತು ದ್ವಿದಗು (ದ್ವಿತೀಯ ದರ್ಜೆ ಗುಮಾಸ್ತ) ಎಂಬ ಮೂರಕ್ಷರ ಹ್ರಸ್ವ ರೂಪಗಳು ಹಿಂದೆ ಬಳಕೆಯಲ್ಲಿದ್ದವು. ಈಗ ಆರೀತಿ ಹೇಳುವಂತಿಲ್ಲ ಬರೆಯುವಂತಿಲ್ಲ. ಸ್ಥಳನಾಮಗಳು, ಕಂಪನಿಗಳ ಹೆಸರುಗಳನ್ನೂ ಅವಲೋಕಿಸಿದರೆ ಮತ್ತೊಂದಿಷ್ಟು ಸಿಗುತ್ತವೆ. ಬೆಂಗಳೂರಿನಲ್ಲಿ ಬಿಟಿಎಂ ಲೇಔಟ್ ಎಂಬ ಪ್ರದೇಶದ ಹೆಸರು ‘ಬಿಟಿಎಂ’ ಮೂರಕ್ಷರ ಹ್ರಸ್ವ ರೂಪವೇ ತಾನೆ? ಅದರ ಪೂರ್ಣ ರೂಪದಲ್ಲಿ ಟಿ ಎಂದರೆ ತಾವರೆಕೆರೆ, ಎಂ ಎಂದರೆ ಮಡಿವಾಳ. ಬಿ ಎಂದರೇನು? ಆ ಬಗ್ಗೆ ಒಮ್ಮೆ ನಾವೊಂದಿಷ್ಟು ಜನ ಸ್ನೇಹಿತರು ಚರ್ಚೆ ನಡೆಸಿದ್ದೆವು.

ಬಿ ಎಂದರೆ ಬೈರಸಂದ್ರ ಎಂದು ಒಬ್ಬರು, ಬೊಮ್ಮನಹಳ್ಳಿ ಅಂತ ಇನ್ನೊಬ್ಬರು, ಬಿಳೇಕಹಳ್ಳಿ ಅಂತ ಮಗದೊಬ್ಬರು, ಬನ್ನೇರುಘಟ್ಟ ಅಂತ ನಾಲ್ಕನೆಯವರು ವಾದ
ಮಾಡಿ ಒಟ್ಟು ಕನ್‌ಫ್ಯೂಷನ್. ಆಮೇಲೆ ನೋಡಿದರೆ ಅದ್ಯಾವುದೂ ಸರಿಯುತ್ತರವಲ್ಲ ಬಿಟಿಎಂನಲ್ಲಿ ಬಿ ಅಂದರೆ ಬೊಮ್ಮಸಂದ್ರ ಅಂತ ಗೊತ್ತಾಯ್ತು. ಬೆಂಗಳೂರಲ್ಲಿ ಮತ್ತು ಮೈಸೂರಲ್ಲಿ ಸಿಟಿ ಬಸ್ ಸ್ಟ್ಯಾಂಡ್ ಎನ್ನುವುದಕ್ಕೆ ‘ನಬನಿ’ (ನಗರ ಬಸ್ ನಿಲ್ದಾಣ) ಎಂದು ಸಿಟಿಬಸ್ಸುಗಳ ಫಲಕಗಳಿರುತ್ತಿದ್ದದ್ದು ಕೆಲವರಿಗೆ ನೆನಪಿರಬಹುದು. ಹಾಗೆಯೇ ಎಚ್‌ಎಎಲ್, ಎಚ್ ಎಂಟಿ, ಐಟಿಐ ಮುಂತಾದ ಕಂಪನಿಗಳ ಮೂರಕ್ಷರ ಹ್ರಸ್ವ ರೂಪ ಹೆಸರುಗಳು ಬೆಂಗಳೂರಿನಲ್ಲಿ ಜನಸಾಮಾನ್ಯರ ನಾಲಗೆಮೇಲೆ
ನಲಿದಾಡುತ್ತಿದ್ದ ದಿನಗಳಿದ್ದವು. ಈಗ ಐಪಿಎಲ್ ಆರಂಭವಾದ ಮೇಲೆ ಆರ್‌ಸಿಬಿ ಎಂಬ ಮೂರಕ್ಷರ ಹ್ರಸ್ವ ರೂಪವೇ ಬೆಂಗಳೂರಿನ ದೊಡ್ಡ ಅಸ್ಮಿತೆ.

ಗತವೈಭವದ ಸಿನೆಮಾ ಥಿಯೇಟರ್‌ಗಳ ಜಾಗದಲ್ಲಿ ಪಿವಿಆರ್ ಮಲ್ಟಿಪ್ಲೆಕ್ಸ್‌ಗಳು. ಅಂದಹಾಗೆ ಪಿವಿಆರ್ ಪೂರ್ಣರೂಪ ಏನು ಗೊತ್ತೇ? ಪ್ರಿಯಾ ವಿಲೇಜ್ ರೋಡ್‌ ಶೋ ಎಂದು! ಬೆಂಗಳೂರಿನ ಚರಿತ್ರೆಯ ‘ಪು.ತಿ.ನೋ’(ಪುಟ ತಿರುಗಿಸಿ ನೋಡಿ)ದಾಗ ಕಾಣುವ ಬೆರಗು ಮೂಡಿಸುವ ಬದಲಾವಣೆಗಳು ಇವೆಲ್ಲ. ಕನ್ನಡದ, ಕನ್ನಡಿಗರ, ಕರ್ನಾಟಕದ ಚೌಕಟ್ಟಿನ ಹೊರಗೂ ಕತ್ತು ಚಾಚಿದರೆ ಮೂರಕ್ಷರ ಹ್ರಸ್ವ ರೂಪಗಳ ಬೃಹತ್ ಲೋಕವೇ ತೆರೆದುಕೊಳ್ಳುತ್ತದೆ. ಇವೆಲ್ಲ ನಿಮಗೂ ಅತ್ಯಂತ
ಪರಿಚಿತವಾದವುಗಳೇ, ನೀವು ಆ ದೃಷ್ಟಿಕೋನದಿಂದ ಗಮನಿಸಿರುವುದಿಲ್ಲ ಅಷ್ಟೇ.

ಇಲ್ಲೊಂದಿಷ್ಟು ಪೂರ್ಣ ರೂಪಗಳನ್ನು ಯಾದೃಚ್ಛಿಕವಾಗಿ ಪಟ್ಟಿ ಮಾಡಿದ್ದೇನೆ. ಇವುಗಳ ಮೂರಕ್ಷರ ಹ್ರಸ್ವ ರೂಪ ಕಂಡುಕೊಂಡು ಅಬ್ಬಾ ನಮ್ಮ ನಿತ್ಯಬಳಕೆಯಲ್ಲೇ ಎಷ್ಟೊಂದಿವೆ ಎಂದು ಬೇಕಿದ್ದರೆ ಬೆರಗಾಗಿ: ಹಿಸ್ ಮಾಸ್ಟರ್ಸ್ ವಾಯ್ಸ್, ಬ್ರಿಟಿಷ್ ಫಿಸಿಕಲ್ ಲ್ಯಾಬೊರೇಟರೀಸ್, ಶ್ರೀಪತಿ ಪಂಡಿತಾರಾಧ್ಯ ಬಾಲಸುಬ್ರಹ್ಮಣ್ಯಂ, ಪ್ರತಿವಾದಿ ಭಯಂಕರ ಶ್ರೀನಿವಾಸ್, ಮದ್ರಾಸ್ ರಬ್ಬರ್ ಫ್ಯಾಕ್ಟರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಟೊಮೇಟೆಡ್ ಟೆಲ್ಲರ್ ಮೆಷಿನ್, ಪರ್ಸನಲ್
ಐಡೆಂಟಿಫಿಕೇಷನ್ ನಂಬರ್, ಸಬ್‌ಸ್ಕ್ರೈಬರ್ ಐಡೆಂಟಿಟಿ ಮಾಡ್ಯುಲ್, ಲೈಫ್ ಇನ್ಸುರೆನ್ಸ್ ಕಾರ್ಪೊರೇಷನ್, ಡೈಕ್ಲೋರೋ ಡೈಫಿನೈಲ್ ಟ್ರೈಕ್ಲೋರೋಇಥೇನ್,
ಡಿಜಿಟಲ್ ವಿಡಿಯೋ ಡಿಸ್ಕ್, ಡಾಲ್ಸೆ ಹಿಲ್‌ಬ್ಲೊಮ್ ಲಿನ್, ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಮಷಿನ್ಸ್, ತಿರುಕ್ಕುರುಂಗುಡಿ ವೆಂಗರಾಮ ಸುಂದರಮ್, ತಿರು ವೆಲ್ಲೋರ್ ತಟ್ಟೈ ಕೃಷ್ಣಮಾಚಾರಿ, ಮೆಂಬರ್ ಆಫ್ ಲೆಜಿಸ್ಲೆಟಿವ್ ಅಸೆಂಬ್ಲಿ, ವೆರಿ ಇಂಪಾರ್ಟೆಂಟ್ ಪರ್ಸನ್, ಟೆಲಿವಿಷನ್ ರೇಟಿಂಗ್ ಪಾಯಿಂಟ್, ಪೊಲಿವಿನೈಲ್‌ ಕ್ಲೋರೈಡ್, ಜೋಸೆಫ್ ಸಿರಿಲ್ ಬ್ಯಾಮ್ ಫೋರ್ಡ್, ನ್ಯಾಷನಲ್ ಕ್ಯಾಡೆಟ್ ಕೋರ್, ವಾಲ್ಯೂ ಆಡೆಡ್ ಟ್ಯಾಕ್ಸ್, ಲೈಟ್ ಎಮಿಟಿಂಗ್ ಡಯೋಡ್, ಪೋರ್ಟೆಬಲ್ ಡಾಕ್ಯುಮೆಂಟ್ ಫಾರ್ಮಾಟ್, ಜಾಯಿಂಟ್ ಫೋಟೊಗ್ರಾಫಿಕ್ ಗ್ರೂಪ್, ವರ್ಲ್ಡ್ ವೈಡ್ ವೆಬ್, ಆಲ್ ಇಂಡಿಯಾ ರೇಡಿಯೊ, ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊ ರೇಷನ್, ಕೇಬಲ್ ನ್ಯೂಸ್ ನೆಟ್‌ವರ್ಕ್, ಇಂಟೆನ್ಸಿವ್ ಕೇರ್ ಯುನಿಟ್, ರೆಸ್ಟ್ ಇನ್ ಪೀಸ್.

ನೋಡಿದಿರಾ! ಇವೆಲ್ಲ ಮೂರಕ್ಷರ ಹ್ರಸ್ವ ರೂಪಗಳು ನಮ್ಮ ಬದುಕಲ್ಲಿ ಇಷ್ಟೊಂದು ಹಾಸುಹೊಕ್ಕಿವೆಯಾದರೆ ‘ಬಾಕಾಹು’ ಎಂಬ ಅಚ್ಚಕನ್ನಡ ಪದಗಳ ಹ್ರಸ್ವ ರೂಪಕ್ಕೆ, ಅದೂ ರುಚಿರುಚಿಯಾದ ತಿನಿಸುಗಳನ್ನು ತಯಾರಿಸಲು ಬಳಕೆಯಾಗುವ ಖಾದ್ಯಪದಾರ್ಥದ ಹೆಸರಿಗೆ, ಅಂತಾರಾಷ್ಟ್ರೀಯ ಖ್ಯಾತಿ, ಮನ್ನಣೆ ಸಿಗಬೇಕಾದ್ದೇ!

ಕೊನೆಯಲ್ಲಿ, ‘ಕುವೆಂಪು’ ಮೂರಕ್ಷರ ಹ್ರಸ್ವ ರೂಪದ ಬಗ್ಗೆ ಒಂದು ಇಂಟೆರೆಸ್ಟಿಂಗ್ ವಿಚಾರ. ‘ಕುವೆಂಪು! ಏನಿಂಪು! ಎನಿತು ಪೆಂಪು! ಕನ್ನಡದ ಕಂಪು!’ ಎಂದು ಕುವೆಂಪು ಅವರೇ ತಮ್ಮದೊಂದು ಕವಿತೆಯಲ್ಲಿ (ಸ್ವರ್ಗದ್ವಾರದಿ ರಸಪ್ರಶ್ನೆ) ಬರೆದುಕೊಂಡಿದ್ದಾರೆ. ಕುವೆಂಪು ಎಂದೊಡನೆ ಮನಸ್ಸಲ್ಲಿ ಕನ್ನಡದ ಕಂಪು ಸುಳಿಯುವು ದಂತೂ ಹೌದೇಹೌದು. ಮೂಲತಃ ಮೈಸೂರಿನವರಾದ ಅಮೆರಿಕನ್ನಡಿಗ ದಂಪತಿ ಸವಿತಾ-ರವಿಶಂಕರ್ ಅವರ ಕಾರಿನ ನಂಬರ್‌ಪ್ಲೇಟ್ KUVEMPU ಎಂದೇ ಇಟ್ಟುಕೊಂಡಿದ್ದಾರೆ. ಇಲ್ಲಿ ಅಮೆರಿಕದಲ್ಲಿ ಇಂಗ್ಲಿಷ್‌ನಲ್ಲಿ ಏಳಕ್ಷರದಳೊಳಗಿನ ಯಾವುದೇ ಅಕ್ಷರ ಜೋಡಣೆಯನ್ನು ಕಾರಿನ ನಂಬರ್ ಪ್ಲೇಟ್ ಎಂದು ನೊಂದಾ ಯಿಸುವ ಸೌಲಭ್ಯ ಇದೆ. ಕುವೆಂಪು ಎಂಬ ಕನ್ನಡದ ರಕ್ಷರ ಹ್ರಸ್ವ ರೂಪವನ್ನೇ ಇಂಗ್ಲಿಷ್‌ನ ಏಳಕ್ಷರಗಳಾಗಿಸಿ ಅಮೆರಿಕದಲ್ಲೂ ಕನ್ನಡದ ಕಂಪು ಹರಡಿದ ರೀತಿಯಿದು!