ಆರತಿ ಘಟಿಕಾರ್
ಈ ವಿಷಲ್ ಲೆಕ್ಕ ಇಡೋದಂದ್ರೆ ಸಿಕ್ಕಾಪಟ್ಟೆ ಪ್ರೆಶರ್ ಆಗುತ್ತೆ ಕಣೆ, ಅದಕ್ಕೆ ಇರಬೇಕು ಇದನ್ನ ಪ್ರೆಶರ್ ಕುಕ್ಕರ್ ಅನ್ನೋದು! – ಯಜಮಾನರ ಉವಾಚ.
ಭಾನುವಾರ ನಮ್ಮ ಮನೆಗೆ ಆಗಮಿಸಿಲಿದ್ದ ಅಪರೂಪದ ನೆಂಟರ ಊಟೋಪಚಾರಕ್ಕೆ ಅಣಿ ಮಾಡುತ್ತಿದ್ದೆ. ವಿಶೇಷ ಅಡುಗೆಗೆ ನಮ್ಮ ಒಡನಾಡಿಯಾಗಿ ಇಪ್ಪತ್ತು ಸಂವತ್ಸರಗಳನ್ನು ಸೆವಿಸಿದ ಗಟ್ಟಿ ಮುಟ್ಟಾದ ಎಂತಾ ಪ್ರೆಶರಿನಲ್ಲೂ ಕೆಲಸ ಮಾಡುವ ನನ್ನ ಸ್ಟೀಲ್ ಕುಕ್ಕರಣ್ಣನ ಮೇಲೆಯೇ ನನ್ನ ಅಪಾರ ನಂಬಿಕೆ. ಅಲೂಗಡ್ಡೆ ಯನ್ನು ಹದವಾಗಿ, ಎಂಥಾ ಬೇಳೆಯಿದ್ದರ ಮೆದುವಾಗಿ ಬೇಯಿಸುವ ಪ್ರತಿಭೆಯಿರುವ ನಮ್ಮ ಕುಕ್ಕರ್ ಅಂದು ಮೌನವೃತ ಕೈಗೊಂಡಂತೆ (ಸೀಟಿ ಹೊಡೆಯದೆ ) ತಟಸ್ಥವಾಗಿ ಕೂತಾಗ ಅದರ ಗ್ಯಾಸ್ಕೆಟ್ ಸರಿ ಪಡಿಸಿ, ನೆತ್ತಿಯ ಮೇಲೆ ಮೊಟಕಿ, ಪುಟಾಣಿ ವೈಟನ್ನು ಮೇಲೆತ್ತಿ ಬಸ್ಕಿ ಹೊಡೆಸಿ ಪರೀಕ್ಷಿಸುವ ಪ್ರಥಮ ಚಿಕಿತ್ಸೆಗಳೆಲ್ಲ ಮಾಡಿ ಹೊರ ಬಂದಿದ್ದಷ್ಟೇ.
ಹಾವಿನಂತೆ ಬುಸ್ಸ್ ಎನ್ನುವ ಜೋರಾದ ಶಬ್ದ ಸ್ಫೋಟವಾಗಿ ಸುರಕ್ಷತಾ ವಾಲ್ವಿನ ಜೊತೆಗೆ ಒಳಗಿಟ್ಟ ಬೇಳೆ ಅನ್ನಗಳೂ ಸಹ ಎಗರಿ ಸೂರು ಮುಟ್ಟಿದ್ದವು ! ಈ ಮಹಾ ಸೋಟಕ್ಕೆ ಅಡುಗೆ ಮನೆಯೆಲ್ಲ ಚಪಿಲ್ಲಿಯಾಗಿ ನಮ್ಮ ಮೂಡು ಸಹ ಎಕ್ಕುಟ್ಟ ಹೋಗಿ, ಅತಿಥಿ ಸತ್ಕಾರ ಹೋಟೆಲ್ ಮಾವನ ಮನೆಯ ನಡೆದು ನಮ್ಮ ಕುಕ್ಕರ್ ಮಹಾಶಯ ಪಾಪ ಕೆಲಕಾಲ ಐಸಿಯು ಚಿಕೆತ್ಸೆ ಪಡೆದು ಹೊಸ ಅಂಗಾಗಗಳೊಡನೆ ಮನೆಗೆ ಆಮಿಸಿದ್ದ. ಏನೇ ಅನ್ನಿ ಗೃಹಿಣಿಯರಿಗೂ ಕುಕ್ಕರಿಗೂ ಅವಿನಾಭಾವ ಸಂಬಂಧ ಬೆಸೆದುಕೊಂಡಿರುತ್ತದೆ. ಎಷ್ಟು ಕಾಲ ಜೊತೆಗಿದ್ದರೂ ಅರಿತೆವೇನು ನಮ್ಮ ಅಂತರಾಳವ? ಎಂಬ ಕವಿವಾಣಿ ಒಂದು ಕಡೆಯಾದರೆ ತಮ್ಮ ಪತಿರಾಯರ ಸ್ವಭಾವಗಳನ್ನು ಅರ್ಥ ಮಾಡಿಕೊಳ್ಳು ತ್ತಾರೋ ಬಿಡುತ್ತಾರೊ ತಮ್ಮನೆಯ ಕುಕ್ಕರಿನ ಸ್ವಭಾವ ವರ್ತನೆಗಳನ್ನು ಮಾತ್ರ ಚೆನ್ನಾಗಿ ಅರಿತವರಾಗಿ ರುತ್ತಾರೆ. ಕೆಲವು ಕುಕ್ಕರ್ಗಳು ಇಟ್ಟ ಕೂಡಲೇ ಏಳರಲ್ಲಿ ಹುಟ್ಟಿದವರಂತೆ ಗಡಿಬಿಡಿಯಿಂದ ಸೀಟಿ ಹೊಡೆಯಲು ಆರಂಭಿಸಿ ಬಿಡುತ್ತವೆ!
ಸಮಾಜದಲ್ಲಿ ಇಂಥಾ ಮನಸ್ಸಿನ ವ್ಯಕ್ತಿಗಳನ್ನು ನಾವು ಗಮನಿಸಿರುತ್ತೇವೆ . ಒಳಗಿನದು ಬೇಯದೆ ಹಸಿಬಿಸಿಯಾದರೂ ತನಗೆಲ್ಲ ಗೊತ್ತಿದೆ ಎನ್ನುವ ಅಹಮ್ಮಿನದೆ ಹಾರಾಟ/ಕೂಗಾಟ!
ಕಿಲಾಡಿಯಂತೆ ಸೀಟಿ
ಮತ್ತೆ ಕೆಲವು ನಮೂನಿಗಳು ಒಳಗಿನ ಪದಾರ್ಥ ಏನೇ ಇರಲಿ ತಾಳ್ಮೆಯಿಂದ ಗಂಟೆಗಟ್ಟಲೆ ನುಣ್ಣಗೆ ಬೇಯಿಸುತ್ತಾ ಕೂರುವ ಸಹನಾಮೂರ್ತಿಗಳಾಗಿರುತ್ತವೆ ! ಇನ್ನು ಕೆಲವು ರಸಿಕ ಶಿಕಾಮಣಿಗಳು, ಮೆಲ್ಲಗೆ ರಾಗವಾಗಿ ಸೀಟಿ ಹೊಡೆದು ಮನೆಯೊಡತಿಯನ್ನು ಪ್ರೀತಿಯಿಂದ ಕರೆಯುವಂತವು. ಹಂತ ಹಂತವಾಗಿ ವಿಷಲ್ ದ್ವನಿಯನ್ನು ಏರಿಸುತ್ತಾ ಕ್ಲೈಮಾಕ್ಸ್ ಹಂತಕ್ಕೆ ತಲುಪಿ ಗೃಹಿಣಿಯರು ಏನೇ ಮಾಡುತ್ತಿದ್ದರೂ ಸೂಪರ್ ಸ್ಪೀಡಿನಲ್ಲಿ ಓಡಿ ಬರುವಂತೆ ಮಾಡುವವು ಇನ್ನು
ಕೆಲವು ಕಿಲಾಡಿಗಳು! ಹಾಗಾಗಿ ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ವಾ ಎಂಬುದು ಅವರವರ ಮನೆಯ ಕುಕ್ಕರ್ ವಿಷಯಕ್ಕೂ ವೇದ್ಯವಾಗುವ ವಿಚಾರವೆ ಬಿಡಿ ! ಇನ್ನು ಇತ್ತೀಚಿಗೆ ವಿಷಲ್ ಹೊಡೆಯದೆ ನಿಶಬ್ದವಾಗಿ ಕೆಲಸ ಮುಗಿಸುವ ಕುಕ್ಕರ್ಗಳೂ ಸಹ ಮಾರುಕಟ್ಟೆಗೆ ಬಂದಿವೆಯಂತೆ.
ನಾನು ಸಹ ಮದುವೆ ಹೊಸದರಲ್ಲಿ ಕುಕ್ಕರಿನಲ್ಲಿ ಬರಿ ಅನ್ನ ಮಾಡಲು ಕಲಿತ ಅನ್ನಪೂರ್ಣೆಶ್ವರಿಯೆ ಆಗಿದ್ದೆ. ಕಾಲಕ್ರಮೇಣ ದಕ್ಷಿಣ, ಉತ್ತರ ಭಾರತೀಯರಾದಿಯಾಗಿ ನಾನಾ ಹೊಸರುಚಿಗಳಲ್ಲಿ ಪರಿಣಿತಳಾಗಿದ್ದು, ಇದಕ್ಕೆಲ್ಲ ನನ್ನ ಆಸಕ್ತಿ ಪರಿಶ್ರಮಕ್ಕಿಂತಲೂ ಮಗರಾಯನ ಜಿವ್ಹಾ ಚಾಪಲ್ಯವೇ ಕಾರಣ ಎನ್ನಬಹುದು. ಒಮ್ಮೊಮ್ಮೆ ಪುಳಿಯೋಗರೆ ಚಿತ್ರಾನ್ನಗಳಿಗಾಗಿ ಉದುರುದುರಾಗಿ ಅನ್ನ ಮಾಡಿಕೊಳ್ಳುಬೇಕು ಎಂದಾಗ ಅಂದೆ ಸರಿಯಾಗಿ ಮೆತ್ತಗೆ ಬಾಣಂತಿ ಅನ್ನದಂತೆ ಮುದ್ದೆಯಾಗಿ ಅದರ
ದೋಷವನ್ನೂ ಪಾಪ ನಮ್ಮ ಕುಕ್ಕರೇ ಹೊತ್ತುಕೊಳ್ಳುತ್ತದೆ! ಯಜಮಾನರು ಪರೀಕ್ಷಕ ದೃಷ್ಟಿ ಬೀರುತ್ತ ಈ ಅನ್ನವನ್ನು ಮುದ್ದೆ ತಿರುವಿದಂತೆ ಗೊಟಾಯಿಸಿ ‘ಎಲ್ಲರಿಗೂ ಒಂದೊಂದು ಮುz ತಟ್ಟೆಯಲ್ಲಿ ಹಾಕಿಬಿಡು ಮಾರಾಯ್ತಿ’ ಎಂದು ರೇಗಿಸುವುದು ತಪ್ಪಿದ್ದಲ್ಲ !
ಹಾಗಾಗಿ ಕುಕ್ಕರ್ ಇಡುವುದರಲ್ಲೂ ಸಹ ಗೃಹಿಣಿಯರ ಜಾಣ್ಮೆ, ನಿಪುಣತೆ ಮೆರೆದು ಅನ್ನಕ್ಕಿಡುವಾಗ (ಹೊಸಾ ಅಕ್ಕಿ , ಹಳೆ ಅಕ್ಕಿಗಳಿಗನುಗುಣವಾಗಿ) ಸರಿಯಾದ
ಪ್ರಮಾಣದಲ್ಲಿ ನೀರು, ಬೇಳೆ ನುಣ್ಣಗಾಗಲು ಚಿಟಿಕೆ ಅರಿಶಿನ ಎಣ್ಣೆಗಳನ್ನು ಮರೆಯದೆ ಒಟ್ಟಿನಲ್ಲಿ ಮನೆ ಮಂದಿಗೆಲ್ಲ ಬಿಸಿಬಿಸಿ ಅನ್ನ ತುಪ್ಪ , ಘಮಘಮಿಸುವ ಹುಳಿ/ಕೂಟು ತಿಳಿ ಸಾರು ತೊವ್ವೆಗಳನ್ನು ರುಚಿಯಾಗಿ ಮಾಡಿ ಬಡಿಸುತ್ತಾಳೆ.
ಇನ್ನು ಒಮ್ಮೊಮ್ಮೆ ಪಲ್ಯಕ್ಕೆ ಅಲೂಗಡ್ಡೆ ಬೀಟುರೂಟುಗಳನ್ನೂ ಬೇಯಿಸಿಕೊಳ್ಳಬೇಕಿದಲ್ಲಿ ಎಲ್ಲವನ್ನೂ ಒಂದೇ ಬಾರಿ ಕೂಗಿಸಿ ನನ್ನ ಅಮೂಲ್ಯ ಸಮಯವನ್ನು ಉಳಿಸಿಕೊಳ್ಳುವ ಹಪಹಪಿ ಯಲ್ಲಿ ‘ವಸುದೈವ ಕುಟುಂಬಕಂ ’ ಎಂದು ಅನ್ನ- ಬೇಳೆಗಳ ಜೊತೆಗೆ ನಾನಾ ಪಾತ್ರೆಯಲ್ಲಿ ಇವುಗಳನ್ನೂ ಅಡ್ಜಸ್ಟ್ ಮಾಡಿಸಿ
ಕುಕ್ಕರ್ ಬಾಯಿ ಮುಚ್ಚಿಸುವ ನನ್ನ ತಂತ್ರಗಾರಿಕೆಯ ಸಾಹಸಗಾಥೆ ಅಷ್ಟಿಷ್ಟಲ್ಲ !
ಮೈಮರೆತರೆ ಮುದ್ದೆ
ಕುಕ್ಕರ್ ಇಟ್ಟು ನಾವುಗಳು ಮೈ ಮರೆಯುವ ಹಾಗಿಲ್ಲ. ಏನೇ ಕೆಲಸ ಮಾಡುತ್ತಿದ್ದರೂ ವಿಷಲ್ ಕಡೆ ಜಾಗ್ರತೆಯಾಗಿ ಕಿವಿ ಹರಿ ಬಿಡುತ್ತಲೇ ಒಳಗಿರುವ ಪದಾರ್ಥಗಳ ಮೇರೆಗೆ ಅರ್ಥಾತ್ ಪುಲಾವಿಗಾದರೆ ಎರಡು, ಚೋಲೆ ರಾಜಮಾ ಇತರ ಗಟ್ಟಿ ಪದಾರ್ಥಕ್ಕಾದರೆ ಐದು, ಮಾಮೂಲಿ ಅನ್ನ ಬೇಳೆಗಾದರೆ ಮೂರು ಎಂದೆಲ್ಲ ಸೀಟಿಗಳ ಲೆಕ್ಕಚಾರ ನಮ್ಮದು. (ನಮ್ಮ ಕುಕ್ಕರ್ ಮಹಾಶಯ ಮೂರು ವಿಷಲ್ ಹೊಡೆದರೂ ಮತ್ತೆ ಐದು ನಿಮಿಷ ಸಣ್ಣ ಉರಿಯಲ್ಲಿ ಅಂಡು ಕಾಯಿಸ್ಕೊಂಡೆ ಒಲೆಯಿಂದ ಇಳಿಯುವವ).
‘ರೀ ಕುಕ್ಕರ್ ಇಟ್ಟಿದ್ದೀನಿ, ಮೂರು ಸೀಟಿ ಹೊಡೆದ ಮೇಲೆ ಆಫ್ ಮಾಡಿ’ ಎಂದು ನಾವುಗಳು ಒಮ್ಮೊಮ್ಮೆ ಯಾವುದೋ ಕೆಲಸದಲ್ಲಿ ಬ್ಯುಸಿಯಾಗಿ ಯಜಮಾನರಿಗೆ ತಾಕೀತು ಮಾಡಿದ್ದೆಯಾದರೆ, ಗಮನವಿಟ್ಟು ಮೂರು ವಿಷಲ್ ಆದ ತಕ್ಷಣ ಒಲೆ ಆರಿಸಿದ ಪತಿ ಮಹಾಶಯರ ದಾಖಲೆ ವಿರಳವೇ ಬಿಡಿ! ಕುಕ್ಕರ್ ಮಹಾಶಯನೂ ಪಾಪ ಕೂಗಿ ಕೂಗಿ ಸುಸ್ತಾಗಿ ಮನೆಯಾಕೆಯೇ ರೇಗುತ್ತ ಬಂದು ಆಫ್ ಮಾಡುವ ಉದಾಹರಣೆಗಳೇ ಹೆಚ್ಚು.
‘ಈ ವಿಷಲ್ ಲೆಕ್ಕ ಇಡೋದಂದ್ರೆ ಸಿಕ್ಕಾಪಟ್ಟೆ ಪ್ರೆಶರ್ ಆಗುತ್ತೆ ಕಣೆ, ಅದಕ್ಕೆ ಇರಬೇಕು ಇದನ್ನ ಪ್ರೆಶರ್ ಕುಕ್ಕರ್ ಅನ್ನೋದು’ ಯಜಮಾನರು ನಗಾಡುತ್ತ
ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುವಾಗ ‘ಆಹಾಹಾ ! ಟೀವಿಯಲ್ಲಿ ಚೆನ್ನೈ ಸೂರ್ಪ ಕಿಂಗ್ಸ್ ಹೈಕಳು ‘ವಿಸಲ್ ಪೋಡು’ ಎಂದರೆ ಸಾಕು ಎಷ್ಟು ಬೇಕಾದರೂ ಹೊಡೀತೀರಿ, ಆದರೆ ನಮ್ಮ ಮನೆಯ ವಿಷಲ್ ಲೆಕ್ಕ ಗಮನವೇ ಇರೋದಿಲ್ಲ ನಿಮಗೆ’ ಎಂದು ಕ್ರಿಕೆಟ್ ಕ್ರೇಜಿ ಯಜಮಾನರಿಗೆ ನಾನು ಟಾಂಗ್ ಕೊಡುವುದು ಮಾಮೂಲು !
ತವರಿಗೆ ಹೋದಾಗ
ನಮ್ಮ ಮದುವೆಯಾದ ಹೊಸತರಲ್ಲಿ ಪತಿರಾಯರು ಕುಕ್ಕರ್ ಇಟ್ಟ ನಗೆ ಪ್ರಸಂಗವೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇ ಬೇಕು. ಹಬ್ಬಕ್ಕೆಂದು ತವರಿಗೆ ಹೋದಾಗ ಯಜಮಾನರು ಫೋನಿನಲ್ಲಿ ’ನೋಡು ಇವತ್ತು ನಾನೇ ಕುಕ್ಕರ್ ಇಟ್ಟಿದ್ದೀನಿ. ಅನ್ನಾ ಸಾರು ಪಲ್ಯಾ ಎಲ್ಲ ಮಾದ್ಬಿಡ್ತ್ತೀನಿ ! ಅದಕ್ಕೆ ಒಂದೇ ಪಾತ್ರೆಯಲ್ಲಿ ಅಕ್ಕಿ ಬೇಳೆ ಹುರಳಿಕಾಯಿ ಎಲ್ಲಾ ಇಟ್ಟು ಮೂರು ಸೀಟಿ ಕೂಗಿಸಿ ಬಿಟ್ಟೆ’ ಉತ್ಸಾಹದಲ್ಲಿ ಹೇಳಿಕೊಂಡಾಗ ನನಗಂತೂ ಉರುಳಿ ಬಿದ್ದು ನಗುವಂತಾಗಿತ್ತು ! ‘ಹಾಗಿದ್ರೆ ಬಿಸಿ ಬೇಳೆಬಾತ್ ಮಾಡ್ಬಿಡಿ ಮಾರಾಯರೇ’ ಎಂದು ರೇಗಿಸಿದ್ದೆ.
ಏನೇ ಅನ್ನಿ, ಈ ಕುಕ್ಕರ್ ಪುರಾಣವನ್ನು ಕುಕ್ಕರ್ಗಾಲಿನಲ್ಲಿ ರನ್ನಿಂಗ್ ರೇಸಿಗೆ ಕೂತ ಭಂಗಿಯಲ್ಲಿ ಕೇಳಿಸಿಕೊಳ್ಳದೆ ಸುಖಾಸೀನರಾಗಿ ತಾಳ್ಮೆಯಿಂದ ಆಲಿಸಿ ಅನ್ನಪೂರ್ಣೆಶ್ವರಿಯ ಕೃಪೆಗೆ ಪಾತ್ರರಾಗಿ ಎನ್ನುವೆ.