ಗ.ನಾ.ಭಟ್ಟ
ಶ್ರೀಕೃಷ್ಣ ಮಹಾನ್ ವ್ಯಕ್ತಿತ್ವ ಹೊಂದಿದ್ದ ಇತಿಹಾಸ ಪುರುಷನಾಗಿ ಖ್ಯಾತನಾಗಿದ್ದು ಹೇಗೆ ಎಂಬುದರ ಕುರಿತು ಸಾಕಷ್ಟು ಚರ್ಚೆಗಳಾಗಿವೆ, ಜಿಜ್ಞಾಸೆಗಳಾಗಿವೆ.
ಪ್ರಬಲ ರಾಜನಾಗಿದ್ದ ದುರ್ಯೋದನನು ಶ್ರೀಕೃಷ್ಣನ ಮನವೊಲಿಸಲು, ಆತನ ಬೆಂಬಲ ಪಡೆಯಲು ನಾನಾ ರೀತಿಯ ಕಸರತ್ತುಗಳನ್ನು ಮಾಡಿದ್ದ. ಅಪಾರ
ಪ್ರಮಾಣದ ಚಿನ್ನ, ಬಟ್ಟೆ, ಸಂಪತ್ತನ್ನು ನೀಡಲು ಮುಂದಾಗಿದ್ದ, ಉತ್ತಮ ವಸತಿ ಸ್ಥಳವನ್ನು ಕೊಡುಗೆಯಾಗಿ ನೀಡಲು ತುದಿಗಾಲಲ್ಲಿ ನಿಂತಿದ್ದ. ಆದರೆ, ಶ್ರೀಕೃಷ್ಣನ ನಿಲುವು ಸ್ಪಷ್ಟವಿತ್ತು. ತಾನು ಪಾಂಡವರ ಪರವಾಗಿರುವುದರಿಂದ, ಪಾಂಡವರ ವೈರಿ ನೀಡಲು ಮುಂದಾಗಿರುವ ಇವೆಲ್ಲವನ್ನೂ ಸ್ವೀಕರಿಸುವುದು ಸರಿಯಲ್ಲ ಎಂದು ನೇರವಾಗಿ ದುರ್ಯೋದನನಿಗೆ ಹೇಳಿ, ಅಪಾರ ಸಂಪತ್ತನ್ನು ತಿರಸ್ಕರಿಸಿದ. ಇಂತಹ ಮನೋಭಾವ ಹೊಂದಿದ್ದರಿಂದಲೇ ಶ್ರೀಕೃಷ್ಣನನ್ನು ಇಂದು ನಾವು
ಪೂಜಿಸುತ್ತಿದ್ದೇವೆ, ಗೌರವಿಸುತ್ತಿದ್ದೇವೆ. ಕೃಷ್ಣನ ಆದರ್ಶ ನಡೆ ನುಡಿಗಳ ಹಿನ್ನೆಲೆಯಲ್ಲಿ, ಇಂದಿನ ಸಮಾಜವು ಲಂಚ, ಆಮಿಷಕ್ಕೆ ಒಳಗಾಗುವ ಹೀನ ಪರಿಯನ್ನು ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.
ಎಪ್ಪತ್ತರ ದಶಕದಲ್ಲಿ ಮಾಸ್ಟರ್ ಹಿರಣ್ಣಯ್ಯನವರು ಲಂಚಾವತಾರ ಎಂಬ ನಾಟಕವನ್ನು ಮಾಡುತ್ತಿದ್ದರು. ದೇಶದಲ್ಲಿ ತಾಂಡವವಾಡುತ್ತಿದ್ದ ಲಂಚವನ್ನು ಕುರಿತು ಅತ್ಯಂತ ಮಾರ್ಮಿಕವಾಗಿ ಅವರು ವಿಡಂಬಿಸುತ್ತಿದ್ದರು. ಆ ನಾಟಕವನ್ನು ನೋಡುವುದಕ್ಕಾಗಿಯೇ ಜನ ಮುಗಿಬೀಳುತ್ತಿದ್ದರು. ಅವರು ವಿಡಂಬಿಸಿದ ಮಾತ್ರಕ್ಕೆ ಲಂಚ ವೇನೂ ಹೋಗಲಿಲ್ಲ. ಸರಕಾರಿ ಕಛೇರಿಗಳು ಲಂಚ ತಿನ್ನುವುದನ್ನು ಬಿಡಲಿಲ್ಲ. ಆಗಿನ ಮಾತು ಇರಲಿ. ಅದು ಈಗಲೂ ಇನ್ನೂ ವಿಜೃಂಭಿಸುತ್ತಲೇ ಇದೆ. ಅದರ ಅವತಾರಕ್ಕೂ ಕೊನೆಯಿಲ್ಲ. ದಿನದಿಂದ ದಿನಕ್ಕೆ ಅದು ಬೆಳೆಯುತ್ತಲೇ ಇದೆ.
ಹೊರತು ಕಡಿಮೆಯಾಗಿಲ್ಲ. ಲಂಚವಿಲ್ಲದೆ ಸರಕಾರಿ ಕೆಲಸಗಳು ಒಂದಂಗುಲವೂ ಮುಂದೆ ಹೋಗುವುದಿಲ್ಲ. ಜನರೂ ಗತ್ಯಂತರವಿಲ್ಲದೆ ಅದಕ್ಕೆ ಹೊಂದಿಕೊಂಡುಬಿಟ್ಟಿದ್ದಾರೆ. ಹೊಂದಿಕೊಳ್ಳದಿದ್ದರೆ ಕೆಲಸವೇ ಆಗುವುದಿಲ್ಲ. ಲಂಚಾವತಾರದ ವಿಶ್ವರೂಪ ವರ್ಣಿಸಲಸಾಧ್ಯವಾದುದು. ಅಂದು ಮಾಹಾಭಾರತದ ಕಾಲದಲ್ಲಿ ಕೌರವರು ಕೃಷ್ಣನಿಗೆ ಲಂಚ ಕೊಡುವುದಕ್ಕೆ ಅಂತ ಬಂದಾಗ ಕೃಷ್ಣ ಅದನ್ನು ಸ್ವೀಕರಿಸದೇ ಜಗತ್ತಿಗೆ ಹೇಗೆ ಮಾದರಿಯಾದ, ಅದು ನಮಗೆ ಹೇಗೆ ಅನುಸಂಧೇಯ ಅನ್ನುವುದನ್ನು ಮೆಲುಕು ಹಾಕುವುದಕ್ಕಾಗಿ ಈ ಸಲದ ಕೃಷ್ಣಜನ್ಮಾಷ್ಟಮಿಗೆ ಈ ಲೇಖನ ಬರೆಯುತ್ತಿದ್ದೇನೆ.
ಅಂದು ಲಂಚ ಅನ್ನುವುದು ಕ್ಯಾಷ್ ರೂಪದಲ್ಲಿ ಇರದೆ ಕೈಂಡ್ ಎಂಬ ರೂಪದಲ್ಲಿ, ವಿವಿಧ ವಸ್ತು-ಪದಾರ್ಥಗಳ ರೂಪದಲ್ಲಿ ಇತ್ತು ಅನ್ನುವುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳ ಬೇಕು. ನಮಗೆ ಗೊತ್ತಿಲ್ಲದೆ ಅಥವಾ ಯಾರೋ ಹೇಳಿದ್ದನ್ನು ಕೇಳಿಕೊಂಡು, ಯುಕ್ತಾಯುಕ್ತ ವಿವೇಚನೆ ಮಾಡದೆ, ಸ್ವತಂತ್ರದೃಷ್ಟಿಯಿಂದ ನೋಡದೆ, ಇಂದು ನಾವು ಯಾವ ಭೀಷ್ಮ ದ್ರೋಣರನ್ನು ಗ್ರೇಟ್ ಅಂತ ಕರೆಯುತ್ತೇವೋ ಅಂತಹ ಭೀಷ್ಮ, ದ್ರೋಣರೇ ದುರ್ಯೋಧನನ ಎಂಜಲು ಕಾಸಿಗೆ ಕೈನೀಡಿದ್ದರು ಎಂದರೆ ನಮ್ಮ ಎದೆ ಒಡೆಯುತ್ತದೆ. ಅವರು ನೇರ ಹಣದ ರೂಪದಲ್ಲಿ ಲಂಚವನ್ನು ಸ್ವೀಕರಿಸಿರಲಿಲ್ಲವಾಗಿತ್ತು. ಅದಕ್ಕೊಂದು ಉದಾಹರಣೆ ನೀಡಿದರೆ ಸ್ಪಷ್ಟವಾದೀತು! ಅದು ಭೀಷ್ಮನ ಬಾಯಲ್ಲೇ ಬಂದ ಮಾತು ಅದು.
ಭೀಷ್ಮನ ತಪ್ಪೊಪ್ಪಿಗೆ
ಸಂದರ್ಭ- ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಅರ್ಜುನನಿಗೆ ಗೀತೋಪದೇಶ ಎಲ್ಲಾ ಮುಗಿದು ಇನ್ನೇನು ಯುದ್ಧ ಆರಂಭವಾಗಬೇಕು! ಅಷ್ಟರಲ್ಲಿ ಧರ್ಮರಾಜ ರಥದಿಂದ ಕೆಳಗಿಳಿದು ವಿರೋಧಪಕ್ಷದವರ ಕಡೆಗೆ ನಡೆಯತೊಡಗಿದ. ಅರ್ಜುನ, ಕೃಷ್ಣ, ಭೀಮ, ಧೃಷ್ಟದ್ಯುಮ್ನ ಮೊದಲಾದವರು ಇವನೆಲ್ಲಿ ಮತ್ತೆ ಎಡವಟ್ಟು ಮಾಡಿಬಿಡುತ್ತಾನೋ ಎಂದು ಗಾಬರಿ ಯಾದರು. ಆದರೆ ಯುಧಿಷ್ಠಿರ ಅಂತಹದ್ದೇನೂ ಮಾಡಲಿಲ್ಲ. ಒಳ್ಳೆಯದನ್ನೇ ಮಾಡಿದ್ದ. ಭೀಷ್ಮದ್ರೋಣರ ನಿಜ ಬಣ್ಣವನ್ನು ಬಯಲಿಗೆಳೆದಿದ್ದ. ಹೋಗಿ ಭೀಷ್ಮರ ಪಾದಕ್ಕೆ ಬಿದ್ದು ‘ಅಜ್ಜ, ನೀವೇ ನಮ್ಮೊಡನೆ ಯುದ್ಧಕ್ಕೆ ಇಳಿದಿರಿ. ನಾವು ಮತ್ತೆ ವನವಾಸಕ್ಕೆ ಹೋಗಿಬಿಡುತ್ತೇವೆ.
ಅನುಮತಿ ಕೊಡಿ. ನಿಮ್ಮೆದುರು ನಿಂತು ಯುದ್ಧ ಮಾಡುವುದಕ್ಕಿಂತ ಇದು ವಾಸಿ’ ಆಂತ ಹೇಳಿದ. ಯುಧಿಷ್ಠಿರ ಹಾಗೆ ಹೇಳುತ್ತಿದ್ದಂತೆ ಭೀಷ್ಮನ ಎದೆ ಬಿರಿದು ಹೋಯ್ತು. ಆಗ ಭೀಷ್ಮನ ಬಾಯಿಂದ ಬಂದ ಮಾತು- ‘ಮಗು, ಯುದ್ಧದಲ್ಲಿ ನೀನೇ ಗೆಲ್ಲುತ್ತೀಯೆ. ನಾನು ಈ ಪಾಪಿಯ ಪಿಂಡವನ್ನು ತಿಂದಿದ್ದೇನೆ. ಅದರ ಋಣ ತೀರಿಸಬೇಕಿದೆ ನಾನು.
‘ಅರ್ಥಸ್ಯ ಪುರೊಷೋ ದಾಸಃ | ದಾಸಸ್ತ್ವರ್ಥೊ ನ ಕಸ್ಯ ಚಿತ್’, ಮನುಷ್ಯ ಹಣಕ್ಕೆ ದಾಸನಾಗುತ್ತಾನೆ. ಅದರ ಹೊರತಾಗಿ ಇನ್ನೇನೂ ಇಲ್ಲ’ ಅನ್ನುತ್ತಾನೆ. ಈ ಋಣದ ಭಾವ ಅವನಿಗೆ ಎಲ್ಲಿಯವರೆಗೆ ಇತ್ತು ಆಂದರೆ ಆತ ದ್ರೌಪದಿಯ ಮಾನಭಂಗಪ್ರಕರಣದಲ್ಲೂ ಅವನು ಸುಮ್ಮನೆ ಇರಬೇಕಾಯಿತು. ಅವನ ಮೌನ ಮಾಡಬಾರದ ಕೃತ್ಯಕ್ಕೆ ಬೆಂಬಲ ನೀಡಿತ್ತು. ಮುಂದೆ ಇದೇ ಮಾತನ್ನು ಯುಧಿಷ್ಠಿರ ವನವಾಸದಲ್ಲಿದ್ದಾಗ ಭೀಮಾರ್ಜುನರಿಗೆ ಹೇಳುತ್ತಾನೆ.
ಅವಶ್ಯಂ ರಾಜಪಿಂಡಸ್ತೈಃ ನಿರ್ವೇಶ್ಯ ಇತಿ ಮೇ ಮತಿಃ |
ದುರ್ಯೋಧನಹಿತೇ ಯುಕ್ತಾಃ ನ ತಥಾಸ್ಮಾಸು ಭಾರತ ||
ವನಪರ್ವ: 36-15
‘ಭೀಮಾರ್ಜುನರೇ, ಈ ಭೀಷ್ಮ, ದ್ರೋಣ, ಕೃಪ ಯಾರೂ ನಮ್ಮ ಕಡೆಗೆ ಬರುವುದಿಲ್ಲ. ಇವರೆಲ್ಲರೂ ದುರ್ಯೊಧನನ ಎಂಜಲು ಕಾಸಿಗೆ ಕೈ ಒಡ್ಡಿದವರು. ಅವನ ಉಪ್ಪಿನ ಋಣದಲ್ಲಿ ಬಿದ್ದವರು. ಅವನ ಪಿಂಡ ತಿಂದವರು. ದುರ್ಯೋಧನನ ಪಕ್ಷವನ್ನೇ ಎತ್ತಿಹಿಡಿಯುವವರು ಇವರು. ಸತ್ಯ, ಧರ್ಮ ನಮ್ಮ ಕಡೆಗೆ ಇದ್ದರೂ ಇವರು ನಮ್ಮನ್ನು ಬೆಂಬಲಿಸುವುದಿಲ್ಲ’ ಎಂದು ಹೇಳುತ್ತಾನೆ. ಧರ್ಮರಾಜ ಹೇಳಿದ್ದು ಇಂದಿನ ಭಾಷೆಯಲ್ಲಿ ಲಂಚ ಅಲ್ಲದೇ ಮತ್ತೇನು? ಅದು ಅಂದು ಮನ್ನಣೆ, ಗೌರವ, ವೃತ್ತಿ, ಬೆಂಬಲ, ಅನ್ನ, ಆಹಾರ, ವಸತಿಗಳ ಸೌಕರ್ಯ ಮೊದಲಾದ ರೂಪಗಳಲ್ಲಿ ಇದ್ದವು. ಈ ಲಂಚ ಅನ್ನವುದು ಅನಾದಿ. ಇದಕ್ಕೆ ಅಂತ್ಯವೇ ಇಲ್ಲ.
ಇನ್ನೊಂದು ಭಯಂಕರ ರೂಪದ ಲಂಚ ಇಲ್ಲಿದೆ ನೋಡಿ. ಕೃಷ್ಣ ಸಂಧಾನಕ್ಕೆ ಎಂದು ಹಸ್ತಿನಾವತಿಗೆ ಬಂದಿದ್ದಾನೆ. ಬಂದ ಆತ ಐದು ದಿನ ಅಲ್ಲಿರುತ್ತಾನೆ. ಆದರೆ ಒಂದು ದಿನವೂ ಆತ ದುರ್ಯೋಧನನ ಮನೆಗಾಗಲೀ, ಭೀಷ್ಮದ್ರೊಣರ ಮನೆಗಾಗಲೀ ಹೋಗುವುದಿಲ್ಲ. ಆತ ಹೋಗಿ ತಂಗಿದ್ದು ವಿದುರನ ಮನೆಯಲ್ಲಿ. ಅದು ಎಂತಹ ಔಚಿತ್ಯಪೂರ್ಣ ಆಯ್ಕೆ ಎಂದು ಕೃಷ್ಣನ ಬಗ್ಗೆ ಯೋಚಿಸಿದಾಗ ಕೃಷ್ಣ ಎಂತಹ ಲೋಕಾದರ್ಶ ವ್ಯಕ್ತಿಯಾಗಿದ್ದ ಅನ್ನವುದು ಅರಿವಿಗೆ ಬಾರದೆ ಇರುವುದಿಲ್ಲ. ವಿದುರನ ಮನೆಯ ಅನ್ನದ ಬಗ್ಗೆ ಅವನು ಹೇಳುವ ಮಾತು-‘ವಿದುರಾನ್ನಾನಿ ಬುಭುಜೇ ಶುಚೀನೀ ಗುಣವಂತಿ ಚ’- ‘ವಿದುರನ ಮನೆಯ ಅನ್ನ ಶುದ್ಧವೂ,
ಗುಣವತ್ತರವೂ ಆಗಿತ್ತು’. ಆ ಕಾಲದಲ್ಲಿ ವಿದುರ ಕೌರವನ ಅನ್ನದ ಋಣಕ್ಕೆ ಬಿದ್ದಿರಲಿಲ್ಲವಾಗಿತ್ತು.
ಹಾಗಾಗಿಯೇ ಆತ ಧೃತರಾಷ್ಟ್ರನಿಗೂ, ದುರ್ಯೋಧನನಿಗೂ, ಸಂದರ್ಭ ಬಂದರೆ ಭೀಷ್ಮನಿಗೂ ಕೂಡಾ ನೀತಿಯನ್ನೂ, ಧರ್ಮವನ್ನೂ ಹೇಳಬಲ್ಲವನಾಗಿದ್ದ. ಮಹಾ ನಿಷ್ಠುರವಾದಿಯಾಗಿದ್ದ. ಕೃಷ್ಣ ತಾನು ತಂಗುವುದಕ್ಕೆ ಅಂತಹವನ ಮನೆಯನ್ನು ಆಯ್ದುಕೊಂಡಿದ್ದು ಅವನ ಮುತ್ಸದ್ಧಿತನಕ್ಕೆ ಒಂದು ಸಾಕ್ಷಿಯಾಗುತ್ತದೆ.
ಕೃಷ್ಣ ತಿರಸ್ಕರಿಸಿದ ಸಂಪತ್ತು
ಐದು ದಿನಗಳಾದರೂ ಒಂದು ದಿನವೂ ಕೃಷ್ಣ ತನ್ನ ಮನೆಗೆ ಊಟಕ್ಕೆ ಬಾರದಿದ್ದುದನ್ನು ಯೋಚಿಸಿದ ದುರ್ಯೋಧನ ಷ್ಣನಿಗೆ ವಸ್ತುರೂಪದ ಲಂಚ ಕೊಡಲು ಹವಣಿಸುತ್ತಾನೆ ಆತ ಕೃಷ್ಣನಿಗೆ 16 ಚಿನ್ನದ ತೇರುಗಳನ್ನೂ, 64 ಆನೆಗಳನ್ನೂ, 100 ದಾಸ-ದಾಸಿಯರನ್ನೂ, 18000 ಬೆಲೆ ಬಾಳುವ ಕಂಬಳಿಗಳನ್ನೂ, 1000 ಚೀನಾಂಬರಗಳನ್ನೂ, ಅದ್ಭುತವಾದ ಮಣಿರತ್ನವೊಂದನ್ನೂ, ಸುಂದರ ಹಾಗೂ ಭವ್ಯವಾದ ರಥಗಳನ್ನೂ ಕೊಡಲು ಮುಂದಾಗುತ್ತಾನೆ. ಕೃಷ್ಣ ಅವೆಲ್ಲವನ್ನೂ ತಿರಸ್ಕರಿಸುತ್ತಾನೆ. ಜೊತೆಗೆ ಸರ್ವವಾತಾನುಕೂಲಕರ- ಇಂದಿನ ಭಾಷೆಯಲ್ಲಿ ವಸತಿಯನ್ನೂ ತಿರಸ್ಕರಿಸುತ್ತಾನೆ.
ಇದರಿಂದ ಸಂತಪ್ತನಾದ ಕೌರವ ಕೊನೆಗೊಂದು ಊಟವನ್ನಾದರೂ ಹಾಕೋಣ ಎಂದು ನಿರ್ಧರಿಸಿ ಊಟಕ್ಕೆ ಆಹ್ವಾನಿಸುತ್ತಾನೆ. ಆಗ ಕೃಷ್ಣ ಹೇಳುವ ಮಾತು ಗಮನಾರ್ಹವಾದುದು-
ದ್ವಿಷದನ್ನಂ ನ ಭೋಕ್ತವ್ಯಂ ದ್ವಿಷಂತಂ ನೈವ ಭೋಜಯೇತ್ |
ಪಾಂಡವಾನ್ ದ್ವಿಷಸೇ ರಾಜನ್ ಮಮ ಪ್ರಾಣಾ ಹಿ
ಪಾಂಡವಾಃ ||
ಉದ್ಯೋಗ ಪರ್ವ: 91-31
‘ದುರ್ಯೋಧನ, ವೈರಿಗಳ ಮನೆಯಲ್ಲಿ ಉಟಮಾಡ ಬಾರದು. ವೈರಿಗಳನ್ನು ಊಟಕ್ಕೆ ಆಹ್ವಾನಿಸಬಾರದು. ನೀನು ಪಾಂಡವರ ವೈರಿ. ಪಾಂಡವರನ್ನು ದ್ವೇಷಿಸು ತ್ತಿದ್ದೀಯೆ. ಪಾಂಡವರು ನನ್ನ ಪ್ರಾಣ. ಹೀಗಿರುವಾಗ ನಾನು ನಿನ್ನ ಮನೆಯಲ್ಲಿ ಹೇಗೆ ಊಟ ಮಾಡಲಿ’ ಎಂದು ಕೇಳುತ್ತಾನೆ.
ಇದಕ್ಕೆ ಕೌರವನ ಬಳಿ ಉತ್ತರವಿರುವುದಿಲ್ಲ. ಒಂದು ಕುಡುತೆ ನೀರು ಕುಡಿದರೆ ಋಣಕ್ಕೆ ಬೀಳಬಹುದಾದ ಇಂತಹ ಸಂದರ್ಭದಲ್ಲಿ ವೈರಿಯಾದ ದುರ್ಯೋಧನ ನೀಡಿದ ಎಲ್ಲವನ್ನೂ ತಿರಸ್ಕರಿಸುವ ಕೃಷ್ಣ ಇಡೀ ಜಗತ್ತಿಗೇ ಮಾದರಿಯಾಗುತ್ತಾನೆ. ವೈರಿಗಳ ವಿಚಾರದಲ್ಲಿ ನಾವು ಎಷ್ಟು ಸೂಕ್ಷ್ಮವಾಗಿ ನಡೆದುಕೊಳ್ಳಬೇಕು ಅನ್ನುವುದಕ್ಕೆ ಕೃಷ್ಣ ನೀಡಿದ ಈ ಪಾಠವನ್ನು ನಾವು ಗಮನಿಸಿದ್ದೇವೆಯೆ? ಹಗಲು ಹೊತ್ತು ಅಪೋಸಿಷನ್ ಪಾರ್ಟಿಗಳ ಶಾಸಕರನ್ನೋ, ಸಂಸದರನ್ನೋ,
ಸಚಿವ ರನ್ನೋ ಅಥವಾ ಪಕ್ಷಗಳ ನಾಯಕರನ್ನೊ ಬೈಯ್ಯುತ್ತಾ ರಾತ್ರಿ ವೇಳೆ ಅವರ ಮನೆಯ ಊಟಕ್ಕೇ ಹೋಗುವ ಇಂದಿನ ರಾಜಕಾರಣಿಗಳಿಗೆ ಇಂಥಾದ್ದು ತಲೆಗೆ ಹೋಗಬಲ್ಲುದೇ? ಇದೇ ದೇಶದಲ್ಲಿ ಇದ್ದುಕೊಂಡು ವೈರಿ ದೇಶಗಳಾದ ಪಾಕಿಸ್ತಾನ, ಚೀನಾ ದೇಶಗಳನ್ನು ಹೊಗಳುವ, ಅವರ ಪರವಾಗಿ ಕೆಲಸ ಮಾಡುವ ರಾಜಕಾರಣಿಗಳಿಗೆ ಇದರ ಪರಿಚಯ ಏನಾದರೂ ಇದೆಯೇ? ಖಂಡಿತ ಇಲ್ಲ.
ಸತ್ಯ ತಿರುಚಿದ ಸುದ್ದಿವಾಹಿನಿ
ಸಮಾಜವನ್ನು ತಿದ್ದಬಹುದಾದ, ಓರೆಕೋರೆಗಳನ್ನು ಸರಿಪಡಿಸಬಹುದಾದ, ನಿಷ್ಪಕ್ಷಪಾತವಾಗಿ ಬರೆಯಬೇಕಾದ ಪತ್ರಿಕೋದ್ಯಮ ಇಂದು ಯಾವ ಸ್ಥಿತಿಗೆ ಬಂದು ನಿಂತಿದೆ ಎಂದು ನೋಡಿದರೆ, ಅಲ್ಲೂ ಕೂಡಾ ವಿಭಿನ್ನ ಸ್ವರೂಪಗಳ ಲಂಚ ತಾಂಡವವಾಡುತ್ತಿದ್ದು ಸತ್ಯ, ಧರ್ಮ, ನ್ಯಾಯ ಕಗ್ಗೊಲೆಯಾಗುತ್ತಿದೆ. ಲಂಚದ ಆಮಿಷಕ್ಕೆ ಒಳಪಟ್ಟು ಸತ್ಯವನ್ನು ತಿರುಚಿದ, ದೇಶಕ್ಕೇ ದ್ರೋಹ ಮಾಡಿದ ಎಷ್ಟು ಮಾಧ್ಯಮಗಳಿಲ್ಲ!
ಒಂದು ಉದಾಹರಣೆ ನೀಡಬಯಸುತ್ತೇನೆ. ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದ ಕಾಲ. ಆಗ್ರಾದಲ್ಲಿ ಶೃಂಗಸಮ್ಮೇಳನ ನಡೆದ ಸಂದರ್ಭ. ಪಾಕಿಸ್ತಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷ್ರಫ್ ಆಗಮಿಸಿದ್ದ. ಯಾವುದೇ ಕಾರಣಕ್ಕೂ ಅವನಿಂದ ಖಾಸಗಿ ಸಂದರ್ಶನ ಪಡೆಯಬಾರದೆಂದು ಸರಕಾರಿ ಆಜ್ಞೆ ಇತ್ತು. ಆದಾಗ್ಯೂ ಒಂದು ಭಾರತೀಯ ಆಂಗ್ಲ ಟಿ.ವಿ ಮಾಧ್ಯಮದವರು ಸರಕಾರಿ ಆeಯನ್ನು ಮೀರಿ ಮುಷ್ರಫನು ನೀಡಿದ ಎಂಜಲು ಕಾಸನ್ನು ತಿಂದು ಭಾರತದ ನಿಲುವಿಗೆ
ವಿರುದ್ಧವಾಗಿ, ಸತ್ಯವನ್ನು ತಿರುಚಿ ಪಾಕಿಸ್ತಾನಕ್ಕೆ ಅನುಕೂಲವಾಗುವಂತೆ ವರದಿ ಮಾಡಿಬಿಟ್ಟರು. ‘ಯಾಕೆ ಹಾಗೆ ಮಾಡಿದಿರಿ?’ ಎಂದು ಕೇಳಿದ್ದಕ್ಕೆ ‘ನಾವು ಅಂತಾರಾಷ್ಟ್ರಿಯ ವರದಿಗೆ ಬದ್ಧರು, ನಮ್ಮದು ನಿಷ್ಪಕ್ಷಪಾತ ಧೋರಣೆ. ರಾಷ್ಟ್ರೀಯತೆಗೆ, ರಾಷ್ಟ್ರಹಿತಾಸಕ್ತಿಗೆ ಅತೀತವಾದ ಸತ್ಯನಿಷ್ಠೆಯುಳ್ಳವರು’ ಅಂತ ಏನೇನೋ ಹೇಳಿ ತಪ್ಪಿಸಿಕೊಂಡರು. ಇಲ್ಲಿ ನಾವು ಗಮನಿಸಬೇಕಾದುದು – ಎಂಜಲು ಕಾಸು ದೇಶದ್ರೋಹ ಮಾಡುವುದಕ್ಕೂ ಹೇಸುವುದಿಲ್ಲ ಅನ್ನುವುದು.
ಸರ್.ಎಂ. ವಿಶ್ವೇಶ್ವರಯ್ಯನವರು ದಿವಾನರಾಗಿದ್ದ ಕಾಲದಲ್ಲಿ ಡಿ.ವಿ.ಗುಂಡಪ್ಪನವರು ಮೈಸೂರಿನ ದಸರಾ ಮಹೋತ್ಸವದ ವರದಿಯನ್ನು ಸಿದ್ಧಪಡಿಸಿ ಮುದ್ರಣಕ್ಕೆ ಕಳುಹಿಸುವುದರಲ್ಲಿದ್ದರು. ಅಷ್ಟರಲ್ಲಿ ದಿವಾನರ ಕಡೆಯಿಂದ ಅವರಿಗೆ ಗೌರವ ಸಂಭಾವನೆಯಾಗಿ 250/- ರೂಗಳ ಚೆಕ್ಕೊಂದು ಬಂತು. ಅದು ಯಾಕೆ ಎಂದು ಡಿವಿಜಿಯವರು ಪ್ರಶ್ನಿಸಿದಾಗ ಇದು ಎಲ್ಲಾ ಪತ್ರಕರ್ತರಿಗೂ ನೀಡಿದ ಗೌರವ ಸಂಭಾವನೆಯೆಂಬ ಉತ್ತರ ಬಂತು. ಅದರಿಂದ ಅಸಮಾಧಾನಗೊಂಡ ಡಿವಿಜಿಯವರು ಖುದ್ದು ದಿವಾನರನ್ನೇ ಕಂಡು-‘ಯಾವುದೇ ಪತ್ರಿಕೆಯಾಗಲೀ ಪತ್ರಕರ್ತರಾಗಲೀ ಇಂಥ ಸರಕಾರಿ ಸಂಭಾವನೆಯನ್ನು ಸ್ವೀಕರಿಸಬಾರದು. ಇದು
ಪತ್ರಕರ್ತರ ಪ್ರಭುತ್ವದ ಹಂಗಿಗೊಳಗಾದಂತೆ. ಸ್ವತಂತ್ರವಾದ ವರದಿಗಳನ್ನು ಮಾಡದೆ ಆಳುವವರ ಮೂಗಿನ ನೇರಕ್ಕೆ ವಾರ್ತೆಯನ್ನು ತಿದ್ದುವಂತೆ ದುಷ್ಪರಿಣಾಮ ಕಾರಿ.
ಅಲ್ಲದೆ ಪ್ರತಿಯೊಬ್ಬ ಪತ್ರಕರ್ತನೂ ತನ್ನ ಕೆಲಸಕ್ಕೆ ಆವಶ್ಯಕವಾದ ಖರ್ಚು-ವೆಚ್ಚಗಳನ್ನು ತಾನೇ ತೂಗಿಸಿಕೊಳ್ಳಬೇಕು’ ಅಂದರಂತೆ. ಇಂದಿನ ಪತ್ರಕರ್ತರಿಗೆ ಇಂತಹ ಗುಂಡಿಗೆ, ಅರ್ಥಶೌಚ ಇದೆಯೆ ಎಂದು ಕೇಳಬೇಕಾಗುತ್ತದೆ. ಲೋಕಕಲ್ಯಾಣ ಸ್ಥಾಪಿಸುವುದಕ್ಕೆ, ಧರ್ಮ, ನ್ಯಾಯ, ಸತ್ಯ ಕಾಪಾಡುವುದಕ್ಕೆ ನಮಗೆ ದಾರಿತೋರಿದ ಶ್ರೀಕೃಷ್ಣನಂತಹ ಪುರಾಣಪುರುಷರು, ಡಿವಿಜಿಯಂತಹ ಮಹನೀಯರು ಮಾದರಿಯಾಗಬೇಕಿದೆ.