ಅನಿಲ್ ಎಚ್.ಟಿ
ಹೂವೆ ಹೂವೆ, ಏನು ನಿನ್ನ ಬಣ್ಣದ ಲೀಲೆ! ಬೆಟ್ಟವನ್ನೇ ಮುಚ್ಚಿರುವ ಹೂವಿನ ಲೋಕ ಇಲ್ಲಿದೆ!
ಪ್ರಕೃತಿದೇವಿಯು ಹೂವನ್ನು ಮೈತುಂಬಾ ಹೊದ್ದುಕೊಂಡಿರುವಳೆ? ಅಥವಾ ತನ್ನ ಮುಡಿ ತುಂಬಾ ಸುರುವಿಕೊಂಡಿರುವಳೆ? ಕೊಡಗಿನಲ್ಲಿ ಅರಳಿ ನಿಂತ ಬೆಟ್ಟದ ಹೂವು ಇದೀಗ ಸಾಕಷ್ಟು ವಿಸ್ಮಯಕ್ಕೆ ಕಾರಣವಾಗಿದೆ. ಮಾಂದಲಪಟ್ಟಿ ಎಂಬ ನಿಸರ್ಗ ಪ್ರವಾಸಿ ತಾಣ ಮತ್ತು ಕೋಟೆಬೆಟ್ಟ ಎಂಬ ಧಾರ್ಮಿಕ ಕ್ಷೇತ್ರದಲ್ಲಿ ಅರಳಿ
ನಿಂತ ಲಕ್ಷಾಂತರ ನೀಲಕುರುಂಜಿ ಪುಷ್ಪಗಳು ಮನಕ್ಕೆ ಮುದ ನೀಡುತ್ತಿದೆ.
ಎರಡು ಗಿರಿಗಳು.. ಒಂದು ನೀಲಿ ಹೂವು…ಲಕ್ಷಾಂತರ ಪುಷ್ಪಗಳು.. ಸಾವಿರಾರು ಸಂದರ್ಶಕರು.. ನಿಜಕ್ಕೂ ಕೊಡಗಿನ ಪಾಲಿಗೆ ಇದೊಂದು ಅಪೂರ್ವ ಘಟನೆ! ನೀಲಕುರಂಜಿ ಎಂಬ ಪುಪ್ಪರಾಶಿ ಅನಿರೀಕ್ಷಿತವಾಗಿ ಕೊಡಗಿನ ಜನತೆಯಲ್ಲಿ ಹೊಸ ಸಂಭ್ರಮಕ್ಕೆ ಕಾರಣವಾಗಿಬಿಟ್ಟಿದೆ. ಕೊಡಗು ಜಿಲ್ಲೆಯ ಮಾಂದಲಪಟ್ಟಿ ಮತ್ತು
ಕೋಟೆಬೆಟ್ಟಗಳಲ್ಲಿ ಅರಳಿ ನಿಂತಿರುವ ಅಪರೂಪದ ನೀಲಕುರಂಜಿ ಪುಷ್ಪ ರಾಶಿಯನ್ನು ವೀಕ್ಷಿಸಲು ಜನ ಧಾವಿಸುತ್ತಿದ್ದಾರೆ.
ನೀಲಕುರಂಜಿ ಎಂಬ ಅಪೂರ್ವ ಪುಷ್ಪ ಈಗ ಕೊಡಗಿನ ಪಾಲಿಗೆ ಎಲ್ಲಿಲ್ಲದ ಸಂಭ್ರಮ ತಂದಿದೆ. ಅರಳಿ ನಿಂತ ಸೊಬಗಿನ ಬೆಟ್ಟದ ಹೂವು ಮಾಂದಲಪಟ್ಟಿ ತಪ್ಪಲಿನ ಗ್ರಾಮಸ್ಥರು ಮಾತ್ರವಲ್ಲ, ಮಡಿಕೇರಿ, ಕುಶಾಲನಗರ ಸೇರಿದಂತೆ ಕೊಡಗಿನ ಹಲವು ಪಟ್ಟಣಗಳಿಗೆ ಆರ್ಥಿಕ ಚೈತನ್ಯ ನೀಡಿದೆ. ಕಳೆದ ಒಂದೂವರೆ ವರ್ಷದಿಂದ
ಕೊವೀಡ್ ೧೯ ಸೃಷ್ಟಿಸಿದ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಗಳಿಂದ ಬೇಸತ್ತು ಹೋಗಿದ್ದ ಕೊಡಗಿನ ಜನತೆಯ ಪಾಲಿಗೆ ನೀಲಕುರಂಜಿ ಎಂಬ ಬೆಟ್ಟದ ಹೂವು ಯಾರೂ ನಿರೀಕ್ಷಿಸದ ರೀತಿಯಲ್ಲಿ ನವಚೈತನ್ಯ, ಮನೋಸ ನೀಡಿದೆ.
ಮಾಂದಲಪಟ್ಟಿ ತಪ್ಪಲಿನಲ್ಲಿರುವ ಕಾಲೂರು, ಸೂರ್ಲಬ್ಬಿ, ನಂದಿಮೊಟ್ಟೆ, ಗಾಳಿಬೀಡು, ಹಮ್ಮಿಯಾಲ ಮತ್ತಿತರ ಗ್ರಾಮಗಳ ಯುವಕರು ಕೆಲವು ವರ್ಷಗಳಿಂದ ಪ್ರವಾಸೀ ತಾಣವಾದ ಮಾಂದಲಪಟ್ಟಿಗೆ ತಾವು ಹೊಂದಿರುವ ಜೀಪಿನಲ್ಲಿ ಜನರನ್ನು ಕರೆದೊಯ್ದು ಒಂದಿಷ್ಟು ವರಮಾನ ಸಂಪಾದಿಸುತ್ತಿದ್ದರು. ಆದರೆ ೨೦೧೮ ರಲ್ಲಿ ಪ್ರಕೃತಿ ವಿಕೋಪದ ಬಳಿಕ ಇವರಿಗೆ ಪ್ರಾರಂಭವಾಯಿತು. ಜೀಪುಗಳ ನಡುವಿನ ಅಹಿತಕರ ಪೈಪೋಟಿ ತಪ್ಪಿಸುವ ನಿಟ್ಟಿನಲ್ಲಿ ಜಿಡಳಿತ ಕಠಿಣ ಕ್ರಮ ಕೈಗೊಂಡಿತ್ತು. ಅನೇಕ ತಿಂಗಳು ಮಾಂದಲಪಟ್ಟಿಗೆ ಬಾಡಿಗೆ ಜೀಪುಗಳನ್ನೇ ನಿಷೇಽಸಲಾಗಿತ್ತು. ನಂತರ ಕೋವಿಡ್ ೧೯ನಿಂದಾಗಿ ಕೊಡಗಿಗೆ ಪ್ರವಾಸಿಗರ ಆಗಮನವೂ ಕುಂಠಿತಗೊಂಡಿತು. ಜೀಪು ಮಾಲೀಕರು ಮನೆಯೊಳಗೇ ಕೂರುವಂತಾಯಿತು. ಬಾಡಿಗೆ ದೊರೆಯದೇ, ಜೀವನಾಧಾರವಾಗಿದ್ದ ಜೀಪುಗಳೇ ಜೀವನಕ್ಕೆ ಭಾರವಾದವು. ಅಂತೆಯೇ ಮಡಿಕೇರಿ – ಮಾಂದಲಪಟ್ಟಿಯ ೧೬ ಕಿ.ಮೀ. ಅಂತರದ ನಡುವೇ ಬೆಟ್ಟಕ್ಕೆ ತೆರಳುವ ಸಂದರ್ಶಕರನ್ನೇ ಅವಲಂಬಿಸಿದ್ದ ಅನೇಕ ಅಂಗಡಿಗಳಿಗೂ ಲಾಕ್ಡೌನ್ ಹೊಡೆತದ ಬಿಸಿ ತಟ್ಟಿ ಬಾಗಿಲು ಮುಚ್ಚಿದ್ದವು.
ಸಂಭವಿಸಿದ್ದೇ ಸೋಜಿಗ
ಈಗ ೨೦ ದಿನಗಳಿಂದ ಮತ್ತೆ ಮಾಂದಲ ಪಟ್ಟಿಯಲ್ಲಿ ಹೂವಿನಂತೆಯೇ ಜೀವಚೈತನ್ಯ ಕೂಡ ಕಂಗೊಳಿಸುತ್ತಿದೆ. ದಿನಕ್ಕೆ ಏನಿಲ್ಲ ಎಂದರೂ ೪ ರಿಂದ ೫ ಸಾವಿರ ಸಂದರ್ಶಕರು ಮಾಂದಲಪಟ್ಟಿಗೆ ಭೇಟಿ ನೀಡುತ್ತಿzರೆ. ಮಡಿಕೇರಿ, ನಂದಿಮೊಟ್ಟೆ ಯಿಂದ ಮಾಂದಲಪಟ್ಟಿಗೆ ೧೧೦ ಜೀಪುಗಳು ಸಂದರ್ಶಕರನ್ನು ಕರೆದೊಯ್ಯುತ್ತಿದೆ. ವಿಶೇಷ ಎಂದರೆ, ಹೊರಗಿನ ಪ್ರವಾಸಿಗರಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗು ಜಿಲ್ಲೆಯ ಮೂಲೆಮೂಲೆಗಳ ಜನರು ನೀಲಕುರಂಜಿ ವೀಕ್ಷಿಸಲು ಬೆಟ್ಟಕ್ಕೆ
ತೆರಳುತ್ತಿದ್ದಾರೆ!
‘ನೀವಿನ್ನೂ ನೀಲಕುರಂಜಿ ನೋಡಲಿಲ್ಲವೇ.. ಛೇ . ಹೋಗಿಬನ್ನಿ.. ನೋಡೋದಕ್ಕೆ ಎರಡು ಕಣ್ಣು ಸಾಲದು’ ಎಂಬ ಮಾತು ಎಲ್ಲೂ! ಮಾಂದಲಪಟ್ಟಿಗೆ ಸಂದರ್ಶಕ ರನ್ನು ಕರೆದೊಯ್ಯಲು ಜೀಪು ಬಾಡಿಗೆ ರು.೧೫೦೦/- ಒಂದು ಜೀಪು ದಿನಕ್ಕೆ ಕನಿಷ್ಟ ಎರಡು ಬಾರಿ ಮಾಂದಲಪಟ್ಟಿಗೆ ಸಂಚರಿಸುತ್ತದೆ. ಕೆಟ್ಟುಹೋಗಿರುವ ದುಸ್ಥಿತಿಯ ರಸ್ತೆಯಲ್ಲೇ ಜೀಪುಗಳು ಮಾಂದಲಪಟ್ಟಿಗೆ ಧಾವಿಸುತ್ತಿವೆ. ಸಂಸದೆ ಸುಮಲತಾ ಅವರಂಥ ಗಣ್ಯರು ಕೂಡ ನೀಲಕುರಂಜಿ ವೀಕ್ಷಿಸಲು ಕೊಡಗಿಗೆ ಬಂದಿದ್ದಾರೆ.
ಹೆಲಿ ಟೂರಿಸಂ
ಮಾಂದಲಪಟ್ಟಿ, ಕೋಟೆಬೆಟ್ಟಗಳಲ್ಲಿ ಅರಳಿ ನಿಂತಿರುವ ಪುಪ್ಪರಾಶಿ ಕೊಡಗಿನಲ್ಲಿ ಮತ್ತೊಂದು ಹೊಸ ಅವಕಾಶದ ಬಾಗಿಲು ತೆರೆದಿದೆ. ಹೆಲಿ ಪ್ರವಾಸೋದ್ಯಮಕ್ಕೆ ನೀಲಕುರಂಜಿ ಅವಕಾಶ ಕಲ್ಪಿಸಿದೆ. ಮಾಂದಲಪಟ್ಟಿ, ಕೋಟೆ ಬೆಟ್ಟ ಗಳಲ್ಲಿ ಅರಳಿರುವ ಪುಪ್ಪರಾಶಿಯನ್ನು ಹೆಲಿರೈಡ್ ಮೂಲಕ ವೀಕ್ಷಿಸುವ ಪ್ರಯತ್ನ ಈಗ ನಡೆದಿದೆ. ಆದರೆ ಇದಕ್ಕೆ ಸ್ಥಳೀಯರು ಮತ್ತು ಪರಿಸರಪ್ರೇಮಿಗಳಿಂದ ಆಕ್ಷೇಪ ಕೂಡ ವ್ಯಕ್ತವಾಗಿದೆ. ಕೊಡಗಿನ ಬೆಟ್ಟಗಳಲ್ಲಿ ಕಂಗೊಳಿಸುತ್ತಿರುವ ಹೂವುಗಳ ರಾಶಿ ಅನೇಕರ ಜೀವನಕ್ಕೆ ಚೈತನ್ಯ ನೀಡಿದ್ದು ವಿಶೇಷ. ಅನಿರೀಕ್ಷಿತ! ನೀವಿನ್ನೂ ನೀಲಕುರಿಂಜಿ ನೋಡಿಲ್ಲವೆ? ಈಗಲೇ ನೋಡಿಬನ್ನಿ!
ಎರಡು ಬೆಟ್ಟಗಳಲ್ಲಿ ಬಣ್ಣದೋಕುಳಿ
ಹೂವುಗಳಿಗೆ ನಮ್ಮ ಮನಸ್ಸನ್ನು ಚೇತೋಹಾರಿಗೊಳಿಸುವ ಶಕ್ತಿಯಿದೆ. ಮನೆಯಲ್ಲಿ ವಿವಿಧ ಹೂವು ಗಳನ್ನು ಬೆಳೆದು, ಮನಸ್ಸಿಗೆ ಸಂತಸದ ಸೇಂಚನ ನೀಡಿಕೊಳ್ಳುವವರು ಹಲವರು. ಇದೀಗ ಕೊಡಗಿನ ಎರಡು ಬೆಟ್ಟಗಳಲ್ಲಿ ಅರಳಿ ಕಂಗೊಳಿಸುತ್ತಿರುವ ನೀಲಿ ವರ್ಣದ ಕುರಂಜಿ ಹೂವುಗಳು ಅಂಥಹುದ್ದೇ ಸಂಭ್ರಮ ವನ್ನು ಜನತೆಯಲ್ಲಿ ತಂದಿದೆ. ಹನ್ನೆರಡು ವರ್ಷಕ್ಕೊಮ್ಮೆ ಅರಳುವ ಈ ಪುಷ್ಪ ಯಾರೂ ಊಹಿಸಲಾಗದ ಪವಾಡವನ್ನೇ ಕೊಡಗಿನ ಬೆಟ್ಟದಲ್ಲಿ ಸಷ್ಟಿಸಿದೆ.
ಬೆಟ್ಟದ ತುಂಬಾ ಹೂವಿನ ಹಚ್ಚಡ
ಮಡಿಕೇರಿಯಿಂದ ಮಾಂದಲಪಟ್ಟಿಗೆ ತೆರಳುವ ರಸ್ತೆಯಲ್ಲಿ ಸಾಗುವುದೇ ಒಂದು ವಿನೂತನ ಅನುಭವ. ಕಚ್ಚಾ ರಸ್ತೆಯಲ್ಲಿ ನಿಸರ್ಗ ಸೌಂದರ್ಯ ನೋಡುತ್ತಾ, ಸಾಹಸ ಸವಾರಿಯ ಜೀಪಿನಲ್ಲಿ ಸಾಗುವುದು ಮತ್ತೊಂದು ವಿಶಿಷ್ಟ ಅನುಭವ. ಕಣ್ಣುಹಾಯಿಸಿದಷ್ಟು ದೂರವೂ ಹಸಿರ ನಿಸರ್ಗ. ಇದೀಗ ಅರಳಿರುವ ನೀಲಕುರಂಜಿ ಹೂವುಗಳು, ಅಲ್ಲಿನ ಮಂಜು ಮುಸುಕಿದ ವಾತಾವರಣದಲ್ಲಿ ಅಪೂರ್ವ ಅನುಭವ ನೀಡಬಲ್ಲವು.
ಅತ್ತ ಮಡಿಕೇರಿಯಿಂದ ೨೦ ಕಿಮೀ ದೂರದಲ್ಲಿರುವ ಕೋಟೆಬೆಟ್ಟಕ್ಕೆ ಕಡಿದಾದ ರಸ್ತೆಯಿದೆ. ಇಲ್ಲಿ ಕೋಟೆಬೆಟ್ಟ ಈಶ್ವರ ದೇವಾಲಯ ಸಮಿತಿಯ ಉಸ್ತುವಾರಿ ಇದೆ. ಮೋಜು ಮಸ್ತಿಗೆ ಖಂಡಿತಾ ಅವಕಾಶವಿಲ್ಲ. ಕೋಟೆ ಬೆಟ್ಟದ ಮೇಲಿನಿಂದ ನೀಲಕುರಂಜಿ ಪುಪ್ಪರಾಶಿಯ ಸೊಬಗನ್ನು ವೀಕ್ಷಿಸಲು ಇದು ಸಕಾಲ.