Saturday, 23rd November 2024

ಶಾರ್ದೂಲ್‌-ಪಂತ್‌ ಅದ್ಭುತ ಇನಿಂಗ್ಸ್, ಅಜಿಂಕ್ಯ ಫೇಲ್‌

ಲಂಡನ್: ಆಲ್ರೌಂಡರ್ ಶಾರ್ದೂಲ್ ಠಾಕೂರ್ (60 ರನ್) ಹಾಗೂ ವಿಕೆಟ್ ಕೀಪರ್-ಬ್ಯಾಟ್ಸ್‌ ಮನ್ ರಿಷಭ್ ಪಂತ್ (50ರನ್) ಜೋಡಿಯ ಭರ್ಜರಿ ಜತೆಯಾಟ ದಿಂದ ಭಾರತ ತಂಡ 4ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ 368 ರನ್‌ಗಳ ಬೃಹತ್ ಸವಾಲು ನೀಡಿದೆ. ಅಂತಿಮ ದಿನದಾಟ ಕುತೂಹಲ ಹುಟ್ಟಿಸಿದೆ.

3 ವಿಕೆಟ್‌ಗೆ 270 ರನ್‌ಗಳಿಂದ 4ನೇ ದಿನದಾಟ ಆರಂಭಿಸಿದ ಭಾರತ ತಂಡ 466 ರನ್‌ಗಳಿಗೆ 2ನೇ ಇನಿಂಗ್ಸ್ ಮುಗಿಸಿತು. ಪ್ರತಿಯಾಗಿ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 77 ರನ್ ಗಳಿಸಿದ್ದು, ಆಂಗ್ಲ ಆರಂಭಿಕರನ್ನು ಬೇರ್ಪಡಿಸಲು ಭಾರತ ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಅಂತಿಮ ದಿನ ಭಾರತದ ಗೆಲುವಿಗೆ 10 ವಿಕೆಟ್ ಅಗತ್ಯವಿದ್ದರೆ, ಆಂಗ್ಲರು ಇನ್ನೂ 291 ರನ್ ಗಳಿಸಬೇಕಾಗಿದೆ.

ಮೊದಲ ಇನಿಂಗ್ಸ್‌ನಲ್ಲಿ ತಂಡಕ್ಕೆ ಆಸರೆಯಾಗಿದ್ದ ವೇಗಿ ಶಾರ್ದೂಲ್ ಠಾಕೂರ್ ಮತ್ತೊಮ್ಮೆ ರಿಷಭ್ ಪಂತ್ ಜತೆಗೂಡಿ ತಂಡಕ್ಕೆ ಅದ್ಭುತ ಇನಿಂಗ್ಸ್ ಕಟ್ಟಿಕೊಟ್ಟರು. ಭೋಜನ ವಿರಾಮಕ್ಕೂ ಮೊದಲೇ ನಾಯಕ ವಿರಾಟ್ ಕೊಹ್ಲಿ (44), ರವೀಂದ್ರ ಜಡೇಜಾ (17) ಹಾಗೂ ಅಜಿಂಕ್ಯ ರಹಾನೆ (0) ವಿಕೆಟ್ ಕಳೆದುಕೊಂಡ ಭಾರತ ಸಾಧಾರಣ ಮೊತ್ತದತ್ತ ಮುಖ ಮಾಡಿತು. ಈ ವೇಳೆ ರಿಷಭ್ ಹಾಗೂ ಶಾರ್ದೂಲ್ ಠಾಕೂರ್ ಜೋಡಿ ಬಿರುಸಿನ ಬ್ಯಾಟಿಂಗ್ ಮೂಲಕವೇ ತಂಡದ ಮೊತ್ತ ಏರಿಸಿತು. ಜೋಡಿ 7ನೇ ವಿಕೆಟ್ ಉಪಯುಕ್ತ 100 ರನ್ ಕಲೆ ಹಾಕಿತು.

ಶಾರ್ದೂಲ್ ವಿಕೆಟ್ ಬಿದ್ದ ಬೆನ್ನಲ್ಲೇ ಅರ್ಧಶತಕ ಪೂರೈಸಿ ರಿಷಭ್ ಪಂತ್ ಕೂಡ ಪೆವಿಲಿಯನ್ ಸೇರಿಕೊಂಡರು. ಕಡೇ ಹಂತದಲ್ಲಿ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ ಗಳಾದ ಉಮೇಶ್ ಯಾದವ್ (25ರನ್) ಹಾಗೂ ಜಸ್‌ಪ್ರೀತ್ ಬುಮ್ರಾ (24ರನ್)9ನೇ ವಿಕೆಟ್‌ಗೆ 36 ರನ್ ಕಲೆಹಾಕಿತು.

ವೋಕ್ಸ್ ಎಸೆದ ಮರು ಓವರ್‌ನಲ್ಲೇ ಅಜಿಂಕ್ಯ ರಹಾನೆ ಕೂಡ ಎಲ್‌ಬಿಯಾದರು. ಅರ್ಧಶತಕದ ಗಡಿಯಲ್ಲಿದ್ದ ಕೊಹ್ಲಿ, ಮೊಯಿನ್ ಎಸೆತದಲ್ಲಿ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿ ಓವರ್‌ಟನ್‌ಗೆ ಕ್ಯಾಚ್ ನೀಡಿದರು.

ಉತ್ತಮ ಆರಂಭ : ಭಾರತ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯ ಗೆಲ್ಲಲು 368 ರನ್ ಗುರಿ ಪಡೆದಿದ್ದ ಆತಿಥೇಯ ಇಂಗ್ಲೆಂಡ್ ರವಿವಾರ 4ನೇ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 77 ರನ್ ಗಳಿಸಿ ಉತ್ತಮ ಆರಂಭ ಪಡೆದಿದೆ. ಕೊನೆಯದಿನ ಸೋಮವಾರ ಇಂಗ್ಲೆಂಡ್ ಗೆಲುವಿಗೆ ಇನ್ನೂ 291 ರನ್ ಗಳಿಸಬೇಕಾಗಿದೆ.  ಇದಕ್ಕೂ ಮೊದಲು ಭಾರತವು 2ನೇ ಇನಿಂಗ್ಸ್ ನಲ್ಲಿ 466 ರನ್ ಗಳಿಸಿ ಇಂಗ್ಲೆಂಡ್ ಗೆ ಕಠಿಣ ಗುರಿ ವಿಧಿಸಿತ್ತು.