Friday, 22nd November 2024

ಸಕ್ಕರೆ ಕಾರ್ಖಾನೆಯ ನಾಲ್ಕು ಘಟಕಗಳಿಗೆ ₹ 20 ಕೋಟಿ ದಂಡ

ನವದೆಹಲಿ: ಪರಿಸರ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಉತ್ತರಪ್ರದೇಶದ ಧಾಮ್‌ಪುರ್ ಸಕ್ಕರೆ ಕಾರ್ಖಾ ನೆಯ ನಾಲ್ಕು ಘಟಕಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ₹ 20 ಕೋಟಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

‘ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಉತ್ತರಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಗಳು ಸಲ್ಲಿಸಿರುವ ವಿವಿಧ ತಪಾಸಣಾ ವರದಿಗಳನ್ನು ಪರಿಶೀಲಿಸಲಾಗಿದ್ದು, ಇದರಲ್ಲಿ ಗಣನೀಯ ಪ್ರಮಾಣದಲ್ಲಿ ನಿರಂತರವಾಗಿ ಪರಿಸರ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟ ವಾಗಿದೆ’ ಎಂದು ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ಅವರ ನೇತೃತ್ವದ ಪೀಠ ತಿಳಿಸಿದೆ.

ಸಕ್ಕರೆ ಕಾರ್ಖಾನೆಯ ನಾಲ್ಕು ಘಟಕಗಳಿಗೆ ತಲಾ ₹ 5 ಕೋಟಿ ದಂಡ ವಿಧಿಸಿರುವ ಎನ್‌ಜಿಟಿ, ದಂಡದ ಮೊತ್ತವನ್ನು 30 ದಿನಗಳ ಒಳಗಾಗಿ ಪಾವತಿಸಬೇಕು ಎಂದೂ ಕಾಲಮಿತಿ ನಿಗದಿಗೊಳಿಸಿದೆ.

ಈ ನಾಲ್ಕು ಘಟಕಗಳು ನಿರಂತರವಾಗಿ ಪರಿಸರ ಕಾನೂನುಗಳನ್ನು ಉಲ್ಲಂಘಿಸುತ್ತಿವೆ. ಈ ಘಟಕಗಳು ಸ್ಥಳೀಯ ನಿವಾಸಿಗಳು ಮಾಲಿನ್ಯಮುಕ್ತ ವಾತಾವರಣದಲ್ಲಿ ಬದುಕುವ ಹಕ್ಕನ್ನು ಕಸಿದುಕೊಂಡಿವೆ’ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.