Friday, 20th September 2024

ಮೊದಲ ಪರೀಕ್ಷೆ ಪಾಸು ; ರವಾನೆಯಾದ ಸಂದೇಶವೇನು ?

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hosakere@gmail.com

ರಾಜಕೀಯ ನಿಂತ ನೀರಲ್ಲ. ಅದು ಒಂದೇ ಕಡೆ ಸ್ಥಿರವಾಗಿಯೂ ನಿಲ್ಲುವ ಜಡತ್ವವೂ ಅಲ್ಲ. ಕಾಲ ಕಾಲಕ್ಕೆ ಅದು ಒಬ್ಬರಿಂದ ಒಬ್ಬರಿಗೆ, ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುತ್ತಲೇ ಇರುತ್ತದೆ. ಆದರೆ ಇದನ್ನು ಅರಿಯದೇ, ಅವರಿಲ್ಲದೇ ಪಕ್ಷವಿಲ್ಲ. ಇವರು ಕೈಕೊಟ್ಟರೆ ಚುನಾವಣೆಯ ಕಥೆಯೇನು ಎನ್ನುವ ಎಲ್ಲ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಬರುತ್ತಿರುತ್ತದೆ. ಒಂದು ಹಂತದಲ್ಲಿ ರಾಜಕೀಯ ಪಕ್ಷಗಳಿಗೆ ‘ಫೇಸ್’ ಬೇಕು ಎನ್ನವುದು ಎಷ್ಟು ಸತ್ಯವೋ, ಆ
ಫೇಸ್ ಬಳಿಕ ಇನ್ನೊಂದು ಫೇಸ್ ಬರುತ್ತದೆ ಎನ್ನುವುದು ಅಷ್ಟೇ ಸ್ಪಷ್ಟ.

ಈ ಮಾತು ಈಗೇಕೆ ಎನ್ನುವ ಪ್ರಶ್ನೆಯನ್ನು ಎತ್ತಿದ್ದರೆ, ಸೋಮವಾರ ಮುಕ್ತಾಯಗೊಂಡ ಮೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಎಂದು ಉತ್ತರಿಸಿದರೆ ತಪ್ಪಲ್ಲ. ಹೌದು, ರಾಜ್ಯ ಬಿಜೆಪಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಮಾಸ್ ಲೀಡರ್ ಪಟ್ಟ ಪಡೆದಿದ್ದ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ, ಬಿಜೆಪಿಗೆ ಎದುರಿಸಿದ ಮೊದಲ ಚುನಾವಣೆ. ಕೇವಲ ಮೂರು ಪ್ರಮುಖ ನಗರಗಳಿಗೆ ಸಂಬಂಧಿಸಿದ ಮಹಾನಗರ ಪಾಲಿಕೆ ಹಾಗೂ ಕೆಲವು ಸ್ಥಳೀಯ ಸಂಸ್ಥೆಗಳ ಉಪಚುನಾವಣೆಯಾಗಿದ್ದರೂ, ಯಡಿಯೂರಪ್ಪ ಇಲ್ಲದ ರಾಜ್ಯ ಬಿಜೆಪಿ ಯಾವ ರೀತಿ ಚುನಾವಣೆ ಎದುರಿಸಲಿದೆ ಎನ್ನುವ ಕುತೂಹಲ ಮೂಡಿಸಿದ್ದ ಚುನಾವಣೆ. ಏಕೆಂದರೆ ಈ ಹಿಂದೆ ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿಗೆ ಹೋಗಿದ್ದಾಗಲೂ, ಬಿಜೆಪಿಗೆ ಅವರ ಅನುಪಸ್ಥಿತಿ ಕಾಡಿತ್ತು.
ಆದರೆ ಅಂದಿನ ಸ್ಥಿತಿಗತಿ ಹಾಗೂ ಚಿತ್ರಣ ಬೇರೆ.

ಆದರೀಗ ಅವರನ್ನು ಪಕ್ಷದ ವರಿಷ್ಠರಿಯೇ, ‘ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದಾರೆ’. ಆದರೆ ಯಡಿಯೂರಪ್ಪ ಅದನ್ನು ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದ್ದರಿಂದ ಯಡಿಯೂರಪ್ಪ ಬೆಂಬಲಿಗರ ಹಾಗೂ ಲಿಂಗಾಯತ ಸಮುದಾಯ ಯಾವ ರೀತಿ ವರ್ತಿಸಲಿದೆ ಎನ್ನುವ ಪ್ರಶ್ನೆ ವರಿಷ್ಠರಲ್ಲಿ ಇದ್ದೇ ಇತ್ತು. ಆದರೆ ಬೆಳಗಾವಿ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡರೆ, ಕಲಬುರಗಿಯಲ್ಲಿ ಎರಡನೇ ಅತಿ ಹೆಚ್ಚು ಸ್ಥಾನ ಪಡೆದ ಪಕ್ಷವಾಗಿ ಹೊರ ಹೊಮ್ಮಿದೆ. ಈ ಹಂತದಲ್ಲಿ ಬಿಜೆಪಿ ಉತ್ತಮ ಸಾಧನೆಯನ್ನೇ ಮಾಡಿದೆ.

ಅದರಲ್ಲೂ ಕಳೆದ ಎರಡೂವರೆ ದಶಕದಿಂದ ಸಾಧ್ಯವಾಗದ ಬೆಳಗಾವಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬಿಜೆಪಿ ಎನ್ನುವುದು ಕೇವಲ ಒಂದು ವ್ಯಕ್ತಿಯನ್ನು ಆಧರಿಸಿ ನಿಂತಿರುವ ಪಕ್ಷವಲ್ಲ. ಸಂಘಟನೆ, ಕಾರ್ಯಕರ್ತರು ಪಕ್ಷದ ಶಕ್ತಿ. ಆದ್ದರಿಂದ ಇಲ್ಲಿ ಯಾರೋ ಒಬ್ಬರಿಗೆ ‘ಕ್ರೆಡಿಟ್’ ಕೊಡುವ ಅಗತ್ಯವಿಲ್ಲ ಎನ್ನುವ ಪರೋಕ್ಷ ಸಂದೇಶವನ್ನು ಬಿಜೆಪಿ ವರಿಷ್ಠರು ರವಾನಿಸುವ ಮೂಲಕ, ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸುವ ಸಾಧ್ಯತೆಯಿದೆ. ಅಷ್ಟಕ್ಕೂ ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ನೋಡುವುದಾದರೆ, ಬೆಳಗಾವಿಯಲ್ಲಿ ಬಿಜೆಪಿ ಜಯ
ಸಾಽಸಿದರೆ, ಕಲಬುರಗಿ, ಹುಬ್ಬಳ್ಳಿ-ಧಾರವಾಡದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ಪಕ್ಷೇತರರು ಹಾಗೂ ಶಾಸಕರು ಸಂಸದರ ನೆರವಿನಿಂದ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ. ಕಲಬುರಗಿಯಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹುಬ್ಬಳ್ಳಿ -ಧಾರವಾಡದಲ್ಲಿರುವ 82 ವಾರ್ಡ್ ಗಳ ಪೈಕಿ ಬಿಜೆಪಿ-39, ಕಾಂಗ್ರೆಸ್-33, ಜೆಡಿಎಸ್-01 ಹಾಗೂ ಇತರೆ ಏಳು ಮಂದಿ ಗೆದ್ದಿದ್ದಾರೆ. ಆದರೆ ಬೆಳಗಾವಿಯಲ್ಲಿರುವ 58 ವಾರ್ಡ್‌ಗಳ ಪೈಕಿ ಬಿಜೆಪಿ 35ರಲ್ಲಿ ಗೆಲ್ಲುವ ಮೂಲಕ ವೈಟ್‌ವಾಶ್ ಮಾಡಿದೆ. ಆದರೆ ಇಲ್ಲಿ ಕಾಂಗ್ರೆಸ್-10, ಪಕ್ಷೇತರರು 12ಸ್ಥಾನ ಗೆಲ್ಲುವಲ್ಲಿ ಮಾತ್ರ ಸಫಲರಾಗಿದ್ದಾರೆ. ಮತ್ತೊಂದು ಕ್ಷೇತ್ರವಾಗಿದ್ದ ಕಲಬುರಗಿಯ 55 ಸ್ಥಾನಗಳ ಪೈಕಿ ಬಿಜೆಪಿ-23, ಕಾಂಗ್ರೆಸ್-27, ಜೆಡಿಎಸ್-04ವಾರ್ಡ್‌ಗಳನ್ನು ಗೆದ್ದಿದೆ.

ಹಾಗೆ ನೋಡಿದರೆ, ಈ ಸ್ಥಳೀಯ ಸಂಸ್ಥೆ ಚುನಾವಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮೊದಲ ಅಗ್ನಿ ಪರೀಕ್ಷೆ ಎನಿಸಿಕೊಂಡಿದ್ದರೂ, ರಾಜ್ಯ ಹಾಗೂ ರಾಷ್ಟ್ರ ನಾಯಕರಿಗೆ ಇದು ಮಹತ್ವ ಚುನಾವಣೆಯಾಗಿತ್ತು. ಯಡಿಯೂರಪ್ಪ ಇಲ್ಲದೇ ಬಿಜೆಪಿ ಇಲ್ಲ ಎನ್ನುವ ವಾತಾವರಣದಿಂದ ಹೊರಬೇಕಾದ ಅನಿವಾರ್ಯತೆಯೂ ಇತ್ತು. ಅದಕ್ಕೊಂದು ಮೈದಾನದ ಅಗತ್ಯವಿತ್ತು. ಆ ಮೈದಾನ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಾಗಿತ್ತು. ಅದರಲ್ಲಿಯೂ ಉತ್ತರ ಕರ್ನಾಟಕ ಭಾಗದಲ್ಲಿರುವ ಲಿಂಗಾಯತರನ್ನು ಯಡಿಯೂರಪ್ಪ ಅವರು ಬಿಗಿದಿಟ್ಟು ಕೊಂಡಿದ್ದಾರೆ. ಒಂದು ವೇಳೆ ಅವರು ಪ್ರಚಾರಕ್ಕೆ ಬಾರದಿದ್ದರೆ, ಮತ ಹರಿದು ಹಂಚಿ ಹೋಗುತ್ತವೆ ಎನ್ನುವ ವಾತಾವರಣದಿಂದ ರಾಜ್ಯ ಬಿಜೆಪಿ ಹೊರಬರಬೇಕಿತ್ತು. ಪಕ್ಷದ ವರಿಷ್ಠರಿಗೂ ಬಿಎಸ್‌ವೈ ಇಲ್ಲದಿದ್ದರೆ, ಯಾವ ರೀತಿ ಚುನಾವಣೆ ನಡೆಯಲಿದೆ ಎನ್ನುವುದನ್ನು ನೋಡಬೇಕಿತ್ತು.

ಈಗ ಚುನಾವಣಾ ಫಲಿತಾಂಶ ಹೊರಬಂದಿದ್ದು, ಈ ಹಂತದಲ್ಲಿ ನೋಡುವುದಾದರೆ, ಬಿಜೆಪಿ ತನ್ನದೇ ಆದ ಮತಬ್ಯಾಂಕ್ ಅನ್ನು ಹೊಂದಿದ್ದು, ಈಗಲೂ ಅದು ಗಟ್ಟಿಯಾಗಿದೆ. ಯಡಿಯೂರಪ್ಪ ಅವರು ತಟಸ್ಥರಾಗಿದ್ದರೂ, ಈ ಹಂತದಲ್ಲಿ ಅದು ಬಿಜೆಪಿಗೆ ಕಗ್ಗಟ್ಟಾಗುವುದಿಲ್ಲ ಎನ್ನುವುದು ಮನವರಿಕೆಯಾಗಿದೆ. ಈ ಮೂರು ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶವೇ ಇಡೀ ರಾಜ್ಯಕ್ಕೆ ವಿಸ್ತರಿಸಿ ನೋಡುವುದು, ಅಥವಾ ಇದೇ ಫಲಿತಾಂಶವೇ ಅಂತಿಮ ಎಂದು ಒಪ್ಪಿಕೊಳ್ಳುವುದು ಕಷ್ಟ. ಆದರೆ ಸೂಕ್ತ ಯೋಜನೆ, ಸಂಘಟನೆಯಿಂದ ಯಡಿಯೂರಪ್ಪ ಇಲ್ಲದೆಯೂ, ಬಿಜೆಪಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು ಎನ್ನುವುದನ್ನು ಈ ಚುನಾವಣೆಯಿಂದ ಬಿಜೆಪಿ ಕಲಿಯಬಹುದಾದ ‘ಪಾಸಿಟಿವ್ ಪಾಠ’.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ಆರು ತಿಂಗಳಿನಿಂದಲೂ, ಯುಡಿಯೂರಪ್ಪ ನಂತರ ಪಕ್ಷವನ್ನು ಟೇಕ್ ಆಫ್
ಮಾಡುವುದು ಹೇಗೆ? ಅವರ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ಲಿಂಗಾಯತ ಮತ ಬ್ಯಾಂಕ್ ಬಿಜೆಪಿಯ ಮತಬ್ಯಾಂಕ್ ಆಗಿ ಮಾಡುವುದು ಹೇಗೆ ಎನ್ನುವ ಬಗ್ಗೆ ಹತ್ತು ಹಲವು ಯೋಜನೆ ರೂಪಿಸಿದ್ದರು. ಅದರ ಭಾಗವಾಗಿಯೇ ಯಡಿಯೂರಪ್ಪ ಆಪ್ತ, ಲಿಂಗಾಯತ ಸಮುದಾಯದವರಾದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಿದ್ದರು.

ಬಿಎಸ್‌ವೈ ಆಪ್ತರಾಗಿದ್ದರೂ ಬೊಮ್ಮಾಯಿ, ಬಿಎಸ್ ವೈ ರೀತಿ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಸ್ಥಿತಿಯಲ್ಲಿ ಈಗಲೂ ಇಲ್ಲ. ಆದ್ದರಿಂದಲೇ ಇದೀಗ ದೆಹಲಿ ನಾಯಕರಿಂದ ಅವರಿಗೆ ‘ಸ್ಪೂನ್ ಫೀಡ್’ ಆಗುತ್ತಿದೆ. ಸರಳತೆಯಿಂದ ಸಾರ್ವಜನಿಕರಲ್ಲಿ ಒಂದು ಇಮೇಜ್ ಕ್ರಿಯೆಟ್ ಮಾಡಿರುವ ಬೊಮ್ಮಾಯಿ
ಅವರು, ಆಡಳಿತ ಹಾಗೂ ರಾಜಕೀಯದ ಪ್ರತಿಯೊಂದು ವಿಷಯದಲ್ಲಿಯೂ ದೆಹಲಿಯತ್ತ ನೋಡು ತ್ತಿದ್ದಾರೆ. ಇದನ್ನೇ ದೆಹಲಿ ನಾಯಕರೂ ಬಯಸಿದ್ದು.
ಚುನಾವಣಾ ವಿಷಯಕ್ಕೆ ಬರುವುದಾದರೆ, ಬಸವರಾಜ ಬೊಮ್ಮಾಯಿ ಅವರ ಸರಕಾರದ ಇಮೇಜ್ ವೃದ್ಧಿಸುವ ಭರದಲ್ಲಿದ್ದರೆ, ಇತ್ತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜೀನಾಮೆ ನೀಡುವ ಮೊದಲು ‘ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲಿಯೇ ನಡೆಯಲಿದೆ. ಅದಕ್ಕಾಗಿ ನಾನು ರಾಜ್ಯ ಪ್ರವಾಸ ಆರಂಭಿಸುತ್ತೇನೆ’ ಎಂದಿದ್ದರು. ಈ ಮೂಲಕ ಮತ್ತೊಮ್ಮೆ ತಾನು ‘ಕೀ ಮಾಸ್ಟರ್’ ಆಗುವ ಲೆಕ್ಕಾಚಾರವನ್ನು ಹಾಕಿ, ಅದಕ್ಕೆ ಅಗತ್ಯ ಸಿದ್ಧತೆಯನ್ನು ಆರಂಭಿಸಿದ್ದರು. ಇದನ್ನು ಆರಂಭಿಕ ಹಂತದಲ್ಲಿಯೇ ಮುರಿಯಬೇಕು ಎನ್ನುವ ಪ್ರತಿತಂತ್ರ ಹೂಡಿದ ವರಿಷ್ಠರು, ಕೆಲ ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ ಬಾಯಲ್ಲಿ ‘ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ’ ಎಂದು ಹೇಳಿಸಿದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಪುತ್ರಿಯ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿ, ಅಲ್ಲಿಂದ ದಾವಣಗೆರೆಗೆ ಆಗಮಿಸಿದ್ದ ಶಾ ಅವರು ಈ ಮಾತನ್ನು ಇಲ್ಲಿ ಹೇಳುವ ಮೂಲಕ, ರಾಜ್ಯ ಜನರಿಗೆ ಸ್ಪಷ್ಟ ಸಂದೇಶ ರವಾನಿಸಿದರು. ‘ಬೆಡ್‌ರೂಂನಲ್ಲಿ ಸ್ವಿಚ್ ಹಾಕಿದರೆ, ಅಡುಗೆ ಮನೆಯ ದೀಪ’ ಹತ್ತಿಕೊಂಡಂತೆ, ದಾವಣಗೆರೆ ಯಲ್ಲಿ ಆಡಿದ ಮಾತಿನ ಎಫೆಕ್ಟ್ ಈ ಮೂರು ಮಹಾನಗರ ಪಾಲಿಕೆಯ ಮತದಾನದಲ್ಲಿ ಆಗಿಲ್ಲ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಚುನಾವಣೆಗೆ ಒಂದು
ದಿನ ಬಾಕಿಯಿರುವಾಗ, ಈ ರೀತಿಯ ಘೋಷಣೆ ಮಾಡಿದರೆ, ಅದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಶಾಗೆ ಗೊತ್ತು.

ಇದೀಗ ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ ಮಾತ್ರಕ್ಕೆ, ಬಾಕಿಯಿರುವುದೆಲ್ಲ ಕೇಕ್ ವಾಕ್ ಎನ್ನಲು ಬರುವುದಿಲ್ಲ. ಯಡಿಯೂರಪ್ಪ ಅವರನ್ನು ಎಷ್ಟೇ ಕಟ್ಟಿಹಾಕಿದರೂ, ಕೆಲವು ಕ್ಷೇತ್ರಗಳ ಮೇಲಾದರೂ ಅವರು ಪರಿಣಾಮ ಬೀರುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ದರಿಂದ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಳಸಿಕೊಳ್ಳುತ್ತದೆ. ಆದರೆ ಅದಕ್ಕೂ ಮೊದಲು ಈ ಚುನಾವಣೆಗಳನ್ನು ನಿಮ್ಮ ಸಹಾಯವಿಲ್ಲದೆಯೇ ಗೆದ್ದಿದ್ದೇವೆ ಎನ್ನುವ ಸಂದೇಶವನ್ನು ಅವರಿಗೆ ರವಾನಿಸುವ ಜತೆಗೆ, ಅವರ ಬೆಂಬಲಿಗರಿಗೆ ‘ವ್ಯಕ್ತಿಗಿಂತ ಪಕ್ಷ ಮುಖ್ಯ’ ಎನ್ನುವ ಸಂದೇಶವನ್ನು ರವಾನಿಸುವ ಪ್ರಯತ್ನವನ್ನು ಬಿಜೆಪಿ ಮಾಡಿದೆ. ಆದರೆ ಈ ಹಂತದಲ್ಲಿ ಬಿಜೆಪಿ ಗಳಿಸಿದ್ದಷ್ಟೇ ಕಾಂಗ್ರೆಸ್ ಕಳೆದುಕೊಂಡಿದೆ.

ಬೆಳಗಾವಿ, ಕಲಬುರಗಿಯಲ್ಲಿ ತಮ್ಮದೇ ಆದ ಹಿಡಿತವನ್ನು ಕಾಂಗ್ರೆಸ್ ಹೊಂದಿದ್ದರೂ ಅದನ್ನು ಮತವಾಗಿ ಪರಿಗಣಿಸುವುದಕ್ಕೆ ಸಾಧ್ಯವಾಗಿಲ್ಲ. ಮೂರರಲ್ಲಿ
ಒಂದನ್ನು ಗೆದ್ದು, ಇನ್ನೆರಡರಲ್ಲಿ ಎಡವಿರುವ ಕಾಂಗ್ರೆಸ್ ಮತ್ತೊಮ್ಮೆ ಹಿಡಿತ ಕಳೆದುಕೊಳ್ಳುತ್ತಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ ಸೋಲಿಗೆ ಕಾಂಗ್ರೆಸ್‌ನಲ್ಲಿ ಈಗಾಗಲೇ ವಿಶ್ಲೇಷಣೆಗಳು ಆರಂಭವಾಗಿದ್ದು, ಸಿದ್ದರಾಮಯ್ಯ ಅವರಿಲ್ಲದೇ ಪ್ರಚಾರ ಮಾಡಿದ್ದು, ಅಭ್ಯರ್ಥಿಗಳ ಕೈಹಿಡಿದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ರ‍್ಯಾಲಿಗಳನ್ನು ಮಾಡಿದರೂ, ಜನರು ಡಿಕೆಯನ್ನು ಒಪ್ಪಿಲ್ಲ. ಚುನಾವಣಾ ಸಮಯಕ್ಕೆ ಸಿದ್ದರಾಮಯ್ಯ ಅವರು ಪ್ರಕೃತಿ ಚಿಕಿತ್ಸೆ ನೆಪದಲ್ಲಿ ಪ್ರಚಾರಕ್ಕೆ ತೆರಳಲಿಲ್ಲ. ಅಲ್ಲಿನ ಅಹಿಂದ ಮತಗಳು ಕಾಂಗ್ರೆಸ್ ಕೈಹಿಡಿದಿಲ್ಲ ಎನ್ನುವ ವಿಶ್ಲೇಷಣೆಗಳು ಆರಂಭವಾಗಿವೆ.

ಆದರೆ ಈ ವಾದವನ್ನು ಎಷ್ಟರ ಮಟ್ಟಿಗೆ  ಪ್ಪಬೇಕು ಎನ್ನುವುದು ಎರಡನೇ ಮಾತು. ಏಕೆಂದರೆ ಬಿಜೆಪಿ ಪಾಲಿಗೆ ಯಡಿಯೂರಪ್ಪ ಮಾಸ್ ಲೀಡರ್ ಆಗಿದ್ದರೆ,
ಕಾಂಗ್ರೆಸ್ ಪಾಲಿಗೆ ಸಿದ್ದರಾಮಯ್ಯ. ಸಿದ್ದರಾಮಯ್ಯ ಹೋಗಲಿಲ್ಲವೆಂ ದು ಸೋಲಾಯಿತು ಎನ್ನುವುದಾದರೆ, ಯಡಿಯೂರಪ್ಪ ಹೋಗದಿದ್ದರೆ ಬಿಜೆಪಿಗೆ ಸೋಲಾಗ ಬೇಕಿತ್ತು ಅಲ್ಲವೇ? ಎನ್ನುವ ಪ್ರಶ್ನೆಗಳು ಶುರುವಾಗಿದೆ. ರಾಜಕೀಯದಲ್ಲಿ ಯಾವುದು ಏನಾಗುತ್ತದೆ ಎಂದು ತಿಳಿಯುವುದು ಕಷ್ಟ ಎನ್ನುವುದು ಇದೇ ಕಾರಣಕ್ಕೆ ಇರಬೇಕು.

ಒಟ್ಟಾರೆ ಹೊಸದಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಒಂದು ‘ಕಿಕ್ ಸ್ಟಾರ್ಟ್’ ಅಗತ್ಯವಿತ್ತು. ಅಽಕಾರಕ್ಕೆ ಬಂದು ತಿಂಗಳು ಕಳೆಯುವುದರೊಳಗೆ ಎರಡು ಪ್ರಮುಖ ನಗರಗಳ ಮಹಾನಗರ ಪಾಲಿಕೆಯ ಅಧಿಕಾರದ ಗದ್ದುಗೆ ಏರಿದ್ದು ಬೊಮ್ಮಾಯಿ ಪಾಲಿಗೆ ಒಂದೊಳ್ಳೆ ಸೂಚನೆ. ಇನ್ನು ‘ಮಾಸ್ ಲೀಡರ್’ ಸಂಸ್ಕೃತಿ ಬದಲಿಗೆ ಸಾಮೂಹಿಕ ನಾಯಕತ್ವಕ್ಕೆ ಹೆಚ್ಚಿನ ಮಹತ್ವ ನೀಡಿ, ‘ಎಲ್ಲವೂ ದೆಹಲಿಯಿಂದಲೇ ನಡೆಯಲಿ’ ಎನ್ನುವ ಲೆಕ್ಕಾಚಾರ ದಲ್ಲಿದ್ದ ಬಿಜೆಪಿ ವರಿಷ್ಠರಿಗೆ ತಮ್ಮ ಅಜೆಂಡಾವನ್ನು ಇತರ ರಾಜ್ಯಗಳ ರೀತಿಯಲ್ಲಿಯೇ ಕರ್ನಾಟಕದಲ್ಲಿ ಅಳವಡಿಸಬಹುದು ಎನ್ನುವ ವಿಶ್ವಾಸವನ್ನು ಮೂಡಿಸಿದೆ. ಇಷ್ಟರ ಮಟ್ಟಿಗೆ ಮಹಾನಗರ ಪಾಲಿಕೆ ಚುನಾವಣೆಗಳು ಬಿಜೆಪಿಗೆ ನೀಡಿದ ಉತ್ತಮ ಬೆಳವಣಿಗೆ.

ಆದರೆ ಪಾಲಿಕೆ ಚುನಾವಣೆಗೂ, ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಿಗೂ ಬಹಳಷ್ಟು ವ್ಯತ್ಯಾಸವಿರುತ್ತದೆ ಎನ್ನುವುದನ್ನು ಬಿಜೆಪಿ ವರಿಷ್ಠರು
ಮರೆಯಬಾರದು.