Friday, 20th September 2024

ನಿಫಾ ಬಗ್ಗೆ ಇರಲಿ ಎಚ್ಚರ

ಕರೋನಾ ಮೂರನೇ ಅಲೆಯ ಆತಂಕದಲ್ಲಿರುವ ಭಾರತದಲ್ಲಿ ಇದೀಗ ನಿಫಾ ವೈರಸ್ ಕಾಣಿಸಿಕೊಂಡಿರುವುದು ಮತ್ತೊಂದು ಆತಂಕವನ್ನು ಸೃಷ್ಟಿಸಿದೆ. ಕರೋನಾಗೆ ಹೋಲಿಸಿದರೆ, ನಿಫಾ ವೇಗವಾಗಿ ಹರಡುವುದು ಮಾತ್ರ ವಲ್ಲದೇ, ಸಾವಿನ ಪ್ರಮಾಣವೂ ಹೆಚ್ಚಿರಲಿದೆ.

ನಿಫಾ ವೈರಸ್ ಕರೋನಾಗಿಂತ ಅಪಾಯಕಾರಿಯಾಗಿದ್ದು, ಮರಣದ ಪ್ರಮಾಣ ಶೇ.೪೮ರಿಂದ ೭೫ರಷ್ಟಿರಲಿದೆ. ಕರೋನಾ ರೀತಿಯಲ್ಲಿಯೇ ಈ ಸೋಂಕಿಗೂ ಚಿಕಿತ್ಸೆಯಾಗಲಿ ಅಥವಾ ಲಸಿಕೆಯಾಗಲಿ ಲಭ್ಯವಿಲ್ಲ. ಮನುಷ್ಯ ರಿಂದ ಮನುಷ್ಯರಿಗೆ ಸೋಂಕು ಹರಡಲಿದೆ. ಇನ್ನು ಈ ವೈರಸ್ ಬಾವಲಿಗಳು ಹಾಗೂ ಹಂದಿಗಳಲ್ಲಿ ಕಾಣಿಸಿಕೊಂಡು ಬಳಿಕ ಮನುಷ್ಯರಿಗೆ ಹರಡಲಿದೆ. ಈ ಸೋಂಕಿಗೆ ಈಗಾಗಲೇ ಕೇರಳದ ೧೨ ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಆತನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಬಹುತೇಕರಲ್ಲಿ ನೆಗೆಟಿವ್ ಇರುವುದು ಸಮಾಧಾನಕರ ಸಂಗತಿ ಯಾದರೂ, ಈ ಬಗ್ಗೆ ಹೆಚ್ಚು ನಿರ್ಲಕ್ಷ್ಯ ವಹಿಸುವುದು ಸಲ್ಲ. ಇನ್ನು ಕೇರಳದೊಂದಿಗೆ ಕರ್ನಾಟಕದ ಗಡಿ ಹಂಚಿ ಕೊಂಡಿದ್ದು, ವ್ಯವಹಾರವೂ ಹೆಚ್ಚಿದೆ. ಆದ್ದರಿಂದ ದಕ್ಷಿಣ ಕನ್ನಡದಲ್ಲಿ ಈಗಷ್ಟೇ ಕರೋನಾ ಸೋಂಕು ಕೊಂಚ ಪ್ರಮಾಣದಲ್ಲಿ ತಗ್ಗಿದೆ. ಈ ಎಲ್ಲವನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಸರಕಾರ ನಿಫಾ ನಮ್ಮಲ್ಲಿ ಕಾಣಿಸಿ ಕೊಂಡಿಲ್ಲ ಎಂದು ನಿರ್ಲಕ್ಷ್ಯ ತೋರುವ ಬದಲು ಈ ವೈರಸ್ ಹಬ್ಬದಂತೆ ಗಡಿ ಜಿಲ್ಲೆಗಳಲ್ಲಿ ಅಗತ್ಯ ಕ್ರಮವಹಿಸಬೇಕು.

ಕಳೆದ ಬಾರಿ ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡು ನೂರಾರು ಮಂದಿಗೆ ಇದು ಭಾರಿ ಸಮಸ್ಯೆಯನ್ನು ಮಾಡಿತ್ತು . ಆದ್ದರಿಂದ ಕರೋನಾದ ಜತೆಗೆ ಇದು
ಕಾಣಿಸಿಕೊಳ್ಳುತ್ತಿರುವುದು ಇನ್ನಷ್ಟು ಆತಂಕದ ವಿಷಯ. ಕೇವಲ ರಾಜ್ಯಗಳು ಮಾತ್ರ ಈ ವೈರಸ್ ಬಗ್ಗೆ ಎಚ್ಚರಿಕೆ ವಹಿಸದೇ, ಕೇಂದ್ರ ಸರಕಾರವೂ ಇದನ್ನು
ಮಟ್ಟಹಾಕುವುದಕ್ಕೆ ಅಗತ್ಯ ಕ್ರಮವಹಿಸಬೇಕು.