ವೀಣಾ ಭಟ್
ಸುತ್ತಲೂ ಹಸಿರು, ನಡುವೆ ತಲೆ ಎತ್ತಿರುವ ಕಪ್ಪನೆಯ ಬಂಡೆ. ಮೇಲೆ ನೀಲಾಗಸ. ಈ ಸುಂದರ ದೃಶ್ಯ ಸವಿಯಬೇಕೆಂದರೆ, ಕೊಡಗು ಜಿಲ್ಲೆಯ ಕೋಟೆಬೆಟ್ಟಕ್ಕೆ
ಹೋಗಬೇಕು.
ಈ ಬೆಟ್ಟ ದೂರದಿಂದ ನೋಡಲು ಕೋಟೆಯ ಆಕಾರ ಹೊಂದಿದ್ದರಿಂದಲೇ ಇರಬೇಕು, ಇದನ್ನು ಸ್ಥಳೀಯರು ಕೋಟೆಬೆಟ್ಟ ಎಂದು ಕರೆದರು. ಹಸಿರು ಸಿರಿಯ ನಡುವೆ ತಲೆ ಎತ್ತಿರುವ ಬಹು ಸುಂದರ ತಾಣ ಇದು. ಕೊಡಗಿನ ಎತ್ತರದ ಬೆಟ್ಟಗಳಲ್ಲಿ ಮೂರನೆಯ ಸ್ಥಾನ ಪಡೆದುಕೊಂಡಿರುವ ಕೋಟೆ ಬೆಟ್ಟ ಸುಮಾರು ಐನೂರು ಮೀಟರು ಎತ್ತರದಲ್ಲಿದೆ.ಇದು ದಕ್ಷಿಣ ಕನ್ನಡ ಮತ್ತು ಕೊಡಗಿನ ಗಡಿ ಭಾಗದಲ್ಲಿದೆ.
ಇದು ಪ್ರವಾಸಿ ಆಕರ್ಷಣೆಯಲ್ಲದೆ ಚಾರಣಿಗರಿಗೂ ಇಷ್ಟವಾದ ಸ್ಥಳ. ಬೆಂಗಳೂರಿನಿಂದ ವಾರಾಂತ್ಯದಲ್ಲಿ ಹೋಗಬಹು ದಾದ ಸುಂದರ ತಾಣ. ಇಲ್ಲಿಯ ಸುಂದರ ಪ್ರಕತಿ ಸೌಂದರ್ಯವನ್ನು ಸವಿಯಲೆಂದೇ ಚಾರಣಿಗರು, ಪ್ರವಾಸಿಗರು ಬರು ತ್ತಾರೆ. ದೊಡ್ಡದಾದ ಕಲ್ಲು ಬಂಡೆಯೇ ಒಂದು ಬೆಟ್ಟ. ಬೆಟ್ಟದ ಮೇಲೆ ಒಂದು ಪುಟ್ಟ ಶಿವ ದೇವಾಲಯವಿದೆ. ಇಲ್ಲಿ ವಾರದಲ್ಲಿ ಎರಡು ದಿನ ಪೂಜೆ ನಡೆಯುತ್ತದೆ. ಪಾಂಡವರು ವನವಾಸದ ಸಮಯದಲ್ಲಿಈ ಬೆಟ್ಟದಲ್ಲಿ ತಂಗಿದ್ದರು ಎಂಬ ಐತಿಹ್ಯವಿದೆ. ಇದು ಪ್ರಕೃತಿಯ ರಮ್ಯ ತಾಣ ನಿಜ, ಆದರೆ ಬೆಟ್ಟದ ಮೇಲಿನವರೆಗೆ ವಾಹನಗಳು ಓಡಾಡುವಂತಹ ರಸ್ತೆಯಿರುವುದರಿಂದ ಚಾರಣಿಗರ ಜತೆಯಲ್ಲೇ, ಪ್ರಕೃತಿ ಸೌಂದರ್ಯವನ್ನು ಸವಿಯಲು ಬರುವ ಪ್ರವಾಸಿಗರ ದಂಡೇ ಇರುತ್ತದೆ. ವಾಹನದ ಜತೆ ರೂಢಿಸಿಕೊಂಡು ಬರುವ ಇತರ ಕೆಲವು ಹವ್ಯಾಸಗಳ ಕಾಟವೂ ಇಲ್ಲಿದೆ ಎನ್ನಬಹುದು!
ಬೆಟ್ಟದ ಮೇಲಿಂದ ಕಾಣುವ ದಶ್ಯ ಬಹು ಸುಂದರ. ಛಾಯಾಗ್ರಾಹಕರಿಗೆ ಹಬ್ಬ. ಹೇಳಿ ಕೇಳಿ ಕೊಡಗು ಹಸಿರಿನ ಸಿರಿಗೆ ಹೆಸರಾದದ್ದು. ಅಂತಹ ಹಸಿರಿನ ನಡುವೆ, ತಲೆ ಎತ್ತಿರುವ ಈ ಕಪ್ಪು ಕಲ್ಲಿನ ನೋಟ ನಿಜಕ್ಕೂ ಸುಂದರ. ಇದರ ಜತೆಯಲ್ಲೇ, ತುದಿಗೆ ಸಾಗಿದಾಗ ಕಾಣುವ ಸುತ್ತಲಿನ ಹಸಿರಿನ ಸಿರಿ, ಇಳಿಜಾರು, ಹುಲ್ಲು ಗಾವಲು, ಕಾಡಿನ ಕಿಬ್ಬದಿ, ದೂರದ ಬೆಟ್ಟಸಾಲು, ಅದರಾಚೆ ಇರುವ ದಿಗಂತ ಎಲ್ಲವೂ ಮನಮೋಹಕ ದೃಶ್ಯ. ಇಲ್ಲಿಂದ ಕಾಣುವ ಹಾರಂಗಿ ಜಲಾಶಯ ಮತ್ತು ಕುಮಾರ ಪರ್ವತದ ಪಕ್ಷಿನೋಟ ಮಿಸ್ ಮಾಡಿಕೊಳ್ಳುವಂತಿಲ್ಲ. ಬೆಟ್ಟದ ಮೇಲೆ ಹೋಗಲು ಯಾವುದೇ ಪ್ರವೇಶ ಶುಲ್ಕವಿಲ್ಲ. ಸುಂದರ ಕಾಫಿ ತೋಟಗಳನ್ನು ನೋಡುತ್ತಾ ಬೆಟ್ಟದ ಮೇಲೇರುವುದು ಒಂದು ಸುಂದರವಾದ ಅನುಭವ. ಬೆಟ್ಟದ ಮೇಲೆ ಸ್ವಲ್ಪ ಸಮಯ ಕಳೆಯಬೇಕೆಂದರೆ ತಿಂಡಿ-ಊಟ ತೆಗೆದುಕೊಂಡು ಹೋಗಬೇಕು. ಅನೂ ಸಿಗುವುದಿಲ್ಲ.
ಈ ಕಾಫಿತೋಟಗಳನ್ನು ನೋಡುವ ಸೊಬಗೇ ಇನ್ನೊಂದು ರೀತಿಯದು. ಎಪ್ರಿಲ್ ಮೇ ಸಮಯದಲ್ಲಿ ಕಾಫಿಯ ಹೂವಾಗುವ ಸಮಯದಲ್ಲಿ, ಇಡೀ ಬೆಟ್ಟವೇ ಹೂವಿನಿಂದ ಸಿಂಗಾರಗೊಳ್ಳುವ ನೋಟವನ್ನು ಕಾಣಬಹುದು. ಇನ್ನು ಕಾಫಿ ಹಣ್ಣಾಗುವ ಸಮಯದಲ್ಲಿ ಗಿಡಗಳ ಸೌಂದರ್ಯವೇ ಬೇರೆ ಯದು. ಕಾಫಿ ತೋಟಗಳು ಸಹ ಹಸಿರಿನ ಸಿರಿಗೆ ತಮ್ಮದೇ ರೀತಿಯ ಕೊಡುಗೆ ನೀಡುವು ದರಿಂದಾಗಿ, ಕೋಟೆಬೆಟ್ಟದ ನೋಟವು ಇನ್ನಷ್ಟು ಅನನ್ಯ ಎನಿಸುತ್ತದೆ. ಇನ್ನೇಕೆ ತಡ, ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಲೇ, ಕೋಟೆಬೆಟ್ಟಕ್ಕೊಮ್ಮೆ ಪ್ರವಾಸ ಬನ್ನಿ!
ಬೆಂಗಳೂರಿನಿಂದ ಸುಮಾರು ೨೫೦ ಕಿಮೀ, ಮಡಿಕೇರಿಯಿಂದ ೩೨ ಕಿಮೀ ದೂರದಲ್ಲಿದೆ. ಮಡಿಕೇರಿ ಸುತ್ತ ಮುತ್ತ ಹಳ್ಳಿಗಳಲ್ಲೂ ಹಲವಾರು ಹೋಮ್ ಸ್ಟೇಗಳಿವೆ.