Friday, 20th September 2024

ಮ್ಯಾನೇಜ್’ಮೆಂಟುಗಳು ಸರಕಾರವಾಗಬಾರದು !

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

dascapital1205@gmail.com

ಸರಕಾರಕ್ಕೂ ಮ್ಯಾನೇಜ್‌ಮೆಂಟ್‌ಗೂ ಅದರ ಭೌತಿಕ ಮತ್ತು ಅಂತರಂಗಿಕವಾದ ಸ್ವರೂಪ ಮತ್ತು ರಚನೆಯ ಒಟ್ಟೂ ನಡೆಯಲ್ಲಿ, ಕಾರ್ಯಗತಿಯಲ್ಲಿ ಹೇಳುವಂಥ ದ್ದೇನೂ ವ್ಯತ್ಯಾಸವೇನಿಲ್ಲ. ಧ್ಯೇಯ, ಉದ್ದೇಶ, ಗುರಿಗಳಲ್ಲಿ ಸಮಾನ ಅಂಶಗಳೇ ಇರುತ್ತವೆ.

ಆದರೆ ಸರಕಾರದ ಮಟ್ಟದಲ್ಲಿ ಮ್ಯಾನೇಜ್ ಮಾಡುವ ಕ್ರಮದಲ್ಲಿ, ಖಾಸಗಿಯಲ್ಲಿ ಮ್ಯಾನೇಜ್ ಮಾಡುವ ಕ್ರಮದಲ್ಲಿ ವ್ಯತ್ಯಾಸ ಇರುವುದರಿಂದ ಮ್ಯಾನೇಜ್‌ಮೆಂಟ್ ಎಂದಾಕ್ಷಣ ತೀರಾ ಖಾಸಗಿ ಎಂಬ ಆಲೋಚನೆ ಹುಟ್ಟಿಕೊಳ್ಳುತ್ತದೆ. ಮತ್ತು ಕಾರ್ಯದಕ್ಷತೆ, ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ ಎಂದೇ ಭಾವಿಸಲಾಗುತ್ತದೆ. ಯಾವುದು ಯಾವುದನ್ನೂ ಮ್ಯಾನೇಜ್ ಮಾಡಬಲ್ಲದೋ ಆ ವ್ಯವಸ್ಥೆಯನ್ನೇ ಮ್ಯಾನೇಜ್‌ಮೆಂಟ್ ಎಂದು ಕರೆಯುವುದು. ಈ ಹಿನ್ನೆಲೆಯಲ್ಲಿ ಸರಕಾರಗಳು ಕೂಡ ಬಹುದೊಡ್ಡ ರಚನೆಯ ವ್ಯಾಪ್ತಿ ಮತ್ತು ವಿಸ್ತಾರವನ್ನುಳ್ಳ ಮ್ಯಾನೇಜ್‌ಮೆಂಟ್ ಆಗೇ ಇರುತ್ತದೆ. ಏನನ್ನು ಮ್ಯಾನೇಜ್ ಮಾಡುವುದು ಅಂದರೆ ವ್ಯವಸ್ಥೆಯನ್ನು ಅವ್ಯವಸ್ಥೆ ಯಾಗದಂತೆ ನಿರ್ವಹಣೆ ಮಾಡುವ ನಿರಂತರ ಪ್ರಕ್ರಿಯೆಯನ್ನು. ಅಂದರೆ ಅವ್ಯವಸ್ಥೆಯಾಗದಂತೆ ನಿರ್ವಹಣೆ ಮಾಡಬೇಕಾದ ಮ್ಯಾನೇಜ್ ಮೆಂಟ್‌ಗೆ ಪ್ರತಿಯೊಂದ ರಲ್ಲೂ ಸೂಕ್ಷ್ಮತೆ ಇರಬೇಕಾಗುತ್ತದೆ.

ಯಾವ ಮ್ಯಾನೇಜ್‌ಮೆಂಟ್ ಸಂವೇದನೆ ಮತ್ತು ಸೂಕ್ಷ್ಮತೆಗಳು ಇರುತ್ತದೆಯೋ ಅದು ತನ್ನ ಕಾರ್ಯ ಸಾಧನೆ ಯಲ್ಲಿ ಯಶಸ್ವಿಯಾಗುತ್ತದೆ. ಅದರಲ್ಲಿ ಪರಮಾಧಿ ಕಾರವಿರುವ ವ್ಯಕ್ತಿ ಉತ್ತಮ ನಾಯಕನೆನಿಸಿಕೊಳ್ಳುತ್ತಾನೆ. ನಿಷ್ಪಕ್ಷಪಾತ ನೋಟ, ಕುಂದು ಕೊರತೆಗಳ ನಿವಾರಣೆ, ವಿನಿಯೋಗತ್ವ, ಎಲ್ಲರನ್ನೂ ಒಳಗೊಳ್ಳಿಸು ವಿಕೆ, ಅಪೂರ್ವಗ್ರಹ ಮನೋಧರ್ಮ, ಮೂಲಭೂತ ಸೌಕರ್ಯಗಳ ಒದಗಿಸು ವಿಕೆಯ ವಿಚಾರಗಳಲ್ಲಿ ಮ್ಯಾನೇಜ್ಮೆಂಟ್ ಹೊಂದಿ ರುವ ಸೂಕ್ಷ್ಮತೆಯಿಂದಲೇ ವ್ಯವಸ್ಥೆ ಬಲಗೊಳ್ಳುವುದು.

ಸಂಸ್ಥೆ ಅಥವಾ ಕಂಪನಿಯೊಂದರ ಮ್ಯಾನೇಜ್ಮೆಂಟ್ ಹೊಂದಿರುವ ಬುದ್ಧಿವಂತಿಕೆಗಿಂತ ಅಲ್ಲಿ ದುಡಿಯುವವರ ಮೇಲಿಡುವ ವಿಶ್ವಾಸಾತ್ಮಕ ಮನೋಭಾವಗಳು ಮುಖ್ಯವಾಗುತ್ತದೆ. ವ್ಯವಸ್ಥೆಯೆಂದರೆ ಒಂದು ಪ್ರಭುತ್ವವನ್ನು ಹೊಂದಿರುವ ಶಕ್ತಿಕೇಂದ್ರ. ಈ ಶಕ್ತಿಯ ಕೇಂದ್ರವು ನಿರಂತರವಾಗಿ ಪಾಸಿಟಿವ್ ಆದ ತಾದಾತ್ಮ್ಯವನ್ನು
ತನ್ನ ಧ್ಯೇಯ-ಧೋರಣೆಯಲ್ಲಿ ರೂಢಿಸಿಕೊಂಡಿರಬೇಕು. ಈಗೆಲ್ಲಾ ಮ್ಯಾನೇಜ್‌ಮೆಂಟ್ ಕೋರ್ಸುಗಳು ಅಂತಲೇ ಕಾಲೇಜು-ವಿಶ್ವವಿದ್ಯಾಲಯದಲ್ಲಿ ಅಧ್ಯಯನಕ್ಕೆ ಲಭ್ಯವಿದೆ. ಆದರೆ ಏಳಷ್ಟೇ ಓದಿಕೊಂಡವನೂ ಹೋಟೆಲ್ ಬಿಸಿನೆಸ್ಸೋ, ಇನ್ಯಾವುದೋ ಬಿಸಿನೆಸ್ಸನ್ನು ಆರಂಭಿಸಿ ಸಾಕಷ್ಟು ಯಶಸ್ಸನ್ನು ಪಡೆದ ನಿದರ್ಶನಗಳಿವೆ.

ರಸ್ತೆ ಬದಿಯಲ್ಲಿ ಒಂದು ಸಣ್ಣ ಗೂಡಂಗಡಿಯಲ್ಲಿ ಚಟ್ಟಂಬಡೆ, ಪಾನಿಪುರಿ, ಮಸಾಲೆ ಪುರಿ, ಪಾವ್ ಬಾಜಿ, ಚಪಾತಿ, ಪರೋಟಾ, ಆಮ್ಲೆಟ್, ಚಿಕನ್ ಕಬಾಬ್ ಇತ್ಯಾದಿ ತಿನಿಸುಗಳನ್ನು ಮಾಡಿ ವ್ಯಾಪಾರ ನಡೆಸುವ ಅದೆಷ್ಟೋ ಸಂಖ್ಯೆಯ ಸಣ್ಣಸಣ್ಣ ಕುಟುಂಬಗಳಿವೆ. ಅಲ್ಲಿರುವವರು ಗಂಡ, ಹೆಂಡತಿ, ಮಗ, ಮಗಳು. ಆದರೆ ಅವರು ಯಾರೂ ಆಧುನಿಕ ಮ್ಯಾನೇಜ್‌ಮೆಂಟ್ ಕೋರ್ಸನ್ನು ಕಾಲೇಜು-ವಿಶ್ವವಿದ್ಯಾಲಯದಲ್ಲಿ ಓದಿದವರಲ್ಲ. ಹಾಗಂತ ತಮ್ಮ ನಿತ್ಯದ ವ್ಯವಹಾರದಲ್ಲಿ ಆದ ಲಾಭ-ನಷ್ಟದ ಕುರಿತಾಗಿ ಆತ್ಮಹತ್ಯೆಯ ನಿರ್ಧಾರವನ್ನು ತೆಗೆದುಕೊಳ್ಳುವಷ್ಟು ದೊಡ್ಡಮಟ್ಟದ ಸಾಹಸಕ್ಕೆ ಅವರು ಕೈಹಾಕುವುದಿಲ್ಲ.

ವ್ಯವಹಾರದಲ್ಲಿ ಲಾಭವನ್ನು ಕಂಡುಕೊಳ್ಳುವ ಮಾರ್ಗದಲ್ಲಿ ದಿನೇದಿನೇ ಪ್ರಗತಿಯನ್ನು ಕಾಣುತ್ತಾ ಹನಿಹನಿ ಸೇರಿ ಹಳ್ಳವೆಂಬಂತೆ ಕೊನೆಗೊಂದು ದಿನ ತಾನು ವ್ಯಾಪಾರ ಮಾಡುತ್ತಿದ್ದ ಜಾಗವನ್ನೇ ಖರೀದಿಸಿ ಸ್ವಂತದ್ದಾದ ಕಟ್ಟಡವನ್ನು ಕಟ್ಟಿಕೊಂಡು ಒಂದಿಷ್ಟು ಟೇಬಲ್ ಖುರ್ಚಿಗಳನ್ನು ಜೋಡಿಸಿ ವ್ಯಾಪಾರದ ವೇಗವನ್ನು ಗಂಡನಾದವ ಕುದುರಿಸುತ್ತಾನೆ. ನಿರ್ದಿಷ್ಟ ಸಮಯದಲ್ಲಿ ದುಡಿಯುವ ಅವಧಿಯನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಿಕೊಳ್ಳುತ್ತಾ ಮಾಡಿದ ಸಾಲವನ್ನು ತೀರಿಸಿಕೊಂಡು ಹೋಟೆಲ್‌ನ್ನು ಸಾಲಮುಕ್ತವಾಗಿಸುವ ಮಟ್ಟಿಗೆ ಆರ್ಥಿಕತೆಯನ್ನು ನಿರ್ವಹಿಸುವ ಬುದ್ಧಿವಂತಿಕೆಯನ್ನು ಗಳಿಸುತ್ತಾನೆ. ಕಾಲಕಳೆದಂತೆ ತನ್ನ ಮನೆಯನ್ನು ಚೆನ್ನಾಗಿ
ಕಟ್ಟಿಕೊಳ್ಳುವ ಕನಸೂ ಅವನಲ್ಲಿ ಸಾಕಾರಗೊಕೊಳ್ಳುತ್ತದೆ.

ಮಕ್ಕಳ ವಿದ್ಯಾಭ್ಯಾಸಕ್ಕೇ ಅಂತ ಲಾಭಾಂಶವನ್ನು ಹೊಂದಿಸುತ್ತಾನೆ. ಈ ಹೊಂದಿಸುವ ಲಾಭಾಂಶವನ್ನು ಅವನು ಮ್ಯಾನೇಜ್ ಮಾಡುವ ರೀತಿ ಇದೆಯಲ್ಲ, ಅದನ್ನು ಯಾವ ಮ್ಯಾನೇಜ್‌ಮೆಂಟ್ ಕೋರ್ಸ್ ಕೂಡ ಕಲಿಸಲು ಸಾಧ್ಯವಿಲ್ಲ. ಉಳಿವಿಗಾಗಿ ಚಿಂತನೆ ಹೇಗೆಂಬುದನ್ನು ಆಧುನಿಕ ಮ್ಯಾನೇಜ್‌ಮೆಂಟ್ ಕೋರ್ಸ್
ಅವನು ತಿಳಿದುಕೊಂಡಷ್ಟು ಚೆನ್ನಾಗಿ ಹೇಳಿಕೊಡಲು ಸಾಧ್ಯವಿಲ್ಲವೇನೋ! ಯಾಕೆಂದರೆ, ಅವನದು ಅನುಭವಜನ್ಯ ಚಿಂತನೆ.

ಇದು ಸಾಮಾನ್ಯವಾಗಿ ಸಹಜವಾಗಿ ಕೆಳಮಟ್ಟದ ಮಧ್ಯಮ ವರ್ಗದವರು ಮತ್ತು ತೀರಾ ಬಡವರಲ್ಲದ ವರ್ಗದ ಜನರು ತಮ್ಮ ಬದುಕನ್ನು ಉನ್ನತೀಕರಿಸಿಕೊಳ್ಳುವ ಬಗೆಯದ್ದು. ಸರಕಾರವು ತಮ್ಮಂಥವರಿಗೆ ಜಾರಿಗೆ ತರುವ ಆರ್ಥಿಕ ನೀತಿಗಳ ಬಗ್ಗೆ ಕನಿಷ್ಠ ಮಟ್ಟಿಗಿನ ಜ್ಞಾನ ಇವರಲ್ಲಿರುತ್ತದೆ. ಅಮರ್ತ್ಯ ಸೇನನಂತೆ ದೊಡ್ಡ ಮಟ್ಟದ ಆರ್ಥಿಕ ನೀತಿ ಅಥವಾ ಕ್ರಮಗಳ ಬಗ್ಗೆ ಇವರುಗಳು ಆಲೋಚನೆ ಮಾಡಲಾರರು. ಮುಂದಿನ ವರ್ಷ ಮನೆ ಕಟ್ಟಬೇಕು ಅಥವಾ ಬೈಕ್ ತಗೋಬೇಕು, ಮಗ/ ಮಗಳ ಶಿಕ್ಷಣಕ್ಕೆ ಎಷ್ಟು ಹಣ ಬೇಕು, ಅದಕ್ಕಾಗಿ ಎಷ್ಟು ಹಣವನ್ನು ಹೊಂದಿಸಿಕೊಳ್ಳಬೇಕು ಅನ್ನುವ ಆಲೋಚನೆಗೆ ಪೂರಕವಾಗಿ ಇವತ್ತಿನಿಂದಲೇ ಹೆಚ್ಚು ದುಡಿಯುವ ಅಥವಾ ಹೆಚ್ಚು ಕೂಡಿಡುವ ಆರ್ಥಿಕ ಕ್ರಮ-ವಿಧಾನಗಳನ್ನು ಅನುಸರಿಸುವ ಇಂಥವರು ಯಾವತ್ತೂ ಮೋಸ, ದಗಾ, ವಂಚನೆ, ಹಣ ಲಪಟಾಯಿಸುವು ದನ್ನು ಮಾಡುವುದಿಲ್ಲ.

ಯಾಕೆಂದರೆ, ತಾನು ಗಳಿಸಿದ ಅಥವಾ ಸಂಪಾದಿಸಿದ ದುಡ್ಡನ್ನು ಮ್ಯಾನೇಜ್ ಮಾಡಲು ಸೋತಾಗಲೇ ಉದ್ಯಮದ ಹಾದಿ ಹಳ್ಳ ಹಿಡಿಯುವುದು, ಕೊನೆಯಲ್ಲಿ ಅವನತಿಯನ್ನು ಕಾಣುವುದು ಎಂಬ ಎಚ್ಚರ ಇಂಥವರಲ್ಲಿ ಇರುತ್ತದೆ. ಒಂದೇ ಸಲಕ್ಕೆ ದೊಡ್ದ ಮಟ್ಟದ ಲಾಭದ ಕೆಲಸಕ್ಕೆ ಇಂಥವರು ಕೈಹಾಕುವುದಿಲ್ಲ.

ಆಲೋಚಿಸಿ ನೋಡಿ: ಎಷ್ಟೋ ಉದ್ಯಮಗಳು ಹಳ್ಳ ಹಿಡಿದದ್ದು ಇಂಥ ಅತಿರೇಕವೆನಿಸುವ ಅಶಿಸ್ತಿನ ಆರ್ಥಿಕ ಕ್ರಮಗಳ ಅನುಸರಣೆಯಿಂದಲೇ. ಸರಕಾರದ ಕೆಲಸ ದೇವರ ಕೆಲಸ ಎಂಬ ದೊಡ್ಡ ಮಾತೊಂದಿದೆ. ಈ ಮಾತಿಗೆ ಅಪಾರ್ಥ, ಅನರ್ಥವೇ  ರುವಂತೆ ಸರಕಾರದ ಮಟ್ಟದಲ್ಲಿ ಕಾರ್ಯಕಲಾಪಗಳೂ ನಡೆಯುತ್ತವೆ. ಜನಸೇವೆಯನ್ನು ದೇವರ ಕೆಲಸದಂತೆ ಮಾಡದೆ ಬೆವರು ಸುರಿಸದೆ ಸಂಬಳವನ್ನು, ತಿನ್ನುವ ಜನಪ್ರತಿನಿಧಿಗಳು, ಅಧಿಕಾರಿಗಳಿದ್ದಾರೆ. ಸರಕಾರದ ಹಣ ಪೋಲಾಗದಂತೆ ಮ್ಯಾನೇಜ್ ಮಾಡಬೇಕಾದ ಇವರೇ ಮಿಸ್ ಮ್ಯಾನೇಜ್ ಮಾಡಿದರೆ ಸರಕಾರದ ಯೋಜನೆಗಳು ಹಳ್ಳ ಹಿಡಿಯುತ್ತವೆ.

ಜನಸಾಮಾನ್ಯರಿಗೆ ಯೋಜನೆಗಳ ಫಲ ಸಿಗುವುದಿಲ್ಲ. ಇಂಥವರ ಭ್ರಷ್ಟ ಕಾರ್ಯಗಳಿಂದ ಹೆಸರು ಹಾಳಾಗುವುದು ಸರ್ಕಾರದ್ದು. ಅಧಿಕಾರ ಹಿಡಿದ ಪಕ್ಷದ್ದು. ಹಳ್ಳಿಯಲ್ಲಿ ಒಬ್ಬ ಮೇಸ್ತ್ರಿಯಲ್ಲಿರುವ ಮ್ಯಾನೇಜ್‌ಮೆಂಟ್ ಸ್ಕಿಲ್ ಗಳು ಇಂದಿನ ದಿನಮಾನಗಳಲ್ಲಿ ಆಧುನಿಕ ಮ್ಯಾನೇಜ್‌ಮೆಂಟ್ ಕೋರ್ಸ್ ಕಲಿಸುವವರಿಗೆ ಗೊತ್ತಿರುವುದಿಲ್ಲ. ಹಳ್ಳಿ ಮತ್ತು ನಗರದಲ್ಲಿ ಹೊಟೆಲನ್ನು ನಡೆಸುವ ಯಜಮಾನನಲ್ಲಿ ಇರುವ ಹೋಟೆಲ್ ಮ್ಯಾನೇಜ್‌ಮೆಂಟ್ ಸ್ಕಿಲ್ ಎಂಬುದು ಪ್ರತ್ಯಕ್ಷ ಜೀವನಾ ನುಭವದಿಂದ ಗಳಿಸಿದ್ದಾಗಿರುತ್ತದೆ.

ಶಾಲೆಯ ಅಭಿವೃದ್ಧಿ, ಮಕ್ಕಳ ಹಿತಕ್ಕಿಂತ ವೈಯಕ್ತಿಕ ಪ್ರತಿಷ್ಠೆ, ಅಧಿಕಾರದ ದರ್ಪ, ಸ್ವಜನ ಪಕ್ಷಪಾತ, ಗುಂಪು ಗಾರಿಕೆ, ಜಾತೀಯತೆ ಇವುಗಳೆಲ್ಲ ಸೇರಿಕೊಂಡಾ ಗಲೇ ಶಾಲೆಗಳು ಶುದ್ಧ ವ್ಯವಹಾರಿಕವಾಗಿ ಅಸ್ತಿತ್ವವನ್ನು ಕಳೆದು ಕೊಳ್ಳುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿಯ ಮ್ಯಾನೇಜ್‌ಮೆಂಟ್ ಎಂಬುದು ಅತ್ಯಂತ ಸೂಕ್ಷ್ಮಗ್ರಾಹೀ ಆಗಿರುವಂಥದ್ದು. ಯಾಕೆಂದರೆ ಅಲ್ಲಿ ಬದುಕಿಗೆ ಬೇಕಾದ ಶಿಕ್ಷಣವನ್ನು ನೀಡುವ ಬಹುದೊಡ್ಡ ಜವಾಬ್ದಾರಿಯ ಕೆಲಸ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಹೋಟೆಲ್ ಒಂದರಲ್ಲಿ ಕೊಟ್ಟ ಊಟ ಸರಿಯಿಲ್ಲವೆಂದರೆ ಬೇರೆ ಊಟವನ್ನು ಯಜಮಾನ ಕೊಡಬಹುದು. ಆ ಅವಕಾಶವಾದರೂ ಅಲ್ಲಿರುತ್ತದೆ. ಆದರೆ ಶಾಲೆಯಲ್ಲಿ ಮಕ್ಕಳ ಬುದ್ಧಿಗೆ ವ್ಯತಿರಿಕ್ತವಾದದ್ದು ಕೊಡಲೇ ಬಾರದು.

ಕೊಟ್ಟರೆ, ಆಮೇಲೆ ಸರಿಯಾದುದನ್ನು ಕೊಡಲು ಸಾಧ್ಯವೇ ಇಲ್ಲ! ಮುಖ್ಯವಾಗಿ ಶಿಕ್ಷಕರು ಒಳ ರಾಜಕೀಯಕ್ಕೆ ಇಳಿಯಬಾರದು. ಮ್ಯಾನೇಜ್ಮೆಂಟಿನಲ್ಲಿರುವವರು ಶಾಲೆಯನ್ನು ಚೆನ್ನಾಗಿ ನೋಡಿಕೊಳ್ಳುವುದು ಅಂದರೆ ಶಿಕ್ಷಕರನ್ನು ಮಕ್ಕಳನ್ನು ಸಹಜವಾಗಿ ನೋಡಿಕೊಳ್ಳುವುದು ಎಂದರ್ಥ. ಶಾಲೆಯ ಕುಂದುಕೊರತೆಗಳನ್ನು ಎಚ್ಚರದಿಂದ ಗ್ರಹಿಸುವುದು. ಗ್ರಾಹಕರಿಗೆ ತನ್ನ ಹೋಟೆಲ್ ಇಷ್ಟವಾಗುವ ಬಗೆಯಲ್ಲಿ ಅದರ ಯಜಮಾನ ನೋಡಿಕೊಳ್ಳುವ ತೆರದಲ್ಲಿ ಮಕ್ಕಳಿಗೆ, ಪೋಷಕರಿಗೆ ಹಿತಾನುಭವ ಆಗುವ ತೆರದಲ್ಲಿ ಶಾಲೆಯನ್ನು ನಡೆಸುವ ಸೂಕ್ಷ್ಮತೆಗಳು ಶೈಕ್ಷಣಿಕ ಮ್ಯಾನೇಜ್ಮೆಂಟ್‌ಗೆ ಇರಬೇಕಾಗುತ್ತದೆ. ಯಾಕೆಂದರೆ ಮ್ಯಾನೇಜೆಂಟ್‌ನಲ್ಲಿ
ಇರುವವರ ಜ್ಞಾನಕ್ಕಿಂತ ಬಹುಮುಖ್ಯ ವಾಗಿ ಅರ್ಥೈಸಿಕೊಳ್ಳುವ ಅರಿತುಕೊಳ್ಳುವ ತನ್ಮೂಲಕ ಸಮನ್ವಯ ಸಾಧಿಸುವ ಕೌಶಲಗಳು ದೊಡ್ಡದಾಗಿರುತ್ತದೆ. ಸಮೂಹದೊಂದಿಗೆ ಬೆರೆಯಬೇಕಾದದ್ದು ತಮ್ಮ ಸ್ಥಾನದಿಂದ ಇಳಿದು ಬಂದ ಉದಾರ ಮನಸ್ಸಿನಿಂದ.

ತನ್ನ ಶ್ರೀಮಂತಿಕೆ, ಜ್ಞಾನ, ತಾನು ಹೊಂದಿರುವ ಅಧಿಕಾರ, ಪದವಿ, ಸ್ಥಾನಮಾನ ದಿಂದ ಕೆಳಗಿಳಿದು ಮ್ಯಾನೇಜ್ಮೆಂಟ್‌ನ ಕೌಶಲವನ್ನು ತನ್ನ ಜ್ಞಾನ ಮತ್ತು ಅನುಭವಗಳಿಂದಲೇ ಗಳಿಸುತ್ತಾ ಪ್ರಬುದ್ಧತೆಯನ್ನು ಗಳಿಸಬೇಕೆಂಬುದು ಮ್ಯಾನೇಜ್‌ಮೆಂಟ್ ಅಲ್ಲಿರುವವರಿಗೆ ಗೊತ್ತಿರ ಬೇಕು. ಮ್ಯಾನೇಜ್‌ಮೆಂಟ್ ನಲ್ಲಿರುವವರು ಬುದ್ಧಿವಂತರೂ, ಪ್ರತಿಭಾವಂತರೂ ಆಗಿದ್ದರೆ ವ್ಯವಸ್ಥೆಯನ್ನು ಯಶಸ್ವಿ ಯಾಗಿಸಿಬಲ್ಲ ಕೌಶಲವನ್ನು ಹೊಂದಿರುತ್ತಾರೆ. ವ್ಯವಸ್ಥೆಯ ಗತಿಯ ಹದ ತಪ್ಪದ ಜಾಣ್ಮೆ ಅವರಲ್ಲಿರುತ್ತದೆ. ಕಾರಣ ಬುದ್ಧಿವಂತರದು ನೇರನೋಟ, ವಾಸ್ತವಪ್ರe ಮತ್ತು ತ್ವರಿತ ಗತಿಯ ನಡೆ. ಆದರೆ ಅದಕ್ಕಾಗಿ ಮಹಾನ್ ಬುದ್ಧಿವಂತ ರಾಗಬೇಕಾದ ಅಗತ್ಯವಿಲ್ಲ. ಅದರ ಬದಲಿಗೆ ಪ್ರತಿಭಾವಂತ ರಾಗಬೇಕು.

ಏಕಮುಖೀ ಚಿಂತನೆ, ನೇರನೋಟ ಅಗತ್ಯಕ್ಕಿಂತ ಹೆಚ್ಚಾಗಿ ಬಹುಮುಖತೆಯನ್ನು ಹಲವು ಸನ್ನಿವೇಶಗಳು, ಸಂದರ್ಭಗಳು ಬಯಸುತ್ತವೆ ಎಂಬ ಪ್ರಜ್ಞೆಯಿರ ಬೇಕಾಗುತ್ತದೆ. ಪ್ರತಿಭಾವಂತರಿಗೆ ಸೃಷ್ಟಿಸುವ ಕೌಶಲವಿರುತ್ತದೆ. ಕೊಟ್ಟ ನೋಟ್ಸ್ ಅನ್ನು ಸ್ವಲ್ಪವೂ ವ್ಯತ್ಯಾಸವಿಲ್ಲದೆ ಬರೆಯುವವರು ಬುದ್ಧಿವಂತರು. ಹಾಗೆ ಪೂರ್ತಿಯಾಗಿ ಬರೆಯದೆ ಸ್ವಸಾಮರ್ಥ್ಯದಿಂದ ಉತ್ತರವನ್ನು ಸೃಜಿಸುವ ತಾಕತ್ತು ಇರುವುದು ಪ್ರತಿಭಾವಂತರಿಗೆ ಮಾತ್ರ. ಬುದ್ಧಿವಂತ ಸೋಲಬಹುದು. ಆದರೆ ಪ್ರತಿಭಾವಂತನು ಸೋಲಿನಿಂದ ತಪ್ಪಿಸಿಕೊಳ್ಳಲು ಅನ್ಯಮಾರ್ಗವನ್ನು ಹುಟ್ಟಿಸಿಕೊಳ್ಳುತ್ತಾನೆ.

ಮ್ಯಾನೇಜ್‌ಮೆಂಟ್‌ಗೆ ಇಂಥ ಎರಡು ಸಾಮರ್ಥ್ಯಗಳು ಇರಬೇಕು. ವರ್ತಮಾನದಲ್ಲಿ ಶಿಕ್ಷಣ ಸಂಸ್ಥೆಯನ್ನಾಗಲಿ, ಯಾವುದೇ ಕಂಪೆನಿಯನ್ನಾಗಲಿ, ಹೋಟೆಲ್‌ ನ್ನಾಗಲಿ ಮ್ಯಾನೇಜ್ ಮಾಡುವುದು ಬಹುಕಷ್ಟ! ಒಂದಲ್ಲ ಒಂದು ಬಗೆಯ ಅದ್ವಾನಗಳು ದಿನದಿನಕ್ಕೂ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಅದರಲ್ಲೂ ಶಿಕ್ಷಣ ಸಂಸ್ಥೆ ಯನ್ನು ನಡೆಸುವುದೆಂದರೆ ಏಳು ಕೆರೆ ನೀರು ಕುಡಿದಂತೆ! ಕಾರಣ, ಪ್ರಸಕ್ತ ಶಿಕ್ಷಣ ನೀತಿಗಳು, ಶಿಕ್ಷಕರ ಮೇಲಿನ ಅಸಡ್ಡೆ ಮತ್ತು ಅಗೌರವ, ಶೈಕ್ಷಣಿಕ ಭದ್ರತೆಯ ಹಿನ್ನೆಲೆಯಲ್ಲಿ ರಚಿತವಾದ ಕಾಯಿದೆ ಕಾನೂನುಗಳು, ಶಿಕ್ಷಣ ಮತ್ತು ಶಾಲೆಗಳ ಮೇಲೆ ಬದಲಾದ ಸಮುದಾಯಗಳ ದೃಷ್ಟಿಕೋನ, ರಾಜಕೀಯ ಮತ್ತು ಹಣದ ಪ್ರಭಾವ, ಬಡವಾಗುತ್ತಿರುವ ಸರಕಾರಿ ಶಾಲೆಗಳು, ಶಿಕ್ಷಕರಲ್ಲಿ ಕುಸಿಯುತ್ತಿರುವ ವೃತ್ತಿಮೌಲ್ಯಗಳು, ಶಾಲೆ-ಸಮುದಾಯ-ಶಿಕ್ಷಕ-ವಿದ್ಯಾರ್ಥಿಗಳ ಮಧ್ಯೆ ಸೃಷ್ಟಿಯಾದ ಕಂದಕಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡು ಅನಿಯಮಿತವಾಗಿ ರಚಿಸಿಕೊಂಡ ನಿಯಮಗಳು.

ಮುಖ್ಯವಾಗಿ ಕಾರ್ಪೊರೇಟ್ ಪ್ರಪಂಚವು ಶಿಕ್ಷಣ ಕ್ಷೇತ್ರವನ್ನು ಎಂದು ಸ್ಪರ್ಶಿಸಿತೋ ಅಂದಿನಿಂದ ಶಿಕ್ಷಣವು ಒಂದು ದಂಧೆಯ ಅಥವಾ ಶುದ್ಧ ವ್ಯಾವಹಾರಿಕ ರೂಪವನ್ನು ಪಡೆಯುತ್ತಾ ಈಗ ಸಂಪೂರ್ಣವಾಗಿ ಬ್ಯುಸಿನೆಸ್ ಆಗಿಬಿಟ್ಟಿದೆ. ಯಾವ ಜೀವನ ಮೌಲ್ಯಗಳಿಲ್ಲದ ಕಾರ್ಪೊರೇಟ್ ಮನಸಿನ ಖಾಸಗಿ ಶಾಲೆಯೊಂದು ಹಳ್ಳಿಯಲ್ಲಿ ಹುಟ್ಟುವ ಮೊದಲು ಮತ್ತು ಆಮೇಲಿನ ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ. ಜನರ ಭಾವ ಮತ್ತು ಬದುಕಿನಲ್ಲಿಯೂ ಇಂಥಹದೇ ವೈಪರೀತ್ಯ ಗಳು ಹುಟ್ಟಿಕೊಳ್ಳುತ್ತವೆ. ಕಾಲಕ್ರಮೇಣ ಹಳ್ಳಿ ತನ್ನ ದೇಸೀಯ ಸೊಬಗನ್ನು ಕಳೆದುಕೊಳ್ಳುತ್ತದೆ. ಭಾಷೆಗೂ ನಮ್ಮ ಜೀವನ ಕ್ರಮಕ್ಕೂ ಸಂಬಂಧವಿದೆ. ಈ ಸಂಬಂಧ ಕಳಚಿದಾಗಲೇ ಭಾಷೆ ತನ್ನ ನೆಲದಲ್ಲೇ ಪರಕೀಯವಾಗೋದು.

ನೆಲ ಅಂದರೆ ಜನರ ಮನಸ್ಸೂ ಕೂಡ. ಕನ್ನಡವೆಂದರೆ ಬದುಕು, ಜೀವನ ಕ್ರಮ. ಭಾಷೆಗೆ ಆಪತ್ತು ಬಂತೆಂದರೆ ಅದು ಬದುಕಿಗೂ ಬಂತೆಂದೇ ಅರ್ಥ. ಯಾವಾಗ ಭಾಷೆ, ಭಾವ ಮತ್ತು ಬದುಕಿನ ದೃಷ್ಟಿಕೋನದಲ್ಲಿ ವ್ಯತ್ಯಯ ಕಾಣುತ್ತದೋ ಆಗ ಭಾವನಾತ್ಮಕವಾದ ಸಂಬಂಧ ಕುಸಿಯುತ್ತದೆ. ಈ ಕುಸಿಯುವಿಕೆಯನ್ನು ಸೃಷ್ಟಿಸಲು ದೇಶಭಾಷೆಗಳಿಗೆ ಸಾಧ್ಯವಿಲ್ಲ. ಅಂಥ ತಾಕತ್ತಿರುವುದು ಇಂಗ್ಲಿಷಿಗೆ ಮಾತ್ರ! ಹಳ್ಳಿಯಲ್ಲಿನ ಭಾವೈಕ್ಯವನ್ನು ಒಡೆಯುವ ಶಕ್ತಿಯಿರುವುದು ಇಂಥ ಕಾರ್ಪೊರೇಟ್ ಪ್ರಪಂಚಕ್ಕೆ! ಈ ಒಡೆಯುವಿಕೆ ಸದ್ಯದ ಶಿಕ್ಷಣ ಕ್ಷೇತ್ರದಲ್ಲಿ ದೊಡ್ದ ವಿಸ್ತಾರವನ್ನು ಪಡೆದಿದೆ. ಪರಿಣಾಮವಾಗಿ, ಎಲ್ಲಾ ಇದ್ದೂ ಹಳ್ಳಿಗಳು ನಿರ್ಜೀವವಾಗಿ, ನಿಸ್ತೇಜವಾಗಿ,
ಸೌಂದರ್ಯವನ್ನು ಕಳಕೊಂಡು ಭಣಗುಟ್ಟುತ್ತಿವೆ.

ಆಧುನಿಕತೆಯ ಹುಚ್ಚಿನಿಂದ ಮನುಷ್ಯ ಸಂಬಂಧವೆಲ್ಲವೂ ಕೃತಕವಾಗಿ ಅರ್ಥಹೀನವಾಗುತ್ತಿದೆ. ಪರಸ್ಪರ ನಂಬಿಕೆ, ವಿಶ್ವಾಸ ಕ್ಷೀಣವಾಗಿ ಊರು ಅಪರಿಚಿತವಾಗಿದೆ. ಆಧುನಿಕತೆಯನ್ನು ಬಯಸುವಂತೆ ಮಾಡುವ ಕಾರ್ಪೊರೇಟ್ ಪ್ರಪಂಚದ ಶಿಕ್ಷಣದ ಪರಿಕಲ್ಪನೆಗಳು ನಾವು ಕೊಟ್ಟುಕೊಳ್ಳುವ ‘ನಮಸ್ಕಾರ’ ವನ್ನು ‘ಹಾಯ್’ ಎನ್ನುವಂತೆ ಬದಲಾಯಿಸುತ್ತದೆ. ಹತ್ತು ಪಟ್ಟಿನ ಸಂಪತ್ತಿನ ದುರಾಸೆಗೆ ಬಿದ್ದ ಊರಿನ ಜನರನ್ನು ಗುಲಾಮರನ್ನಾಗಿಸಿ, ಅವರ ತುಂಡು ಭೂಮಿಯನ್ನೇ ನುಂಗಿ
ನೀರು ಕುಡಿದ ಕಾರ್ಪೋರೇಟ್ ಪ್ರಪಂಚಕ್ಕೆ ಯಾರ ಜೀವನ ಹಾಳಾದರೇನು? ಯಾವ ಭಾಷೆ ಸತ್ತರೇನು? ಹಣವೊಂದೇ ಮುಖ್ಯ. ಅದೇ ಅವರ ಸಿದ್ಧಾಂತ. ಶಿಕ್ಷಣವನ್ನು ಉದ್ಯಮನ್ನಾಗಿಸಿಕೊಂಡ ಕಾರ್ಪೊರೇಟ್ ಮೈಂಡಲ್ಲಿ ಜಾಗತೀಕರಣಕ್ಕೆ ಬೇಕಾದಂತೆ ಮಕ್ಕಳನ್ನು ರೂಪಿಸುವ ಶೈಕ್ಷಣಿಕ ಆಕೃತಿಗಳಿರುತ್ತವೆ. ವಿದೇಶಿ ಕಂಪನಿಗಳಿಗೆ ದುಡಿಯುವುದಕ್ಕೆ ಬೇಕಾಗಿ ನಮ್ಮ ಮಕ್ಕಳನ್ನು ಮಾನಸಿಕವಾಗಿ ಸಿದ್ಧಗೊಳಿಸುವುದು. ಆಧುನಿಕ ಶಿಕ್ಷಣವನ್ನು ನೀಡುತ್ತಿರುವ ಶಾಲಾ- ಕಾಲೇಜು- ವಿಶ್ವವಿದ್ಯಾಲಯಗಳ ಮ್ಯಾನೇಜ್‌ಮೆಂಟ್‌ಗಳಲ್ಲಿ ಇಂಥದ್ದೊಂದು ಚಕ್ರವ್ಯೂಹವೇ ಇರುತ್ತದೆ!

ಕೊನೆಯ ಮಾತು: ಯಾವ ಪ್ರತಿಫಲದ ಅಪೇಕ್ಷೆಯಿಲ್ಲದೆ ದೇಶಸೇವೆಯೆಂದು ಬಗೆವ ಜ್ಞಾನ ಪ್ರಸಾರವೆಂಬ ಉತ್ಕಟ ಭಾವದಲ್ಲಿ ದುಡಿಯುವ, ಸರಕಾರದ ದೇಣಿಗೆ,
ಅನುದಾನವನ್ನು ಪಡೆಯದೆ ಭಾರತಾದ್ಯಂತ ಅನೇಕ ಖಾಸಗಿ ಶಿಕ್ಷಣಗಳ ಮ್ಯಾನೇಜ್ಮೆಂಟ್‌ಗಳ ಅಸ್ಮಿತೆಯು ಕಾರ್ಪೊರೇಟ್ ಪ್ರಪಂಚದ ಅಬ್ಬರದಲ್ಲಿ ಮೌಲ್ಯವನ್ನು ಕಳೆದುಕೊಳ್ಳುವಂತಾದುದು ಸರಿಹೊತ್ತಿನ ದುರಂತ. ಸರಕಾರದ ದೇಣಿಗೆಯಿಲ್ಲದೆ ವಿದ್ಯಾಸಂಸ್ಥೆಗಳನ್ನು ಕಟ್ಟಿದ ಅದೆಷ್ಟೋ ಮಠ ಮಂದಿರಗಳಿವೆ. ಅವು ಇಂಗ್ಲಿಷ್ ಶಿಕ್ಷಣವನ್ನೇ ನೀಡುತ್ತಿವೆ.

ಭಾರತೀಯು ಸಂಸ್ಕೃತಿ ಮತ್ತು ಮೌಲ್ಯಗಳ ಅಧಃಪತನವನ್ನು ಅವು ಮಾಡುತ್ತಿಲ್ಲ. ಯುರೋಪ್ ಮೂಲದ ಎಡಪಂಥೀಯ ಚಹರೆಗಳನ್ನು ತನ್ನ ಶಿಕ್ಷಣದ ಪರಿಕ್ರಮಗಳಲ್ಲಿ ಅಳವಡಿಸಿಕೊಂಡ ಕಾರ್ಪೊರೇಟ್ ಪ್ರಪಂಚಕ್ಕೆ ಇಂಥ ಎಲ್ಲ ವಿದ್ಯಾಸಂಸ್ಥೆಗಳನ್ನು ಬದಿಗಿಕ್ಕಿ ಆಕರ್ಷಿಸುವ ಸಾಮರ್ಥ್ಯ ಇರುತ್ತದೆ. ಅತ್ಯಾಕರ್ಷಕ ಆಧುನಿಕ ಕಟ್ಟಡಗಳು, ಇಂಗ್ಲಿಷರ ಮಾದರಿಯ ಶಿಕ್ಷಣ, ಯೂನಿಫಾರ್ಮ್, ಬ್ಯಾಗ್, ಶೂ, ಬೆಲ್ಟ್, ಟೈ, ವಾಚ್ ಇತ್ಯಾದಿಯೆಲ್ಲವೂ ಸರಿಹೊತ್ತಿನ ಯುರೋಪ್ ಮಾದರಿಗೆ ಹೊಂದುವಂತೆ ಮಕ್ಕಳ ಭೌತಿಕ ಮತ್ತು ಬೌದ್ಧಿಕ ಆಕೃತಿಗಳನ್ನು ಬದಲಾಯಿಸುವಂತೆ ಮಾಡುತ್ತವೆ.

ತನ್ನ ಔದ್ಯೋಗಿಕ ಯಜಮಾನನಿಗೆ ಮೋಸ ಮಾಡಬಾರದೆಂಬ ಪ್ರeಯನ್ನು ತನ್ನಲ್ಲಿ ದುಡಿಯುವವರಲ್ಲಿ ಯಾವ ಮ್ಯಾನೇಜ್ಮೆಂಟ್ ಹುಟ್ಟಿಸಲಾರದೋ ಅದು
ಲೊಳಲೊಟ್ಟೆಯೆಂದೇ ಅರ್ಥ.