ಜೈಪುರ: ಜೈಪುರದಲ್ಲಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪ್ರಶ್ನೆ ಪತ್ರಿಕೆಯನ್ನು ಮೊಬೈಲ್ ನಲ್ಲಿ ಫೋಟೊ ತೆಗೆದು ಯುವಕರು ಇತರ ಇಬ್ಬರಿಗೆ ಕಳುಹಿಸಿದ್ದಾರೆ.
ಮೊಬೈಲ್ನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಪತ್ತೆ ಮಾಡಿದ ಜೈಪುರ ಪೊಲೀಸರು, ರಾಜಸ್ಥಾನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿರುವ ಪರೀಕ್ಷಾ ಕೇಂದ್ರದ ಯುವತಿ ಸೇರಿದಂತೆ 8 ಜನರನ್ನು ಬಂಧಿಸಿದ್ದಾರೆ.
ರಾಜಸ್ಥಾನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ(RIET) ನೀಟ್ ಪರೀಕ್ಷಾ ಕೇಂದ್ರವಾಗಿದ್ದು, ಸೋಮವಾರ ಪರೀಕ್ಷೆ ಇತ್ತು. ಅಪರಾಧಿ ಗಳನ್ನು ಪತ್ತೆ ಮಾಡಲು ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಡಿಸಿಪಿ ತೋಮರ್ ಹೇಳಿದ್ದಾರೆ.
ಆರೋಪಿಗಳಲ್ಲಿ ಒಬ್ಬನಾದ ರಾಮ್ ಸಿಂಗ್ ಹೇಳಿಕೆಯಂತೆ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು 35 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೊಬೈಲ್ನಿಂದ ಫೋಟೋ ತೆಗೆಯುವ ಮೂಲಕ ಪ್ರಶ್ನೆ ಪತ್ರಿಕೆಯನ್ನು ಕಳುಹಿಸಲಾಗಿದೆ. ಧನೇಶ್ವರಿ ಚಿಕ್ಕಪ್ಪ ಕಾರಿನಲ್ಲಿ 10 ಲಕ್ಷ ರೂ. ಹೊತ್ತು ಕುಳಿತಿದ್ದರು. ನಂತರ ಅವರನ್ನು ಬಂಧಿಸಲಾಯಿತು ಎಂದು ಹೇಳಿದ್ದಾರೆ.
ಪಂಕಜ್ ಯಾದವ್ ಮತ್ತು ಸಂದೀಪ್ ಪ್ರಶ್ನೆ ಪತ್ರಿಕೆಯನ್ನು ಬಿಡಿಸಿ, ಉತ್ತರ ಪತ್ರಿಕೆಯನ್ನು ರಾಮ್ ಸಿಂಗ್ ಮತ್ತು ಕಾಲೇಜಿನ ಆಡಳಿತಾಧಿಕಾರಿ ಮುಖೇಶ್ ಸಮೋಟಾ ಅವರಿಗೆ ಕಳುಹಿಸಿದ್ದಾರೆ. ಅವರು ಅದನ್ನು ಧನೇಶ್ವರಿಗೆ ನೀಡಿದ್ದಾರೆ. ಧನೇಶ್ವರಿಯಿಂದ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡರು.