ಬೇವಾರ್ : 2015ರ ಡಾಲಿ ಕೀ ಡೋಲಿ ಚಿತ್ರವನ್ನು ನೆನಪಿಸುವ ನೈಜ ಘಟನೆ ಇಲ್ಲೊಂದು ನಡೆದಿರುವುದು ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಮೈನಪುರಿ ಬೇವಾರ್ ಸಮೀಪದ ಪರಂಖಾ ಗ್ರಾಮದಲ್ಲಿ ಮದುವೆಯಾದ ನಂತರ ಮದು ಮಗಳನ್ನು ಮನೆಗೆ ಕರೆದುಕೊಂಡು ಬರುವಾಗ ಯುವಕ ಮೊದಲ ರಾತ್ರಿಯ ಕನಸು ಕಾಣುತ್ತಿದ್ದರೆ, ಯುವತಿ ಚಿನ್ನಾಭರಣ, ವರನ ಕಡೆಯವರು ನೀಡಿರುವ ದುಡ್ಡು-ಒಡವೆಗಳ ಜತೆ ನೌ ದೋ ಗ್ಯಾರಾ ಆಗಿದ್ದಾಳೆ.
ವಿಚಾರವೇನೆಂದರೆ, ಪರಂಖಾ ಗ್ರಾಮದ ರಾಜು ಎಂಬಾತನಿಗೆ ಎಷ್ಟು ಹುಡುಕಿದರೂ ಹೆಣ್ಣು ಸಿಗುತ್ತಿರಲಿಲ್ಲ. ನಂತರ ದಲ್ಲಾಳಿ ಓರ್ವ ಯುವತಿಯನ್ನು ಪರಿಚಯ ಮಾಡಿಸಿದ್ದಾನೆ. ಎರಡೂ ಮನೆಯವರು ಮದುವೆಗೆ ಒಪ್ಪಿದರು. ಯುವತಿಗೆ ವಧುದಕ್ಷಿಣೆಯಾಗಿ 80 ಸಾವಿರ ರೂ. ನೀಡಬೇಕು ಎಂದು ಹೇಳಿದ್ದರು. ಜತೆಗೆ ಚಿನ್ನಾ ಭರಣಗಳನ್ನೂ ಹಾಕುವಂತೆ ಷರತ್ತು ವಿಧಿಸಿದ್ದರು. ಹುಡುಗಿ ಸಿಗದ ಬೇಸರದಲ್ಲಿದ್ದ ರಾಜು ಹಾಗೂ ಆತನ ಪಾಲಕರಿಗೆ ಮದುವೆಯಾದರೆ ಸಾಕಿತ್ತು.
ಶೀಟ್ಲಾ ಧಾಮ ದೇವಸ್ಥಾನದಲ್ಲಿ ಮದುವೆಯಾಯಿತು. ಮದುವೆ ಸಂದರ್ಭ 80 ಸಾವಿರ ರೂ. ದುಬಾರಿ ಬಟ್ಟೆ ಬರೆ, ಆಭರಣ ಎಲ್ಲವನ್ನೂ ರಾಜು ಮನೆಯವರು ಯುವತಿಗೆ ನೀಡಿದ್ದರು. ಮುಂದಿನ ಕಾರ್ಯಕ್ಕೆ ವಧುವನ್ನು ಕರೆದುಕೊಂಡು ರಾಜು ಗ್ರಾಮಕ್ಕೆ ಮರಳುತ್ತಿದ್ದ. ಅಲ್ಲಿ ಮೊದಲ ರಾತ್ರಿಗೆ ಸಕಲ ಸಿದ್ಧತೆ ನಡೆಸಲಾಗಿತ್ತು.
ದಾರಿ ಮಧ್ಯೆ ವಧು ತನಗೆ ಬಾಯಾರಿಕೆಯಾಗಿದೆ ಎಂದು ಹೇಳಿದ್ದಾಳೆ. ನೀರಿನ ಬಾಟಲಿ ತರಲು ಗಾಡಿಯಿಂದ ಇಳಿದ ರಾಜು ನೀರಿನ ಬಾಟಲಿ ತರಲು ಹೋಗಿ ವಾಪಸ್ ಆಗುತ್ತಿದ್ದಂತೆಯೇ ಯುವತಿ ಎಸ್ಕೇಪ್ ಆಗಿದ್ದಾಳೆ. ಎಲ್ಲಿ ಹುಡುಕಿದರೂ ಆಕೆ ಸಿಗದಾಗ ತಾನು ಮೋಸ ಹೋಗಿರುವುದು ತಿಳಿದಿದ್ದು, ಇದೀಗ ದೂರು ದಾಖಲು ಮಾಡಿದ್ದಾನೆ.