Saturday, 21st September 2024

ಕೇಶವ ದೇಸಿರಾಜು ಎಂಬ ಐಎಎಸ್ ಅಧಿಕಾರಿ ನಿಧನರಾದರಂತೆ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಮೊನ್ನೆ ಕೇಶವ ದೇಸಿರಾಜು ನಿಧನರಾದರು. ಹೀಗೆ ಹೇಳಿದರೆ ಯಾರಲ್ಲೂ ಏನೂ ಅನಿಸದಿರಬಹುದು. ಕಾರಣ ಅವರ ಹೆಸರನ್ನು ಕೇಳಿದವರು ಕಮ್ಮಿ. ಹೀಗಾಗಿ ಅವರು ನಿಧನರಾದಾಗ ಅದು ಸುದ್ದಿಯಾಗಲಿಲ್ಲ. ದಿ ಹಿಂದೂ ಬಿಟ್ಟರೆ, ಬೇರೆ ಯಾವ ಪತ್ರಿಕೆಗಳೂ ಅವರ ನಿಧನವನ್ನು ವರದಿ ಮಾಡಲಿಲ್ಲ. ಕನ್ನಡ ಪತ್ರಿಕೆಗಳಲ್ಲೂ ಅವರ ಕುರಿತು ವರದಿಯಾಗಿದ್ದನ್ನು ನೋಡಲಿಲ್ಲ.

ದಿ ಹಿಂದೂ ಪತ್ರಿಕೆಯೊಂದೇ ಅವರ ಬಗ್ಗೆ ವಿಸ್ತೃತವಾದ ಶ್ರದ್ಧಾಂಜಲಿ ಲೇಖನವನ್ನು ಪ್ರಕಟಿಸಿತ್ತು. ಬೇರೆ ಪತ್ರಿಕೆಯ ಸುದ್ದಿಮನೆಯಲ್ಲಿರುವವರಿಗೆ, ಇಂಥ ಒಬ್ಬ ವ್ಯಕ್ತಿ
ಬದುಕಿದ್ದರು ಎಂಬುದೂ ಗೊತ್ತಿರಲಿಕ್ಕಿಲ್ಲ. ಕಾರಣ ಕೇಶವ ದೇಸಿರಾಜು ತೆರೆಮರೆಯಲ್ಲೇ ಇದ್ದು ಕೆಲಸ ಮಾಡಿದರು. ಪ್ರಚಾರಕ್ಕಾಗಿ ಏನನ್ನೂ ಮಾಡಲಿಲ್ಲ. ತಮ್ಮ ಹೆಸರನ್ನು ಬೇರೆಯವರು ಬಳಸಿದಾಗಲೂ ಅವರು ಇಷ್ಟಪಡುತ್ತಿರಲಿಲ್ಲ. ಅವರನ್ನು ಹೊಗಳುವುದನ್ನು ಅವರು ಸ್ವಲ್ಪವೂ ಇಷ್ಟಪಡುತ್ತಿರಲಿಲ್ಲ. ತೆರೆಯ ಹಿಂದಿದ್ದು ಕೆಲಸ ಮಾಡುವುದು ಅವರಿಗೆ ಖುಷಿ ಕೊಡುತ್ತಿತ್ತು.

ಪ್ರಚಾರವೆಂದರೆ ನಾಟಕ, ಸುಳ್ಳು, ಅತಿಶಯೋಕ್ತಿ ಎಂಬುದು ಅವರ ನಂಬಿಕೆಯಾಗಿತ್ತು. ನೇಪಥ್ಯವೊಂದೇ ಸತ್ಯ ಎಂಬುದು ಅವರು ಕಂಡುಕೊಂಡ ಕಾರ್ಯಮಂತ್ರ ವಾಗಿತ್ತು. ಹೀಗಾಗಿ ಅವರು ಮುನ್ನೆಲೆಗೆ ಬರಲೇ ಇಲ್ಲ. ಕೇಂದ್ರ ಸರಕಾರದ ಮಹತ್ವದ ಹುದ್ದೆಯಲ್ಲಿದ್ದರೂ, ಹೆಚ್ಚಿನವರಿಗೆ ಅಜ್ಞಾತರಾಗಿಯೇ ಉಳಿದರು. ಕೇಶವ ದೇಸಿರಾಜು ಅವರು ನಮ್ಮ ರಾಷ್ಟ್ರಪತಿಯಾಗಿದ್ದ ಡಾ.ಎಸ್.ರಾಧಾಕೃಷ್ಣನ್ ಅವರ ಮೊಮ್ಮಗ ಮತ್ತು ಸರ್ವೆಪಲ್ಲಿ ಗೋಪಾಲ ಅವರ ಸೋದರಳಿಯ ಎಂಬುದು ಅನೇಕರಿಗೆ ಗೊತ್ತಿರಲಿಲ್ಲ. ಕಾಕತಾಳೀಯವೆಂದರೆ, ಇಡೀ ದೇಶ ಡಾ.ರಾಧಾ ಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆ ಎಂದು ಸಂಭ್ರಮಿಸುತ್ತಿದ್ದ ದಿನವೇ ಕೇಶವ ದೇಸಿರಾಜು ನಿಧನರಾಗಿದ್ದು.

ಟಾಟಾ ಹುಟ್ಟಿದ ದಿನ ಮೊಮ್ಮಗ ಅಸು ನೀಗಿದ್ದ! ಆಗಲೇ ಕೆಲವರಿಗೆ ದೇಸಿರಾಜು ಅವರು ರಾಧಾಕೃಷ್ಣನ್ ಅವರ ಮೊಮ್ಮಗ ಎಂದು ಗೊತ್ತಾಗಿದ್ದು. ಅವರ ಜತೆ ಒಡನಾಡಿದವರಿಗೂ, ಈ ವಿಷಯ ಗೊತ್ತಿರಲಿಲ್ಲ. ಯಾರಾದರೂ ಆ ವಿಷಯ ಪ್ರಸ್ತಾಪಿಸಿದರೆ, ಅವರು ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಒಂದು ವೇಳೆ, ಗೊತ್ತಲ್ಲ, ನಮ್ಮ ಕೇಶವ ದೇಸಿರಾಜು ಅವರು ಡಾ.ರಾಧಾಕೃಷ್ಣನ್ ಅವರ ಮೊಮ್ಮಗ ಎಂದು ಪರಿಚಯಿಸಿದರೆ, ಏನೀಗ? ಎಂದು ಹೇಳುತ್ತಿದ್ದರು. ನನಗೂ ಈ ಅನುಭವ ಆಗಿದೆ. ನಾನು ಅಂದಿನ ಕೇಂದ್ರ ಸಚಿವ ಅನಂತಕುಮಾರ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕೆಲಸ ಮಾಡುವಾಗ, ದಿಲ್ಲಿಯಲ್ಲಿ ನನಗೆ ಕೇಶವ ದೇಸಿರಾಜು ಅವರನ್ನು, ನನಗೊಬ್ಬರು ಪರಿಚಯ ಮಾಡಿಸುತ್ತಾ, ಇವರು ಅತ್ಯಂತ ದಕ್ಷ ಐಎಎಸ್ ಅಧಿಕಾರಿ ಮತ್ತು ಅದಕ್ಕಿಂತ ಹೆಚ್ಚಾಗಿ ಡಾ.ರಾಧಾಕೃಷ್ಣನ್ ಅವರ ಮೊಮ್ಮಗ ಎಂದು ಪರಿಚಯಿಸಿದ್ದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದೇಸಿರಾಜು, ನಾನು ಹೇಳುತ್ತೇನೆ, ನನ್ನ ಹೆಸರು ಕೇಶವ ದೇಸಿರಾಜು, ಫುಲ್ ಸ್ಟಾಪ್ ಎಂದಿದ್ದರು. ನಂತರ ನಮ್ಮ ಮಾತುಕತೆ ಕೆಲಕಾಲ, ಅನಗತ್ಯ ವಿಶೇಷಣಗಳ ಬಗ್ಗೆ ಕೇಂದ್ರೀಕೃತವಾಗಿತ್ತು. ಐಎಎಸ್ ಅಧಿಕಾರಿ ಅಂದ್ರೆ ಸಾಕು. ನಮಗೆ ಇಷ್ಟವಾದವರಿಗೆ, ದಕ್ಷ ಐಎಎಸ್ ಅಧಿಕಾರಿ, ಪ್ರಾಮಾಣಿಕ ಐಎಎಸ್ ಎಂದು ಹೇಳುತ್ತೇವೆ. ಆದರೆ ಆ ವಿಶೇಷಣಗಳಿಗೆ ಅರ್ಥವಿಲ್ಲ. ನನ್ನ ಹೆಸರೊಂದೇ ಸಾಕು. ಅದೇ ಶಾಶ್ವತ ಎಂದು ಹೇಳಿದ್ದರು. ಅದಾದ ನಂತರ, ನಾನು ಅವರನ್ನು ಹತ್ತಾರು ಸಲ ಭೇಟಿ ಮಾಡಿದ್ದೇನೆ. ನನ್ನ ಕೆಲವು ಸ್ನೇಹಿತರನ್ನು ಅವರಿಗೆ ಪರಿಚಯಿಸಿದ್ದೇನೆ.

ಆದರೆ ಒಮ್ಮೆಯೂ, ಅವರ ಮತ್ತು ಅವರ ತಾತನ ಸಂಬಂಧವನ್ನು ಅವರ ಮುಂದೆ ಹೇಳಿದ್ದಿಲ್ಲ. ವಿಶೇಷಣಗಳನ್ನು ಬದಿಗಿಟ್ಟು ಹೇಳುವುದಾದರೂ, ಕೇಶವ ದೇಸಿರಾಜು ನಮ್ಮ ದೇಶದ ಅತ್ಯಂತ ದಕ್ಷ ಐಎಎಸ್ ಅಧಿಕಾರಿ. ಆದರೆ ಅದನ್ನು ಹೇಳುವುದಕ್ಕೂ ಅವರು ಅವಕಾಶ ಕೊಡಲಿಲ್ಲ. ಒಮ್ಮೆ ನಾನು ಧೈರ್ಯ ಮಾಡಿ,
ದೇಸಿರಾಜು ಅವರೇ, ನೀವು ಯಾಕೆ ಡಾ.ರಾಧಾಕೃಷ್ಣನ್ ಅವರ ಸಂಬಂಧವನ್ನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ? ಎಂದು ಕೇಳಿದ್ದೆ. ಅದಕ್ಕೆ ಅವರು, ನಿಮ್ಮ ಪ್ರಶ್ನೆಗೆ ನನ್ನ ಉತ್ತರವೇನು ಎಂಬುದು ನಿಮಗೆ ಗೊತ್ತಿದೆ. ಆದರೂ ಕೇಳುತ್ತಿದ್ದೀರಿ ಎಂದು ಸುಮ್ಮನಾದರು.

ಇಲ್ಲ, ನನಗೆ ಗೊತ್ತಿಲ್ಲ ಎಂದು ಹೇಳಿದಾಗ, ದೇಸಿರಾಜು ತುಸು ಗಂಭೀರವಾಗಿ ಹೇಳಿದ್ದರು – ನಾನು ದೇಸಿರಾಜು ಅಂತ ಪರಿಚಯಿಸಿಕೊಂಡರೆ, ಎಲ್ಲವೂ ಸಹಜ ವಾಗಿರುತ್ತವೆ. ಒಮ್ಮೆಗೆ ನಾನು ನನ್ನ ತಾತನ ಹೆಸರನ್ನು ಹೇಳಿದರೆ, ಎಲ್ಲವೂ ಬದಲಾಗಿಬಿಡುತ್ತದೆ. ನನ್ನಲ್ಲಿ ಇಲ್ಲದ ಗುಣಗಳನ್ನು ಹುಡುಕಲು ಆರಂಭಿಸುತ್ತಾರೆ. ಡಾ.ರಾಧಾಕೃಷ್ಣನ್ ಮೂಲಕ ನನ್ನನ್ನು ನೋಡಲು ಪ್ರಯತ್ನಿಸುತ್ತಾರೆ. ಇದರಿಂದ ನನಗೊಂದೇ ಅಲ್ಲ, ಅವರಿಗೂ ಅನ್ಯಾಯ ಮಾಡಿದಂತೆ. ನಮ್ಮ ದೇಶದಲ್ಲಿ ಒಂದು ವಿಚಿತ್ರ ಮನಸ್ಥಿತಿಯಿದೆ. ಅದೇನೆಂದರೆ, ನಾವು ಗಣ್ಯವ್ಯಕ್ತಿಗಳ ಹೆಸರಿನೊಂದಿಗೆ, ನಮ್ಮನ್ನು ಗುರುತಿಸಿಕೊಳ್ಳುತ್ತೇವೆ. ಈ ರೀತಿಯ ದಾಸ್ಯ ಭಾವವನ್ನು ನಾನು ಬೇರೆ ಯಾವ ದೇಶದಲ್ಲೂ ಕಂಡಿಲ್ಲ.

ಡಾ.ರಾಧಾಕೃಷ್ಣನ್ ನನ್ನ ತಾತ ಆದರೆ ನನಗೇನು? ಅದು ನನ್ನ ಹೆಚ್ಚುಗಾರಿಕೆ ಆಗಬಾರದು. ನನಗೆ ಯಾರಾದರೂ ಗೌರವ ಕೊಡುವುದಿದ್ದರೆ, ಅದು ಡಾ.ರಾಧಾ ಕೃಷ್ಣನ್ ಅವರ ಮೊಮ್ಮಗ ಎಂಬ ಕಾರಣಕ್ಕೆ ಕೊಡಬಾರದು. ನಾನು ಡಾ.ರಾಧಾಕೃಷ್ಣನ್ ಅವರ ಮೊಮ್ಮಗ ಎಂಬ ಒಂದೇ ಕಾರಣಕ್ಕೆ ಮಹಾನ್ ವ್ಯಕ್ತಿಯಾಗ ಬೇಕಿಲ್ಲ. ಕೆಲವರು ತಮ್ಮ ಕುಟುಂಬದ ಹೆಸರಿನಿಂದ ದೊಡ್ಡ ವ್ಯಕ್ತಿಗಳಾಗಿದ್ದಾರೆ. ಅದೇ ಕೆಲವರಿಗೆ ದೊಡ್ಡಸ್ತಿಕೆ ಮತ್ತು ಅಸ್ತಿತ್ವವಾಗಿದೆ. ನನ್ನ ಸಾಧನೆ ನನಗೆ, ನನ್ನ ತಾತನ ಸಾಧನೆ ಅವರಿಗೆ. ಅವರ ಸಾಧನೆಯಲ್ಲಿ ನನಗೆ ಯಾವ ಪಾಲೂ ಬೇಡ. ಹೀಗಾಗಿ ನಾನು ಎಲ್ಲೂ ಅವರ (ಡಾ.ರಾಧಾಕೃಷ್ಣನ್) ಹೆಸರನ್ನು ಹೇಳಿಕೊಳ್ಳುವು ದಿಲ್ಲ.

ಕೇಶವ ದೇಸಿರಾಜು ಅವರು ತಮ್ಮ ತಾತನ ಹೆಸರನ್ನು ಅಪ್ಪಿತಪ್ಪಿಯೂ ಹೇಳಿಕೊಳ್ಳಲಿಲ್ಲ. ಒಳ್ಳೆಯ ಹುದ್ದೆ, ಭಡ್ತಿ, ಪ್ರಾಮುಖ್ಯ ಪಡೆಯುವ ಸಂದರ್ಭದಲ್ಲೂ ಅವರು ತಾತನ ಹೆಸರನ್ನು ಹೇಳಲಿಲ್ಲ. ಹೀಗಿದ್ದೂ ಅವರು ತಾತನ ಜನ್ಮ ದಿನದಂತೆ ಇಹಲೋಕ ತ್ಯಾಗ ಮಾಡಿದ್ದು ಮಾತ್ರ ಕ್ರೂರ ಅಣಕವೇ ಸರಿ. ಮೂಲತಃ ಕೇಶವ ದೇಸಿರಾಜು ಹುಟ್ಟಿದ್ದು, ಬೆಳೆದಿದ್ದು ಮುಂಬೈಯಲ್ಲಿ. ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಪ್ರಥಮ ಶ್ರೇಣಿಯಲ್ಲಿ ಪಾಸಾಗುತ್ತಿದ್ದ ಪ್ರತಿಭಾವಂತ. ಮುಂಬೈಯ ಕಥೀ ಡ್ರಲ್ ಮತ್ತು ಜಾನ್ ಕ್ಯಾನನ್ ಸ್ಕೂಲ್ ನಲ್ಲಿ ಓದಿದ ನಂತರ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಹಾರ್ವರ್ಡ್ ವಿಶ್ವವಿದ್ಯಾಲಯದ ಜಾನ್ ಎಫ್ ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್ ನಲ್ಲಿ ಸಾರ್ವಜನಿಕ ಆಡಳಿತದಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದರು. ನಂತರ ಅವರು ಐಎಎಸ್ (ಉತ್ತರಾಖಂಡ ಕೇಡರ್) ಅಧಿಕಾರಿಯಾದರು.

ನಾನು ದಿಲ್ಲಿಗೆ ಹೋದಾಗಲೆಲ್ಲಾ ದೇಸಿರಾಜು ಅವರ ಸಮಯವನ್ನು ಪಡೆದು ಭೇಟಿ ಮಾಡಿ ಬರುತ್ತಿದ್ದೆ. ಮನುಷ್ಯರು ಎಷ್ಟೇ ಅವಸರದಲ್ಲಿದ್ದರೂ, ಅವರ ಜತೆ
ಒಂದು ಕಾಫಿ ಕುಡಿಯುವಷ್ಟು ಸಮಯ ಎಲ್ಲರಿಗೂ ಇರುತ್ತದೆ. ಅದಕ್ಕೂ ಸಮಯ ಮಾಡಿಕೊಳ್ಳದವರು ಸಂಬಂಧಕ್ಕೆ ಬೆಲೆ ಕೊಡುವುದಿಲ್ಲ ಮತ್ತು ಸಮಯವನ್ನು
ನಿಭಾಯಿಸಲು ತಿಳಿದಿಲ್ಲ ಎಂದು ಭಾವಿಸಬಹುದು ಎಂದು ಅವರು ಪ್ರತಿ ಭೇಟಿಯಲ್ಲೂ ಹೇಳುತ್ತಿದ್ದುದು ನೆನಪಾಗುತ್ತದೆ. ಕೆಲವೊಮ್ಮೆ ಅವರ ಭೇಟಿಗೆ ಹೋದಾಗ,
ಆಫೀಸಿಗೆ ಊಟ ತರಿಸುತ್ತಿದ್ದರು. ಅವರ ಸಜ್ಜನಿಕೆ, ಸರಳ ನಡೆ, ಸ್ನೇಹಿತರಿಗೆ ಆದ್ಯತೆ ನೀಡುವ ರೀತಿಯಿಂದ ಇತರರಿಗಿಂತ ಭಿನ್ನವಾಗಿ ಕಾಣುತ್ತಿದ್ದರು.

ನಮ್ಮ ದೇಶ ಕಂಡ ಅತ್ಯುತ್ತಮ ಐಎಎಸ್ ಅಧಿಕಾರಿಗಳಲ್ಲಿ ದೇಸಿರಾಜು ಅವರೂ ಒಬ್ಬರು. ನಾನೊಂದೇ ಅಲ್ಲ, ಅನೇಕರು ಈ ಮಾತು ಹೇಳಿದ್ದನ್ನು ಕೇಳಿದ್ದೇನೆ. ದೇಸಿರಾಜು ಅವರನ್ನು ಯಾವ ಹುದ್ದೆಗೆ ವರ್ಗ ಮಾಡಿದರೂ ಅವರು ಅಲ್ಲಿ ಗುಣಾತ್ಮಕವಾದ ಒಂದಷ್ಟು ಕೆಲಸ ಮಾಡಿ ತಮ್ಮ ಛಾಪು ಬಿಟ್ಟಿದ್ದಾರೆ. ಅವರು ಆರು ತಿಂಗಳಿದ್ದರೂ ಸಾಕು, ಅಲ್ಲಿ ಒಂದಷ್ಟು ಬದಲಾವಣೆ ತರಲು ಪ್ರಯತ್ನ ಮಾಡುತ್ತಿದ್ದುದು ಅವರ ಅಗ್ಗಳಿಕೆ. ಹಾಗಂತ ಈ ಬದಲಾವಣೆಯನ್ನು ಪ್ರಚಾರಕ್ಕೆ ಮಾಡು ತ್ತಿರಲಿಲ್ಲ. ಅವರು ಅಲ್ಲಿಂದ ವರ್ಗವಾದ ನಂತರ ಅವರು ಮಾಡಿದ್ದೇನು ಎಂಬುದು ಗೊತ್ತಾಗುತ್ತಿತ್ತು. ಅಸಲಿಗೆ ಡಾ.ರಾಧಾಕೃಷ್ಣನ್ ಅವರ ಮೊಮ್ಮಗನೊಬ್ಬ ಐಎಎಸ್ ಅಧಿಕಾರಿಯಾಗಿದ್ದಾರೆ ಎಂಬುದು ದಿಲ್ಲಿಯ ಎಷ್ಟೋ ಪತ್ರಕರ್ತರಿಗೇ ಗೊತ್ತಿರಲಿಲ್ಲ.

ಅವರು ಪ್ರಚಾರಕ್ಕಾಗಿ ಮುಖಪುಟಕ್ಕೆ ಬಂದಿದ್ದಾಗಲಿ ಅಥವಾ ಒಳಪುಟಗಳಿಗೆ ಹೋದದ್ದಾಗಲಿ ಇಲ್ಲವೇ ಇಲ್ಲ. ಆದರೂ ದೇಸಿರಾಜು ಅವರು ತುಸು ಮುನ್ನೆಲೆಗೆ
ಬಂದಿದ್ದು, ಅವರು ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಗಳಲ್ಲಿರುವ ಭ್ರಷ್ಟರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಾಗ. ಕೇತನ್ ದೇಸಾಯಿ ಎಂಬ ಒಬ್ಬ ಭ್ರಷ್ಟ
ಭಾರತೀಯ ವೈದ್ಯಕೀಯ ಮಂಡಳಿಯ ನಿರ್ದೇಶಕರಾಗಿ ಮರಳಿ ಅಧಿಕಾರಕ್ಕೆ ಬರಲು ಶತಪ್ರಯತ್ನ ಮಾಡಿದರೂ, ದೇಸಿರಾಜು ಅದನ್ನು ಯಶಸ್ವಿಯಾಗಿ ತಡೆದರು.

ಪಟಿಯಾಲ ಮೂಲದ ಖಾಸಗಿ ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡಲು ಎರಡು ಕೋಟಿ ರುಪಾಯಿ ಲಂಚ ಸ್ವೀಕರಿಸಿದ ಆಪಾದನೆ ಇತ್ತು. ಆದರೂ ಅಂದಿನ ಆರೋಗ್ಯ ಸಚಿವ ಗುಲಾಮ್ ನಬಿ ಅಜಾದ್, ದೇಸಾಯಿ ಮರುಸ್ಥಾಪನೆಗೆ ಎಲ್ಲಾ ಸಿದ್ಧತೆ ಮಾಡಿದ್ದರು. ಇದನ್ನು ದೇಸಿರಾಜು ಖಡಾಖಡಿ ವಿರೋಧಿಸಿದರು.
ಇದೊಂದೇ ಅಲ್ಲ, ಸ್ಟೆಂಟ್ ಗಳನ್ನು ತಯಾರಿಸುವ ವಿದೇಶಿ ಕಂಪನಿಗಳಿಗೆ ಅನುಮತಿ ನೀಡಲು ದೇಸಿರಾಜು ವಿರೋಧಿಸಿದರು. ಅದಕ್ಕಿಂತ ಕಡಿಮೆ ಬೆಲೆಯಲ್ಲಿ ದೇಶಿಯ ಕಂಪನಿಗಳು ಸ್ಟೆಂಟ್ ಗಳನ್ನು ಪೂರೈಸಲು ಮುಂದೆ ಬಂದರೂ, ಸಚಿವರು ವಿದೇಶಿ ಕಂಪನಿಗಳಿಗೆ ಮಣೆ ಹಾಕಿದರು. ಇದನ್ನು ದೇಸಿರಾಜು ಒಪ್ಪಲಿಲ್ಲ. ಪರಿಣಾಮ, ಅವರನ್ನು ಗ್ರಾಹಕರ ವ್ಯವಹಾರಗಳ ವಿಭಾಗಕ್ಕೆ ವರ್ಗ ಮಾಡಲಾಯಿತು. ಈ ಬಗ್ಗೆ ಅಜಾದ್ ಅವರನ್ನು ಪ್ರಶ್ನಿಸಿದಾಗ, ಅಧಿಕಾರಿಗಳ ವರ್ಗಾವಣೆಗೆ ಬಗ್ಗೆ ಗಂಭೀರವಾಗಿ ಚರ್ಚಿಸಬೇಕಿಲ್ಲ. ಅದು ಸರಕಾರದಲ್ಲಿ ನಡೆಯುವ ಮಾಮೂಲು ಘಟನೆ ಎಂದು ಬಿಟ್ಟರು.

ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯಲ್ಲಿರುವ ಭ್ರಷ್ಟಾಚಾರದ ಬಗ್ಗೆ ಅವರು ಬರೆದ Healers or Predators? Healthcare Corruption in
India ಎಂಬ ಪುಸ್ತಕ ಓದಿದರೆ ಅವರು ಆ ಇಲಾಖೆಯ ಕೊಳೆ ತೊಳೆಯಲು ಮಾಡಿದ ಪ್ರಯತ್ನವೇನು ಎಂಬುದು ಗೊತ್ತಾಗುತ್ತದೆ. ನನಗೆ ಇದಕ್ಕಿಂತ ದೇಸಿರಾಜು ಅವರು ಈ ದೇಶಕ್ಕೆ ನೀಡಿದ ಮಹಾನ್ ಕೊಡುಗೆಯೆಂದರೆ, ಮೂಲತಃ ಅರ್ಥಶಾಸ್ತ್ರಜ್ಞರಾಗಿದ್ದರೂ, ಮಾನಾಸಿಕ ಆರೋಗ್ಯ ಕಾಳಜಿ ಕಾಯ್ದೆ, 2017 ಜಾರಿ ಯಾಗುವುದರಲ್ಲಿ ಅವರು ತೋರಿದ ಆಸ್ಥೆ ಮತ್ತು ಪಾಲ್ಗೊಳ್ಳುವಿಕೆ. ಆ ಮಹತ್ವದ ಕಾಯ್ದೆಯ ಕರಡನ್ನು ಸಿದ್ಧಪಡಿಸಿದವರೇ ಅವರು.

ಸ್ವಾತಂತ್ಯ ಬಂದು ಇಷ್ಟು ವರ್ಷಗಳಾದರೂ, ಮಾನಸಿಕ ಆರೋಗ್ಯದ ಪ್ರಾಮುಖ್ಯದ ಬಗ್ಗೆ ಯಾವ ಸರಕಾರವೂ ಗಮನವನ್ನೇ ಹರಿಸಿರಲಿಲ್ಲ. ಮಾನಸಿಕ ಆರೋಗ್ಯ ವಿಲ್ಲದೇ ವ್ಯಕ್ತಿಯ ಸ್ವಾಸ್ಥ್ಯಕ್ಕೆ ಅರ್ಥವೇ ಇಲ್ಲ. ಒಬ್ಬನ ಆರೋಗ್ಯವನ್ನು ಮಾನಸಿಕ ಕಾರಣದಿಂದಲೂ ಅಳೆಯು ವಂತಾಗಬೇಕು ಎಂಬುದು ಅವರ ನಂಬಿಕೆ ಯಾಗಿತ್ತು. ಇದನ್ನು ತಮ್ಮ ಪ್ರಭಾವ ಬಳಸಿ, ಈ ಕಾಯ್ದೆಯನ್ನು ರೂಪು ತಾಳಲು ದೇಸಿರಾಜು ಕಾರಣರಾದರು. ದೇಸಿರಾಜು ಅವರು ಮದುವೆ ಯಾಗಿರಲಿಲ್ಲ. ಆದರೆ ಒಬ್ಬ ಸಂತರಂತೆ ಅವರು ಇದ್ದರು. ಅವರು ನಿಧನರಾದಗಾಲೇ ಅನೇಕರು ಅವರ ಹೆಸರನ್ನು ಕೇಳಿದ್ದು. ಅವರು ಬದುಕಿದ್ದಾಗ ಯಾವ ಸರಕಾರವೂ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂಬುದು ವ್ಯಥೆ.