Saturday, 21st September 2024

ಆಸೆ ಹುಟ್ಟಿಸಿದವುಗಳೇ, ಬೇಸರ ಹುಟ್ಟಿಸುವುದೇಕೋ ?

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

‘ಚಿನ್ನಿ ಚಿನ್ನಿ ಆಶಾ.. ಚಿನ್ನದಾನಿ ಆಶಾ,
ಮುದ್ದು ಮುದ್ದು ಆಶಾ.. ಮುತ್ತ್ಯಮಂತ ಆಶಾ,
ಜಾಬಿಲಿ ನಿ ತಾಕಿ ಮುದ್ದುಲಿಡ ಆಶಾ,
ವೆನ್ನಲಕು ತೋಡೈ ಆಡುಕೊನಿ ಆಶಾ’

(ಸಣ್ಣ ಸಣ್ಣ ಆಸೆ, ಮುದ್ದು ಮುದ್ದು ಆಸೆ, ಮುತ್ತಿನಂತ ಆಸೆ, ಚಂದ್ರನನ್ನು ಮುತ್ತಿಡುವ ಆಸೆ, ಬೆಳದಿಂಗಳ ಜೊತೆ ಆಡುವ ಆಸೆ) ಎಂಬ ಈ ಹಾಡು ತೆಲುಗು ಸಿನಿಮಾ ರೋಜಾ ಚಿತ್ರದ್ದು.

ಪ್ರತಿಯೊಬ್ಬರಿಗೂ ವಿಶೇಷವಾಗಿ ಸಂಗೀತ, ಸಾಹಿತ್ಯದ ಗೀಳು ಅಂಟಿಸಿಕೊಂಡಿರುವ ಭಾವನಾ ಜೀವಿಗಳಿಗೆ ಕನಸುಗಳೇ ಜಾಸ್ತಿ, ನೆನಪುಗಳೇ ಧನಕನಕ. ಆ ನೆನಪುಗಳ ಒತ್ತಡಕ್ಕೆ ಬಿಡುವ ನಿಟ್ಟುಸಿರೇ ಎದೆ ಹಗುರ ವಾಗಿಸುವ ಔಷಧಿ. ನನಗಂತೂ ಈ ಮೃದು ಮನಸ್ಸು, ನೆನಪುಗಳ ಸರಣಿಗೆ ಎಷ್ಟೋ ಸಲ ಬೇಜಾರಾದದ್ದೂ ಉಂಟು. ತಮಗೆ ಬೇಕಾಗಿರುವ ಯಾವುದೋ ಘಟನೆ, ಯಾವುದೋ ಪ್ರಸಂಗಗಳ ವಿಷಯ, ಭೇಟಿಯಾದ ಯಾರದೋ ಹೆಸರು, ಹೋಗಿದ್ದ ಯಾವುದೋ ಊರು, ಆ ಊರ ಜಾತ್ರೆ, ತೇರು, ಮದುವೆ ಇತ್ಯಾದಿಗಳ ಬಗ್ಗೆ ನನ್ನ ಸ್ನೇಹಿತರು, ಆತ್ಮೀಯರು, ಬಂಧುಗಳು ನನ್ನನ್ನು ಕೇಳಿ ತಿಳಿದುಕೊಳ್ಳುತ್ತಾರೆ.

ಆ ಕ್ಷಣ ನನ್ನ ಮುಖಕ್ಕೆ ಶಭಾಸ್, ಥ್ಯಾಂಕ್ಸ್ ಎಂದೆಲ್ಲ ಅಂದು ನನ್ನ ನೆನಪಿನ ಶಕ್ತಿಗೆ ಹ್ಯಾಟ್ಸಫ್ ಹೇಳಿರುತ್ತಾರೆ. ಆದರೆ ಅದೇ ನನ್ನವರು ಎನಿಸಿಕೊಂಡವರು, ಬೇರೆಯವರ ಮುಂದೆ ನನ್ನ ಬಗ್ಗೆ ಹೇಳುವಾಗ ವ್ಯಂಗ್ಯ ಮಿಶ್ರಿತ ಧ್ವನಿಯಲ್ಲಿ ‘ಆತನಿಗೆ ಕಂಡವರ ಸುದ್ದಿಯೆಲ್ಲ ಬೇಕು, ಮರೆತು ಬಿಡಬೇಕು, ಯಾರೋ ಬಂದು, ಏನೋ ಕೇಳೋದು, ಇವನು ಹೇಳೋದು ಆಮೇಲೆ ಅದು ಹೇಗ್ ಹೇಗೋ ಆಗಿ ತಿರುಗುಬಾಣವಾಗಿ ಈತನಿಗೆ ನಾಟೋದು, ಯಾರಿಗೆ ಬೇಕಾಗಿದ್ದೀತು ಈ ಉಸಾಬರಿ’ ಎಂದು ಕುಟುಕಿ ಮಾಡುವುದನ್ನು ಕಿವಿಯಾರೆ ಕೇಳಿದ್ದೇನೆ.

ಹೆಣ ಶೃಂಗಾರವರಿಯದು, ಜನ ಉಪಕಾರ ಅರಿಯರು ಎಂಬ ಗಾದೆ ಮಾತೇ ಇದೆಯಲ್ಲವೇ? ಹಾಗಂದುಕೊಂಡು ಸುಮ್ಮನಾಗಿದ್ದೇನೆ. ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ ಎಂಬ ಕೆ.ಎಸ್. ನರಸಿಂಹಸ್ವಾಮಿಯವರ ಪಠ್ಯವೇ ನೆನಪಾಗುತ್ತದೆ. ಆದರೂ ನಾನಂತೂ ಸವಿ ನೆನಪು ನೂರು ಸವಿಯಲಿ ಬದುಕು ಎಂಬುದು ನನ್ನ
ಗುಣ ರೂಢಿಸಿ ಕೊಂಡಿದ್ದೇನೆ. 1961 ರಿಂದ 1971 ನನ್ನ ಶೈಶಾವಸ್ಥೆ, ಈ ಹತ್ತು ವರ್ಷದ ನೆನಪು ತೀರಾ ಕಡಿಮೆ ಇವೆ, ಕಾರಣ ತೀರಾ ಬಾಲ್ಯವದು, 1971 ರಿಂದ 81 ಅಚ್ಚಳಿಯದ ನೆನಪುಗಳಿವೆ, 1981 ರಿಂದ 1991 ಬದುಕೆಂದರೆ ಏನು? ಅಂತ ಅರ್ಥವಾದ ದಿನಗಳು, 1981 ರಿಂದ 1991 ಸುವರ್ಣ ಅಕ್ಷರಗಳಿಂದ ಬರೆದಿಡ ಬೇಕಾದ ದಿನಗಳು, 1991 ರಿಂದ 2001 ದುರ್ಬರ ದಿನಗಳು, ತಾವಾಗಿಯೇ ದಿನಗಳು ಹೋಗದೇ, ತಳ್ಳಬೇಕಾಗಿದ್ದ ದಿನಗಳು, 2001 ರಿಂದ 2011 ಬದುಕಿನ ಪ್ರವಾಹದಲ್ಲಿ ಕೊಚ್ಚಿ ಹೋಗದಂತೆ ಹಾಸ್ಯವೆಂಬ ಹರಿಗೋಲು ಸಿಕ್ಕು ಕೆಳಗೆ ಸುಖಗಳಿದ್ದರೂ, ದೋಣಿಯೊಳಗೆ ನೀರು ನುಗ್ಗದೇ ತೇಲಿದಂತಹ ದಿನಗಳು, ಗಂಗಾವತಿ ಎಂಬ ಊರಿನ, ನನ್ನ ಊರಿನ ಜತೆಗೆ ಕರ್ನಾಟಕದ ಎಲ್ಲಾ ಊರುಗಳೂ ನನ್ನವೇ ಆದ ಸಂಭ್ರಮದ ವರ್ಷಗಳು.

ಪತ್ರಿಕೆ, ಟಿ.ವಿ ಗಳು, ನನ್ನೆಲ್ಲ ಊರುಗಳ ಕಾರ್ಯಕ್ರಮ ಗಳನ್ನು ಪ್ರಸಾರ ಮಾಡಿ ನನ್ನನ್ನು ಜನರ ಮನೆ, ಮನಗಳಲ್ಲಿ ಪ್ರತಿಷ್ಠಾಪಿಸಿದವು. ಕನಸಿದ್ದೆಲ್ಲವೂ ನನಸಾ ಯಿತು. ಬಸ್ಸಲ್ಲಿ ನಿಂತು ಪಯಣಿಸಿದ ದಿನಗಳು ಮುಗಿದು, ಬಸ್ಸಿನಲ್ಲಿ ಕೂತವರು ನನ್ನನ್ನು ಗುರುತಿಸಿ ಎದ್ದು ನಿಂತು ತಾವು ಕೂತ ಸ್ಥಳಗಳನ್ನು ಬಿಟ್ಟುಕೊಡಲಾ ರಂಭಿಸಿದರು. ಬಸ್ಸಿನ ಡ್ರೈವರ್, ಕಂಡಕ್ಟರ್‌ಗಳು ಬಸ್‌ಸ್ಟಾಪ್‌ನಲ್ಲೇ ನಿಂತು ಕೈ ಮಾಡಿದರೂ ಸೀಟು ಇಲ್ಲ ಎಂದು ಕೈಯಾಡಿಸಿ ಭರ್ರರ್ರ ಎಂದು ರಸ್ತೆ ಧೂಳನ್ನು ಮುಖಕ್ಕೆ ಎರಚಿ ಬಸ್‌ಗಳನ್ನು ಮುಂದೋಡಿಸುತ್ತಿದ್ದವರು, ರಸ್ತೆಯಲ್ಲಿ ನಿಂತ ನನ್ನನ್ನು ಗುರುತಿಸಿ ಸ್ಟಾಪ್ ಇಲ್ಲದಿದ್ದರೂ ನನ್ನನ್ನು ಹತ್ತಿಸಿಕೊಳ್ಳಲಾ ರಂಭಿಸಿದರು, ಸೀಟು ಇಲ್ಲದಿದ್ದರೂ ಸೀಟ್ ಮಾಡಿಕೊಟ್ಟು ಕೂರಿಸಲಾರಂಭಿಸಿದರು.

ಎಷ್ಟೋ ಸಲ ಕಂಡಕ್ಟರ್‌ಗಳು ತಾವು ಕೂರುವ, ತಾವು ಮಲಗುವ ಸೀಟಿನಲ್ಲಿ ನನ್ನ ಕೂರಿಸಿ, ಮಲಗಿಸಿ, ತಾವು, ಡ್ರೈವರ್ ಪಕ್ಕದ ಮಷೀನ್ ಬ್ಯಾನೆಟ್ ಮೇಲೆ ಕೂತು ರಾತ್ರಿ ಕಳೆದು, ಬೆಳಿಗ್ಗೆ ನನ್ನನ್ನು ಬೆಂಗಳೂರಿನಲ್ಲಿ ನಾನು ಬಯಸಿದ ಸ್ಟಾಪ್‌ಗಳಲ್ಲಿ ಇಳಿಸಿ ಹೋಗಲಾರಂಭಿಸಿದರು. ನನ್ನ ಮುಖ ನೋಡದೇ ‘ರೂಮ್ ಇಲ್ಲಾ’ ಎನ್ನುತ್ತಿದ್ದ ಬೆಂಗಳೂರಿನ ಲಾಡ್ಜ್ ಸಿಬ್ಬಂದಿಗಳು, ಟಿ.ವಿ ಗಳಲ್ಲಿ, ನನ್ನನ್ನು ನೋಡುತ್ತಿದ್ದಂತೆಯೇ ಡಬಲ್ ರೂಮ್‌ಗಳನ್ನು ಸಿಂಗಲ್ ರೇಟ್ ಮಾಡಿ ನನ್ನನ್ನು ಬೆಂಗಳೂರಿನಲ್ಲೇ ನಿಶ್ಚಿಂತೆಯಿಂದ ಇರುವಂತೆ ಮಾಡಿದರು. ಪ್ರಸಿದ್ಧ ಹಿರಿಯ ನಟರುಗಳಾದ ಧೀರೇಂದ್ರ ಗೋಪಾಲ್, ಬಿ.ಕೆ. ಶಂಕರ್, ಸದಾಶಿವ ಬ್ರಹ್ಮಾವರರು ವರ್ಷಾನುಗಟ್ಟಲೇ ಇದ್ದ ಆನಂದರಾವ್ ಸರ್ಕಲ್‌ನ ಜನಾರ್ಧನ್ ಲಾಡ್ಜ್‌ನಲ್ಲಿ ಪ್ರಾರಂಭದ ಅನೇಕ ವರ್ಷಗಳನ್ನು ಮನೆಯಲ್ಲಿರುವಷ್ಟು ನಿಶ್ಚಿಂತೆಯಿಂದಲೇ ಇದ್ದು ಕಾರ್ಯಕ್ರಮಗಳನ್ನು ಕೊಟ್ಟೆ.

ಈಗ ಒಂದು ಒಂದೂವರೆ ವರ್ಷದಿಂದ ಅದೇ ಆನಂದರಾವ್ ಸರ್ಕಲ್ ನಲ್ಲಿರುವ ಸುಪ್ರಸಿದ್ಧ ಕನ್ನಡದ ಹಿರಿಯ ನಟರಾದ ಕೆ.ಎಸ್.ಅಶ್ವತ್ಥ್‌ರವರು ಇರುತ್ತಿದ್ದ, ಬಿ.ಸಿ ಪಾಟೀಲ್, ವಿ. ಮನೋಹರ್ ಕೂಡಾ ಕೆಲವು ಕಾಲ ಇದ್ದ ‘ದ್ವಾರಕಾ ಲಾಡ್ಜ್’ ಈಗ ನನ್ನ ತಾಣ. ಮಾಲಿಕರಾದ ಎನ್.ಆರ್.ಶ್ರೀನಿವಾಸರಾವ್ ಸದಾ ಹಸನ್ಮುಖಿ, ಶ್ವೇತವಸಧಾರಿಗಳು, ನಟರು, ಕಲಾವಿದರ ಬಗ್ಗೆ ಅವರಿಗಿರುವ ಗೌರವ, ಅಭಿಮಾನಗಳು ಸ್ಮರಣೀಯವಾದವುಗಳು.

ಹೀಗೆ ಈ ಇಪ್ಪತ್ತು ವರ್ಷಗಳಲ್ಲಿ ಬೆಂಗಳೂರು ನನಗೆ ಗಂಗಾವತಿ ಬಿಟ್ಟ ನಂತರದ ನೆಮ್ಮದಿಯ ತಾಣ. ಬೆಂಗಳೂರು ಬೆಂಕಿಯಿದ್ದಂತೆ, ಹಿತವಾದ ಅಳತೆಯಲ್ಲಿ ಕುಳಿತು ಮೈಕಾಯಿಸಿಕೊಂಡರೆ ಸುಖಾನುಭವ ಕೊಡುತ್ತದೆ. ಅದರೊಳಗೇ ಹಾರಿದರೆ ಮೈ ಸುಡುತ್ತದೆ. ಇಲ್ಲಿ ಎಲ್ಲಾ ಸ್ವಭಾವದ ಜನರಿದ್ದಾರೆ. ನಿಮ್ಮ ಪೂರ್ವ ಜನ್ಮದ ಪುಣ್ಯವಿದ್ದರೆ, ಒಳ್ಳೆಯ ಜನರೇ ಸಿಗುತ್ತಾರೆ. ಆಸೆ, ಆಮೀಷ, ದುರಾಸೆ, ದಾಹಗಳಿಗೆ ಈಡಾದರೆ ಬಲಿ ಹಾಕಲು ದೊಡ್ಡ ಪಡೆಯೇ ಇದೆ, ಇದು ದೊಂಬ ರಾಟದ ಹಗ್ಗದ ಮೇಲಿನ ನಡಿಗೆ, ಕೈಯೊಳಗಿನ ಬ್ಯಾಲೆನ್ಸ್ ಕೋಲನ್ನು ನೀವು ಹೇಗೆ ಬ್ಯಾಲೆನ್ಸ್ ಮಾಡುತ್ತಿರೋ ಅಷ್ಟು ಹೊತ್ತು ಹಗ್ಗದ ಮೇಲಿನ ನಿಮ್ಮ ನಡಿಗೆ ರೋಚಕ, ರೋಮಾಂಚನ, ಅದು ತಪ್ಪಿತೋ ಭಯಾನಕ, ಭತ್ಸ, ಭಯಂಕರ.

ಇಷ್ಟೆಲ್ಲ ಒಬ್ಬ ಸಾಮಾನ್ಯ ಶಿಕ್ಷಕನ ಮಗನಾದ ನನ್ನ ಬಾಳಲ್ಲಿ ನಡೆದ ಘಟನೆಗಳು ನಿಮಗೆ ಆಶ್ಚರ್ಯವಾಗಬಹುದು. ಇವ್ಯಾವನ್ನು ನಾನು ಬಯಸಿರಲಿಲ್ಲ. ಒಂದು ಸರಕಾರಿ ಉದ್ಯೋಗ, ನನ್ನದು ಅಂತ ಒಂದು ಮನೆ, ನನ್ನದು ಅಂತ ಒಂದು ಸ್ವತಂತ್ರ ಜೀವನ, ಯಾರಿಗೂ ಕೊಡುವುದಾಗಲಿ, ನಾನು ಇನ್ನೊಬ್ಬರ ಸಹಾಯ ವಾಗಲಿ ಕೇಳದಂತಹ ಮಾಮೂಲಿ, ಮಧ್ಯಮ ವರ್ಗದ ಒಂದು ಬ್ರಾಹ್ಮಣ ಕುಟುಂಬದ ಜೀವನ ಇಷ್ಟೆ. ಆದರೆ, ಗ್ರಹಗಳು, ಆಕಾಶದ ದೇವರು, ನನ್ನನ್ನು ಗಾಳಿಪಟ ದಂತೆ ಮೇಲೆ ಮೇಲೆ ಹಾರಿಸಿದ ಪರಿಯಿದೆಯಲ್ಲ? ಇದ್ಯಾವುದೂ ನನ್ನ ‘ಚಿನ್ನಿ, ಚಿನ್ನಿ’ ಆಸೆಯಾಗಿರಲಿಲ್ಲ.

ಆದರೆ, ನಭೂತೋ ನಭವಿಷ್ಯತಿಃ ಎಂಬಂತೆ ಈ ಜನಪ್ರಿಯತೆ, ಗೌರವ, ಮಾನ, ಸನ್ಮಾನಗಳು ಒದಗಿಬರುತ್ತಲೇ ಇವೆ. ಅಭಿಮಾನಿಗಳು, ಸ್ನೇಹಿತರಂತೂ ದಿನದಿನಕ್ಕೂ ಹೆಚ್ಚುತ್ತಿದ್ದಾರೆ. ರಸ್ತೆಗಳಲ್ಲಿ ಹತ್ತು ಹೆಜ್ಜೆ ಹಾಕುವುದರೊಳಗೆ ಎಂಟು ಜನ ಗುರುತಿಸುತ್ತಾರೆ. ಪ್ರತಿಯೊಬ್ಬರಿಗೂ ನಿಂತು, ನಿಂತು ಮಾತನಾಡಿಸುತ್ತಾ ಮಾಮೂಲ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ನಾನು ಹೊರಗೆ ಬಂದು ರಸ್ತೆಗಿಳಿದ ಕಾರಣವೇ ಮರೆತು ಹೋಗಿರುತ್ತದೆ. ಪ್ರಸಿದ್ಧಿಯಾಗಲು ಬಯಸುವುದು, ಆಮೇಲೆ ಗುರುತು ಸಿಗಬಾರದೆಂದು ಮುಖ ಮುಚ್ಚಿಕೊಳ್ಳುವುದು, ಇದೇನು ವಿಧಿಯ ವೈಪರಿತ್ಯ ಎನಿಸುತ್ತದೆ. ಇತ್ತೀಚೆಗೆ ಜಾಹಿರಾತುಗಳಿಗೂ ನನ್ನನ್ನು ಬಳಸಿಕೊಳ್ಳಲು ಕೆಲವು ಜನರು ಬಂದಿದ್ದಾಯಿತು.

ಸಿನಿಮಾ, ಸೀರಿಯಲ್‌ಗಳಲ್ಲಿ ಪಾತ್ರ ಮಾಡಲಂತೂ ಸದಾ ದಿನಕ್ಕೆ ಎರಡು, ಮೂರು ಕರೆಗಳಿರುತ್ತವೆ. ಇವು ಯಾವವೂ ನನ್ನ ಚಿನ್ನಿ ಚಿನ್ನಿ ಆಸೆಗಳ ಲಿಸ್ಟ್‌ನಲ್ಲಿ ಇರಲಿಲ್ಲ. ವರದಿಗಾರ, ಪತ್ರಕರ್ತ, ಸಂದರ್ಶಕ, ಕಥೆ, ಕಾದಂಬರಿ, ಲೇಖಕನಾಗಬೇಕೆಂದು ಬಯಸಿದ್ದೂ ಉಂಟು. ಅದಕ್ಕಾಗಿ ಒಂದಾನೊಂದು ಕಾಲದಲ್ಲಿ ಮೈಸೂರಿನ ಪತ್ರಿಕೋದ್ಯಮ ಕಾಲೇಜಿಗೆ ಅರ್ಜಿ ಹಾಕಿದ್ದೆ. ಅದರ ಸಂದರ್ಶನಕ್ಕೂ ಕರೆ ಬಂದ ಆ ಅಂಚೆ ಕವರ್ರು ಆಗಿನ ಪೋಸ್ಟ್‌ಮ್ಯಾನ್ ಸೈಕಲ್ ಮೇಲಿಂದಲೇ
ಮನೆಯೊಳಗೆ ಬೀಸಿ ಎಸೆದು ಹೋಗಿಬಿಟ್ಟಿದ್ದ.

ನಮ್ಮದೋ ಸದಾ ಗೆಳೆಯರು, ಕವಿಗಳು, ಸಂಗೀತಗಾರರು, ಸಾಹಿತಿ ಮಿತ್ರರು ಬರುವ ಮನೆ, ನೆಲದಲ್ಲಿ ಬಿದ್ದಿದ್ದ ಆ ನನ್ನ ಸಂದರ್ಶನ ಪತ್ರದ ಕವರ್‌ಗೆ ಯಾರದೋ ಕಾಲು ತಾಕಿ, ಚಿಮ್ಮಿ ಸರ್ರನೇ ಮುಂದೆ ದೊಡ್ಡ ಅಲಮಾರಿ ಕೆಳಗೆ ಹೋಗಿ ಹಾಯಾಗಿ ಮಲಗಿಬಿಟ್ಟಿತ್ತು. ಅದನ್ನು ಕಾಲಿಂದ ಚಿಮ್ಮಿದ ವ್ಯಕ್ತಿ ಒಳಬರುವ ಅವಸರದಲ್ಲಿ ಅದು ಏನೆಂದು ಕೂಡಾ ನೋಡಿದ್ದಿಲ್ಲ. ಸುಮಾರು ಮೂರು ತಿಂಗಳ ಮೇಲೆ, ಮನೆಗೆ ಸುಣ್ಣ ಹಚ್ಚುವಾಗ ಅಲಮಾರಿ ಸರಿಸಿ, ಕೆಳಗೆ ಕಸ ಬಳಿದು ಕೊಳ್ಳುವಾಗ ಆ ಕವರು ಹೊರಬಂದು ತೆಗೆದು ನೋಡಿದರೆ, ಅದು ನನ್ನ ಪತ್ರಕರ್ತನಾಗಬೇಕೆಂದಿದ್ದ ಕನಸಿನ ಅರ್ಜಿಗೆ ಬಂದು ಸೇರಲು ಕರೆದಿದ್ದ ಪತ್ರ, ಮೂರು ತಿಂಗಳಾಗಿ ಹೋಗಿತ್ತು ಆಗಲೇ, ಅಲ್ಲಿಗೆ ಆ ಕನಸೂ ಭಗ್ನ. ಆಗೋದೆಲ್ಲ ಒಳ್ಳೆಯದಕ್ಕೆ ಎನ್ನುವ ಮಾತು ನನ್ನ ಜೀವನದಲ್ಲಿ, ನನ್ನ ವೈಫಲ್ಯಗಳಲ್ಲೇ ಅಡಗಿ ಕುಳಿತಿದೆ. ನಾನು ಬಯಸಿದ್ದು, ಕನಸು ಕಂಡಿದ್ದು, ಯಾವದೂ ಕೈಗೂಡಿಲ್ಲ.

ಆದರೂ, ಅನೇಕರು ಕನಸು ಕಾಣುವ ಜೀವನ ನನ್ನದಾಗಿರುವುದಕ್ಕೆ ನಾನು ಆ ದೇವರ ಕೃಪೆಯನ್ನೂ, ನನ್ನ ಹಿರಿಯರ ಪೂರ್ವಾಜಿತ ಪುಣ್ಯವನ್ನು ಸ್ಮರಿಸಲೇ ಬೇಕು. ಶೆಟ್ಟರ ಹೆಣ್ಣು ಹುಡುಗಿಯರು ಮೈನೆರೆತಾಗ ಅವರು ನಿತ್ಯ ವೇಷ ಹಾಕಿ ನಿಲ್ಲುತ್ತಿದ್ದ ಆ ಪುಟ್ಟ ವೇದಿಕೆಯಲ್ಲಿ ನಾನೂ ಒಂದು ವೇಷ ಹಾಕಿ ನಿಂತು ಮೂಕ ಪಾರ್ಟ್ ಮಾಡಿದ್ದೆ. ಮುಂದೆ ಅನೇಕ ನಾಟಕಗಳಲ್ಲಿ ಅಭಿನಯಿಸಿ, ಒಂದು ಸಿನಿಮಾದಲ್ಲೂ ಪಾರ್ಟು ಮಾಡಿದೆ. ಪತ್ರಕರ್ತನಾಗಲು ಅರ್ಜಿ ಹಾಕಿ ಯಾರ ಕಾಲಿಗೋ ಸಿಕ್ಕು ಅರ್ಜಿ ಕಳೆದುಕೊಂಡವನು ಇಂದು ನೂರಾರು ಪತ್ರಿಕೆಗಳಿಗೆ ಸಂದರ್ಶನ ಕೊಟ್ಟೆ, ಒಂದು ರೂಪಾಯಿ ಕೊಟ್ಟು ಒಂದು ಎಕ್ಸಿಬಿಷನ್‌ನಲ್ಲಿ ಚಿಕ್ಕ ಟಿ.ವಿ ನೋಡಿದ ನಾನು, ಇಂದು ನಿತ್ಯ ಎಲ್ಲ ಚಾನೆಲ್‌ಗಳಲ್ಲೂ ನನ್ನನ್ನೇ ನೋಡಿಕೊಳ್ಳುತ್ತಾ ನನ್ನನ್ನು ತೋರಿಸಬೇಡಿ, ಕರೆಯಬೇಡಿ ಎಂದು ಟಿ.ವಿ ಗಳ ಮಾಲಿಕರನ್ನು ಬೇಡಿ ಕೊಳ್ಳುತ್ತಿದ್ದೇನೆ.

ನನ್ನನ್ನು ಭಾಷಣಕ್ಕೆ, ಕಾರ್ಯಕ್ರಮಕ್ಕೆ ಕರೆಸಿರಿ ಎಂದು ಹದಿನೈದು ಪೈಸೆ ಕಾರ್ಡ್ನ್ನು ಕಂಡು, ಕೇಳರಿಯದ ಸಂಘ ಸಂಸ್ಥೆಗಳ ವಿಳಾಸಕ್ಕೆ ಬರೆಯುತ್ತಿದ್ದ ನಾನು, ಅಮೆರಿಕದಂತಹ ದೇಶಗಳಿಗೆ ಕರೆದರೂ ಹೋಗಲಾರದೇ ಅವರನ್ನು ತಪ್ಪಿಸಿಕೊಳ್ಳುತ್ತಿದ್ದೇನೆ. ಬಗೆ ಬಗೆಯ ಕಂಡವರ ಬಟ್ಟೆ ತೊಟ್ಟು ಸ್ಟುಡಿಯೋಗಳಲ್ಲಿ
ಫೋಟೊ ತೆಗೆಸಿಕೊಳ್ಳುತ್ತಿದ್ದ ನಾನು, ಇಂದು ಯಾರಾದರೂ ಕ್ಯಾಮೆರಾ, ಮೊಬೈಲ್ ಹಿಡಿದು ಫೋಟೊ, ಸೆಲ್ಫಿಗೆ ಬಂದರೆ ಅವರನ್ನು ಬೈದು, ತಪ್ಪಿಸಿಕೊಂಡು ಓಡುತ್ತಿದ್ದೇನೆ, ಯಾರಾದರೂ ತಮ್ಮ ಮನೆಗೋ, ಮದುವೆಗೋ ಅಥವಾ ಅವರ ಊರಿಗೆ ಕರೆದರೆ ಸಾಕೆಂದು ಕಾಯುತ್ತಿದ್ದ ನಾನು, ಕಾರ್ಯಕ್ರಮಗಳ ಆಹ್ವಾನಗಳ ಫೋನು ಬಂದರೂ ಎತ್ತಲಾರದಷ್ಟು ಆ ಫ್ಯಾನನ್ನು ಬಂದ್ ಮಾಡುತ್ತಿದ್ದೇನೆ.

ಇದೇ ಕಾಲಗತಿ, ಕಾಲಚಕ್ರ ಎನ್ನುವುದು. ಯಾವುದನ್ನು ನಾವು ಬೆನ್ನುಹತ್ತಿ ಓಡಿರುತ್ತಿವೆಯೋ ಅದೇ ನಮ್ಮ ಬೆನ್ನು ಹತ್ತಿದಾಗ ಅದರಿಂದ ತಪ್ಪಿಸಿಕೊಳ್ಳಲು ಓಡುವ ಈ ಪರಿಗೆ ವಿಧಿ ಎನ್ನಬೇಕೋ, ಅತಿರೇಕವೆನ್ನಬೇಕೋ ಅಥವಾ ಅತೀ ಸರ್ವತ್ರ ವರ್ಜಯೇತ್ ಎನ್ನಬೇಕೋ ತಿಳಿಯದಾಗಿದೆ. ಮಹಾಭಾರತ – ರಾಮಾಯಣ ಕಾಲಕ್ಕೆ ವ್ಯಕ್ತಿಗಳಿಗೆ ಐದುನೂರು,  ಎಂಟುನೂರು ವರ್ಷಗಳ ಆಯಸ್ಸು ಇರುತ್ತಿತ್ತಂತೆ, ಈಗ? ಐವತ್ತು, ಅರವತ್ತು ವಯಸ್ಸಿಗೇ ಜೀವನ, ದಿನಚರಿ ಒಟ್ಟಿನಲ್ಲಿ
‘ಬದುಕು ಜಟಕಾಬಂಡಿ, ವಿಽಯದರ ಸಾಹೇಬ’ ಎಂಬುದು ಸತ್ಯವೆನಿಸುವಂತಾಗಿದೆ. ಸಣ್ಣ ಸಣ್ಣ ಆಸೆ ಹುಟ್ಟಿಸೋನೂ ಆ ದೇವರೇ, ಅವುಗಳಿಂದಲೇ ಈಗ ಬೇಸರ
ಹುಟ್ಟಿಸುತ್ತಿರುವವರು ಅವನೇ? ಇದೇನು ಅವನ ಲೀಲೆಯೋ, ನನ್ನ ದೌರ್ಬಲ್ಯವೋ ತಿಳಿಯದು.

ಆಸೆ ಹುಟ್ಟಿಸಿದವುಗಳೇ ಹೀಗೆ ಬೇಸರ ಹುಟ್ಟಿಸುವುದು ಹುಚ್ಚೋ, ಭ್ರಮೆಯೋ, ವೈರಾಗ್ಯವೋ ತಿಳಿಯುತ್ತಿಲ್ಲ. ನಿಮಗೇನಾದರೂ ತಿಳಿದರೆ ಹೇಳಿ.