ಕಾಳಜಿ
ವಿಜಯ್ ದರ್ಡ, ಹಿರಿಯ ಪತ್ರಕರ್ತ, ಅಧ್ಯಕ್ಷರು,
ಲೋಕಮತ್ ಪತ್ರಿಕಾ ಸಮೂಹ
ನಾವೆಲ್ಲರೂ ಬದುಕಿನ ಯುದ್ಧದಲ್ಲಿ ಸೆಣಸುತ್ತಿದ್ದೇವೆ. ಆದರೆ, ಪರಿಸರದ ವಿಷಯದಲ್ಲಿ ಯಾರೂ ಈ ಕೆಚ್ಚು ತೋರಿಸುತ್ತಿಲ್ಲ. ಇದೇ ಪರಿಸರದಿಂದಾಗಿಯೇ ಅಲ್ಲವೇ ನಾವೆಲ್ಲ ಬದುಕಿರುವುದು? ಆದರೂ ಪರಿಸರ ನಾಶ ಮಾಡಲು ಮನುಷ್ಯ ಹಟಕ್ಕೆ ಬಿದ್ದಂತಿದೆ. ನೆನಪಿಡಿ, ಪರಿಸರ ಉಳಿಸದಿದ್ದರೆ ಮನುಷ್ಯ ಕೂಡ ಭೂಮಿಯ ಮೇಲೆ ಉಳಿಯುವುದಿಲ್ಲ!
ಇತ್ತೀಚೆಗೆ ಜೈನ ಧರ್ಮೀಯರ ಪರ್ಯೂಷಣ ಪರ್ವ ನಡೆಯಿತು. ಇದು ಪರಿಸರವನ್ನು ಗೌರವಿಸುವ ಹಬ್ಬ. ನಾನೂ ಆ ಸಮಯದಲ್ಲಿ ಪ್ರತಿಕ್ರಮಣ (ಆತ್ಮಾವ ಲೋಕನ) ಮಾಡಿಕೊಳ್ಳುತ್ತಿದ್ದೆ. ಅದರ ಅಂಗವಾಗಿ ನೀರು, ಭೂಮಿ ಹಾಗೂ ಆಗಸದಲ್ಲಿರುವ ಸಮಸ್ತ ಜೀವ ಜಂತುಗಳ ಕ್ಷಮೆ ಯಾಚಿಸಿದೆ. ಮನುಷ್ಯರಲ್ಲಿ ಕ್ಷಮೆ
ಕೇಳಿದೆ. ಮರ, ಹಕ್ಕಿಗಳು, ಕ್ರಿಮಿ ಕೀಟಗಳು ಹಾಗೂ ಎಲ್ಲಾ ಪ್ರಾಣಿಗಳ ಕ್ಷಮೆ ಕೇಳಿದೆ. ಹಾಗೆ ಮಾಡುವಾಗ ನನ್ನ ಮನಸ್ಸಿನಲ್ಲೊಂದು ಪ್ರಶ್ನೆಯೆದ್ದಿತು.
ನಾವು ಪಂಚಭೂತಗಳನ್ನು ಪೂಜೆಯೇನೋ ಮಾಡುತ್ತೇವೆ, ಆದರೆ ನಿತ್ಯ ಜೀವನದಲ್ಲಿ ಅರ್ಥಪೂರ್ಣವಾಗಿ ಅವುಗಳನ್ನು ಗೌರವಿಸುತ್ತೇವೆಯೇ? ಮನುಷ್ಯ ಏಕೆ ಉದ್ದೇಶಪೂರ್ವಕವಾಗಿ ಪ್ರಕೃತಿಯ ವಿರುದ್ಧ ಯುದ್ಧ ಮಾಡುತ್ತಿದ್ದಾನೆ? ಪ್ರಕೃತಿಗೆ ಆಗುವ ಪ್ರತಿಯೊಂದು ಹಾನಿಯೂ ನಮಗೆ ನಾವೇ ಮಾಡಿಕೊಳ್ಳುವ ಹಾನಿ.
ಆದರೂ ನಾವೇ ಏಕೆ ನಮ್ಮ ಹಣೆಗೆ ಬಂದೂಕು ಇರಿಸಿಕೊಳ್ಳುತ್ತಿದ್ದೇವೆ? ಪ್ರಕೃತಿಯ ಬಗ್ಗೆ ಯೋಚಿಸಿದಾಗಲೆಲ್ಲ ನಾನು ಗೊಂದಲಕ್ಕೆ ಬೀಳುತ್ತೇನೆ. ಈ ತಲೆಮಾರಿನ ಮನುಷ್ಯನ ದುರಾಸೆ ನೋಡಿ ಹೆದರಿಕೆಯಾಗುತ್ತದೆ. ಈ ದುರಾಸೆಯೇ ಪ್ರಕೃತಿಗೆ ಇನ್ನಿಲ್ಲದ ಹಾನಿ ಉಂಟುಮಾಡುತ್ತಿದೆ.
ಅದರಿಂದಾಗಿ ನಾವೇ ಈಗ ಸಂಕಷ್ಟ ಅನುಭವಿಸುತ್ತಿರುವುದರ ಜತೆಗೆ ನಮ್ಮ ಭವಿಷ್ಯದ ತಲೆಮಾರಿಗೆ ಧ್ವಸ್ತ ಜಗತ್ತನ್ನು ಬಿಟ್ಟುಹೋಗಲಿದ್ದೇವೆ. ಪರಿಸರವೆಂಬುದು ನನಗೆ ಅತ್ಯಂತ ಮಹತ್ವದ ವಿಷಯ. ನನ್ನಂತೆ ಪರಿಸರದ ಬಗ್ಗೆ ಕಾಳಜಿಯುಳ್ಳ ಇನ್ನೂ ಸಾಕಷ್ಟು ಜನರು ಜಗತ್ತಿನಲ್ಲಿದ್ದಾರೆ. ಆದರೆ ಕಾಳಜಿಯಿಲ್ಲದ ಜನರ ಸಂಖ್ಯೆ ಅದಕ್ಕಿಂತ ದೊಡ್ಡದಿದೆ! ಇದು ಜಗತ್ತನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ. ವೈಯಕ್ತಿಕವಾಗಿ ನಮ್ಮಲ್ಲಿ ಪ್ರತಿಯೊಬ್ಬರೂ ಪರಿಸರಕ್ಕೆ ಎಷ್ಟು ಪ್ರಮಾಣದ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತಿದ್ದೇವೆ ಎಂಬ ಬಗ್ಗೆ ಯಾವತ್ತಾದರೂ ಯೋಚಿಸುತ್ತೇವೆಯೇ? ಇಲ್ಲ.
ನನ್ನದೇ ಸುತ್ತಮುತ್ತ ನೋಡಿದರೂ ಸಾಕು, ನನಗೆ ಅಚ್ಚರಿಯಾಗುತ್ತದೆ. ನಮ್ಮ ಸಂಸ್ಥೆಗೆ ನಿತ್ಯ ಎಷ್ಟೊಂದು ಜನರು ಭೇಟಿ ನೀಡುತ್ತಾರೆ. ಕೆಲವರು ಕಾರಿನಲ್ಲಿ ಬರುತ್ತಾರೆ, ಇನ್ನು ಕೆಲವರು ಬೈಕ್ನಲ್ಲಿ ಬರುತ್ತಾರೆ. ಅವರೆಲ್ಲ ವಾತಾವರಣಕ್ಕೆ ಎಷ್ಟು ಕಾರ್ಬನ್ ಬಿಡುಗಡೆ ಮಾಡುತ್ತಾರೆ! ಸಾರ್ವಜನಿಕ ಸಾರಿಗೆ ಸೌಕರ್ಯ ಎಲ್ಲರಿಗೂ ಸುಲಭವಾಗಿ ಎಟಕು ವಂತಿದ್ದರೆ ಈ ಕಾರ್ಬನ್ ಹೊರಸೂಸುವಿಕೆಯನ್ನು ಸಾಕಷ್ಟು ಕಡಿಮೆ ಮಾಡಬಹುದು. ಹೆಚ್ಚಿನ ಜನರು ಬಸ್ ಅಥವಾ ಟ್ರೇನ್ನಲ್ಲಿ ಓಡಾಡಿದರೆ ಸಾಕಷ್ಟು ಕಾರ್ಬನ್ ಬಿಡುಗಡೆ ಕಡಿಮೆಯಾಗುತ್ತದೆ. ಆದರೆ ಅದೇ ವೇಳೆ, ಒಬ್ಬನೇ ವ್ಯಕ್ತಿ ಕಾರಿನಲ್ಲಿ ಪ್ರಯಾಣಿಸಿದರೆ ಇವರು ಉಳಿಸಿದ್ದನ್ನೆಲ್ಲ ಅವನು ಬಿಡುಗಡೆ ಮಾಡಿರುತ್ತಾನೆ!
ನಮ್ಮ ಕಂಪನಿಯ ಪ್ರಿಂಟಿಂಗ್ ಪ್ರೆಸ್ನಲ್ಲಿರುವ ಯಂತ್ರಗಳು ಕೆಲಸ ಮಾಡುವುದನ್ನು ಒಮ್ಮೊಮ್ಮೆ ಸುಮ್ಮನೆ ನಿಂತು ನೋಡುತ್ತೇನೆ. ಇನ್ನು ಕೆಲವೊಮ್ಮೆ ಆಫೀಸ್ ನಲ್ಲಿ ಇಡೀ ದಿನ ಉರಿಯುವ ಲೈಟ್ಗಳನ್ನು ನೋಡುತ್ತೇನೆ. ಇದಕ್ಕೆಲ್ಲ ಬೇಕಾದ ವಿದ್ಯುತ್ತನ್ನು ಕಲ್ಲಿದ್ದಲು ಉರಿಸಿ ತಯಾರಿಸಿ ರುತ್ತಾರೆ. ಅದರಿಂದ ವಾತಾವರಣಕ್ಕೆ ಎಷ್ಟೊಂದು ಕಾರ್ಬನ್ ಬಿಡುಗಡೆಯಾಗಿರುತ್ತದೆ. ಹೀಗಾಗಿ ನಮ್ಮ ಆಫೀಸಿನಲ್ಲೀಗ ಸೋಲಾರ್ ವಿದ್ಯುತ್ ಬಳಸಲು ಆರಂಭಿಸಿದ್ದೇವೆ. ನಾವೀಗ ದಿನಪತ್ರಿಕೆ ಪ್ರಿಂಟ್
ಮಾಡುವುದಕ್ಕೂ ಸೌರಶಕ್ತಿಯನ್ನೇ ಬಳಸುತ್ತಿದ್ದೇವೆ. ಜ, ಅದಕ್ಕೆ ಕೊಂಚ ದುಬಾರಿ ಬಂಡವಾಳವನ್ನೇ ಹೂಡಬೇಕಾಯಿತು.
ಆದರೆ, ಪರಿಸರ ಉಳಿಸುವುದಕ್ಕೆ ನಮ್ಮದೇ ಆದ ದೃಢ ಹೆಜ್ಜೆ ಇರಿಸಿದ್ದೇವೆ ಎಂದು ಯೋಚಿಸಿದಾಗ ಖುಷಿಯಾಗುತ್ತದೆ. ವಾಸ್ತವವಾಗಿ ಪ್ರತಿಯೊಬ್ಬ ವ್ಯಕ್ತಿಯೂ ಇದರ ಬಗ್ಗೆ ಯೋಚಿಸಬೇಕು. ಪರಿಸರ ಉಳಿಸಲು ಪ್ರತಿಯೊಬ್ಬರೂ ವೈಯಕ್ತಿಕ ಮಟ್ಟದಲ್ಲಿ ಒಂದಷ್ಟು ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿದೆ. ಪ್ರತಿಯೊಂದಕ್ಕೂ ನಾವು ಪರಿಸರವನ್ನೇ ಅವಲಂಬಿಸುವುದು ಶುದ್ಧಾತಿಶುದ್ಧ ತಪ್ಪು. ಈ ದಿಸೆಯಲ್ಲಿ ನಮ್ಮ ಸಣ್ಣಪುಟ್ಟ ಉಪಕ್ರಮಗಳೂ ಪರಿಣಾಮಕಾರಿಯಾಗಬಲ್ಲವು. ಉದಾಹರಣೆಗೆ, ಆಹಾರ ವ್ಯರ್ಥವಾಗುವುದನ್ನು ತಪ್ಪಿಸುವುದು.
ಅಂಕಿಅಂಶಗಳ ಪ್ರಕಾರ ಪ್ರತಿವರ್ಷ ಶೇ.೭೦ರಷ್ಟು ಆಹಾರ ಧಾನ್ಯಗಳು ಹಾಗೂ ಹಣ್ಣುಗಳು ವ್ಯರ್ಥ ವಾಗುತ್ತವೆ. ಧಾನ್ಯ ಹಾಗೂ ಹಣ್ಣುಗಳನ್ನು ಬೆಳೆಯಲು ತುಂಬಾ ನೀರು ಬೇಕು. ಆ ನೀರು ಒದಗಿಸಲು ವಿದ್ಯುತ್ ಬೇಕು. ಹಾಗೆಯೇ, ಅವುಗಳಿಗೆ ಬಳಸುವ ಕೀಟನಾಶಕಗಳು ಕೂಡ ಪರಿಸರಕ್ಕೆ ಬಹಳ ಹಾನಿ ಉಂಟುಮಾಡುತ್ತವೆ. ಹಾಗಾಗಿ ವ್ಯರ್ಥವಾಗುವ ಆಹಾರ ಧಾನ್ಯ ಹಾಗೂ ಹಣ್ಣುಗಳನ್ನು ಉಳಿಸಿದರೆ ಪರಿಸರಕ್ಕೆ ಎಷ್ಟೊಂದು ಲಾಭವಿದೆಯಲ್ಲವೇ!
ವಿಶ್ವಸಂಸ್ಥೆಯ ಬ್ಯಾನರ್ ಅಡಿ ಪರಿಸರ ಉಳಿಸುವುದಕ್ಕೆ ಈವರೆಗೆ ಸಾಕಷ್ಟು ಸಮಾವೇಶಗಳು ನಡೆದಿವೆ. ಜಿನೆವಾದಲ್ಲಿ ಸಮಾವೇಶ ನಡೆದಾಗ ನೂರಕ್ಕೂ ಹೆಚ್ಚು ದೇಶಗಳು ಪರಿಸರ ಉಳಿಸುವ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದವು. ನಂತರ ಅದೇ ನಿರ್ಣಯವನ್ನು ರಿಯೋ ಡಿ ಜನೈರೋ ಹಾಗೂ ಪ್ಯಾರಿಸ್ ಸಮಾವೇಶ ದಲ್ಲೂ ಮತ್ತೆ ಮತ್ತೆ ಅಂಗೀಕರಿಸಲಾಯಿತು. 2000ನೇ ಇಸ್ವಿಯೊಳಗೆ ಎಲ್ಲ ದೇಶಗಳೂ ಸೇರಿ ಕಾರ್ಬನ್ ಬಿಡುಗಡೆಯ ಪ್ರಮಾಣವನ್ನು 1990ರಲ್ಲಿದ್ದ ಮಟ್ಟಕ್ಕಿಂತ ಕೆಳಗೆ ತರಬೇಕೆಂದು 1994ರಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಕಸರತ್ತಿನಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಶೀಲ ದೇಶಗಳಿಗೆ ಆರ್ಥಿಕವಾಗಿ ಹಾಗೂ ತಾಂತ್ರಿಕವಾಗಿ ನೆರವು ನೀಡಬೇಕೆಂಬ ಒಪ್ಪಂದಕ್ಕೆ ಬರಲಾಯಿತು. ಆದರೆ ಆಗಿದ್ದೇನು? ಆ ಒಪ್ಪಂದವನ್ನು ನಡುನೀರಿನಲ್ಲಿ ಅನಾಥ ಮಾಡಲಾಯಿತು!
೦೧೯ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಜಾಗತಿಕ ತಾಪಮಾನ ಏರಿಕೆ ಕುರಿತಾದ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದುಬಿಟ್ಟರು. ಅಷ್ಟಲ್ಲದೆ ಭಾರತ, ರಷ್ಯಾ ಮತ್ತು ಚೀನಾ ದೇಶಗಳು ಹವಾಮಾನ ಬದಲಾವಣೆ ತಡೆಯಲು ಏನೂ ಮಾಡುತ್ತಿಲ್ಲ, ಬರೀ ಅಮೆರಿಕದ ಹಣ ವ್ಯರ್ಥ ಮಾಡಿಸುತ್ತಿವೆ ಎಂದು ದೂರಿದರು. ನಿಜ ಏನೆಂದರೆ, ವಾತಾವರಣಕ್ಕೆ ಎಷ್ಟು ಕಾರ್ಬನ್ ಬಿಡುಗಡೆ ಮಾಡಲಾಗುತ್ತಿದೆ ಎಂಬುದನ್ನು ಪರಿಶೀಲಿಸುವ ಇನ್ ಸ್ಪೆಕ್ಟರ್ ನೇಮಕಕ್ಕೂ ಅಮೆರಿಕ ಅವಕಾಶ ನೀಡುತ್ತಿಲ್ಲ.
ಪರಿಸರಕ್ಕೆ ಈವರೆಗೆ ಅತಿಹೆಚ್ಚು ಹಾನಿ ಉಂಟುಮಾಡಿರುವುದು ಅಮೆರಿಕವೇ ಎಂಬುದರಲ್ಲಿ ಯಾರಿಗೂ ಅನುಮಾನವಿಲ್ಲ. ಹೀಗಾಗಿ ಅದಕ್ಕೆ ಆ ದೇಶ ಬೆಲೆ ತೆರಲೇಬೇಕು. ಅದೇ ವೇಳೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಅನಿವಾರ್ಯತೆಯನ್ನೂ ಅರ್ಥ ಮಾಡಿಕೊಳ್ಳಬೇಕು. ನೀವು ಕೆಲಸ ಮಾಡುತ್ತೀರಿ ಎಂದಾದರೆ ಅದರಲ್ಲಿ ಹಲವು ತಪ್ಪುಗಳಾಗಬಹುದು. ಹಾಗಂತ ನಿಮ್ಮತ್ತಲೇ ಯಾವಾಗಲೂ ಬೆರಳು ತೋರಿಸುತ್ತ ಕುಳಿತುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಐದು, ಹತ್ತು, ಹದಿನೈದು ಅಥವಾ ಇಪ್ಪತ್ತು ಪ್ರತಿಶತ ತಪ್ಪುಗಳಾಗಬಹುದು. ಆದರೆ ೮೦ ಪ್ರತಿಶತದಷ್ಟು ಒಳ್ಳೆಯ ಕೆಲಸವಾದರೂ ಆಗುತ್ತದೆಯಲ್ಲ!
ಸದ್ಯದ ಮಟ್ಟಿಗೆ ಜಗತ್ತಿನ ಪರಿಸ್ಥಿತಿ ನಿಜಕ್ಕೂ ಆತಂಕಕಾರಿಯಾಗಿದೆ. ಕಾಡಿನ ನಾಶ ಅವ್ಯಾಹತವಾಗಿ ನಡೆದಿದೆ. ನದಿಗಳು ಒಣಗುತ್ತಿವೆ. ವಾತಾವರಣ ಮಲಿನ ವಾಗುತ್ತಿದೆ. ಓಜೋನ್ ಪದರ ತೆಳುವಾಗುತ್ತಿದೆ. ಬೆಟ್ಟಗುಡ್ಡಗಳು ಕೊಚ್ಚಿಕೊಂಡು ಹೋಗುತ್ತಿವೆ. ಅನೇಕ ಪ್ರಾಣಿಗಳು ಅಳಿವಿನಂಚಿಗೆ ಸಾಗಿವೆ. ರೋಗ
ರುಜಿನಗಳು ಹೆಚ್ಚುತ್ತಿವೆ. ಪರಿಸರದ ನಾಶ ಅಂದರೆ ಮನುಕುಲದ ನಾಶ ಎಂಬ ಮಾತಿದೆಯಲ್ಲ, ಅದು ಖಂಡಿತ ಸುಳ್ಳಲ್ಲ. ನಮ್ಮ ಯಾವುದೇ ಸರಕಾರಗಳು
ಇಂದು ಎದೆ ಮುಟ್ಟಿಕೊಂಡು ನಾವು ಪರಿಸರ ನಾಶ ಮಾಡುತ್ತಿಲ್ಲ ಎಂದು ಹೇಳಿಕೊಳ್ಳಬಲ್ಲವೇ? ಸಾಧ್ಯವಿಲ್ಲ.
ನಾವೆಲ್ಲರೂ ಸೇರಿ ಇದಕ್ಕೆ ಪರಿಹಾರೋಪಾಯಗಳನ್ನು ಹುಡುಕಬೇಕು. ಏಕೆಂದರೆ ಇಷ್ಟು ದಿನ ಪರಿಸರಕ್ಕೆ ಹಾನಿ ಮಾಡಿದವರೂ ನಾವೇ! ನಿಮಗೆ ಲಾಕ್ಡೌನ್ನ
ಸಮಯ ನೆನಪಿರಬಹುದು. ಆಗ ಜನರೆಲ್ಲ ಮನೆಯೊಳಗೆ ಬಂದಿಯಾಗಿದ್ದರು. ಹಾಗಾಗಿ ಪರಿಸರ ಎಷ್ಟು ಸುಂದರವಾಗಿ ನಳನಳಿಸತೊಡಗಿತ್ತು. ಹಾಗಂತ
ಪರಿಸರ ಉಳಿಸಬೇಕೆಂದರೆ ಮತ್ತೆ ಲಾಕ್ಡೌನ್ ಜಾರಿಗೊಳಿಸಬೇಕು ಎಂದರ್ಥವಲ್ಲ. ಆದರೆ ನಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳಲೇಬೇಕು. ಯೋಚಿಸಿ
ನೋಡಿ, ನಾವು ನಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಎಂತಹ ಜಗತ್ತನ್ನು ಬಿಟ್ಟು ಹೋಗುತ್ತಿದ್ದೇವೆ? ನಾನೀಗ ಸ್ವಿಜರ್ಲೆಂಡ್ನಲ್ಲಿದ್ದೇನೆ.
ಇಲ್ಲಿ ವಾಯುಮಾಲಿನ್ಯ ಎಂಬುದಿಲ್ಲ. ನದಿಗಳು ಸ್ವಚ್ಛವಾಗಿ, ಸುಂದರವಾಗಿ ಹರಿಯುತ್ತಿವೆ. ಸರೋವರಗಳು ಸಟಿಕದಷ್ಟೇ ಶುದ್ಧವಾಗಿವೆ. ಇಲ್ಲಿ ವೈದ್ಯಕೀಯ
ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಅದ್ಭುತವಾದ ಪರಿಸರಸ್ನೇಹಿ ವ್ಯವಸ್ಥೆಯಿದೆ. ಎಲ್ಲಿ ಹುಡುಕಿದರೂ ತ್ಯಾಜ್ಯ ಕಾಣಿಸುವುದಿಲ್ಲ. ಇದರ ಬಗ್ಗೆ ಸ್ಥಳೀಯ ಜನರ
ಜತೆ ಮಾತನಾಡಿದೆ. ಅವರು ಇದೆಲ್ಲ ತಮ್ಮದೇ ಜವಾಬ್ದಾರಿ ಎನ್ನುತ್ತಾರೆ. ಆಹಾ, ಇಂತಹುದೇ ಯೋಚನೆ ಜಗತ್ತಿನ ಎಲ್ಲರಲ್ಲೂ ಮೂಡಿದರೆ ಎಷ್ಟು ಚಂದ ಅಲ್ಲವೇ! ಪರಿಸರದ ಬಗ್ಗೆ ಎಲ್ಲರಿಗೂ ಕಾಳಜಿಯಿರಬೇಕು. ಹೀಗಾಗಿ ನೀವೂ ಕೂಡ ಈ ಜಗತ್ತನ್ನು ಎಲ್ಲರೂ ಬದುಕಲು ಸುಂದರ ತಾಣವನ್ನಾಗಿಸುವುದು ಹೇಗೆಂಬ ಬಗ್ಗೆ ಯೋಚನೆ ಮಾಡಿ!