Monday, 25th November 2024

ಅಂಗಡಿಯವರ ಸಜ್ಜನಿಕೆ ಎಲ್ಲರಿಗೂ ಮಾದರಿ

ತನ್ನಿಮಿತ್ತ

ಗಿರೀಶ ವಿಠ್ಠಲ ಬಡಿಗೇರ

ಸುರೇಶ್ ಚನ್ನಬಸಪ್ಪ ಅಂಗಡಿ, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿ ದೆಹಲಿಯ ಸಂಸತ್ತಿನ ಮೆಟ್ಟಿಲೇರಿದವರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮೂರೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ ಮೋದಿ ಕ್ಯಾಬಿನೆಟ್‌ನಲ್ಲಿ ರಾಜ್ಯ ರೈಲ್ವೆ ಸಚಿವ ರಾಗಿ ಎಡೆಬಿಡದೆ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ದೇಶದಾದ್ಯಂತ ಪ್ರವಾಸ ಮಾಡಿ, ಕರ್ನಾಟಕ ಮತ್ತು ಬೆಳಗಾವಿ ಜಿಲ್ಲೆಗೆ ವಿಶೇಷ ಕೊಡುಗೆ ನೀಡಿದ ಸಂಸದೀಯ ಪಟು.

ಕರೋನಾ ಎಂಬ ಕರಿಛಾಯೆಯಲ್ಲಿ ಅಸ್ತಂಗತರಾದರು ಎಂಬುದು ಅತ್ಯಂತ ದುಃಖಕರ ಸಂಗತಿ. BA, LLB ಶಿಕ್ಷಣ ಪಡೆದಿದ್ದ ಅವರು ಅತ್ಯಂತ ಸರಳ, ಸಜ್ಜನಿಕೆಯ ರಾಜಕಾರಣಿ. ಸೃಜನ, ಮಿತಭಾಷಿ ಮತ್ತು ಸದಾ ಹಸನ್ಮಖಿಯಾಗಿದ್ದ ಅವರು ಓರ್ವ ಶಿಕ್ಷಣ ತಜ್ಞರೂ ಹೌದು. ಬೆಳಗಾವಿ ಜಿಲ್ಲೆಯ ಕೆ.ಕೆ. ಕೊಪ್ಪದ ನಾಗೇರಹಾಳ ಎಂಬ ಸಣ್ಣ ಗ್ರಾಮದಲ್ಲಿ 1955ರ ಜೂನ್ 1 ರಂದು ರೈತಾಪಿ ಕುಟುಂಬದ ಸೋಮವ್ವ ಮತ್ತು ಚನ್ನಬಸಪ್ಪ ಎಂಬವರಿಗೆ ಮೂರನೇ ಗಂಡು ಮಗುವಾಗಿ ಜನಿಸಿದರು. ಅವರಿಗೆ ಬಾಲ್ಯದಲ್ಲಿ ಎಂಜಿನಿಯರ್ ಆಗಬೇಕೆಂಬ ಮಹದಾಸೆ ಇತ್ತು.

ಅಂಗಡಿಯವರು ರಾಜಕೀಯ ಹೊರತು ಪಡಿಸಿ ಒಂದು ವಿಶೇಷ ವ್ಯಕ್ತಿತ್ವ ರೂಪಿಸಿಕೊಂಡವರು. ಇವರನ್ನು ಅತ್ಯಂತ ಹತ್ತಿರದಲ್ಲಿ ಕಂಡವರಲ್ಲಿ ನಾನೂ ಕೂಡಾ ಓರ್ವ. ನನ್ನ BE, MTech ಶಿಕ್ಷಣ ಪೂರೈಸಿದ್ದು ಇವರದೇ ಶಿಕ್ಷಣ ಸಂಸ್ಥೆಯಲ್ಲಿ. ಹೀಗಾಗಿ ಇವರ ಜತೆ ನನ್ನ ನಂಟು ತುಂಬಾ ಚೆನ್ನಾಗಿತ್ತು. ಈ ಶಿಕ್ಷಣ ಸಂಸ್ಥೆಯಲ್ಲಿ ನನಗೆ ನನ್ನ ಶಿಕ್ಷಣದ ಜತೆಗೆ ಹಲವಾರು ಹೊಸ ಹೊಸ ವಿಚಾರಗಳನ್ನು ಕಲಿಯಲು ಸಿಕ್ಕಿತು. ಸಮಾಜದ ಜನರಿಗೆ ಸ್ಪಂದಿಸುವ ಮತ್ತು ಅವರಲ್ಲಿ ಒಂದಾಗಿ ಬೆರೆತು ಬಾಳುವ ಗುಣವೂ ದೊರಕಿದ್ದು ಸ್ಮರಣೀಯ.

ನಾನು ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುವಾಗ, ಅವರ ‘ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನ’ದ ಕಾಲೇಜಿನ ಹಾಸ್ಟೆಲಿನಲ್ಲಿ ಇರುತ್ತಿದ್ದೆ. ಆಗ ನಮ್ಮ ಚೇರಮನ್ನರು (ಸುರೇಶ ಅಂಗಡಿ) ಬೆಳಿಗಿನ ಜಾವ ಜಾಗಿಂಗ್ ಮಾಡಲೆಂದು ಕಾಲೇಜಿನ ಕಡೆ ಬಂದಾಗ ನಮ್ಮನ್ನು ಕರೆದು ಮಾತನಾಡಿಸುತ್ತಾ, ಏನಪ್ಪ ಹೇಗಿದ್ದೀರಾ?, ಕಾಲೇಜು, ಹಾಸ್ಟೇಲು ಚೆನ್ನಾಗಿದೆಯಾ?, ಅಧ್ಯಾಪಕರು ಚೆನ್ನಾಗಿ ಬೋಧಿಸುತ್ತಿದ್ದಾರಾ?, ಎಲ್ಲರೂ ಸರಿಯಾದಿ ಓದಿ, ನಿಮ್ಮ ತಂದೆ ತಾಯಿಗೆ ಒಳ್ಳೆಯ ಹೆಸರು ತರಬೇಕು ಎಂದು ವಾತ್ಸಲ್ಯದಿಂದ ಸಂಭಾಷಣೆ ಮಾಡುತ್ತಿದ್ದರು.

ಬೆಳಗಾವಿ ಜಿಲ್ಲೆಗೆ ಸುರೇಶ ಅಂಗಡಿಯವರು ಮಾಡಿದ ಕೆಲಸಗಳು ಹಲವಾರು ಇವೆ. ಅದರಲ್ಲಿ ‘ಸ್ಮಾರ್ಟ್ ಸಿಟಿ’ ಒಂದು! ಅವರು ರೈಲ್ವೆ ಮಂತ್ರಿಯಾದ ಕ್ಷಣದಿಂದ ಅನವರತವಾಗಿ, ದೇಶಾದ್ಯಂತ ಪ್ರವಾಸ ಮಾಡುತ್ತ ಪಕ್ಷ ಕಾರ್ಯದ ಜೊತೆಗೆ ತಮಗೆ ನೀಡಿದ್ದ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದ್ದರು. ಈ ಹಿಂದೆ ರೈಲ್ವೆ ಸಂಗತಿಯಲ್ಲಿ ರಾಜ್ಯಕ್ಕೆ ಸಿ.ಕೆ.ಜಾಫರ್ ಷರೀಫ್, ಜಾರ್ಜ್ ಫೆನಾಂಡಿಸ್ ಮಹತ್ವದ ಕೊಡುಗೆ ನೀಡಿದ್ದರು.

ನನಗೆ ಯಾವಾಗಲೂ ಅನಿಸುವ ಒಂದು ವಿಚಾರ ಏನೆಂದರೆ, ನಮ್ಮ ಸಾಹೇಬರು ಈಗಲೂ ಬದುಕಿದ್ದಾರೆ. ದೆಹಲಿಯ ಸಂಸತ್ತಿಗೆ ಹೋಗಿದ್ದಾರೆ ಮತ್ತೆ ನಮ್ಮ ಬೆಳಗಾವಿಗೆ ಬರುತ್ತಾರೆ. ನಮ್ಮ ಕಾಲೇಜಿಗೆ, ಹಾಸ್ಟೆಲಿಗೆ ಬಂದು ನಮ್ಮ ಜತೆ ಮಾತನಾಡುತ್ತಾರೆ. ಈ ಸಲ ಮತ್ತೆ ಗಣೇಶನ ಹಬ್ಬವನ್ನು ಜೋರಾಗಿ ಮಾಡುತ್ತೇವೆ. ಅವರೂ ನಮ್ಮ ಜತೆ ಡಿಜೆಗೆ ಡ್ಯಾನ್ಸ್ ಮಾಡುತ್ತಾರೆ ಎಂದು. ಆದರೆ ಏನು ಮಾಡುವುದು ಈ ಭಾವ ಕೇವಲ ಅಕ್ಷರಗಳಲ್ಲಿ ಮಾತ್ರ ಜೀವಂತ. ಏನೇ ಆಗಲಿ, ಅವರು ಇಂದು ನಮ್ಮ ಜತೆ ಇಲ್ಲದಿರಬಹುದು ಆದರೆ ಅವರು ಹೇಳಿಕೊಟ್ಟ ಪಾಠ, ತೋರಿದ ದಾರಿ, ಮಾಡಿದ ಕಾರ್ಯ ಜನಮಾನಸದಲ್ಲಿ ಎಂದಿಗೂ ಬದುಕಿರುತ್ತವೆ. ಅವುಗಳಲ್ಲಿಯೇ ನಾವೆಲ್ಲ ಅವರನ್ನು ಕಾಣೋಣ ಮತ್ತು ನೆನೆಯೋಣ. ಬಹುರತ್ನಪ್ರಸವಿ ಭಾರತಿಯ ಪುಣ್ಯ ಉದರದಲ್ಲಿ ಮತ್ತೊಮ್ಮೆ ಮಾನ್ಯ ಸುರೇಶ್ ಅಂಗಡಿ ಯವರು ಜನಿಸಿ ಬರಲಿ ಎಂದು ಪ್ರಾರ್ಥಿಸೋಣ.