Saturday, 21st September 2024

ಈ ಸಂಪತ್ತಿಗೆ ವಿಶ್ವಸಂಸ್ಥೆ ಎಂಥಕ್ಕೆ ಬೇಕಿತ್ತು ?

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

dascapital1205@gmail.com

21 ಶತಮಾನದಲ್ಲಿ ಜಗತ್ತಿನಾದ್ಯಂತ ಅಗಾಧವಾಗಿ ಬೆಳೆದುನಿಂತ ಈ ಸರಿಹೊತ್ತಿನ ಆಧುನಿಕತೆಯ ಬದುಕಿನಲ್ಲಿ ಇವರು ಮಾತ್ರ ಬದಲಾಗದೇ ಹೋದರಲ್ಲ! Of course ಇವರು ಬದಲಾಗುವುದಿಲ್ಲ. ಅದೇನು ಧರ್ಮಾಂಧತೆಯೋ!

ಯಾಕೆಂದರೆ, ಇವರಿಗೆ ಧರ್ಮದ (ಕ್ಷಮಿಸಿ, ಧರ್ಮ ಅಲ್ಲ, ಅದು ಮತ. ಆದರೆ ಧರ್ಮ ಎಂದು ಕರೆಯುವುದು ರೂಢಿಯಾಗಿದೆ. ಮತವೆಂದರೆ ಅಷ್ಟು ಬೇಗ ಅರ್ಥವೂ ಆಗಲಾರದು. ಇಸ್ಲಾಂ, ಕ್ರೈಸ್ತ, ಬೌದ್ಧ, ಜೈನ, ಇತ್ಯಾದಿ ಯೆಲ್ಲವೂ ಮತವೇ ಹೊರತು ಧರ್ಮವಲ್ಲ, ನಮ್ಮದು ಸನಾತನ ಧರ್ಮವೇ ಹೊರತು ಹಿಂದೂ ಧರ್ಮವಲ್ಲ.
ಹಿಂದೂ ಎಂದರೆ ಜೀವನ ಪದ್ಧತಿ. ಈ ದೇಶ ಸಾಂಸ್ಕೃತಿಕವಾದ ತಳಹದಿಯಲ್ಲಿ ಅನಾವರಣವಾಗಿದೆಯೇ ಹೊರತು ಇತರ ದೇಶಗಳಂತಲ್ಲ) ಅಮಲು! ಮೈಮನ ತುಂಬಾ ಮದ! ಅಷ್ಟಕ್ಕೂ ಅದೂ ಒಂದು ಧರ್ಮವೇ? ದ್ವೇಷವನ್ನು ಬಿತ್ತಿ ಮನುಷ್ಯರನ್ನು ಅಮಾನುಷವಾಗಿ ಕೊಲ್ಲುವುದೂ ಒಂದು ಧರ್ಮವೆಂದು ಪರಿಗಣಿಸಲ್ಪಟ್ಟರೆ, ಅದೆಂಥಾ ಧರ್ಮವೋ? (ಮತವೆಂಬ ಅರ್ಥದಲ್ಲೇ ಬಳಸುತ್ತಿದ್ದೇನೆ) ಅದೆಂಥಾ ಜ್ಞಾನಾಂಧ! ತಲೆಗೇರಿದ ಧರ್ಮದ ಅಂಧಾಭಿಮಾನದ ಹುಚ್ಚು!

ಹುಟ್ಟು ಅಂಧರಾದ ತಾಲಿಬಾನಿಗಳು ಧರ್ಮದ ಹೆಸರಿನಲ್ಲಿ ನಡೆಸುವ ಕ್ರೌರ್ಯವು ಅಟ್ಟಹಾಸ ಮಿತಿಮೀರಿ ಸರ್ವನಾಶದತ್ತ ಸಾಗುತ್ತಿದೆ. ಅದೀಗ ಇತರ ದೇಶಗಳ ಮೇಲೆ ಸವಾರಿ ನಡೆಸುತ್ತಿದೆ. ಸ್ವಭಾವತಃ ಇಂಥ ಕ್ರೌರ್ಯವನ್ನು ಮಾಡೆಂದು ಯಾವ ಧರ್ಮವೂ ಹೇಳಲಾರದು. ಹೇಳಿದರೆ ಅದು ಧರ್ಮವೇ ಅಲ್ಲ! ಯಾವುದಾ ದರೊಂದು ಧರ್ಮ (ಮತ)ವು ಕೊಲ್ಲು, ಕೊಚ್ಚು, ಕಡಿಯೆಂದು ಹೇಳುತ್ತದೆ ಎಂದಾದರೆ ಅದೊಂದು ಧರ್ಮ (ಮತ)ವೇ ಅಲ್ಲ! ಮನುಷ್ಯ ಸಂಕುಲದ ನಿತ್ಯ ಬದುಕನ್ನು ನರಕಗೊಳಿಸುವ, ಸರ್ವನಾಶಕ್ಕೆ ಹೇತುವಾಗಿಸುವ ಯಾವುದೇ ಮತವಿದ್ದರೂ ಅದನ್ನು ನಿಯಂತ್ರಿಸದೇ ಹೋದರೆ ಇಡೀ ಜಗತ್ತು ಅದರ ಬೇಗುದಿಯಲ್ಲಿ ಹೇಗೆ ಸಾಯಬೇಕಾಗುತ್ತದೆಂಬುದನ್ನು ಅಫ್ಘಾನಿಸ್ತಾನದಲ್ಲಿ ನಡೆದ ದುರಂತಗಳನ್ನು ನೋಡಿದರೆ ಳಿಯುತ್ತದೆ.

ಅಲ್ಲಿದ್ದವರು ಈಗ ಒಂದೋ ದೇಶ ಬಿಡಬೇಕು, ಇಲ್ಲ ಆ ಮತಕ್ಕೆ ಸೇರಬೇಕು, ಇಲ್ಲ ಅವರಿಂದಲೇ ಸಾಯಬೇಕು. ನೀಚ ಮತಾಂಧರ ಕ್ರೌರ್ಯಕ್ಕೆ ಮತಾಂತರ
ಆಗುವುದೇ? ಥೂ, ಅದು ಹೇಗೆ ಸಾಧ್ಯ? ಅಟ್ಟರ್ ನಾನ್ ಸೆನ್ಸ್ ಎಂದು ಸಾವೇ ಉತ್ತಮವೆಂದು ಸತ್ತವರೆಷ್ಟೋ? ತಾಲಿಬಾನಿಗಳ ಅಮಾನುಷತೆಗೆ ಅಫ್ಘಾನಿ ಸ್ತಾನದಲ್ಲಿ ಸತ್ತವರೆಷ್ಟೋ? ಬದುಕುಳಿದವರೆಷ್ಟೋ? ಓಡಿಹೋಗಿ ಜೀವ ಉಳಿಸಿಕೊಂಡವರೆಷ್ಟೋ? ಬದುಕು ಕಳೆದುಕೊಂಡು ಬೀದಿ ನಾಯಿಯಂತಾದವರೆಷ್ಟೋ? ಜನಸಾಮಾನ್ಯರ ಬದುಕನ್ನು ಭಯಗ್ರಸ್ತಗೊಳಿಸಿದ ತಲ್ಲಣಗೊಳಿಸಿದ ತಾಲಿಬಾನಿಗಳನ್ನು ನಿಯಂತ್ರಿಸಲು ಯಾವ ದೇಶವೂ ಎದ್ದು ಮುಂದೆ ಬರಲಿಲ್ಲ.

ತಾನು ಖಂಡಿಸುತ್ತೇನೆಂದು ಹಲವು ರಾಷ್ಟ್ರಗಳು ಹೇಳಿಕೆಯನ್ನು ಕೊಟ್ಟಿದ್ದೆಯೇ ಹೊರತು ತಾಲಿಬಾನಿಗಳನ್ನು ನಿಯಂತ್ರಿಸಲು ತನ್ನ ದೇಶದ ಸೈನಿಕರನ್ನು ಕಳಿಸ ಲಿಲ್ಲ, ಯುದ್ಧೋಪಕರಣಗಳನ್ನು ಕಳಿಸಲಿಲ್ಲ. ಕಳಿಸಿದ್ದರೂ ತನ್ನ ದೇಶದ ಪ್ರಜೆಗಳ ಸಂರಕ್ಷಣೆಗೆ ಹೊರತು ಅಫ್ಘಾನಿಸ್ತಾನದ ಅಮಾಯಕ ಪ್ರಜೆಗಳ ಸಂರಕ್ಷಣೆಗಲ್ಲ. ಇದೆಂಥಾ ವಿಪರ್ಯಾಸ ನೋಡಿ! ದೊಡ್ದ ದೊಡ್ದ ಮಾತುಗಳನ್ನು ಆಡುವ ವಿಶ್ವಸಂಸ್ಥೆಯೂ ಇದನ್ನೆಲ್ಲ ನೋಡಿಕೊಂಡು ಸುಮ್ಮನಾಗಿ ಬಿಟ್ಟಿತ್ತಲ್ಲ! ಈ ಸಂಪತ್ತಿಗೆ ವಿಶ್ವಸಂಸ್ಥೆಯೆಂಬ ದೊಡ್ಡಾಲದ ಮರದ ಎಂಥಕ್ಕೆ ಬೇಕಿತ್ತು? ನೆರಳು ಸಿಗಬೇಕಾದ ಸಂದರ್ಭದಲ್ಲಿ ಸಿಗದೇ ಹೋದ ನೆರಳು ಇನ್ಮುಂದೆ ಸಿಕ್ಕಿ ಅಂಥಾ ಪ್ರಯೋಜನ ವೇನಿಲ್ಲ!

ಅಷ್ಟಕ್ಕೂ ಯಾವ ದೇಶ ಯಾಕೆ ಬರಬೇಕು? ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವುದು ಆಯಾ ದೇಶಗಳ ಹೊಣೆಗಾರಿಕೆ. ಅದು ಮತ್ತೊಂದು ದೇಶಕ್ಕೆ ಸಂಬಂಧಿ ಸಿದ ವಿಚಾರವಲ್ಲ ಎಂಬ ಬಗೆಯ ವಾದಗಳಿಗೇನೂ ಕಡಿಮೆಯಿಲ್ಲ. ಚೀನಾ, ಪಾಕಿಸ್ತಾನಗಳು ಮತ್ತೊಂದು ದೇಶದ ಆಂತರಿಕ ವಿಚಾರ ದಲ್ಲಿ ಮೂಗು ತೂರಿಸಿ ಏನೇ ಮಾಡಿದರೂ ವಿಶ್ವಸಂಸ್ಥೆ ಬಾಯ್ಮುಚ್ಚಿಕೊಂಡು ಕುಳಿತಿರುತ್ತದೆ. ಒಂದು ರಾಷ್ಟ್ರಕ್ಕೆ ಒದಗಿದ ಕಷ್ಟವನ್ನು ಮತ್ತೊಂದು ರಾಷ್ಟ್ರ ಎಲ್ಲ ಬಗೆಯ ಬಂಧ-ಸಂಬಂಧ ಗಳನ್ನು ಬಳ ಸಿಯೋ ಅಥವಾ ಮೀರಿನಿಂತೋ ಸಹಾಯಕ್ಕೋ ಬೆಂಬಲಕ್ಕೋ ನಿಲ್ಲಬೇಕಾದುದು ಪ್ರತಿ ರಾಷ್ಟ್ರದ ಧರ್ಮ.

ಇದು ಭಾರತಕ್ಕೂ ಅನ್ವಯಿಸುವಂಥ ಮಾತೇ ಆಗಿದೆ. ಇಪ್ಪತ್ತು ವರ್ಷಗಳಿಂದ ತನ್ನ ಸೈನ್ಯವನ್ನು ಅಫ್ಘಾನಿಸ್ತಾನದಲ್ಲಿ ಇರಿಸಿದ ಅಮೆರಿಕ ತಿಂಗಳಿನ ಹಿಂದಷ್ಟೇ
ಅಲ್ಲಿಂದ ಕಾಲ್ಕಿತ್ತ ಮರುಗಳಿಗೆಯಲ್ಲಿ ತಾಲಿಬಾನಿಗಳಿಂದ ಇಂಥ ಒಂದು ಕೆಟ್ಟ ವಿದ್ಯಮಾನ ಸಂಭವಿಸಿ ಹೋಯಿತು ಎಂದರೆ ನಂಬಲಸಾಧ್ಯವಾದರೂ ಸುಳ್ಳಂತೂ ಅಲ್ಲವಲ್ಲ! ಅಂತೂ ಏನು ಆಗಬಾರದಿತ್ತೋ ಅದೆಲ್ಲವೂ ಆಗಿಯೇ ಹೋಯಿತು. ಇನ್ನು ಯಾವುದಾದರೂ ದೊಡ್ಡ ಬಲಿಷ್ಠ ರಾಷ್ಟ್ರ ಅಲ್ಲಿಗೆ ಹೋಗಿ ಏನು ಮಾಡಿದರೂ ಏನೂ ಪ್ರಯೋಜನವಿಲ್ಲ.

ಕೋಟೆ ಒಡೆದು ಜನರ ಜೀವ ಹೋದಮೇಲೆ ಏನು ಮಾಡಿದರೇನು ಬಂತು ಲಾಭ? ನೋಡುನೋಡುತ್ತಿದ್ದಂತೆ ಜಾತಿ ಮತಗಳನ್ನೂ ಮೀರಿ ನರರಕ್ಕಸರಾದ ತಾಲಿಬಾನಿಗಳು ಮಾಡಬಾರದ್ದನ್ನು ಮಾಡಿ ಮುಗಿಸಿದರು. ಇನ್ನು ಅಲ್ಲಿಗೆ ಹೋಗಿ ಮಾಡುವುದೇನಿದೆ ಅಂತ ಕೈಚೆಲ್ಲಿ ತಮ್ಮ ಪಾಡಿಗೆ ತಾವು ಯಾವುದೇ ರಾಷ್ಟ್ರ ಗಳು ಇದ್ದರೂ ಈಗ ಆಗುತ್ತಿರುವ ಮತ್ತು ಮುಂದೆ ಆಗಬಹುದಾದ ಅನಾಹುತಗಳೇನೂ ಕಡಿಮೆಯಾಗುವುದಿಲ್ಲ, ನಿಯಂತ್ರಣಕ್ಕೆ ಬಂದೀತು ಎಂದು ಯಾರೂ ತಿಳಿಯಲಾಗದು. ಹಾಗೆ ನಿಯಂತ್ರಣಕ್ಕೆ ಬರುವುದಕ್ಕೆ ಅಲ್ಲಿ ನಡೆಯುತ್ತಿರುವುದು ಮನುಷ್ಯ ವ್ಯವಹಾರವೇ? ಯಾಕೆಂದರೆ, ಇದು ಮುಗಿಯಿತು ಎನ್ನುವುದಕ್ಕೆ ಯಾವು
ದೋ ಒಬ್ಬ ರಾಜ ತಾನು ಕಳೆದುಕೊಂಡ ತನ್ನ ಸಾಮ್ರಾಜ್ಯವನ್ನು ಶತ್ರುಗಳನ್ನು ಮೆಟ್ಟಿನಿಂತು ಹಿಂಪಡೆದ ವಿದ್ಯಮಾನವೇನೂ ಅಲ್ಲಿ ಘಟಿಸಿದ್ದಲ್ಲವಲ್ಲ! ಅಥವಾ ಹಾಗೆ ಕಾಣಿಸು ವುದೂ ಇಲ್ಲ. ಮತಾಂಧರ ಕ್ರೌರ್ಯಕ್ಕೆ ಕೊನೆಯೆಂಬುದು ಹೇಗೆ ಇರಲು ಸಾಧ್ಯ? ಇಂದು ಅಫ್ಘಾನಿಸ್ತಾನಕ್ಕೆ ವಕ್ಕರಿಸಿ ಕೊಂಡವರು ಮುಂದುವರಿದು ತಮ್ಮ ಕ್ರೌರ್ಯವನ್ನು ಜಗತ್ತಿನ ಇತರ ಸಣ್ಣಪುಟ್ಟ ರಾಷ್ಟ್ರಗಳಿಗೆ ವಕ್ಕರಿಸಲಾರರು ಎಂದು ಹೇಗೆ ನಂಬುವುದು? ಈಗಾಗಲೇ ಅಂಥದ್ದರ ಮುನ್ಸೂಚನೆಗಳು ಕಾಣತೊಡ ಗಿವೆ.

ಒಂದಂತೂ ಸತ್ಯ: ಮತಾಂಧತೆಯ ಅಂತ್ಯವಿರುವುದು ಮತಾವಸಾನದಲ್ಲೇ! ಆದರೆ ಅಲ್ಲಿಯವರೆಗೆ ಹಿಂಸೆಯನ್ನು ಅನುಭವಿಸುವವರು ಜನಸಾಮಾನ್ಯರಲ್ಲವೆ? ಅವರು ಯಾವುದೇ ದೇಶದವರಿರಲಿ, ಅವರು ಯಾವುದೇ ಜಾತಿ, ಮತದವರಿರಲಿ, ಅವರೂ ಮನುಷ್ಯರೇ ತಾನೆ? ಹಾಗಂತ ಅಲ್ಲಿಯೇ ಇದ್ದು ತಾಲಿಬಾನಿಗಳನ್ನು ಎದುರಿಸಿ ಧೈರ್ಯಮಾಡಿ ಬದುಕುವವರು ಹಿಂಸೆ, ಕಷ್ಟ, ನೋವು, ದುಃಖಗಳನ್ನು ಅನುಭವಿಸಲಾಗದೆ ಕೊನೆಗೆ ಸಾಯುವುದೇ ಉತ್ತಮವೆಂದು ತೀರ್ಮಾನಿಸಿ ಸಾಯುವುದು ಮಾತ್ರ ಅವರಿಗೆ ಇರುವ ಏಕೈಕ ಮಾರ್ಗವಾಗಿ ಬಿಡುತ್ತದೆ!

ಮುಖ್ಯವಾಗಿ, ಚೀನಾ, ಉತ್ತರ ಕೊರಿಯಾ, ಪಾಕಿಸ್ತಾನ ರಾಷ್ಟ್ರಗಳ ಅಂತಾರಾಷ್ಟ್ರೀಯ ವ್ಯವಹಾರಗಳು ವಿಶ್ವಸಂಸ್ಥೆಯನ್ನು ಅಣಕಿಸುವಂತಿರುತ್ತದೆ. ವಿಶ್ವಸಂಸ್ಥೆ ಯಲ್ಲಿ ಆದ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ನೀತಿನಿಯಮಗಳನ್ನು ಧಿಕ್ಕರಿಸಿ ಸದಾಕಾಲ ಒಂದಲ್ಲ ಒಂದು ಅದ್ವಾನಗಳನ್ನು, ಕುಚೋದ್ಯಗಳನ್ನು, ದುರಾ ಕ್ರಮಣಗಳನ್ನು ಮಾಡುತ್ತಲೇ ಇದೆ. ತಾಲಿಬಾನಿಗಳೊಂದಿಗೆ ಸ್ನೇಹವನ್ನು, ರಾಜತಾಂತ್ರಿಕ ವ್ಯವಹಾರವನ್ನು ನಡೆಸಲು ಚೀನಾ ಉತ್ಸುಕತೆಯನ್ನು ತೋರುತ್ತಿದೆ. ಚೀನಾದ ದುರಾಲೋಚನೆ, ದೂರಾಲೋಚನೆ ಏನೆಂಬುದನ್ನು ಜಗತ್ತಿಗೆ ಅರ್ಥವಾಗಿ ಹೋಗಿದೆ.

ಸಣ್ಣ ಸಣ್ಣ ರಾಷ್ಟ್ರಗಳ ಆಂತರಂಗಿಕ ವಿಚಾರದಲ್ಲಿ ಮೂಗುತೂರಿಸುವ ಚೀನಾ ತನ್ನ ಬೇಳೆಯನ್ನು ಬೇಯಿಸಿಕೊಳ್ಳುವ ದುರ್ಬುದ್ಧಿಯನ್ನು ಕುಯುಕ್ತಿಯನ್ನು ಜಗತ್ತಿನ ಮುಂದೆ ಅನಾವರಣ ಮಾಡಿಕೊಳ್ಳುತ್ತಲೇ ಇದೆ. ಭಾರತವನ್ನು ನುಂಗಿ ನೀರು ಕುಡಿಯುವ ಧಾರ್ಷ್ಟ್ಯವನ್ನು ಮೊದಲಿನಂತೆ ತೋರಲು ಅದಕ್ಕೀಗ ಸಾಧ್ಯವಿಲ್ಲ ಎಂಬುದು ಅರ್ಥವಾಗಿ ಹೋಗಿದೆ. ಅದಕ್ಕಾಗಿ ಅನ್ಯ ವಾಮಮಾರ್ಗದ ಮೂಲಕ ಭಾರತವನ್ನು ಕಟ್ಟಿಹಾಕುವ ದುಸ್ಸಾಹಸದ ನರಿಬುದ್ಧಿಯ ದಾರಿಯನ್ನು ಹಿಡಿದಿದೆ. ವಿಶ್ವಸಂಸ್ಥೆ ಚೀನಾವನ್ನು ಮೊದಲು ನಿಯಂತ್ರಿಸಬೇಕಿದೆ. ವಿಶ್ವದ ದೊಡ್ಡಣ್ಣನಾಗುವ ಅತೀಬಯಕೆಯನ್ನು ಮೀರಿ ಸೊಕ್ಕಿದ ಚೀನಾ ಬಡರಾಷ್ಟ್ರಗಳಿಗೆ ಲಂಚದಾಮಿಷ
ವನ್ನು ತೋರಿಸಿ ಸಾಲದ ಕೂಪಕ್ಕೆ ತಳ್ಳಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿದೆ. ಇದು ಅನ್ಯಾಯ, ಅಧರ್ಮದ ಮಾರ್ಗ.

ಇದನ್ನು ಖಂಡಿಸಿ ತಡೆಯುವ ಧಾರ್ಷ್ಟ್ಯ ವಿಶ್ವಸಂಸ್ಥೆಗೆ ಬರಬೇಕಿದೆ. ಚೀನಾದ ಮಹತ್ವಾಕಾಂಕ್ಷೆಯ ಒನ್ ಬೆಲ್ಟ್ ಒನ್ ರೋಡ್ ಯೋಜನೆಯ ಉದ್ದೇಶವಾದರೂ ಏನು? ಇದರ ಹಿನ್ನೆಲೆಯ ದುರುದ್ದೇಶವನ್ನು ವಿಶ್ವಸಂಸ್ಥೆ ಅರಿಯಲಾರದೆ? ಅಂತಾರಾಷ್ಟ್ರೀಯ ಶಾಂತಿಯನ್ನು ಕದಡುವ ನಿರಂತರ ಪ್ರಯತ್ನವನ್ನು ಚೀನಾ ಪಾಕಿಸ್ತಾನಗಳು ಒಂದಲ್ಲ ಇನ್ನೊಂದು ಬಗೆಯಲ್ಲಿ ಮಾಡುತ್ತಲೇ ಇದೆ. ಹೀಗೆ ಮಾಡದೆ ಹೋದರೆ ಈ ರಾಷ್ಟ್ರಗಳಿಗೆ ಉಂಡದ್ದು ಜೀರ್ಣವಾಗುವುದಿಲ್ಲ. ಭಯೋ ತ್ಪಾದನೆಯನ್ನು ಇವು ಸೃಷ್ಟಿಸುತ್ತಲೇ ಇರುತ್ತದೆ. ಅಥವಾ ಅಂಥದ್ದಕ್ಕೆ ಪ್ರೇರಣೆ, ಪ್ರಚೋದನೆಯನ್ನು ನೀಡುತ್ತಲೇ ಇದೆ. ಹಣದ ಪ್ರಲೋಭನೆಯಿಂದ ಚೀನಾ ಪಾಕಿಸ್ತಾನವನ್ನು ಕಟ್ಟಿಹಾಕಿದೆ.

ಅಡಿಯಿಂದ ಮುಡಿಯವರೆಗೆ ಬರಗೆಟ್ಟ ಪಾಕಿಸ್ತಾನಕ್ಕೆ ಚೀನಾ ತೋರಿಸುವ ಲಂಚದಾಸೆ ಏನೇನೋ ದುರಾಸೆಗಳನ್ನು ಹುಟ್ಟಿಸುತ್ತದೆ. ನಾಯಿಯಂತೆ ಬಾಲ
ಅಲ್ಲಾಡಿಸುತ್ತ ಚೀನಾ ಕೊಡುವ ಎಂಜಲಿಗೆ ಕೈಚಾಚುವ ಪಾಕಿಸ್ತಾನ ಎಲ್ಲ ಬಗೆಯಿಂದಲೂ ದಿವಾಳಿಯಾಗಿ ವರ್ಷಗಳೇ ಸಂದಿವೆ. ಯಾವಾಗಲೂ ಮತ್ಸರ, ದ್ವೇಷ, ಸೇಡಿನ ಪ್ರತಿಕ್ರಿಯೆಯನ್ನು ಅಭಿವ್ಯಕ್ತಿಸುವ ಪಾಕಿಸ್ತಾನಕ್ಕೆ ಆಂತರಿಕವಾಗಿ ನೆಮ್ಮದಿ ಶಾಂತಿ ಇರಲು ಹೇಗೆ ಸಾಧ್ಯ? ಭಾರತದ್ವೇಷ ಪಾಕಿಸ್ತಾನವನ್ನು ಸುಡುತ್ತ ಹೋಗಿದ್ದರೂ ಅದಕ್ಕೆ ಎಚ್ಚರವಾಗುವುದೇ ಇಲ್ಲ. ಈ ದ್ವೇಷವನ್ನು ಸಾಧಿಸಲು ಯಾರೊಂದಿಗೂ ಅಪವಿತ್ರ ಹೊಂದಾಣಿಕೆ ಮಾಡಿಕೊಳ್ಳುವ ಆ ದೇಶಕ್ಕೆ ಈಗ ಇಮ್ರಾನ್ ಖಾನ್ ಎಂಬ ಬಾಲಬಡುಕ ಪ್ರಧಾನಿಯಾದದ್ದು ಮಾತ್ರ ದುರಂತವೇ ಸರಿ! ತಾಲಿಬಾನಿಗಳೊಂದಿಗೆ ಇವನು ಮೈಮರೆತು ವ್ಯವಹರಿಸುತ್ತಾನೆಂಬುದು ಬಹಿರಂಗವಾದ ಸತ್ಯ! ಭಾರತವನ್ನು ವಿರೋಧಿಸುವ ಪಾಕಿಸ್ತಾನ ಎಂಥ ಮೈತ್ರಿಗೆ ಮುಂದಾಗುತ್ತಲೇ ಜಗತ್ತಿನ ಎದುರು ಬೆತ್ತಲಾಗುತ್ತಲೇ ಇದೆ!

ಹೌದು, ಒಂದು ರಾಷ್ಟ್ರದ ಆಂತರಿಕವೋ ಬಾಹ್ಯವೋ ಯಾವುದೇ ಆದ ಸಮಸ್ಯೆಗಳಿಗೆ ಅಂತಾರಾಷ್ಟ್ರೀಯ ಒಪ್ಪಂದ ಅಥವಾ ನಿಯಮಗಳನ್ನು ಉಲ್ಲಂಘಿಸಿ ಪರಿಹಾರ ನೀಡುವುದರಲ್ಲಿ ತಪ್ಪೇನಿದೆ? ಈ ಕೆಲಸವನ್ನು ಮಾಡಬೇಕಾಗಿರುವುದು ವಿಶ್ವಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ. ವಿಶ್ವಸಂಸ್ಥೆಯ ಹುಟ್ಟು ಆದದ್ದೇ ಒಂದನೆಯ ಮಹಾಯುದ್ಧದ ಅನಂತರ ಸ್ಥಾಪಿಸಲಾಗಿದ್ದ ಲೀಗ್ ಆಫ್ ನೇಷನ್ಸ್‌ನ (ರಾಷ್ಟ್ರಸಂಘ) ವಿಫಲತೆ ಹಾಗೂ ಎರಡನೆಯ ಮಹಾಯುದ್ಧದ ಘೋರ
ಪರಿಣಾಮಗಳನ್ನರಿತು ಮುಂದೆ ಯುದ್ಧಗಳಾಗುವುದನ್ನು ತಡೆಯಲು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಸುಭದ್ರತೆ ಕಾಪಾಡಿ ಮಾನವ ಜನಾಂಗದ ಜೀವನಮಟ್ಟ ಸುಧಾರಿಸುವ ಬಹುದೊಡ್ಡ ಧ್ಯೇಯ ದೊಂದಿಗೆ!

ಚರ್ಚಿಲ್, ಫ್ರಾಂಕ್ಲಿನ್ ಡಿ. ರೂಸ್ ವೆಲ್ಟ್ ಹಾಗೂ ಸ್ಟಾಲಿನ್ ಇದರ ಪ್ರಮುಖ ರೂವಾರಿಗಳು. ಈ ಮಹಾಸಂಸ್ಥೆಗಾಗಿ ಜಾನ್ ಡಿ.ರಾಕ್ ಫೆಲ್ಲರ್ ಎಂಬ ಶ್ರೀಮಂತ
ವಿಶಾಲ ನಿವೇಶನವನ್ನು ನ್ಯೂಯಾರ್ಕಿನ ಮ್ಯಾನ್‌ಹಟನ್‌ನಲ್ಲಿ ನೀಡಿದ್ದು ಸಾರ್ವಕಾಲಿಕ ಉಲ್ಲೇಖನೀಯ. ಈವರೆಗೆ ವಿಶ್ವಸಂಸ್ಥೆ ಹಲವಾರು ರಾಜಕೀಯ ಸಮಸ್ಯೆ ಗಳನ್ನು ಬಗೆ ಹರಿಸಿದೆ ಮತ್ತು ಬಗೆಹರಿಸುತ್ತಿದೆ. ಇರಾನ್, ಇಂಡೋನೇಷ್ಯ, ಬರ್ಲಿನ್, ಬ್ಲಾಕೇಡ್, ಕೊರಿಯ ಕದನ, ಸೂಯೆಜ್ ಕಾಲುವೆ ಸಮಸ್ಯೆ, ಕಾಂಗೋ ಹಗರಣ, ಪ್ಯಾಲಸ್ತೀನ್ ಸಮಸ್ಯೆ, ವಿಯಟ್ನಾಮ್ ಸಮಸ್ಯೆ, ನಮೀಬಿಯ ಸಮಸ್ಯೆ, ಅಂಗೋಲಗಳ ಸ್ವಾತಂತ್ರ್ಯಗಳಿಕೆ, ದಕ್ಷಿಣ ಆಫ್ರಿಕಾದ ವರ್ಣಬೇಧ ಸಮಸ್ಯೆ ಮುಂತಾದವುಗಳನ್ನು ಬಗೆಹರಿಸಿದೆ.

ಇಸ್ರೇಲ್, ಕಾಶ್ಮೀರ, ಇರಾಕ್ ಸಮಸ್ಯೆಗಳನ್ನು ಬಗೆಹರಿಸಲು ಹಲವು ಪ್ರಯತ್ನಗಳು ನಡೆದಿವೆ. ತನ್ನ ಅಂಗ ಸಂಸ್ಥೆಗಳ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಾರಕ ರೋಗಗಳು, ಮಕ್ಕಳ ಯೋಗಕ್ಷೇಮ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕೃತಿ ಮತ್ತು ಪರಂಪರೆ ಸಂರಕ್ಷಣೆ, ಆಹಾರ ಸಮಸ್ಯೆ, ಕೃಷಿ ಹಾಗೂ ಆರ್ಥಿಕಾಭಿವೃದ್ಧಿಯಂತಹ ಹತ್ತು ಹಲವು ಕಾರ್ಯಗಳನ್ನು ನಿರ್ವಹಿಸುತ್ತಿದೆ. ಚರಿತ್ರಾರ್ಹ ಸಾಧನೆಗಳನ್ನು ಮಾಡಿದ ವಿಶ್ವಸಂಸ್ಥೆ ತಾಲಿಬಾನಿಗಳನ್ನು
ನಿಯಂತ್ರಿಸಲು ಮುಂದಾಗದಿದ್ದದ್ದು ಮಾತ್ರ ಬಹುದೊಡ್ದ ಪ್ರಮಾದವಾಗಿ ಕಾಣುತ್ತಿದೆ.

ವರ್ತಮಾನದಲ್ಲಿ ಅಫ್ಘಾನಿಸ್ತಾನದ ನೂತನ ಪ್ರಧಾನಿ ಮುಲ್ಲಾ ಮೊಹಮ್ಮದ್ ಹಸನ್ ಅಕುಂದ್, ಉಪಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್, ಒಳಾಡಳಿತ ಸಚಿವ ಸಿರಾಜುದ್ದೀನ್ ಹಕ್ಕಾನಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈ ಹಿಂದೆಯೇ ಜಾಗತಿಕ ಭಯೋತ್ಪಾದಕರು ಎಂದು ಘೋಷಣೆ ಮಾಡಿತ್ತು. ಅಲ್ಲದೇ ಇವರುಗಳನ್ನು ೧೯೮೮ರ ನಿರ್ಬಂಧ ಪಟ್ಟಿಗೆ ಸೇರಿಸಿತ್ತು. ಆದರೆ ಇದೀಗ ಘೋಷಿತ ಭಯೋತ್ಪಾದಕರ ಜತೆಗೆನೇ ವಿಶ್ವಸಂಸ್ಥೆ ರಾಜತಾಂತ್ರಿಕ ವ್ಯವಹಾರಗಳನ್ನು ನಡೆಸಬೇಕಾದ ಪರಿಸ್ಥಿತಿ ಎದು ರಾಗಿದೆ. ಅಲ್ಲೀಗ ಆರ್ಥಿಕ ತುರ್ತುಪರಿಸ್ಥಿತಿ, ಮಾನವೀಯ ತುರ್ತುಪರಿಸ್ಥಿತಿ ಉದ್ಭವಿಸಿದೆ. ಅಫ್ಘಾನಿಸ್ತಾನ ಅಪ್ಪಟ ಸ್ಮಶಾನವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ಈಗ ವಿಶ್ವಸಂಸ್ಥೆ ಏನು ಮಾಡಬೇಕು? ಭಾರತದ ಬೆಳವಣಿಗೆಯಲ್ಲಿ ಸಮಷ್ಟಿಯ ಬೆಳವಣಿಗೆಯ ಹಿತವಿದೆ. ಭಾರತ ಎಂದೂ ಸ್ವಾರ್ಥದ ದುರುಳುತನದ ಬುದ್ಧಿಯನ್ನು ಜಗತ್ತಿನ ಮೇಲೆ ತೋರಿಸಿಲ್ಲ. ವೈರಿಗಳೊಂದಿಗೂ ಸೌಹಾರ್ದಯುತವಾಗಿ ನಡೆದುಕೊಂಡ ದೇಶವಿದ್ದರೆ ಅದು ಭಾರತ ಮಾತ್ರ. ವಿಶ್ವಸಂಸ್ಥೆಯಂಥ ಸಂಸ್ಥೆಯನ್ನು ಭಾರತ ಮುನ್ನಡೆಸಬೇಕು. ಯಾಕೆಂದರೆ, ಜಗದೇಕೈಕ ಅದ್ಭುತವೇನಾದರೂ ಇದ್ದರೆ ಅದು ಭಾರತ ಮಾತ್ರ! ಯಾರನ್ನೂ ಒಳಗೊಳ್ಳುವ ಯಾರೊಂದಿಗೂ ಒಳಗೊಳ್ಳುವ ವೈಶಾಲ್ಯ ಭಾರತಕ್ಕಿದೆ. ಭಾರತ ಅಭಿವೃದ್ಧಿಯಾದರೆ ವಿಶ್ವ ಅಭಿವೃದ್ಧಿಯಾಗಲಿದೆ, ಭಾರತ ಸುಧಾರಣೆಯತ್ತ ಸಾಗಿದರೆ ವಿಶ್ವವೂ ಸುಧಾರಣೆಯತ್ತ ಸಾಗಲಿದೆ.

ಭಯೋತ್ಪಾದನೆಯನ್ನು ರಾಜಕೀಯ ಟೂಲ್‌ಗಳನ್ನಾಗಿ ಚೀನಾ, ಪಾಕಿಸ್ತಾನಗಳು ಬಳಸುತ್ತಿದೆ. ಅಫ್ಘಾನಿಸ್ತಾನ ಭೂಮಿಯನ್ನು ಭಯೋತ್ಪಾದನೆಗೆ ಬಳಸಕೂಡದು. ಅಲ್ಲಿಯ ಸೂಕ್ಷ್ಮ ಪರಿಸ್ಥಿತಿಯನ್ನು, ತನ್ನ ಸ್ವಾರ್ಥಕ್ಕೆ ಯಾವ ದೇಶಗಳೂ ಬಳಸಿಕೊಳ್ಳಬಾರದು. ಅಫ್ಘಾನಿಸ್ತಾನದ ನಾಜೂಕಿನ ಸ್ಥಿತಿ ಯಾವ ದೇಶಕ್ಕೂ ಟೂಲ್
ಕಿಟ್ ಆಗಬಾರದು. ಅಲ್ಲಿನ, ಅಲ್ಪ ಸಂಖ್ಯಾತರಿಗೆ ನೆರವಿನ ಅಗತ್ಯವಿದೆ. ಸಮುದ್ರದ ಸಂಪನ್ಮೂಲಗಳನ್ನು ನಾವು ಬಳಸಬೇಕೆ ಹೊರತು, ದುರ್ಬಳಕೆ ಮಾಡಬಾ ರದು. ವಿಶ್ವಸಂಸ್ಥೆ ನೆಪಮಾತ್ರಕ್ಕೆ ಆಗಬಾರದು, ಜಾಗತಿಕ ವಿಚಾರಗಳಲ್ಲಿ ನಿಷ್ಪಕ್ಷಪಾತವಾಗಿ, ನಿಷ್ಠುರವಾಗಿ ತನ್ನ ಕೆಲಸ ಮಾಡಬೇಕಿದೆ.

ಇವತ್ತಿನ ಸವಾಲಿನ ಸಂದರ್ಭದಲ್ಲಿ ವಿಶ್ವಸಂಸ್ಥೆ ಇನ್ನಷ್ಟು ಪ್ರಖರವಾಗಿ, ಜಾಗತಿಕ ಮೌಲ್ಯಗಳಿಗೆ ಸರಿಯಾಗಿ ತನ್ನ ಅಸ್ತಿತ್ವವನ್ನು ತೋರಿಸಬೇಕಿದೆ. ಆದರೆ ಕರೋನಾ ಮೂಲ, ಅಫ್ಘಾನಿಸ್ತಾನದಲ್ಲಿನ ಪ್ರಸಕ್ತ ಸ್ಥಿತಿ, ಪ್ರಾಯೋಜಿತ ಭಯೋತ್ಪಾದನೆ ವಿಷಯಗಳಲ್ಲಿ ವಿಶ್ವಸಂಸ್ಥೆ ತನ್ನ ಮೌಲ್ಯಕ್ಕೆ ಸರಿಯಾಗಿ ನಡೆದು ಕೊಳ್ಳದಿರುವುದು ಬೇಸರ ಮೂಡಿಸಿದೆ. ವಿಶ್ವಸಂಸ್ಥೆಯ ಕಾರ್ಯವೈಖರಿ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವವಾಗಿವೆ. ಹವಾಮಾನ ವೈಪರೀತ್ಯ, ಕೋವಿಡ್ ವಿಚಾರದಲ್ಲಿ ಇದನ್ನು ನಾವು ನೋಡಿದ್ದೇವೆಂದು ಮೊನ್ನೆ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತಾಡಿದ್ದನ್ನು ಜಗತ್ತು ನೋಡಿದೆ. ಸತ್ಯವನ್ನು ನಿರ್ಭಿಡೆಯಿಂದ ಹೇಳುವ ಧಾಷ್ಟ್ರ್ಯವನ್ನು ವಿಶ್ವಸಂಸ್ಥೆಗೆ ಮೋದಿ ತೋರಿಸಿಕೊಟ್ಟರು.

ಮುಖ್ಯವಾಗಿ, ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಬಿಂದು ಎಂಬ ಸಾರ್ವಜನಿಕ ಸತ್ಯವನ್ನು ಬಯಲು ಮಾಡಿದರು. ಕಾಶ್ಮೀರ ವಿಚಾರದಲ್ಲಿ ಇಮ್ರಾನ್ ಖಾನ್ ಮಾತನ್ನು ವಿಶ್ವಸಂಸ್ಥೆಯಲ್ಲೇ ಖಂಡತುಂಡಾಗಿ ವಿರೋಧಿಸಿದವರು ವಿಶ್ವಸಂಸ್ಥೆಗೆ ಭಾರತದ ಮೊದಲ ಸಕ್ರೆಟರಿಯಾಗಿರುವ ಸ್ನೇಹಾ ದುಬೆ! ವಿಶ್ವಸಂಸ್ಥೆ ಮಾಡ ಬೇಕಾದ ಕಾರ್ಯವನ್ನು ಇವರು ಮಾಡಿದರು.

ಕೊನೆಯ ಮಾತು: ತಾವು ಏನು ಮಾಡಿದರೂ ನಡೆಯುತ್ತದೆ ಎಂದು ಯಾವ ರಾಷ್ಟ್ರಗಳೂ ಭಾವಿಸಲು ಸಾಧ್ಯವಾಗದಂತೆ ವಿಶ್ವಸಂಸ್ಥೆಯ ಕಾರ್ಯವೈಖರಿ ಬೀಡು ಬಿರುಸಾಗಿ ಭಯೋತ್ಪಾದನೆಯನ್ನು ನಿಯಂತ್ರಿಸುವ ಕೆಲಸ ಮೊದಲಾಗಬೇಕಿದೆ. ಮುಖ್ಯವಾಗಿ, ವಿಶ್ವಸಂಸ್ಥೆ ಯಾವ ದೇಶದ ಯಾವ ಹಂಗಿಗೂ ಬೀಳದೆ ಸ್ವತಂತ್ರ ಹಾದಿಯಲ್ಲಿ ಸಾಗಬೇಕಿದೆ. ಅಂದಾಗ ಮಾತ್ರ ನಿರ್ಭಯದಿಂದ ಕೆಲಸ ಮಾಡಲು ಅದಕ್ಕೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅದರ ಅಗತ್ಯವಿರಲಾರದು.