ಗುರು ಸ್ಮರಣೆ
ನಂ. ಶ್ರೀಕಂಠ ಕುಮಾರ್
ಶೃಂಗೇರಿ, ಕರ್ನಾಟಕದ ಮಲೆನಾಡಿನ ಸೊಬಗಿನ ಮಧ್ಯದಲ್ಲಿನ ಸಹ್ಯಾದ್ರಿ ಮಡಿಲಿನಲ್ಲಿರುವ ಈ ಪುಣ್ಯ ಕ್ಷೇತ್ರವು ಉತ್ತಮ ಪರಿಸರದಿಂದ ಕೂಡಿದ್ದು, ತ್ರೇತಾ ಯುಗದ ಶ್ರೀ ರಾಮಾಯಣ ಕಾಲದಿಂದಲೂ ಋಷಿ-ಮುನಿಗಳ ತಪೋ ಭೂಮಿಯಾಗಿದೆ.
ಇಲ್ಲಿನ ಸಮೀಪದಲ್ಲಿಯೇ ಶ್ರೀ ಮಲಹಾನಿಕರೇಶ್ವರ ಸನ್ನಿಧಿಯಿದ್ದು, ಇಲ್ಲಿ ಮಹರ್ಷಿ ಶ್ರೀ ವಿಭಾಂಡಕರು ಆಶ್ರಮವಾಸಿಗಳಾಗಿ ತಪೋನಿರತರಾಗಿದ್ದು, ಕೊನೆಗೆ ಈ ಶಿವಲಿಂಗದಲ್ಲಿಯೇ ಐಕ್ಯ ಹೊಂದಿದರು ಎಂಬುದು ಐತಿಹ್ಯವಾಗಿದೆ. ನಂತರ ಶ್ರೀ ವಿಭಾಂಡಕ ಮಹರ್ಷಿಗಳ ಪುತ್ರರಾದ ಮಹರ್ಷಿ ಶ್ರೀ ಋಷ್ಯಶೃಂಗ ಮುನಿಗಳು
ಶೃಂಗಗಿರಿಯಲ್ಲಿ ತಪೋ ನಿರತರಾದರು. ಹಾಗಾಗಿ ಕಾಲಾನಂತರ ಶೃಂಗಗಿರಿಯೂ ಶೃಂಗೇರಿ ಎಂದು ರೂಢಿಗೆ ಬಂದಿದೆ. ಆನಂತರ ಸನಾತನ ಧರ್ಮದ ಸ್ವರೂಪವು ಬದಲಾಗುತ್ತಾ ಬಂದು ಸನಾತನ ಧರ್ಮವನ್ನು ಪಾಲಿಸು ವಲ್ಲಿ ಅನೇಕ ಅಡಚಣೆಯು ಉಂಟಾದವು.
ಇದನ್ನು ತಡೆಗಟ್ಟಿ ಸನಾತನ ಧರ್ಮವನ್ನು ರಕ್ಷಿಸಿ ಪುನರುತ್ಥಾನಗೊಳಿಸಲು ಪರಶಿವನ ಅಂಶದಿಂದ ಆಚಾರ್ಯ ಶ್ರೀಶಂಕರ ಭಗವತ್ಪಾದರು ಕ್ರಿ.ಶ.788ರಲ್ಲಿ ಅವತರಿಸಿದರು. ಶ್ರೀ ಶಂಕರರು ಮೊಟ್ಟಮೊದಲು ಸ್ಥಾಪಿಸಿದುದೇ ಶೃಂಗೇರಿಯ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ. ಕಾಶ್ಮೀರಪುರವಾಸಿನಿ, ವಿದ್ಯಾದೇವತೆಯೂ ಆದ ಶ್ರೀ ಶಾರದೆಯನ್ನು ಈ ಪೀಠದಲ್ಲಿ ಪ್ರತಿಷ್ಠಾಪನೆ ಮಾಡಿ ತಮ್ಮ ನೇರ ಶಿಷ್ಯರಾದ ಶ್ರೀ ಸುರೇಶ್ವರಾಚಾರ್ಯರನ್ನು ಕ್ರಿ.ಶ.813 ರಲ್ಲಿ ಶ್ರೀ ಶಾರದಾ ಪೀಠಕ್ಕೆ ಪ್ರಥಮ ಪೀಠಾಧಿಪತಿಯನ್ನಾಗಿ ನೇಮಿಸಿದರು.
ಅಂದಿನಿಂದ ಇಂದಿನವರೆಗೂ ಅವಿಚ್ಛಿನ್ನ ಪರಂಪರೆಯನ್ನು ಹೊಂದಿರುವ ಶ್ರೀ ಶಾರದಾ ಪೀಠದಲ್ಲಿ ತಪೋನಿಷ್ಠರೂ, ಯೋಗನಿಷ್ಠರೂ, ಜ್ಞಾನನಿಷ್ಠರೂ, ಮಹಾ ಮಹಿಮರೂ ಆದ ಜಗದ್ಗುರುಗಳು ವಿರಾಜಿಸಿ ಮಾರ್ಗದರ್ಶನ ಮಾಡಿ ದ್ದಾರೆ. ಶ್ರೀ ಶಾರದಾ ಪೀಠದ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ವಿದ್ಯಾರಣ್ಯ ತೀರ್ಥರ ಕಾಲದಲ್ಲೇ ಶೃಂಗೇರಿ ಶ್ರೀ ಮಠವು ಮಹಾಸಂಸ್ಥಾನವೆಂಬ ಹೆಸರು ಪಡೆಯಿತು. ಹಾಗೂ ವಿದ್ಯಾನಗರಿ ಮಹಾರಾಜಧಾನೀ ಕರ್ಣಾಟಕ ಸಿಂಹಾಸನ ಪ್ರತಿಷ್ಠಾ ಪನಾಚಾರ‍್ಯವರ‍್ಯ ಎಂದು ಪೀಠಾಧಿಪತಿಗಳು ಲೋಕಪ್ರಖ್ಯಾತರಾದರು. ಅವರುಗಳಲ್ಲಿ ಪ್ರಮುಖವಾಗಿ ಧರ್ಮಪೀಠದಲ್ಲಿ 35ನೇ ಅಧಿಪತಿ ಗಳಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರು 1954-1989 ರ ವರೆಗೆ ಸನಾತನ ಧರ್ಮ ರಕ್ಷಣೆ ಮಾಡಿ ಧರ್ಮ ಪೀಠವನ್ನು ಸಮರ್ಥವಾಗಿ 35 ವರ್ಷಗಳ ಕಾಲ ಮುನ್ನಡೆಸಿದರು.
ಬೆಂಗಳೂರಿನ ನಿವಾಸಿಗಳಾಗಿದ್ದ ಯಜುಶಾಖೆಯ ಕೌಂಡಿನ್ಯಸ ಗೋತ್ರದ ವಿದ್ವಾಂಸ ಶ್ರೀ ಕೈಪು ರಾಮಾಶಾಸ್ತ್ರಿಗಳು ಮತ್ತು ವೆಂಕಟಲಕ್ಷಮ್ಮ ದಂಪತಿಗಳಿಗೆ ಭಗವಂತನ ಆಶೀರ್ವಾದದಿಂದ ಪಿಂಗಳ ನಾಮ ಸಂವತ್ಸರದ ಆಶ್ವಯುಜ ಬಹುಳ ಚತುರ್ದಶಿ ಮಂಗಳವಾರದ ಸ್ವಾತಿ ನಕ್ಷತ್ರದಲ್ಲಿ (13-11-1917) ಪುತ್ರ ರತ್ನ ಜನನವಾಯಿತು. ಬಾಲಕನಿಗೆ ಶ್ರೀನಿವಾಸ ಎಂದು ನಾಮಕರಣ ಮಾಡಿದರು. ಶ್ರೀನಿವಾಸನಿಗೆ ಬಾಲ್ಯದಿಂದಲೂ ವಿರಕ್ತಿ, ಸತ್ಪುರುಷರಲ್ಲಿ ಪ್ರೀತಿ, ಸದಾಚಾರ ದಲ್ಲಿ ವಿಶೇಷ ಆಸಕ್ತಿ ಇದ್ದಿತು. ಪ್ರಾಣಿದಯೆ ಸಹಜ ಗುಣವಾಗಿತ್ತು. ಒಮ್ಮೆ ಸ್ನೇಹಿತರಲ್ಲಿ ದೊಡ್ಡವರಾದ ಮೇಲೆ ಏನಾಗಬೇಕು ಎಂಬ ಚರ್ಚೆಯಾಯಿತು.
ಬಾಲಕ ಶ್ರೀನಿವಾಸನು ತಾನು ಸನ್ಯಾಸಿಯೋ, ಸಾಧುವೋ ಆಗುವುದಾಗಿಯು ಅದರಿಂದ ಸದಾ ದೇವರ ಧ್ಯಾನ ಮಾಡುತ್ತಾ ಸಂತೋಷವಾಗಿರಬಹುದೆಂದು ನುಡಿದ. ಇದನ್ನು ಕೇಳಿದ ಸ್ನೇಹಿತರು ಈತ ಒಬ್ಬ ವಿಚಿತ್ರ ವ್ಯಕ್ತಿ ಎಂದು ಅಚ್ಚರಿಪಟ್ಟರು. ಆಗಲೇ ತಾಯಿಯಿಂದ ಕಲಿತ ಪುರಾಣ ಕಥೆಗಳನ್ನು ಸಹಪಾಠಿಗಳಿಗೆಲ್ಲಾ ಹೇಳುತ್ತಾ ಸಹಜವಾಗಿ ಆಧ್ಯಾತ್ಮ ಜೀವನದತ್ತ ತನಗರಿವಿಲ್ಲದಂತೆಯೇ ಬಾಲಕ ಸಾಗುತ್ತಿದ್ದನು. ತಂದೆ-ತಾಯಿಯವರು ಬಾಲಕನಿಗೆ ಶೃಂಗೇರಿಯಲ್ಲಿ ಉಪ ನಯನವನ್ನು ಮಾಡಲು ಸಂಕಲ್ಪಿಸಿದಂತೆ ಶೃಂಗೇರಿಯಲ್ಲಿನ ಶ್ರೀ ಶಾರದಾಂಬೆ ಅಮ್ಮನವರ ಸನ್ನಿಧಿಯಲ್ಲಿಯೇ ಶ್ರೀನಿವಾಸನಿಗೆ ವೈಶಾಖ ಶುದ್ಧ ಷಷ್ಠಿಯ ಶುಭ ಮುಹೂರ್ತದಲ್ಲಿ ಉಪನಯನವನ್ನು ನೆರವೇರಿಸಲಾಯಿತು.
ನಂತರ ಅಂದಿನ 34ನೇ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ ದರ್ಶನವನ್ನು ಪಡೆದರು. ಆಗ ಗುರುಗಳು ಬಾಲಕನಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು. ದಾಷ್ಟ್ರ್ಯದಿಂದ ಉತ್ತರಿಸಿದ ಶ್ರೀನಿವಾಸನ ಧೈರ್ಯಕ್ಕೂ, ಬುದ್ಧಿಶಕ್ತಿಗೂ ಮೆಚ್ಚುಗೆಯನ್ನು ತೋರಿ ಆಶೀರ್ವದಿಸಿ ದರು. ಆಗ ಶ್ರೀನಿವಾಸನು ಗುರುಗಳ ಸಾನ್ನಿಧ್ಯದಲ್ಲಿಯೇ ಇದ್ದು ಸಂಸ್ಕೃತವನ್ನು, ಶಾಸ್ತ್ರಗಳನ್ನು ಓದುವ ಇಚ್ಛೆಯಿಂದಿದ್ದೇನೆ ಎಂದು ವಿನಮ್ರವಾಗಿ ನುಡಿದನು. ಶ್ರೀನಿವಾಸ ಶರ್ಮನಿಗೆ ಶ್ರೀಮಠದಲ್ಲಿಯೇ ವಿದ್ಯಾಭ್ಯಾಸವು ಪ್ರಾರಂಭವಾಯಿತು.
ಗುರುಗಳು ಮಠದ ವಿದ್ವಾಂಸರಿಂದ ಅಮರಕೋಶ, ಶಬ್ದಮಂಜರಿ, ಧಾತು ಪಾಠಗಳನ್ನು ಹೇಳಿಸುವ ವ್ಯವಸ್ಥೆಗಳನ್ನು ಮಾಡಿದರು. ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರದ್ದು ಅಂತರ್ಮುಖತೆಯ ಸ್ವಭಾವ. ಶ್ರೀ ಮಠದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ತಾವು ಒಬ್ಬ ಶಿಷ್ಯರನ್ನು ಸ್ವೀಕರಿಸಿ
ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಪೂರ್ಣ ಹೊಣೆಗಾರಿಕೆಯನ್ನು ವಹಿಸಿ ತಾವು ಸ್ವತಂತ್ರವಾಗಿ ತಪಸ್ಸಿನಲ್ಲಿ ತೊಡಗಬೇಕೆಂಬ ಆಲೋಚನೆ ಉಂಟಾಗಿ
ಅದಕ್ಕಾಗಿ ಹದಿನಾಲ್ಕು ವರ್ಷ ವಯಸ್ಸಿನ ಬ್ರಹ್ಮಚಾರಿ ಶ್ರೀನಿವಾಸ ಶರ್ಮರನ್ನು ಶಿಷ್ಯರನ್ನಾಗಿ ಸ್ವೀಕರಿಸಬೇಕೆಂದು ಯೋಚಿಸಿದರು.
ನಂತರ ಶ್ರೀನಿವಾಸ ಶರ್ಮರಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿ, ಮಾತಾ ಪಿತೃವಿನ ಅನುಮತಿಯನ್ನು ಪಡೆದು ಬರುವಂತೆ ಬೆಂಗಳೂರಿಗೆ ಕಳುಹಿಸಿಕೊಟ್ಟರು. ಮಹಾರಾಜರು ವಿಜ್ಞಾಪನಾ ಪತ್ರವನ್ನು ಬರೆದು ಪ್ರಣಾಮಗಳನ್ನು ಸೂಚಿಸಿ ನೂತನ ಗುರುಗಳಿಗೆ ಕಾಣಿಕೆ, ಖಿಲ್ಲತ್ತುಗಳನ್ನು ಕಳುಹಿಸಿಕೊಟ್ಟರು. ಶೃಂಗೇರಿ ಶ್ರೀಮಠ ದಲ್ಲಿ ಪ್ರಜೋತ್ಪತ್ತಿ ಸಂವತ್ಸರದ ಜ್ಯೇಷ್ಠ ಶುದ್ಧ ಪಂಚಮೀ ಶುಕ್ರವಾರದಂದು (22-05-1931) ಶ್ರೀನಿವಾಸ ಶರ್ಮರು ಪ್ರೈಷ ಮಂತ್ರೋಚ್ಚಾರಣೆಗಾಗಿ ಜಗದ್ಗುರು ಗಳಾದ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸನ್ನಿಧಿಯಲ್ಲಿ ತುಂಗಾ ನದಿಯಲ್ಲಿ ಇಳಿದು ಶಿಖಾ, ಯಜ್ಞೋಪವೀತಗಳನ್ನು ತ್ಯಜಿಸಿ ಸ್ನಾನ ಮಾಡಿ ಬರುತ್ತಿದ್ದಂತೆಯೇ ಜಗದ್ಗುರುಗಳು ಅವರಿಗೆ ಕೌಪೀನ, ಕಟಿಸೂತ್ರ, ದಂಡ, ಕಮಂಡಲು, ಪಾದುಕೆ, ಕಾಷಾಯ ವಸಾದಿಗಳನ್ನು ಅನುಗ್ರಹಿಸಿ ಸನ್ಯಾಸ ದೀಕ್ಷೆ ನೀಡಿದರು.
ಅನಂತರ ಶ್ರೀ ಶಾರದಾಂಬ ಅಮ್ಮನವರ ಸನ್ನಿಧಿಯಲ್ಲಿ ವ್ಯಾಖ್ಯಾನ ಸಿಂಹಾಸನದಲ್ಲಿ ಕುಳ್ಳಿರಿಸಿ ಸಂಪ್ರದಾಯ ವನ್ನು ನೆರವೇರಿಸಿ ಶಿಷ್ಯರಿಗೆ ಶ್ರೀ ಅಭಿನವ ವಿದ್ಯಾತೀರ್ಥ ಎಂಬ ಯೋಗಪಟ್ಟವನ್ನು ದಯಪಾಲಿಸಿದರು. ಶಿಷ್ಯ ಶ್ರೀ ಅಭಿನವ ವಿದ್ಯಾತೀರ್ಥರವರಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ 1937ರಲ್ಲಿ ಬೆಂಗಳೂರಿನ ಶ್ರೀ ಶಂಕರಮಠದಲ್ಲಿ ವ್ಯವಸ್ಥೆ ಮಾಡಿದರು. ವಿದ್ಯಾಭ್ಯಾಸವು ಪೂರ್ಣವಾದ ನಂತರ ಶಿಷ್ಯರು ಶೃಂಗೇರಿಗೆ ಹಿಂದಿರುಗಿದರು. ಶ್ರೀ ಅಭಿನವ ವಿದ್ಯಾತೀರ್ಥರು ಬಹುಭಾಷಾ ವಿಶಾರದರಾದರು. ಸಂಸ್ಕೃತ, ಕನ್ನಡ, ತೆಲಗು, ತಮಿಳು, ಹಿಂದಿ ಭಾಷೆಯಲ್ಲಿ ಉತ್ತಮ ಪಾಂಡಿತ್ಯ ಪಡೆದಿದ್ದು, ನಿರರ್ಗಳವಾಗಿ ಉಪದೇಶವನ್ನು ನೀಡುತ್ತಿದ್ದರು.
ಶ್ರೀ ಜಯಸಂವತ್ಸರದ ಭಾದ್ರಪದ ಬಹುಳ ಅಮಾವಾಸ್ಯೆಯ ಪರ್ವದಿನದಂದು ಬ್ರಾಹ್ಮೀ ಮುಹೂರ್ತದಲ್ಲಿ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾ ಸ್ವಾಮಿಗಳವರು ತುಂಗಾ ನದಿಯಲ್ಲಿ ಸ್ನಾನಮಾಡುತ್ತಾ ಅಚಲರಾಗಿ ನೀರಿನ ಮಧ್ಯದಲ್ಲೇ ಪಂಚಪ್ರಾಣಗಳನ್ನು ನಿಶ್ಚಲ ಮಾಡಿ ಬ್ರಹ್ಮರಂಧ್ರದ ಮೂಲಕ ಹೊರಹೊರಡಿಸಿ ಬ್ರಹ್ಮಕ್ಯರಾದರು. ಆರಾಧನಾ ಕಾರ್ಯಗಳು ಮುಗಿದ ನಂತರ ಶ್ರೀಮಠದ ಪದ್ಧತಿಯಂತೆ ಜಗದ್ಗುರು ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರು ಜಯಸಂವತ್ಸರದ ಆಶ್ವಯುಜ ಬಹುಳ ಪಂಚಮಿಯಂದು ಪಟ್ಟಾಭಿಷಿಕ್ತರಾದರು.
ನಂತರ ಶೃಂಗೇರಿಗೆ ಭೇಟಿ ನೀಡುವ ದರ್ಶನಾಕಾಂಕ್ಷಿಗಳಿಗೆ ಶ್ರೀ ಜಗದ್ಗುರುಗಳವರು ಪ್ರಾಮಾಣಿಕರಾಗಿದ್ದವರಿಗೆ, ಲೌಕಿಕ ತೊಂದರೆ, ಕಷ್ಟ, ನಷ್ಟಗಳಲ್ಲಿ ಸಿಲುಕಿದವರಿಗೆ, ರೋಗ ರುಜಿನಗಳಲ್ಲಿ ಬಳಲಿದವರಿಗೆ ಮಂತ್ರೋಪದೇಶವನ್ನಿತ್ತು ಅವರಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸಿ ಮಾನಸಿಕ ಬಲವನ್ನು ತುಂಬುತ್ತಿದ್ದರು. ದಕ್ಷಿಣ ಭಾರತದ ಅನೇಕ ಶಿಷ್ಯರ ಪ್ರಾರ್ಥನೆ ಮೇರೆಗೆ ಜಗದ್ಗುರು ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರು ಮಾರ್ಚ್ 15, 1956 ರಂದು
ಸಂಪ್ರದಾಯದಂತೆ ಶೃಂಗೇರಿಯ ಎಲ್ಲಾ ದೇವಾಲಯಗಳಲ್ಲಿಯೂ ಪೂಜೆ, ದರ್ಶನಾದಿಗಳನ್ನು ನೆರವೇರಿಸಿ, ಮೊದಲ ವಿಜಯ ಯಾತ್ರೆಯನ್ನು ಪ್ರಾರಂಭಿಸಿದರು.
ಕಳಸದ ಕಳಸೇಶ್ವರ, ಕೊಲ್ಲೂರಿನ ಶ್ರೀ ಮೂಕಾಂಬಿಕೆ, ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಧರ್ಮಪ್ರಸಾರಾರ್ಥವಾಗಿ ವಿಜಯ ಯಾತ್ರೆ
ಯನ್ನು ಮುಂದುವರಿಸಿ ಗುರುವಾಯೂರಿನಲ್ಲಿ ಶ್ರೀ ಕೃಷ್ಣನ ದರ್ಶನ ಪಡೆದು ಶ್ರೀ ಶಂಕರರ ಜನ್ಮಭೂಮಿಯಾದ ಕಾಲಟಿ ಕ್ಷೇತ್ರಕ್ಕೆ ದಯಮಾಡಿಸಿದರು.
ಕಾಲಟಿಯಲ್ಲಿ ವ್ಯಾಸ ಪೂಜಾ, ಚಾತುರ್ಮಾಸ್ಯ ಮತ್ತು ನವರಾತ್ರಿ ಉತ್ಸವವನ್ನು ಆಚರಿಸಿದರು. ಅಲ್ಲಿ ತಿರುವಾಂಕೂರಿನ ಮಹಾರಾಜ ಶ್ರೀ ಚಿತ್ತಿರೈತಿರುನಾಳ್ ಬಲ
ರಾಮ ವರ್ಮರು, ಕೊಚ್ಚಿನ್ ಸಂಸ್ಥಾನದ ಮಹಾರಾಜರಾದ ಶ್ರೀರಾಮವರ್ಮ ಪರೀಕ್ಷಿತ ಅವರು ಶ್ರೀ ಜಗದ್ಗುರುಗಳವರ ದರ್ಶನ ಪಡೆದರು. ಮುಂದೆ ಶ್ರೀ
ಜಗದ್ಗುರುಗಳು ರಾಮೇಶ್ವರ, ಮಧುರೈಗೆ ಚಿತ್ತೈಸಿದರು. ನಂತರ 1958 ರಲ್ಲಿ ಕೊಯಮತ್ತೂರಿನಲ್ಲಿ ಶ್ರೀ ಜಗದ್ಗುರು ಗಳವರು ನವರಾತ್ರಿ ಮಹೋತ್ಸವವನ್ನು ಆಚರಿಸಿದರು. ನಂತರ 1961ರಲ್ಲಿ ಶ್ರೀ ಜಗದ್ಗುರುಗಳವರು ವಿಜಯಯಾತ್ರೆಯನ್ನು ಮುಂದುವರೆಸಿ ಆಂಧ್ರಪ್ರದೇಶ ದ ವಿಜಯವಾಡಕ್ಕೆ ಆಗಮಿಸಿ ಆ ಪ್ರದೇಶದ ಭಕ್ತರನ್ನು ಅನುಗ್ರಹಿಸಿದರು.
ವಿಜಯ ಯಾತ್ರೆಯನ್ನು ಮುಂದುವರೆಸಿ ಬೆಂಗಳೂರಿನಲ್ಲಿ ವಾಸ್ತವ್ಯವನ್ನು ಹೂಡಿದ ಸಂದರ್ಭದಲ್ಲಿ ಅಂದಿನ ಭಾರತದ ಎರಡನೇ ರಾಷ್ಟ್ರಾಧ್ಯಕ್ಷರಾದ ಸರ್ವೇಪಲ್ಲಿ ರಾಧಾಕೃಷ್ಣನ್‌ಅವರು ಶ್ರೀ ಜಗದ್ಗುರುಗಳವರ ದರ್ಶನ ಮಾಡಿ ಆಶೀರ್ವಾದ ಪಡೆದರು. ನಂತರ ಮೈಸೂರಿಗೆ ಚಿತ್ತೈಸಿದ ಶ್ರೀ ಜಗದ್ಗುರುಗಳವರನ್ನು ಪುರ ಪ್ರಮುಖರು ಹಾಗೂ ಮಹಾರಾಜರ ಪ್ರತಿನಿಽಗಳು ಸಮಸ್ತ ಮರ್ಯಾದೆಗಳಿಂದ ಸ್ವಾಗತಿಸಿದರು. ಚಾಮುಂಡಿ ಬೆಟ್ಟಕ್ಕೆ ದಯಮಾಡಿಸಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾದಿಗಳನ್ನು ಶ್ರೀ ಜಗದ್ಗುರುಗಳವರು ನೆರವೇರಿಸಿ ಭಕ್ತಾದಿಗಳನ್ನು ಅನುಗ್ರಹಿಸಿದರು.
ಮತ್ತೆ, ಶ್ರೀ ಜಗದ್ಗುರುಗಳವರು ಯಾತ್ರೆಯನ್ನು ಮುಂದುವರಿಸಿ ತುಮಕೂರು ಸಮೀಪದ ಸಿದ್ಧಗಂಗೆಯ ಮಠಾಧೀಶರಾದ ಶ್ರೀ ಶಿವಕುಮಾರಸ್ವಾಮಿಯವರಿಂದ
ಆಹ್ವಾನಿತರಾಗಿ ಅಲ್ಲಿಗೆ ದಯಮಾಡಿಸಿ ಅವರಿಂದ ಗೌರವಿಸಲ್ಪಟ್ಟು ಭಕ್ತರನ್ನು ಅನುಗ್ರಹಿಸಿ ಮಠಾಧಿಪತಿ ಶ್ರೀ ಶಿವಕುಮಾರಸ್ವಾಮಿಯವರಿಗೆ ಶ್ರೀಮಠದಿಂದ
ಜೋಡಿಶಾಲನ್ನಿತ್ತು ಅನುಗ್ರಹಿಸಿದರು. ಜಗದ್ಗುರುಗಳ ವರು ಆರೂವರೆ ವರ್ಷಗಳ ನಿರಂತರ ವಿಜಯಯಾತ್ರೆಯಲ್ಲಿ ಎಲ್ಲೆಡೆ ಧರ್ಮಜಾಗೃತಿಯನ್ನುಂಟು ಮಾಡಿ
ಜುಲೈ 9, 1962 ರಂದು ಶೃಂಗೇರಿಯನ್ನು ಪ್ರವೇಶಿಸಿದರು. ಶೃಂಗೇರಿಯ ಪೀಠಾಚಾರ್ಯರಲ್ಲಿ ಭರತಖಂಡವನ್ನೆಲ್ಲಾ ಸಂಚರಿಸಿ, ಧರ್ಮದುಂದುಭಿ ಮೊಳಗಿಸಿ ದವರಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರು ಮತ್ತು ಜಗದ್ಗುರು ಶ್ರೀ ವಿದ್ಯಾರಣ್ಯ ಸ್ವಾಮಿಗಳವರ ಆನಂತರ ದಲ್ಲಿ ಜಗದ್ಗರು ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರು ಅಗ್ರಗಣ್ಯರು.
ತಮ್ಮ ಪೀಠಾಧಿಕಾರದ ಅವಧಿಯಲ್ಲಿ ಎರಡು ಬಾರಿ ವಿಜಯ ಯಾತ್ರೆಯನ್ನು ಹತ್ತು ವರ್ಷಗಳಿಗೂ ಮೀರಿ ಕೈಗೊಂಡು ಭಕ್ತರನ್ನು ಅನುಗ್ರಹಿಸಿರುವುದು ಆಸ್ತಿಕರ ಪುಣ್ಯಭಾಗ್ಯ. ಜಗದ್ಗುರು ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರು ಆನಂದ ಸಂವತ್ಸರದ ಆಶ್ವಯುಜ ಕೃಷ್ಣ ದ್ವಾದಶಿಯಂದು (11-11-1974) ಶ್ರೀಮಠದ ಸಾನ್ನಿಧ್ಯದಲ್ಲಿ ವಿದ್ಯಾಭ್ಯಾಸ ಪಡೆದ ಶ್ರೀ ತಂಗಿಲಾಲ ಸೀತಾರಾಮಾಂಜನೇಯಲು ಎಂಬ ಬ್ರಹ್ಮ ಚಾರಿಗೆ ಸನ್ಯಾಸಾಶ್ರಮವನ್ನು ನೀಡಿ ಶ್ರೀ ಭಾರತೀ ತೀರ್ಥ ಎಂಬ ಯೋಗಪಟ್ಟವನ್ನು ಅನುಗ್ರಹಿಸಿದರು. ನಂತರ ಪೀಠದ ಎಲ್ಲಾ ಜವಾಬ್ದಾರಿಯನ್ನು ಕ್ರಮವಾಗಿ ತಮ್ಮ ಶಿಷ್ಯರಿಗೆ ವಹಿಸಿ ತಾವು ಆತ್ಮಧ್ಯಾನದಲ್ಲಿ ನಿರತರಾಗಿರು ತ್ತಿದ್ದರು.
ಶೃಂಗೇರಿಗೆ ಬರುವ ಭಕ್ತಾದಿಗಳ ಅನುಕೂಲ ಕ್ಕಾಗಿ ಅತಿಥಿಗೃಹಗಳನ್ನು ಕಟ್ಟಿಸಿ ಅಭಿವೃದ್ಧಿ ಕಾರ್ಯ ಗಳನ್ನು ನಡೆಸಿದರು. ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠಶಾಲೆ, ಗ್ರಂಥಾಲಯ, ಶ್ರೀ ಶಾರದಾ ಧನ್ವಂತ್ರಿ ಆಸ್ಪತ್ರೆ, ಗೋಶಾಲೆ, ಸಂಸ್ಕೃತ ಭಾಷೆಯ ಪ್ರಸಾರಕ್ಕಾಗಿ ಸುರಸರಸ್ವತೀ ಸಭಾ ಎಂಬ ಪರಿಷತ್ತನ್ನು ಆಯೋಜಿಸಿ ಸಂಸ್ಕೃತ ಪರೀಕ್ಷೆಗಳನ್ನು ನಡೆಸಿ ಭಾಷೆಯ ಸಂರಕ್ಷಣೆಗೆ ಕಾರಣರಾದರು. ವಿವಿಧ ಸ್ಥಳಗಳಲ್ಲಿ ಶೃಂಗೇರಿ ಶಾಖಾ ಶ್ರೀಮಠಗಳು, ಧರ್ಮ ಶಾಲೆಗಳು, ವಿದ್ಯಾಲಯಗಳು, ಬೆಂಗಳೂರಿನಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಗೊಂಡವು.
ಅಪಾರ ಕರುಣಾಶಾಲಿಗಳಾದ ಜಗದ್ಗುರು ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರು ಶುಕ್ಲ ಸಂವತ್ಸರದ ಭಾದ್ರಪದ ಕೃಷ್ಣ ಸಪ್ತಮಿ ಗುರುವಾರ
(21-09-1989 ) ರಂದು ಪಂಚ ಭೌತಿಕ ಶರೀರವನ್ನು ತ್ಯಜಿಸಿ ಪರಮಾತ್ಮನಲ್ಲಿ ಐಕ್ಯರಾದರು.