Friday, 22nd November 2024

ಪ್ರಚಾರದ ಮೇಲಿರಲಿ ಎಚ್ಚರ

ಕರ್ನಾಟಕದಲ್ಲಿ ಪುನಃ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳಿಗೆ ಉಪಚುನಾವಣೆಗಳು ಘೋಷಣೆಯಾಗಿವೆ. ಆಡಳಿತಾರೂಢ ಬಿಜೆಪಿಗೆ ಈ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿದ್ದರೆ, ಕಾಂಗ್ರೆಸ್  ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಮುಂದಿನ ಚುನಾವಣೆಗೆ ತಯಾರಿ ಆರಂಭಿಸಲು ಈ ಉಪಚುನಾವಣೆ ಬಹುಮುಖ್ಯ ವಾಗಿದೆ.

ಆದ್ದರಿಂದ ಸಹಜವಾಗಿಯೇ ಈ ಎರಡು ಉಪಚುನಾವಣೆಗಳು ಮುಂದಿನ ಕೆಲ ದಿನಗಳ ಕಾಲ ಇಡೀ ರಾಜ್ಯದ ಗಮನ ಸೆಳೆಯುವುದರಲ್ಲಿ ಅನುಮಾನವಿಲ್ಲ. ಆದರೆ ಕರ್ನಾಟಕದಲ್ಲಿ ಈಗಷ್ಟೇ ಕರೋನಾ ಸೋಂಕಿನ ಪ್ರಮಾಣ ತಗ್ಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಈ ಹಂತದಲ್ಲಿ ಕರೋನಾ ಸೋಂಕು ಹಬ್ಬದಂತೆ ನೋಡಿ ಕೊಳ್ಳಬೇಕು. ಕಳೆದ ಬಾರಿ ನಡೆದ ಉಪಚುನಾವಣೆ ಸಮಯ ದಲ್ಲಿಯೂ ಕರ್ನಾಟಕದಲ್ಲಿ ಕರೋನಾ ಸೋಂಕಿನ ಸಂಖ್ಯೆ ಭಾರಿ ಕಡಿಮೆ ಯಿತ್ತು. ಆದರೆ ಬಳಿಕ ನಡೆದ ಉಪಚುನಾವಣೆಯ ಪ್ರಚಾರ, ರ‍್ಯಾಲಿ ಹಾಗೂ ಕಾರ್ಯ ಕ್ರಮದಲ್ಲಿ ಲಕ್ಷಾಂತರ ಜನ ಸೇರಿಸಿದ್ದರಿಂದ ಸೋಂಕು ವೇಗವಾಗಿ ಹಬ್ಬಿತ್ತು.

ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ, ದೇಶದಲ್ಲಿ ಎರಡನೇ ಅಲೆ ಭಾರಿ ವೇಗವಾಗಿ ಹಬ್ಬುವುದಕ್ಕೆ ಪಂಚ ರಾಜ್ಯದಲ್ಲಿ ನಡೆದ ಚುನಾವಣೆಯ ಪ್ರಚಾರಗಳೇ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು. ಸೋಂಕಿನ ವೇಗ ಹಬ್ಬುವುದಕ್ಕೆ ತಾವು ಮಾಡಿದ ತಪ್ಪುಗಳು ಕಾರಣ ಎನ್ನುವ ಮಾತನ್ನು ಸ್ವತಃ ರಾಜಕೀಯ ನಾಯಕರು ಒಪ್ಪಿ ಕೊಂಡಿದ್ದಾರೆ. ಇದೀಗ ಕರ್ನಾಟಕದಲ್ಲಿ ಚುನಾವಣೆ ಆಯೋಗ ಮತ್ತೆ ಉಪಚುನಾವಣೆಯನ್ನು ಘೋಷಿಸಿದೆ. ಆದರೆ ಕಳೆದ ಬಾರಿ ಮಾಡಿದ ತಪ್ಪಿನಿಂದ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಳ್ಳಬೇಕಿದೆ.

ಎರಡು ಕ್ಷೇತ್ರದಲ್ಲಿ ಗೆಲ್ಲುವ ಹುರುಪಿನಲ್ಲಿ, ಸೋಂಕು ಹಬ್ಬಿ ಮೂರನೇ ಅಲೆಗೆ ಆಹ್ವಾನ ಕೊಡಬಾರದು. ಚುನಾವಣೆ ವೇಳೆ ರೂಪಿಸುವ ಕರೋನಾ ಮಾರ್ಗಸೂಚಿ ಯನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮುಂದಾಗಬೇಕು. ಇದರೊಂದಿಗೆ ಸಾಧ್ಯವಾದಷ್ಟು ಡಿಜಿಟಲ್ ವೇದಿಕೆಗಳ ಮೂಲಕ ಪ್ರಚಾರಕ್ಕೆ ಆದ್ಯತೆ ನೀಡಬೇಕು.