Tuesday, 26th November 2024

ಪಂಜಾಬ್‌ ಕಾಂಗ್ರೆಸ್ ಉಸ್ತುವಾರಿಯಾಗಿ ಹರೀಶ್ ಚೌಧರಿ ?

ಚಂಡೀಗಢ: ಪಂಜಾಬ್‌ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯಾಗಿ ರಾಜಸ್ಥಾನದ ಕಂದಾಯ ಸಚಿವ ಹರೀಶ್ ಚೌಧರಿ ಅವರನ್ನು ನೇಮಿಸುವ ಸಾಧ್ಯತೆ ಇದೆ.

ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಜಾಗಕ್ಕೆ ಹರೀಶ್ ಚೌಧರಿ ಅವರನ್ನು ನೇಮಿಸಲಾಗುತ್ತಿದೆ.

ಹರೀಶ್ ಚೌಧರಿ ಅವರನ್ನು ಪಂಜಾಬ್‌ನಲ್ಲಿ ಇತ್ತೀಚೆಗೆ ನಾಯಕತ್ವ ಬದಲಾವಣೆಯ ಸಮಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ವೀಕ್ಷಕರಾಗಿ ನೇಮಕ ಮಾಡಿತ್ತು. ಇದು ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ಮತ್ತು ಚರಣ್‌ಜಿತ್ ಸಿಂಗ್ ಚನ್ನಿಯನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಲು ಕಾರಣವಾಯಿತು.

ಹರೀಶ್ ಚೌಧರಿ ಅವರು ನೂತನ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಹಾಗೂ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನಡುವಿನ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಿದ್ದರು. ಬಳಿಕ ಈ ವಾರದ ಆರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಿಧು ಅಚ್ಚರಿ ಮೂಡಿಸಿದರು.

ಕಾಂಗ್ರೆಸ್ ನಾಯಕ ಹರೀಶ್ ರಾವತ್ ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರ ಜಾತ್ಯಾತೀತ ಬದ್ಧತೆಯನ್ನು ಪ್ರಶ್ನಿಸಿದ ಬೆನ್ನಲ್ಲೇ ಅಮರಿಂದರ್ ಸಿಂಗ್ ತೀಕ್ಷ್ಣ ಪ್ರತಿಕ್ರಿಯೆ ನೀಡಿ, ರಾಜೀನಾಮೆ ನೀಡುವುದಕ್ಕೂ ಮೂರು ವಾರಗಳ ಮುನ್ನ ಸೋನಿಯಾ ಗಾಂಧಿಗೆ ನನ್ನ ರಾಜೀನಾಮೆ ಪತ್ರವನ್ನು ನೀಡಿದ್ದೆ. ಆದರೆ ಅವರು ನನ್ನನ್ನು ಮುಂದುವರೆಯುವಂತೆ ಸೂಚಿಸಿದ್ದರು ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ಅಮರಿಂದರ್ ಸಿಂಗ್ ಬಿಜೆಪಿಯ ಆಹ್ವಾನವನ್ನು ತಿರಸ್ಕರಿಸಬೇಕು ಎಂದು ಹರೀಶ್ ರಾವತ್ ಹೇಳಿದ್ದರು. ಅಷ್ಟೇ ಅಲ್ಲದೇ ಬಿಜೆಪಿ ನಾಯಕರೊಂದಿಗೆ ಅಮರಿಂದರ್ ಸಿಂಗ್ ನಿಕಟವಾಗುತ್ತಿರುವುದನ್ನು ಪ್ರಶ್ನಿಸಿ, ಇದು ಅಮರಿಂದರ್ ಸಿಂಗ್ ಅವರ ಜಾತ್ಯಾತೀತ ಬದ್ಧತೆಯನ್ನು ಪ್ರಶ್ನಿಸುವಂತಿದೆ ಎಂದಿದ್ದರು.