ಸೋಮವಾರ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಿದ್ದೇವೆ. ಪತ್ರಿಕೆ, ಟಿವಿಗಳಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ವರದಿಗಳು, ಕಾರ್ಯಕ್ರಮಗಳು ಕಾಣಿಸಿಕೊಳ್ಳಬೇಕು. ಆದರೆ ದುರದೃಷ್ಟವಶಾತ್ ಬರೀ ಅತ್ಯಾಚಾರ, ಶೋಷಣೆ, ಕೊಲೆ ಕುರಿತ ವರದಿಗಳೇ ಕಾಣಿಸಿಕೊಳ್ಳುತ್ತಿವೆ.
ಮೈಸೂರಿನಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಘಟನೆ ಮಾಸುವ ಮುನ್ನವೇ ಮಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಘಟನೆ ನಡೆದಿದ್ದು ಆತಂಕಕಾರಿ. 2020ರಲ್ಲಿ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯಿದೆಯಲ್ಲಿ ದಾಖಲಾಗಿರುವ ಅಪರಾಧ ಪ್ರಕರಣಗಳ ಪೈಕಿ ಶೇ.99 ಕ್ಕಿಂತ ಹೆಚ್ಚು ಪ್ರಕರಣಗಳು ಹೆಣ್ಣುಮಕ್ಕಳಿಗೆ ಸಂಬಂಧಿಸಿದ್ದಾಗಿದೆ. ವರದಿಯಾದ ಅಪರಾಧಗಳಲ್ಲಿ ಸಂತ್ರಸ್ತರಾದ 28,327 ಮಕ್ಕಳಲ್ಲಿ 28,058 ಬಾಲಕಿಯರಿದ್ದಾರೆ. 12 ರಿಂದ 16 ವರ್ಷದ 10,949 ಹುಡುಗಿಯರು ಮತ್ತು 16 ರಿಂದ 18 ವರ್ಷದೊಳಗಿನ 14,092 ಬಾಲಕಿಯರು ಸಂತ್ರಸ್ತರಾಗಿದ್ದಾರೆ ಎನ್ನಲಾಗಿದೆ.
ಇಡೀ ಪ್ರಪಂಚ ಹೆಣ್ಣು ಮಕ್ಕಳಿಗಿರುವ ಹಕ್ಕುಗಳ ಕುರಿತು ಮಾತನಾಡುತ್ತಿದೆ. ಆದರೆ ವಾಸ್ತವದಲ್ಲಿ ಹೆಣ್ಣು ಮಕ್ಕಳು ಸಮಾಜದ ಅತ್ಯಂತ ದುರ್ಬಲ ವರ್ಗಗಳಲ್ಲಿ ಒಂದಾಗಿ ಬದುಕುತ್ತಿದ್ದಾರೆ. ನಿತ್ಯವೂ ಅವರ ಬದುಕು ಅಸುರಕ್ಷತೆ ಯಲ್ಲಿದೆ. ಸರಕಾರವೂ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಂಥ ಕಠಿಣ ಶಿಕ್ಷೆ ವಿಧಿಸಿದರೂ ಅತ್ಯಾಚಾರ ಪ್ರಕರಣಗಳು ಕಡಿಮೆ ಆಗುತ್ತಿಲ್ಲ ಎಂಬುದು ಭಯ ಹುಟ್ಟಿಸುವಂಥ ವಿಚಾರ. ಹಾಗಾದರೆ ಇದಕ್ಕೆ ಅಂತ್ಯವೆಂಬುದು ಇಲ್ಲವೇ ಎಂಬ ಪ್ರಶ್ನೆ ಹುಟ್ಟುವುದು ಸಹಜ. ಖಂಡಿತ ಇದೆ. ಅತ್ಯಾಚಾರವೆಂಬುದು ಮನುಷ್ಯನ ವಿಕೃತ ಮನಸ್ಸಿನಿಂದಾಗುವ ಘಟನೆ ಎಂಬುದನ್ನು ಅನೇಕ ಅಧ್ಯಯನಗಳು ಹೇಳಿವೆ.
ಮನುಷ್ಯನಲ್ಲಿ ಹುಟ್ಟುವ ಈ ವಿಕೃತ ಮನಸ್ಸನ್ನು ಬದಲಾಯಿಸುವ ಪ್ರಯತ್ನ ಇಂದಿನ ಸಮಾಜದಲ್ಲಿ ಆಗಬೇಕಿದೆ. ಆ ನಿಟ್ಟಿನಲ್ಲಿ ಸಂಘಸಂಸ್ಥೆಗಳು, ಮಠ-ಮಾನ್ಯರು ಗಳು, ಶಿಕ್ಷಣ ಸಂಸ್ಥೆಗಳು ಕಾರ್ಯಪ್ರವ್ರತ್ತರಾಗಬೇಕಿದೆ. ಇನ್ನು ನಮ್ಮ ಪಠ್ಯ ಒಂದು ನೌಕರಿ ಗಿಟ್ಟಿಸಿಕೊಳ್ಳಲು ಏನು ಬೇಕೋ ಅಷ್ಟಕ್ಕೇ ಸಿದ್ಧವಾಗಿದೆಯೇ ವಿನಾ ಮಾನವೀಯ ಮೌಲ್ಯಗಳನ್ನು ಕಲಿಸುವಲ್ಲಿ ವಿ-ಲವಾಗಿದೆ. ಆದ್ದರಿಂದ ಅತ್ಯಾಚಾರ, ಕೊಲೆಗಳು ಕಡಿಮೆ ಆಗಲ್ಲ. ಹೆಣ್ಣಿನ ಮೇಲೆ ಗೌರವ ಬೆಳೆಸಿಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳುವುದರಿಂದ ಇವಕ್ಕೆಲ್ಲ ಕಡಿವಾಣ ಸಾಧ್ಯ.