Thursday, 28th November 2024

2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ನಟ ಶಶಿಕುಮಾರ‍್

ಚಿತ್ರದುರ್ಗ: ಚಳ್ಳಕೆರೆಯ ಕಾಟಪ್ಪನಹಟ್ಟಿ ಪ್ರಕಾಶ್ ನಿವಾಸದಲ್ಲಿ ಮಾತನಾಡಿದ ನಟ ಶಶಿಕುಮಾರ್, “ಜಿಲ್ಲೆಯ ಎಸ್‌ಟಿ ಮೀಸಲು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ” ಎಂದು ಸೋಮವಾರ ಘೋಷಣೆ ಮಾಡಿದರು.

ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಗೆ ಸುಮಾರು ಹದಿನೈದು ತಿಂಗಳು ಬಾಕಿ ಇರುವಾಗಲೇ ಚಿತ್ರದುರ್ಗ ಜಿಲ್ಲೆಯಲ್ಲಿ ಚುನಾವಣೆ ಸಿದ್ಧತೆ ಜೋರಾಗಿದೆ.

ಚುನಾವಣೆಗೆ ಸ್ಪರ್ಧಿಸುವುದು ಖಚಿತ. ಆದರೆ ಕ್ಷೇತ್ರ ಅಂತಿಮವಾಗಿಲ್ಲ. ಶೀಘ್ರವೇ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆಂದು ತಿಳಿಸಲಾಗುವುದು” ಎಂದು ಶಶಿಕುಮಾರ್ ಹೇಳಿದರು.

ಟಿಕೆಟ್ ಸಿಗದ ಕಾರಣ ಹೊಸದುರ್ಗ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ, ಈ ಬಾರಿ ಚುನಾವಣೆಗೆ ಜಿಲ್ಲೆಯ ಎಸ್ಟಿ ಮೀಸಲು ಕ್ಷೇತ್ರದಿಂದಲೇ ನನ್ನ ಸ್ಪರ್ಧೆ” ಎಂದು ಹೇಳಿದರು.

ಮಾಜಿ ಸಂಸದ ಶಶಿಕುಮಾರ್ 1999ರಲ್ಲಿ ನಡೆದ (1999-2004) ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸಂಯುಕ್ತ ಜನತಾ ದಳದ ಬಾಣದ ಗುರುತಿನಿಂದ ಸ್ಪರ್ಧಿಸಿ, ಹಳ್ಳಿ ಹಳ್ಳಿಗಳಲ್ಲಿ ಹಾಡು ಹೇಳಿಕೊಂಡು, ಡ್ಯಾನ್ಸ್ ಮಾಡಿ ಮತದಾರರನ್ನು ರಂಜಿಸಿ ಮತ ಪಡೆದು ಅಮೋಘ ಗೆಲುವನ್ನು ಶಶಿಕುಮಾರ್ ಪಡೆದಿದ್ದರು.

2008ರಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾಜಿ ಸಚಿವ ತಿಪ್ಪೇಸ್ವಾಮಿ ವಿರುದ್ಧ ಕೂದಲೆಳೆ ಅಂತರದಲ್ಲಿ ಸೋಲುಕಂಡಿದ್ದರು. ಆಗಲೂ ಕೂಡ ಕ್ಷೇತ್ರದಲ್ಲಿ ಜನರ ಜೊತೆ ನಿರಂತರ ಸಂಪರ್ಕವನ್ನಾಗಲಿ ಕ್ಷೇತ್ರದ ಜೊತೆಗೆ ಒಡನಾಟ ವನ್ನಾಗಲಿ ಇಟ್ಟುಕೊಳ್ಳಲಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಶಿಕುಮಾರ್ ಜೆಡಿಎಸ್ ಪಕ್ಷ ಸೇರಿದ್ದಾರೆ. ಒಂದು ವೇಳೆ ಚಳ್ಳಕೆರೆ ಮೀಸಲು ಕ್ಷೇತ್ರದಿಂದ ಚುನಾವಣೆಗೆ ನಿಲ್ಲಬೇಕು ಎಂದರೇ ಈಗಾಗಲೇ ಜೆಡಿಎಸ್ ಸಂಭವನೀಯ ಅಭ್ಯರ್ಥಿಯಾಗಿ ರವೀಶ್‌ರನ್ನು ಗುರುತಿಸಲಾಗಿದೆ. ಜಿಲ್ಲೆಯ ಎಸ್‌ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಶಶಿಕುಮಾರ್ ಹೇಳಿದ್ದಾರೆ.