Saturday, 23rd November 2024

ಬೋಧಕರ ಹುದ್ದೆ: ತ್ವರಿತವಾಗಿ ಭರ್ತಿಯಾಗಲಿ

ರಾಜ್ಯದ ಎಲ್ಲ ಕಾಲೇಜು, ವಿಶ್ವ ವಿದ್ಯಾಲಯಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾದರೂ, ವಾಸ್ತವವಾಗಿ ಅನುಷ್ಠಾನ ಮಾಡಬೇಕಾದ ಬೋಧಕರೇ ಅಗತ್ಯ ಸಂಖ್ಯೆಯಲ್ಲಿ ಇಲ್ಲ ಎಂಬುದು ತಲೆತಗ್ಗಿಸುವಂತಹ ಸಂಗತಿ.

ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಶೇ.೫೦ರಷ್ಟು ಬೋಧಕರ ಹುದ್ದೆಗಳು ಖಾಲಿ ಇವೆ ಎಂಬುದನ್ನು ಸರಕಾರವೇ ಇತ್ತೀಚೆಗೆ ತಿಳಿಸಿದೆ. ಪಾಠ ಪ್ರವಚನಗಳ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸುವ ವಿಶ್ವ ವಿದ್ಯಾಲಯಗಳ ಆಧಾರ ಸ್ತಂಭವಾದ ಬೋಧಕರೇ ಇಲ್ಲದ ಮೇಲೆ ಇನ್ನು ವಿಶ್ವವಿದ್ಯಾಲಯಗಳು ಇದ್ದು ಪ್ರಯೋಜನವೇನು?, ಅಲ್ಲಿ ಎಂತಹದ್ದೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದರೂ ಪ್ರಯೋಜನವೇನು? ಖಾಯಂ ಬೋಧಕರನನು ನೇಮಿಸಿಕೊಳ್ಳಲು ಸದ್ಯಕ್ಕೆ ಸಾಧ್ಯವಿಲ್ಲವೆಂದಾದರೂ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಅವರಿಗೆ ಸೂಕ್ತ ತರಬೇತಿ ನೀಡಬೇಕಿದೆ.

ಅಲ್ಲದೆ, ಗೌರವಯುತವಾದ ಸಂಭಾವನೆಯನ್ನೂ ಸಕಾಲದಲ್ಲಿ ನೀಸುವ ಮೂಲಕ ಸೇವಾ ಭದ್ರತೆ ಒದಗಿಸ ಬೇಕಾಗಿದೆ. ಇಲ್ಲವಾದಲ್ಲಿ ಅವರಿಂದ ಗುಣಮಟ್ಟದ ಸೇವೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇವೆಲ್ಲದರ ಪರಿಣಾಮವನ್ನು ನಿಜಕ್ಕೂ ಎದುರಿಸುವವರು ವಿದ್ಯಾರ್ಥಿಗಳು. ಕಾಲೇಜು, ವಿವಿಗಳಲ್ಲಿ ಕಲಿಯಬೇಕಿರುವ ಏನನ್ನೂ ಕಲಿಯದೆ ಸೂಕ್ತ ಉದ್ಯೋಗಗಳು ದೊರಕದೆ ಅವರು ನಿರುದ್ಯೋಗಿಗಳಾಗುತ್ತಿದ್ದಾರೆ. ಸುಧಾರಣೆಗಳು ಶುರು ವಾಗಬೇಕಾದದ್ದು ಮೊದಲು, ವಿಶ್ವ ವಿದ್ಯಾಲಯಗಳ ಬಗ್ಗೆ ಆಳುವ ವರ್ಗದವರ ಮನೋಧೋರಣೆಗಳಿಂದ.

ಶೈಕ್ಷಣಿಕ ಕ್ಷೇತ್ರ ಆದಾಯ ತರದ ವಲಯವೆಂಬ ತಿರಸ್ಕಾರ ಬಿಟ್ಟು ದೇಶದ ಭವಿಷ್ಯ ರೂಪಿಸುವ ಆದ್ಯತಾ ವಲಯವೆಂದು ಪರಿಗಣಿಸಿ, ಬೋಧಕ ಹುದ್ದೆಗಳನ್ನು ತ್ವರಿತವಾಗಿ, ಪಾರದರ್ಶಕ ವ್ಯವಸ್ಥೆಯ ಮೂಲಕ ತುಂಬಬೇಕಾಗಿದೆ. ಅಲ್ಲದೆ, ತರಾತುರಿಯಲ್ಲಿ ಎನ್‌ಇಪಿ ಜಾರಿ ಮಾಡುವುದರಿಂದ ಮುಂದೆ ಆಗಬಹುದಾದ ನಷ್ಟದ ಬಗ್ಗೆಯೂ ಚಿಂತಿಸಬೇಕಿದೆ. ಎನ್‌ಇಪಿ ಬಗ್ಗೆ ಬಹುತೇಕ ಬೋಧಕರಿಗೆ ಇನ್ನೂ ತಿಳಿದಿಲ್ಲ. ಹಾಗಾಗಿ ಎಲ್ಲ ಬೋಧಕರಿಗೂ ತರಬೇತಿ ಶಿಬಿರಗಳನ್ನು
ಆಯೋಜಿಸಿ ಹೊಸ ಶಿಕ್ಷಣ ನೀತಿಗೆ ಅವರನ್ನು ಸಿದ್ಧಗೊಳಿಸಬೇಕಿದೆ. ಆಗ ಮಾತ್ರ ನೂತನ ಶಿಕ್ಷಣ ನೀತಿ ಬಗ್ಗೆ ಭರವಸೆ ಮೂಡಬಲ್ಲದು.