ಮಣ್ಣೆ ಮೋಹನ್
ಯಾರೂ ಊಹಿಸಿದ ರೀತಿಯಲ್ಲಿ, ಎಲ್ಲರಿಗೂ ಆಘಾತ ನೀಡುವಂತೆ ಪುನೀತ್ ರಾಜ್ಕುಮಾರ್ ಅಗಲಿದ್ದಾರೆ. ಯಾರಿಗೇ ಆಗಲಿ, 46 ಸಾಯುವ ವಯಸ್ಸಲ್ಲ. ಅದರಲ್ಲೂ, ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡಿದ್ದ, ತಮ್ಮ ಲವಲವಿಕೆಯಿಂದ ನಾಡಿನ ಯುವಜನತೆಗೆ ಸೂರ್ತಿ ತುಂಬಿದ್ದ ಪುನೀತ್ ರಾಜ್ಕುಮಾರ್, ಇಷ್ಟು ಕಡಿಮೆ ವಯಸ್ಸಿನಲ್ಲಿ ನಮ್ಮಿಂದ ದೂರಾಗುತ್ತಾರೆ ಎಂಬ ವಿಚಾರವನ್ನು ಕಲ್ಪಿಸಲೂ ಆಗದು. ಯಶಸ್ವಿ ಚಲನಚಿತ್ರಗಳ ಮೂಲಕ ಮತ್ತು ಕಿರುತೆರೆಯ ಹಲವು ಕಾರ್ಯಕ್ರಮಗಳ ಮೂಲಕ ಜನರ ಮನಗೆದ್ದ ಇಂತಹ ಇನ್ನೊಬ್ಬ ಕನ್ನಡ ನಟ ಇಲ್ಲ. ಅವರು ಮಾತನಾಡುವ ರೀತಿ, ಜನರ ಮನಸ್ಸನ್ನು ಗೆಲ್ಲುವ ಪರಿ, ಸಮಾಜಕ್ಕೆ ಸೇವೆ ನೀಡುವ ಮನೋಭಾವ ಎಲ್ಲವೂ ಅದ್ಭುತ, ಅನುಕರಣೀಯ. ಪುನೀತ್ ರಾಜ್ಕುಮಾರ್ ಅವರನ್ನು ನಾಡು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಪುನೀತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ನುಡಿ ನಮನ.
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು
ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು
ಕೈಯ ಕೊಟ್ಟು ಓಡಿಹೋದನು ನಮ್ಮ ಶಿವ ….
ಈ ಹಾಡನ್ನು ಕೇಳದ ಕನ್ನಡಿಗರಿಲ್ಲ. ಡಾ.ರಾಜಕುಮಾರ್- ಸರಿತಾ ಅಭಿನಯದ ‘ಚಲಿಸುವ ಮೋಡಗಳು’ ಚಿತ್ರದಲ್ಲಿ, ಬಾಲ ನಟನಾಗಿ ಈ ಹಾಡಿಗೆ ಹೆಜ್ಜೆ ಹಾಕಿದ ಪುನೀತ್ರವರ ಅಭಿನಯ ಎಲ್ಲ ಕನ್ನಡಿಗರ ಮನಭಿತ್ತಿಯಲ್ಲಿ ಈಗಲೂ ಅಚ್ಚೊತ್ತಿದೆ. ಅಂತಹ ಅಪ್ಪಟ ಬಾಲಪ್ರತಿಭೆ ಪುನೀತ್. ಎಲ್ಲಾ ರೀತಿಯ ಪಾತ್ರಗಳಲ್ಲಿ ತನ್ನ ಪರಿಪಕ್ವ ಅಭಿನಯದಿಂದ, ಸಿನಿಮಾ ಗೀತೆಗಳ ಹಿನ್ನೆಲೆ
ಗಾಯನದಿಂದ, ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ನಿರೂಪಣೆಯಿಂದ, ಎಲ್ಲ ಕ್ಕಿಂತ ಹೆಚ್ಚಾಗಿ ಎಲ್ಲರನ್ನೂ ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುವ ನಗುಮೊಗದಿಂದ, ಕನ್ನಡಿಗರ ಮನದಾಳದ ರಾಜಕುಮಾರನಾಗಿ ಬೆಳೆದುಬಂದ ಪರಿ ಅದ್ಭುತವಾದದ್ದು.
1975ರ ಮಾರ್ಚ್ 17ರಂದು ಜನಿಸಿದ ಪುನೀತ್ ತನ್ನ ಐದನೇ ವಯಸ್ಸಿನಲ್ಲಿಯೇ ವಸಂತ ಗೀತ (1980) ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸುತ್ತಾರೆ. ಅದಕ್ಕೂ ಮೊದಲೂ ಪಾಪುವಾಗಿ ಅವರು ತನ್ನ ತಂದೆಯ ಜತೆಯ ಅಥವಾ ವಿಭಿನ್ನ ಸನ್ನಿವೇಶ ದಲ್ಲಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡದ್ದುಂಟು. ಅವರ ಬಾಲ್ಯದ ಹೆಸರು ಲೋಹಿತ್. ವರ್ಷಕ್ಕೊಂದು ಚಿತ್ರದಂತೆ ಭಾಗ್ಯದಾತ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗದಲ್ಲಿ ತಮ್ಮ ಹೆಜ್ಜೆ ಗುರುತು ಗಳನ್ನು ಮೂಡಿಸುತ್ತಾರೆ. ಅವರ ಲೀಲಾಜಾಲವಾದ, ಲವಲವಿಕೆಯ ಅಭಿನಯ ರಾಜ್ ಕುಮಾರ್ರಷ್ಟೇ ಅಭಿಮಾನಿಗಳನ್ನು ಬಾಲ್ಯದಲ್ಲಿಯೇ ಸಂಪಾದಿಸುವಂತೆ ಮಾಡುತ್ತದೆ.
ಬಾಲನಟನಿಗೆ ಪ್ರಶಸ್ತಿ
‘ಬಿಸಿಲೇ ಇರಲಿ, ಮಳೆಯೇ ಬರಲಿ, ಕಾಡಲ್ಲಿ ಮೇಡಲ್ಲಿ ಅಲೆವೆ’ ಎಂಬ ಹಾಡನ್ನು ಇಂಗ್ಲಿಷ್ನಲ್ಲಿ ಹೇಳಿಸಿಕೊಂಡು ಕಲಿಯುವ ಪುನೀತ್ರವರ ‘ಬೆಟ್ಟದ ಹೂವು’ ಚಿತ್ರದ ಅಭಿನಯವಂತೂ ಯಾರೂ ಮರೆಯಲು ಸಾಧ್ಯವಿಲ್ಲ. ಹಾಗಾಗಿಯೇ ಆ ಚಿತ್ರಕ್ಕೆ ಅವರು ಬಾಲನಟನಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆಯುತ್ತಾರೆ. ತಾತ, ಅಪ್ಪಟದಿರಾದಿಯಾಗಿ ಇಡೀ ಕುಟುಂಬವೇ ಕಲಾವಿದರ ಕುಟುಂಬ ವಾದ್ದರಿಂದ ಪುನೀತ್ರವರೆಗೆ ಅಭಿನಯವೆಂಬುದು ರಕ್ತಗತವಾದದ್ದು.
ನೈಜತೆಯೇ ತುಂಬಿದ ಸಹಜ ಅಭಿನಯ ಅವರದ್ದು. ಆ ಅಭಿನಯವೇ ಕನ್ನಡಿಗರ ಮನಸ್ಸಿನಲ್ಲಿ ಅವರಿಗೊಂದು ಶಾಶ್ವತವಾದ ಸ್ಥಾನವನ್ನು ನೀಡಿದೆ. ನಟನೆಯಿರಲಿ, ನೃತ್ಯವಿರಲಿ, ಹೊಡೆದಾಡುವ ಸ್ಟಂಟ್ ದೃಶ್ಯಗಳೇ ಇರಲಿ, ಭಾವನಾತ್ಮಕ ಸನ್ನಿವೇಶವೇ ಇರಲಿ, ತುಂಟಾಟವೇ ಆಗಲಿ – ಎಲ್ಲದರಲ್ಲೂ ಅವರದ್ದು ಪವರ್ ಟಚ್. ಆದ್ದರಿಂದಲೇ ಎ ಬಗೆಯ ಸಿನಿಮಾ ವೀಕ್ಷಕರಿಗೂ ಅವರು ಅಚ್ಚುಮೆಚ್ಚು. ಅವರ ಅಭಿಮಾನಿಗಳಲ್ಲಿ ಎಲ್ಲಾ ಸ್ತರದ ವೀಕ್ಷಕರು, ಜನರು ಇರುವುದು ವಿಶೇಷ, ಅನನ್ಯ. ಪುನೀತ್ ಎಂದರೆ ಬಾಲಕರಿಗೂ ಇಷ್ಟ, ಯುಜನತೆಗೂ ಮೆಚ್ಚುಗೆ, ಮಹಿಳೆಯರ ಕಣ್ಮಣಿ, ಹಿರಿಯರ ಅಚ್ಚುಮೆಚ್ಚು.
ಬಾಲನಟನೆಯಲ್ಲಿ ಮಿಂಚಿದ ನಂತರ, ಸ್ವಲ್ಪ ಸಮಯ ಪುನೀತ್ ಎಲ್ಲರ ಗಮನ ದಿಂದ ದೂರ. ಎಲ್ಲಿ ಹೋದರೆಂದು ಎಲ್ಲರಿಗೂ ಕುತೂಹಲ. ಮುಂದೆ ಬಿರುಗಾಳಿ ಯಂತೆ ಕನ್ನಡ ಚಿತ್ರರಂಗಕ್ಕೆ ಅಪ್ಪಳಿಸಲು ತರಬೇತಿ ಪಡೆಯುತ್ತಿದ್ದಾರೆಂಬ ಗುಸು ಗುಸು ಎಲ್ಲರ ಕುತೂಹಲ ಕೆರಳಸಿತ್ತು. ಅಪ್ಪು ಮಾಡಿದ ಮೋಡಿ 2002 ರಲ್ಲಿ, ತನ್ನ 27ನೇ ವಯಸ್ಸಿನಲ್ಲಿ ‘ಅಪ್ಪು’ ಸಿನಿಮಾದ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ದೊಡ್ಡದಾಗಿ ಪ್ರವೇಶ ಮಾಡಿದ ಪುನೀತ್, ಆ ಒಂದು ಸಂದರ್ಭದಲ್ಲಿ ಕನ್ನಡ ಚಿತ್ರರಂಗ ದಲ್ಲಿ ಒಂದು ಬಿರುಗಾಳಿಯನ್ನೇ ಎಬ್ಬಿಸಿದರು.
ನಮ್ಮ ನೆರೆಯ ತೆಲುಗು, ತಮಿಳು ಚಿತ್ರಗಳಲ್ಲಿ ಹೊಸ ನೀರು ಹರಿಯುತ್ತಿದ್ದ ಕಾಲಘಟ್ಟವದು. ಅದ್ಧೂರಿ ಸೆಟಿಂಗ್ ಮೂಲಕ, ಉನ್ನತ ತಂತ್ರಜ್ಞಾನದ ಬಳಕೆಯಿಂದ ತೆಲುಗು, ತಮಿಳು ಭಾಷೆಯ ಚಿತ್ರಗಳು ಕರ್ನಾಟಕದಲ್ಲೂ ಸುದ್ದಿ ಮಾಡುತ್ತಿದ್ದ ಕಾಲವದು. ಇತರ ಭಾಷೆಗಳ ಚಲನಚಿತ್ರಗಳೆದುರು ಕನ್ನಡ ಭಾಷೆಯ ಚಿತ್ರಗಳು ತುಸು ಪೇಲವವಾಗಿ ಕಾಣುತ್ತಿದ್ದ ದಿನಗಳವು. ನಮ್ಮಲ್ಲೂ
ಇಂತಹ ಚಿತ್ರಗಳು ಬರಬೇಕು, ಬಂದರೆ ಎಷ್ಟು ಚೆಂದ ಎಂದು ಕನ್ನಡಾಭಿಮಾನಿಗಳು ಕೊರಗುತ್ತಿದ್ದ ಕಾಲವದು. ಆಗ
ಬಿರುಗಾಳಿ ಯಂತೆ ಬಂದದ್ದೇ ‘ಅಪ್ಪು’.
ದಿನ ಕಳೆದು ಬೆಳಗಾಗುವಷ್ಟರಲ್ಲಿ ಪುನೀತ್ ಕನ್ನಡಿಗರ ಕಣ್ಮಣಿಯಾಗಿದ್ದರು. ಎಂತಹ ನಾಯಕನಟ ತಮಗೆ ಬೇಕೆಂದು ಕನ್ನಡಿಗರು ಕಾತರದಿಂದ ಕಾಯುತ್ತಿದ್ದರೋ, ಎಂತಹ ಸಿನಿಮಾಗಳು ನಮ್ಮಲ್ಲಿ ಬಂದರೆ ಎಷ್ಟು ಚೆಂದ ಎಂದು ಕನ್ನಡಿಗರು ಆತುರ ಪಡು ತ್ತಿದ್ದರೋ, ಅಂತಹ ಕಾತುರ ಮತ್ತು ಆತುರಕ್ಕೆ ಉತ್ತರವಾಗಿ ಬಂದದ್ದೇ ‘ಅಪ್ಪು’ ಸಿನಿಮಾ. ಅಲ್ಲಿಂದಾಚೆಗೆ ಪುನೀತ್ ಹಿಂತಿರುಗಿ ನೋಡಲೇ ಇಲ್ಲ. ಆನೆ ನಡೆದದ್ದೇ ಹಾದಿ ಎಂಬಂತೆ ಚಿತ್ರರಂಗದ ಅವರ ಪಯಣ ಸಾಗಿತು.
ಅಭಿ, ಆಕಾಶ್, ಅರಸು, ಮಿಲನ, ಜಾಕಿ ಅಣ್ಣಾಬಾಂಡ್, ಪವರ್, ಪೃಥ್ವಿ, ರಾಜಕುಮಾರ ಸಿನಿಮಾಗಳು ಪುನೀತ್ರನ್ನು ಇನ್ನಿಲ್ಲ ದಂತೆ ಜನಪ್ರಿಯಗೊಳಿಸಿ ದವು. ಒಂದಕ್ಕಿಂತ ಒಂದು ಸೂಪರ್ ಹಿಟ್ ಸಿನಿಮಾಗಳು. ಎಲ್ಲವೂ ದಾಖಲೆ ಬರೆದ ಸಿನಿಮಾಗಳೇ. ಆ ಮೂಲಕ ಅಪ್ಪು ಕನ್ನಡಿಗರ ಆರಾಧ್ಯದೈವವಾದರು. ಪವರ್ ಸ್ಟಾರ್ ಪುನೀತ್ ಅವರು ಅಭಿನಯಿಸಿದ ಒಟ್ಟು ಚಿತ್ರಗಳು 49. ಅವುಗಳಲ್ಲಿ ಅವರು ನಾಯಕ ನಟನಾಗಿ ಅಭಿನಯಿಸಿದ ೧೯ ಚಿತ್ರಗಳು ಸೂಪರ್ ಹಿಟ್ ಎನಿಸಿ, ಕನ್ನಡ ನಾಡಿನ ಪ್ರೇಕ್ಷಕರ ಮನ ಸೆಳೆದವು. ಅವರ ಲವಲವಿಕೆಯ ಅಭಿನಯ, ಯುವಶಕ್ತಿ ತುಂಬಿದ ಮಾತುಗಳು ಕನ್ನಡಿಗರ ಮನದಲ್ಲಿ ಅಚ್ಚೊತ್ತಿವೆ.
ಪುನೀತ್ ರಾಜ್ಕುಮಾರ್ ಅವರ ವಿಶೇಷತೆ ಎಂದರೆ, ಕಿರು ತೆರೆಯಲ್ಲಿ ಅವರು ಗಳಿಸಿದ ಜನಪ್ರಿಯತೆ. ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮದಲ್ಲಿ ಅವರು ಆಡುತ್ತಿದ್ದ ಮಾತುಗಳು, ಅಳವಡಿಸಿಕೊಂಡ ಸೊಗಸಾದ ನಿರೂಪಣಾ ಶೈಲಿ ಬಹುಜನರ ಮೆಚ್ಚುಗೆಗೆ ಪಾತ್ರವಾಯಿತು. ಬಹಳ ದೊಡ್ಡ ಮಟ್ಟದಲ್ಲಿ ಅಪ್ಪುವಿಗೆ ಜನಪ್ರಿಯತೆ ತಂದುಕೊಟ್ಟ ಕಿರುತೆರೆಯ ಕಾರ್ಯಕ್ರಮವದು.
ಜನಸಾಮಾನ್ಯರು ಹಾಟ್ ಸೀಟ್ನಲ್ಲಿ ಕುಳಿತಾಗ, ಸ್ಪರ್ಧೆಯ ಕಣಕ್ಕಿಳಿದಾಗ ತುಸು ಬೆವರುವುದು ಸಹಜ. ಅದನ್ನು ತಕ್ಷಣ ಗುರು ತಿಸುವ ಪುನೀತ್ ಅವರು, ಅವರೊಂದಿಗೆ ಸಹಜವಾಗಿ ಮಾತನಾಡಿ, ಆ ಸ್ಪರ್ಧಾಳುವಿನಲ್ಲಿ ಹುದುಗಿದ್ದ ಪ್ರತಿಭೆಯನ್ನು ಹೊರ ತೆಗೆಯುತ್ತಿದ್ದರು. ಜನರ ನಾಡಿಮಿಡಿತವನ್ನು ಗುರುತಿಸಿ, ಅವರು ಯಾವು ಕ್ಷೇತ್ರದಲ್ಲಿ ಹೆಚ್ಚು ಪ್ರತಿಭಾವಂತರು ಎಂಬು ದನ್ನು ಪತ್ತೆ ಹಚ್ಚಿ, ಕಿರುತೆರೆಯಲ್ಲಿ ಸ್ಪರ್ಧಿಗಳು ಧೈರ್ಯದಿಂದ ಮಾತನಾಡುವ ಹಾಗೆ ಮಾಡುತ್ತಿದ್ದರು. ಇದು ಸಣ್ಣ ವಿಚಾರವಲ್ಲ!
ಮೊದಲ ಬಾರಿ ಹಾಟ್ ಸೀಟ್ನಲ್ಲಿ ಕುಳಿತ, ಅದರಲ್ಲೂ ಪುನೀತ್ರಂತಹ ಚಿತ್ರನಟನ ಎದುರು ಕುಳಿತು ಮಾತನಾಡುವ
ಅನಿವಾರ್ಯತೆಗೆ ಸಿಲುಕಿದ ಜನಸಾಮಾನ್ಯರನ್ನು, ತಮ್ಮ ಚಿಪ್ಪಿನಿಂದ ಹೊರ ತರುವ ಕಾರ್ಯ ಮಹಾ ಕೌಶಲದ್ದು. ಅಂತಹ ಕೌಶಲ, ಚತುರತೆ ಪುನೀತ್ ರಲ್ಲಿತ್ತು. ಕೋಟ್ಯಾಧಿಪತಿ ಕಾರ್ಯಕ್ರಮವು ಲವಲವಿಕೆಯಿಂದ ತುಂಬುವಂತೆ ಮಾಡುವ ಕಲೆ ಪುನೀತ್ ಅವರಿಗೆ ಕರಗತವಾಗಿತ್ತು. ಆದ್ದರಿಂದಲೇ ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮ ಮನೆ ಮನೆ ಮಾತಾಯಿತು. ಇಂತಹದ್ದೇ
ಕಾರ್ಯಕ್ರಮವನ್ನು ಹಿಂದಿಯಲ್ಲಿ ನಡೆಸಿಕೊಟ್ಟ ಅಮಿತಾಭ್ ಬಚ್ಚನ್ ಅವರಿಗೆ ಸರಿಸಮನಾಗಿ, ಕೆಲವೊಮ್ಮೆ ಇನ್ನೂ ಮಿಗಿಲಾಗಿ ನಡೆಸಿಕೊಟ್ಟ ಪುನೀತ್ ಅವರು, ಕಿರುತೆರೆಯಲ್ಲಿ ಒಂದು ದಾಖಲೆಯನ್ನೇ ಬರೆದರು.
ಅಪ್ಪುವೆಂದರೆ ಸದಾ ಲವಲವಿಕೆ, ಸದಾ ಹಸನ್ಮುಖಿ. ಜತೆಗೆ ಸಜ್ಜನಿಕೆಯ ಮೂರ್ತಿ. ಎಂದೂ ತಮ್ಮತನವನ್ನು ಕಳೆದುಕೊಳ್ಳದೇ, ಕೊನೆಯವರೆಗೂ ದೊಡ್ಮನೆ ಹುಡುಗನಾಗಿ ದೊಡ್ಡಸ್ತಿಕೆಯಲ್ಲಿ ಮೆರೆದ ಅಪ್ಪು ಇಷ್ಟು ಬೇಗ ನಮ್ಮಿಂದ ದೂರವಾಗಬೇಕೆ? ಇದನ್ನು ಯಾರಾದರೂ ಸಾವು ಎನ್ನುತ್ತಾರೆಯೇ? ಗಿಡುಗವೊಂದು ಹಾರಿಬಂದು ಕ್ಷಣಮಾತ್ರದಿ ಕೋಳಿ ಮರಿಯನ್ನು ಹಾರಿಸಿಕೊಂಡು ಹೋಗುವಂತೆ, ಆ ಕ್ರೂರವಿಧಿ ನಮ್ಮೆಲ್ಲರ ಪ್ರೀತಿಯ ಅಪ್ಪುವನ್ನು ಆರಿಸಿಕೊಂಡು ಹೋಗಿದೆ. ತಾನೆಷ್ಟು ಕ್ರೂರಿ ಎಂದು ಸಾರಿದೆ.
ನಂಬಲಸಾಧ್ಯವಾದ ಆದರೆ ನಂಬಲೇಬೇಕಾದ, ಅರಗಿಸಿಕೊಳ್ಳಲಾಗದ ಆದರೆ ಅರಗಿಸಿಕೊಳ್ಳಲೇಬೇಕಾದ ವಾಸ್ತವ ನಮ್ಮ ಕಣ್ಣ ಮುಂದಿದೆ. ವಿಧಿಯ ಕ್ರೌರ್ಯತೆಗೆ ಅಪ್ಪುವಿನ ಪ್ರಾಣಪಕ್ಷಿ ಹಾರಿಹೋಗಿದೆ. ಅಗಲಿಕೆಯ ನೋವಿಗೆ ನಮ್ಮೆಲ್ಲರ ಪ್ರಾಣ ಕುತ್ತಿಗೆಗೆ ಬಂದು ನಿಂತಿದೆ. ಸಾಧನೆಯ ಅನೇಕ ಶಿಖರಗಳನ್ನು ಏರುವ ಸಮಯದಲ್ಲಿಯೇ ವಿಧಿ ನಿಮ್ಮನ್ನು ಎಳೆದೊಯ್ದದ್ದು ಘೋರ
ದುರಂತ. ಈಗಿನ್ನೂ ಅವರಿಗೆ ೪೬ ವಷವಾಗಿತ್ತು. ಈಗಾಗಲೇ ಅವರು ಜನಪ್ರಿಯ ನಟರಾಗಿ, ತಮ್ಮ ಚಲನಚಿತ್ರಗಳಿಂದ, ಮಾತು ಗಳಿಂದ, ಯುವತನ ತುಂಬಿದ ಅಭಿನಯದಿಂದ ಜನರ ಮನ ಗೆದ್ದಿದ್ದರು. ಮುಂದಿನ ಒಂದೆರಡು ದಶಕಗಳಲ್ಲಿ ಇನ್ನಷ್ಟು ಸಾಧನೆ ಗಳನ್ನು ಅವರು ಮಾಡುವವರಿದ್ದರು. ಅವರ ತಂದೆಯ ಯಶಸ್ಸನ್ನು ಗಮನಿಸಿದರೆ, ಪುನೀತ್ ಅವರಿಂದ ಇನ್ನೂ ಉನ್ನತ ವಾದದ್ದು ಹೊರಬರುವುದರಲ್ಲಿತ್ತು, ಬರಬೇಕಿತ್ತು, ಬರುತ್ತಿತ್ತು.
ಅವರಲ್ಲಿದ್ದ ಕಲಾವಿದನು ತನ್ನ ಅಭಿಯಾನವನ್ನು ಇನ್ನಷ್ಟು ಕಲಾತ್ಮಕವಾಗಿ, ಕೌಶಲದಿಂದ ನಡೆಸಿಕೊಡುವ ಕಾಲ ಮುಂದಿನ ದಶಕಗಳದ್ದಾಗಿತ್ತು. ಅವರ ನಟನೆ ಇನ್ನೂ ಎತ್ತರ ಮಜಲನ್ನು ಏರುವ ಕಾಲವಿದಾಗಿತ್ತು. ಅವರಲ್ಲಿರುವ ಪ್ರತಿಭೆ ಈಗಾಗಲೇ ಸಾಕಷ್ಟು ಪ್ರಕಟಗೊಂಡಿದ್ದರೂ, ಈ ಯಶಸ್ಸಿನ ಹಿನ್ನೆಲೆಯಲ್ಲಿ ಇನ್ನೂ ಉನ್ನತ ಸ್ಥಾನವನ್ನು ಅವರು ಏರುವವರಿದ್ದರು, ಏರು ತ್ತಿದ್ದರು. ಆದರೆ, ವಿಧಿ ಅದೇಕೆ ಅಂತಹ ಸುವರ್ಣಾವಕಾಶವನ್ನು ಅವರಿಂದ ಕಸಿದುಕೊಂಡಿತು!
೪೬ನೆಯ ವಯಸ್ಸಿನ ಈ ಅಪ್ರತಿಮ ಪ್ರತಿಭಾವಂತನನ್ನು ನಾವು ಕಳೆದುಕೊಳ್ಳುವಂತೆ ವಿಧಿ ಆಟವಾಡಿದ್ದಾದರೂ ಏಕೆ? ಇದು ನಿಜಕ್ಕೂ ಕ್ರೂರ, ಅಮಾನವೀಯ, ಕನ್ನಡಿಗರಿಗೆ ತುಂಬಲಾರದ ನಷ್ಟ. ಪುನೀತ್ ಒಮ್ಮೆಗೇ, ದಿಢೀರ್ ಎಂದು ನಮ್ಮಿಂದ ದೂರ ವಾಗಿದ್ದಾರೆ. ಅಪ್ಪು ಇನ್ನುಮುಂದೆ ಧ್ರುವತಾರೆ ಮಾತ್ರ.
ಕೊಡುಗೈ ದಾನಿ
ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದೆಂಬಂತೆ. ಸಮಾಜಸೇವೆ ಯಲ್ಲಿ ನಿರತರಾಗಿದ್ದ ಅಪ್ಪುವಿನ ಕಳಕಳಿ,
ಸಮಾಜದ ಕುರಿತು ಅವರಿಗಿದ್ದ ಗೌರವಕ್ಕೆ ಒಂದು ಸಣ್ಣ ಉದಾಹರಣೆ ಇಲ್ಲಿದೆ. 26 ಅನಾಥಾಶ್ರಮ, 45 ಉಚಿತ ಶಾಲೆ, 16
ವೃದ್ಧಾಶ್ರಮ, 19 ಗೋಶಾಲೆ, 1800 ಮಕ್ಕಳ ಸಂಪೂರ್ಣ ಶಿಕ್ಷಣ ಹಾಗು ಮೈಸೂರಿನಲ್ಲಿ ಶಕ್ತಿಧಾಮ ಹೆಸರಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಕನ್ನಡದ ಏಕೈಕ ನಟ ಪುನೀತ್ ರಾಜುಮಾರ್.
ಇದನ್ನು ಅವರು ಪ್ರಚಾರದ ಸಾಧನವಾಗಿ ಎಂದೂ ಉಪಯೋಗಿಸಿಕೊಂಡಿಲ್ಲ, ಆ ರೀತಿ ಪ್ರಚಾರವನ್ನು ಅವರು ಬಯಸುವವರೂ ಅಲ್ಲ. ಈ ಮಾಹಿತಿಯು ಆಕಸ್ಮಿಕವಾಗಿ ಹೊರಗೆ ಬಂದಿದ್ದು ಅಷ್ಟೆ. ಆದರೆ, ಹೊರಗೆ ಬಾರದ ಇನ್ನಷ್ಟು, ಬಹಳಷ್ಟು ಸೇವಾ ಕೈಂಕರ್ಯದ ವಿಚಾರ ಗುಟ್ಟಾಗಿಯೆ ಉಳಿದಿದೆ. ಅದು ಅವರ ಸೇವೆಯ ಪರಿ.
ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮನವರ ಪ್ರೀತಿಯ ಕಿರಿಯ ಪುತ್ರನಾಗಿ, ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ರವರ ಪ್ರೀತಿಯ ಕಿರಿಯ ಸಹೋದರನಾಗಿ, ಅಶ್ವಿನಿ ರೇವಂತ್ರಿಗೆ ಮೆಚ್ಚಿನ ಪತಿಯಾಗಿ, ದ್ರಿತಿ ಮತ್ತು ವಂದಿತಾರಿಗೆ ಪ್ರೀತಿಯ ಅಪ್ಪನಾಗಿ, ಕನ್ನಡಿಗರಿಗೆ ಪ್ರೀತಿಯ ಮನೆಮಗನಾಗಿ ರೂಪುಗೊಂಡ ಪುನೀತ್ ಇನ್ನು ನೆನಪು ಮಾತ್ರ. ನಮ್ಮ ಜೀವನದ ಹಲವು ನೆನಪುಗಳ ಶಕ್ತಿ ತುಂಬಾ ಕಡಿಮೆ ಎಂದು ಹೇಳುತ್ತಾರೆ. ಆದರೆ ಕೆಲವು ನೆನಪುಗಳ ಶಕ್ತಿ ಅಗಾಧವಾದದ್ದು, ಅನಂತ ವಾದದ್ದು. ಅಂತಹ ಅನಂತ ನೆನಪಿನ ಶಕ್ತಿಯಾಗಿ ಪುನೀತ್ ರಾಜಕುಮಾರ್ ಎಂದೆಂದೂ ನಮ್ಮೆಲ್ಲರೊಂದಿಗೆ ಉಳಿಯುತ್ತಾರೆ-ಪ್ರೀತಿಯ ಮನೆಮಗನಾಗಿ, ಅಪ್ಪುವಾಗಿ. ಈ ಸಾವು ನ್ಯಾಯವೇ ಎನ್ನುತ್ತಲೇ… ಅಪ್ಪು, ನಿಮ್ಮನ್ನು ಅಳುತ್ತಲೇ ಕಳಿಸಿಕೊಡುತ್ತಿದ್ದೇವೆ.