Saturday, 23rd November 2024

ಇತಿಹಾಸದಿಂದ ಆಧುನಿಕ ವಿಜ್ಞಾನದವರೆಗೆ ಕನ್ನಡ

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ 108

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕನ್ನಡದ ಟಂಗ್ ಟ್ವಿಸ್ಟರ್ ಖ್ಯಾತಿಯ ಎಲ್.ಜಿ.ಜ್ಯೋತಿಶ್ವರ್ 

ಬೆಂಗಳೂರು: ಕನ್ನಡ ಎಷ್ಟು ಪ್ರಾಚೀನವೋ ಅಷ್ಟೇ ನೂತನ. ಸೌಹಾರ್ಧ ಸಹಬಾಳ್ವೆಗೆ ಮೆಟ್ಟಿಲುಗಳೇ ಕನ್ನಡವಾಗಿದ್ದು, ಯಾವತ್ತೂ ಅಳಿವಿಲ್ಲದೆಯಯೇ ಉಳಿದುಕೊಳ್ಳುವ, ಅದ್ಭುತ ಪರಂಪರೆ ಸಂಸ್ಕೃತಿಯ, ಸುವಿಚಾರಗಳ ಸೊಗಡಿನ ಶ್ರೇಷ್ಠ ಭಾಷೆ ಕನ್ನಡ ಎಂದು ಕನ್ನಡದ ಟಂಗ್ ಟ್ವಿಸ್ಟರ್ ಖ್ಯಾತಿಯ ಎಲ್.ಜಿ.ಜ್ಯೋತಿಶ್ವರ ಹೇಳಿದರು.

ವಿಶ್ವವಾಣಿ ಕ್ಲಬ್‌ಹೌಸ್ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕವಿರಾಜ ಮಾರ್ಗ ಕನ್ನಡದಲ್ಲಿ ಮೊದಲು ದೊರೆತ ಕೃತಿ. ಅಂದರೆ ಅದಕ್ಕಿಂತಲೂ ಮೊದಲು ಕನ್ನಡ ಸಾಹಿತ್ಯ ತನ್ನ ಪರಂಪರೆಯನ್ನು ಹೊಂದಿತ್ತು ಎನ್ನುವುದಕ್ಕೆ ಇದೊಂದು ಜ್ವಲಂತ ಸಾಕ್ಷಿ. ಆ ಕಾಲದಿಂದಲೂ ಕನ್ನಡ ಸಾಹಿತ್ಯ ತನ್ನ ಹೊಸ ಆವಿಷ್ಕಾರಗಳೊಂದಿಗೆ ಶ್ರೀಮಂತಗೊಳ್ಳುತ್ತಲೇ ಬಂದಿದೆ ಎಂದು ಹೇಳಿದರು.

ಹಲ್ಮಿಡಿಯಿಂದ ಈಗಿನ ವಿಜ್ಞಾನದವರೆಗೆ ಹಳೆಗನ್ನಡ, ಹೊಸಗನ್ನಡ, ದಲಿತ ಸಾಹಿತ್ಯ ಬಂಡಾಯದವರೆಗೆ ಯಾವ ಸಾಹಿತ್ಯವೂ ಕಡಿಮೆ ಅಲ್ಲ, ಪ್ರತಿಯೊಂದು ಸಾಹಿತ್ಯವೂ ತನ್ನ ಅಸ್ಮಿತೆ ಮತ್ತು ತನ್ನ ಗಾಂಭೀರ್ಯದಿಂದ, ಸ್ವಾಭಿಮಾನದಿಂದ ಎದೆತಟ್ಟಿ ತನ್ನನ್ನು ತಾನು ಉಳಿಸಿಕೊಂಡಿದೆ ಎಂದು ಶ್ರೋತೃಗಳಿಗೆ ಸಾಹಿತ್ಯಾತ್ಮಕವಾಗಿ ಹೇಳಿದರು.

ರಾಜ-ರಾಣಿಯರ ಯುದ್ಧದ ಸೋಲು, ಗೆಲುವಿನ ಕಥೆಗಳು ಶತಮಾನಗಳ ಹಿಂದೆಯೇ ಕನ್ನಡದಲ್ಲಿ ಕೆತ್ತಲ್ಪಟ್ಟಿದ್ದು ಇಂದಿಗೂ ಅವುಗಳ ಇತಿಹಾಸವನ್ನು ನಾವು ಓದುತ್ತಿದ್ದೇವೆ. ಕನ್ನಡದ ಅಂದವನ್ನು ಇನ್ನಾವ ಭಾಷೆಯೂ ತಳೆಯುವುದು ಕಷ್ಟ ಸಾಧ್ಯ ಎಂದು ಕನ್ನಡ ಸಾಹಿತ್ಯ ಮತ್ತು ಪರಂಪರೆಯನ್ನು ವರ್ಣನೆ ಮಾಡಿದರು.

ಸರ್ವಜ್ಞನೊಬ್ಬ ಜಾನಪದ ಲೋಕಕ್ಕೆ ಜ್ಞಾನದ ಓಕುಳಿಯಾಗಿ ತನ್ನ ಜ್ಞಾನವನ್ನು ನೀಡಿದ ಮಹಾನ್ ಪುರುಷ. ಅವನ ಕುರಿತು
ಹೇಳುವುದಕ್ಕೂ ಸಾಮರ್ಥ್ಯ ಬೇಕು, ಇಂತಹ ನಾಡಿನಲ್ಲಿ ಹುಟ್ಟಿದ ನಾವು ಧನ್ಯರು ಎಂದು ಸುಂದರವಾಗಿ ಕನ್ನಡ ಸಾಹಿತ್ಯವನ್ನು ಬಣ್ಣಿಸಿದರು.

ಆಧುನಿಕ ಕನ್ನಡ ಸಾಹಿತ್ಯದಲ್ಲಿ ನಾಲ್ಕು ಭಾಗ, ನವೋದಯ, ಪ್ರಗತಿಶೀಲ, ದಲಿತ ಮತ್ತು ಬಂಡಾಯ. 1960ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ-ಕನ್ನಡ ನಿಘಂಟನ್ನು ಬಿಡುಗಡೆಗೊಳಿಸಿದೆ. ಪ್ರತಿ ಕ್ಷೇತ್ರದಲ್ಲೂ ಕನ್ನಡಿಗರ ಸಾಧನೆ ಅಪಾರ. ಸಂಗೀತದಲ್ಲಿ ಭೀಮ್‌ಸೇನ್ ಜೋಷಿ, ಗಂಗೂಬಾಯಿ ಹಾನಗಲ್ ಅಭೂತಪೂರ್ವರು. ದಾಸಸಾಹಿತ್ಯ ಮತ್ತು ವಚನ ಸಾಹಿತ್ಯ ವನ್ನು ಅನುಭವಿಸಿ ಓದಬೇಕು ಮತ್ತು ಕೇಳಬೇಕು. ನಾಲಗೆ ನುಲಿ ನಮ್ಮ ಮಾತುಗಳನ್ನು ಸ್ಪಷ್ಟಗೊಳಿಸುತ್ತದೆ. ಕನ್ನಡದ ಇತಿಹಾಸ ವನ್ನು ನೋಡಿದರೆ, ಕನ್ನಡವೇ ನಮ್ಮ ಬಾಯಿಯಲ್ಲಿ ಹರಿಯುತ್ತದೆ.