Thursday, 12th December 2024

ವಂಚೆನೆಗೆ ಹೊಸದಾರಿ ಕ್ರಿಪ್ಟೊಕರೆನ್ಸಿ

Crypto Currency

ಬಿಟ್‌ಕಾಯಿನ್ ಮತ್ತು ಕ್ರಿಪ್ಟೊಕರೆನ್ಸಿ ಇತ್ತೀಚೆಗೆ ಸದ್ದು ಮಾಡುತ್ತಿರುವ ‘ನಾಣ್ಯ’! ನಮ್ಮ ರಾಜ್ಯದಲ್ಲಿ ರಾಜಕೀಯ ಕಾರಣಗಳಿಗಾಗಿ, ಬಿಟ್‌ಕಾಯಿನ್ ವ್ಯವಹಾರದಲ್ಲಿ ನಡೆದ ಮೋಸವನ್ನು ಚರ್ಚಿಸಲಾಗುತ್ತಿದೆ.

ಮೋಸ ಮಾಡಿದವರಿಂದ ಬಿಟ್‌ಕಾಯಿನ್‌ನ್ನು ‘ಜಪ್ತಿ’ ಮಾಡಿದ್ದರೂ, ಆಪಾದಿತನು ತಣ್ಣಗೆ ಆ ಬಿಟ್‌ಕಾಯಿನ್‌ಗಳನ್ನು ಆನ್ ಲೈನ್ ಮೂಲಕ ವರ್ಗಾವಣೆ ಮಾಡಿ, ಜಪ್ತಿಗೊಂಡ ಬಿಟ್ ಕಾಯಿನ್‌ಗಳು ಅಂತರ್ಧಾನವಾಗುವಂತೆ ಮಾಡಿದ್ದಾನೆ ಎಂದು ವರದಿ ಯಾಗಿದೆ!

ಬಿಟ್‌ಕಾಯಿನ್ ಒಂದು ಡಿಜಿಟಲ್ ಕರೆನ್ಸಿ. ಜತೆಗೆ, ನಮ್ಮ ದೇಶದ ಯಾವುದೇ ಬ್ಯಾಂಕಿನ ವ್ಯಾಪ್ತಿಗೂ ಬಾರದೇ ಇರುವ ಹಣ. ಅಂತರ್ಜಾಲದ ಮೂಲಕ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಗಾವಣೆ ಸಾಧ್ಯವಿರುವ ಕ್ರಿಪ್ಟೊ ಕರೆನ್ಸಿಯನ್ನು, ಅದು ಚಲಿಸಿದ ಹಾದಿಯನ್ನು ಪತ್ತೆ ಹಚ್ಚುವುದು ಕಠಿಣ. ಬಹುಮಟ್ಟಿಗೆ ಅನಾಮಿಕರಾಗಿ ಕ್ರಿಪ್ಟೊಕರೆನ್ಸಿ ಗಳನ್ನು ವರ್ಗಾವಣೆ ಮಾಡುವ ಅವಕಾಶ ಇರುವುದರಿಂದಲೇ, ಇದರಲ್ಲಿ ನಡೆದ ಹಗರಣಗಳನ್ನು ಪತ್ತೆ ಹಚ್ಚಲು, ಆ ಹಣವನ್ನು ವಶಪಡಿಸಿಕೊಳ್ಳಲು ಕಷ್ಟ.

೨೦೨೦ರಲ್ಲಿ ಕ್ರಿಪ್ಟೊಕರೆನ್ಸಿಯಲ್ಲಿ ಜಾಗತಿಕ ಮಟ್ಟದಲ್ಲಿ ನಡೆದ ಮೋಸದ ಮೊತ್ತ ಸುಮಾರು ರೂ.೭೯,೧೯೪ ಕೋಟಿ! ವಿವಿಧ ಕ್ರಿಪ್ಟೊಕರೆನ್ಸಿಗಳು ಚಾಲ್ತಿಯಲ್ಲಿದ್ದರೂ, ಬಿಟ್‌ಕಾಯಿನ್ ಎಂಬ ಕ್ರಿಪ್ಟೊಕರೆನ್ಸಿಯು ಒಟ್ಟೂ ಕ್ರಿಪ್ಟೊಕರೆನ್ಸಿಗಳ ಸುಮಾರು ಶೇ.೫೦
ರಷ್ಟಿದೆ. ಅಮೆರಿಕ ಮತ್ತು ಕೆಲವು ದೇಶಗಳದಲ್ಲಿ ಬಿಟ್‌ಕಾಯಿನ್ ಬಳಸಿ ವಸ್ತುಗಳನ್ನು ಖರೀದಿಸಬಹುದು. ತಂತ್ರಜ್ಞಾನದಲ್ಲಿ
ಮುಂದುವರಿದ ಅಮೆರಿಕದಲ್ಲೂ ಕ್ರಿಪ್ಟೊಕರೆನ್ಸಿ ಮೋಸಗಳು, ವಂಚನೆಗಳು ಬಹಳಷ್ಟು ನಡೆಯುತ್ತಿವೆ.

ಎಫ್ಬಿಐ ಸಂಸ್ಥೆಯು, ಕ್ರಿಪ್ಟೊಕರೆನ್ಸಿಯ ಇಂತಹ ಮೋಸಗಳಿಗೆ ಬಲಿಯಾಗಬೇಡಿ ಎಂಬ ಎಚ್ಚರಿಕೆಯನ್ನೂ ನೀಡಿದೆ. ಅಮೆರಿಕದಲ್ಲಿ ಅತಿ ಹೆಚ್ಚು ಮೋಸ ನಡೆಯುವುದು ಮೂರು ವಿಧಾನಗಳಲ್ಲಿ. (ಇದು ನಮ್ಮ ದೇಶದಲ್ಲೂ ನಿಜವಿರಬಹುದು).

೧. ಸುಳ್ಳು ಹೆಸರಿನಿಂದ : ಮೋಸಗಾರರು ಜನಪ್ರಿಯ ಸಂಸ್ಥೆಯ ಲೋಗೋ ಬಳಸಿ ಸಂದೇಶ ಕಳಿಸಿ, ಅಮಾಯಕರನ್ನು ತಪ್ಪು ದಾರಿಗೆಳೆಯಬಹುದು. ಹೆಸರಾಂತ ಸಂಸ್ಥೆ ಅಥವಾ ಸರಕಾರದ ಇಲಾಖೆಗಳ ಹೆಸರಿನಲ್ಲಿ ಇಮೇಲ್ ಕಳಿಸಿ, ಬಳಕೆದಾರರ ವಿಶ್ವಾಸ ಗಳಿಸಿ, ಹಣ ವರ್ಗಾವಣೆಗೆ ಪ್ರಚೋದಿಸಬಹುದು.

೨. ಮ್ಯಾಟ್ರಿಮೋನಿ ಅಥವಾ ಫೇಸ್‌ಬುಕ್ ಮೂಲಕ ಸಂವಹನ ನಡೆಸಿ, ವಿಶ್ವಾಸ ಗಳಿಸಿ, ನಂತರ ಹಣ ವರ್ಗಾವಣೆಗೆ ಪ್ರಚೋದಿಸು ವಿಕೆ.
೩. ದಾನ ಅಥವಾ ಲಾಟರಿ ಯೋಜನೆ : ಬಹುಮಾನ ಅಥವಾ ಲಾಟರಿ ಹಣ ಬಂದಿದೆ ಎಂಬ ಸಂದೇಶ ಕಳಿಸಿ, ಅದಕ್ಕೆ ತಗಲುವ
ವೆಚ್ಚವನ್ನು ಕ್ರಿಪ್ಟೊಕರೆನ್ಸಿ ಮೂಲಕ ಪಾವತಿಸುವಂತೆ ಪುಸಲಾಯಿಸಿ ಮೋಸ ಮಾಡುವಿಕೆ.

ಹಣಪಾವತಿಯನ್ನು ಕ್ರಿಪ್ಟೊಕರೆನ್ಸಿ ಮೂಲಕ ಮಾಡಿದಾಗ, ತಕ್ಷಣ ಆ ಹಣವು ವಿದೇಶಗಳಿಗೆ ವರ್ಗಾವಣೆ ಆಗುತ್ತದೆ. ಆದ್ದರಿಂದ ಇದನ್ನು ಪೊಲೀಸರು ಪತ್ತೆ ಹಚ್ಚುವುದು ಬಹು ಕಷ್ಟ. ಈಚಿನ ದಿನಗಳಲ್ಲಿ ಕ್ರಿಪ್ಟೊಕರೆನ್ಸಿಯನ್ನು ವಂಚನೆಗಳಿಗೆ ಹೆಚ್ಚು ಹೆಚ್ಚು ಬಳಸಲಾಗುತ್ತಿದೆ. ಇದರಲ್ಲಿ ವಿಶೇಷ ಎಂದರೆ, ಹ್ಯಾಕರುಗಳು, ತಂತ್ರಜ್ಞಾನದಲ್ಲಿ ಹೆಚ್ಚಿನ ಕೌಶಲ್ಯ ಇರುವವರು ಇಂತಹ ವಂಚನೆಗಳನ್ನು ಎಸಗುತ್ತಾರೆ. ಆದ್ದರಿಂದಲೇ, ಜಗತ್ತಿನ ಹೆಚ್ಚಿನ ದೇಶಗಳು ಕ್ರಿಪ್ಟೊಕರೆನ್ಸಿ ವ್ಯವಹಾರವನ್ನು ಮಾನ್ಯ ಮಾಡುತ್ತಿಲ್ಲ ಮತ್ತು ಚೀನಾ ದಂತಹ ದೇಶಗಳು ಸಂಪೂರ್ಣ ನಿಷೇಧಿಸಿದ್ದಾರೆ. ನಮ್ಮ ದೇಶದಲ್ಲಿ, ಕ್ರಿಪ್ಟೊಕರೆನ್ಸಿ ವ್ಯವಹಾರಕ್ಕೆ ಸಂಪೂರ್ಣ  ನಿಷೇಧವಿಲ್ಲದಿದ್ದರೂ, ಆ ಕುರಿತು ಸ್ಪಷ್ಟ ಕಾನೂನು ಮತ್ತು ನಿಯಮಗಳು ಇನ್ನೂ ರೂಪುಗೊಂಡಿಲ್ಲ.