Saturday, 14th December 2024

ಹೆಸರು ಬದಲಾದರೆ ಸಾಲದು, ಅಭಿವೃದ್ದಿಗೆ ವೇಗ ನೀಡಲಿ

ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದಂತೆ, ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ನಾಮಕರಣ ಮಾಡಿರುವುದು ಸ್ವಾಗತಾರ್ಹ. ಕರ್ನಾಟಕದ ಏಕೀಕರಣಕ್ಕೂ ಮೊದಲು ಮುಂಬೈ ಕರ್ನಾಟಕದ ಭಾಗವಾಗಿದ್ದ ಪ್ರದೇಶಗಳು ಏಕೀಕರಣದ ನಂತರ ವೂ ಮುಂಬೈ ಕರ್ನಾಟಕ ಎಂದು ಕರೆಯುತ್ತಿದ್ದುದ್ದು ಪರಕೀಯ ಭಾವ ಸೃಷ್ಟಿಸುತ್ತಿತ್ತು.

ಅದರಲ್ಲೂ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯ ಫಲಿತಾಂಶ ಹಾಗೂ ಪ್ರಾದೇಶಿಕ ಅಸಮಾನತೆಯ ವಿಷಯದ ಸಂದರ್ಭ ಗಳಲ್ಲಿ ಮಾಧ್ಯಮಗಳಲ್ಲಿ ಮುಂಬೈ ಕರ್ನಾಟಕ ಮುಂಬೈ ಕರ್ನಾಟಕ ಎಂದು ಒತ್ತಿ ಒತ್ತಿ ಹೇಳುತ್ತಿದ್ದದ್ದು ಎಂಥವರಿಗೂ ಬೇಸರವಾಗುತ್ತಿತ್ತು. ಇನ್ಮುಂದೆ ಆ ಬೇಸರ ದೂರವಾದಂತಾಗಿದೆ. ಆದರೆ ಈ ಹೆಸರಿ ನಷ್ಟೇ ಬೇಸರ ಹುಟ್ಟಿಸುವ ಅನೇಕ ಸಂಗತಿಗಳು ಆ ಭಾಗದಲ್ಲಿ ಇವೆ.

ಕಿತ್ತೂರು ಕರ್ನಾಟಕ ಭಾಗದ ಗಡಿಯುದ್ದಕ್ಕೂ ಗುಣಮಟ್ಟದ ಕನ್ನಡ ಶಾಲೆಗಳನ್ನು ಸ್ಥಾಪಿಸುವ ಮೂಲಕ ಕನ್ನಡ ಬಳಸಿ, ಬೆಳೆಸಲು ಪೂರಕ ವಾತಾವರಣ ನಿರ್ಮಿಸುವ ಮೂಲಕ ಮರಾಠಿಗರ ಹಾವಳಿ ತಪ್ಪಿಸಬೇಕಿದೆ.

ಕಿತ್ತೂರು ಕರ್ನಾಟಕ ಪ್ರದೇಶವು ಸರಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳನ್ನು ಹಳೇ ಮೈಸೂರು ಪ್ರಾಂತ್ಯದ ರೀತಿ ಹೊಂದಿಲ್ಲ. ಸರಕಾರದ ಅನುದಾನವೂ ಸಮರ್ಪಕವಾಗಿ ಹಾಗೂ ಪೂರ್ಣಪ್ರಮಾಣದಲ್ಲಿ ವಿನಿಯೋಗವಾಗದೇ ಅಭಿವೃದ್ಧಿ ಕಾರ್ಯಗಳು ಅರ್ಧಕ್ಕೇ ನಿಂತಿವೆ. ಈ ಹಿನ್ನೆಲೆಯಲ್ಲಿ ಕಿತ್ತೂರು ಕರ್ನಾಟಕದ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರಕಾರ ಇನ್ನಷ್ಟು ವೇಗ ನೀಡ ಬೇಕಾಗಿದೆ. ಈ ಪ್ರದೇಶದ ಐತಿಹಾಸಿಕ, ಸಾಮಾಜಿಕ, ಧಾರ್ಮಿಕ ದಾಖಲೆಗಳನ್ನು ನಾಡಿಗೆ ಪ್ರಚುರಪಡಿಸಬೇಕಾಗಿದೆ.

ಇವು ಸಾಧ್ಯವಾದರೆ ಮುಂಬೈ ಕರ್ನಾಟಕ ಪ್ರದೇಶವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಿದ್ದು ಸಾರ್ಥಕವಾಗುತ್ತದೆ.