ಮದ್ಯ, ಮೊಬೈಲ್, ಮಾದಕ ವಸ್ತುಗಳ ವಿಶೇಷ ಸೌಲಭ್ಯ
ಐಷಾರಾಮಿ, ಕಾಂಚಾಣದ ಜತೆ ಡಿಐಜಿ ಕುಣಿತ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ರಾಜ್ಯಾದ್ಯಂತ ಬಿಟ್ ಕಾಯಿನ್ ಸದ್ದು ಮಾಡುತ್ತಿರವಾಗಲೇ ಇತ್ತ ಬೆಂಗಳೂರಿ ನಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಸ್ಟಾರ್ ಸೌಲಭ್ಯ ಒದಗಿಸುವ ಅಕ್ರಮಗಳ ಕಮಟು ವಾಸನೆ ಶುರುವಾಗಿದೆ.
ಇದು ರಾಜ್ಯ ಗೃಹ ಸಚಿವರ ಒಳ್ಳೇತನದ ದುರ್ಬಳಕೆಯೋ ಅಥವಾ ಅಧಿಕಾರಿ ಗಳ ಬುದ್ಧಿವಂತಿಕೆಯೋ? ಕೇಂದ್ರ ಕಾರಾಗೃಹ ಮತ್ತೆ ಕರ್ಮಕಾಂಡಗಳ ಕೇಂದ್ರವಾಗಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಜೈಲುಗಳ ಅಕ್ರಮ ಬಯಲಿಗೆಳೆದಿದ್ದ ಬಳಿಕ ನಿಂತಿದ್ದ ಗುಂಡು, ತುಂಡು, ಮೊಬೈಲ, ಕಾಂಚಾಣ ಮತ್ತು ಮಾದಕ ವಸ್ತುಗಳು ಸೇರಿ ದಂತೆ ನಾನಾ ರೀತಿಯ ಐಷಾರಾಮಿ ವಸ್ತು ಗಳ ಅಕ್ರಮ ಪೂರೈಕೆ ಮತ್ತೆ ಆರಂಭವಾಗಿರುವುದು ಬೆಳಕಿಗೆ ಬಂದಿದೆ.
ಅದರಲ್ಲೂ ದಕ್ಷಿಣ ವಲಯಗಳ ಕಾರಾಗೃಹಗಳ ಮುಖ್ಯ ಉಸ್ತುವಾರಿ ಹೊತ್ತ ಉಪ ಮಹಾನಿರೀಕ್ಷಕ (ಡಿಐಜಿ) ಟಿ.ಪಿ.ಶೇಷ ಅವರು ಕಾಂಚಾಣದ ಜತೆ ಹೆಜ್ಜೆ ಹಾಕಿ ಅನೇಕ ‘ವಿಶೇಷ ಸೌಲಭ್ಯ’ ಗಳ ಹೊಸ ಬದಲಾವಣೆಗೆ ನಾಂದಿ ಹಾಡಿದ್ದಾರೆ ಎಂದು ಕಾರಾಗೃಹ ಮೂಲಗಳೇ ಹೇಳಿವೆ. ಅಷ್ಟೇ ಅಲ್ಲದೆ ಇವರು ಕೈದಿಗಳ ಎಲ್ಲ ‘ಬೇಡಿಕೆ’ಗಳ ಈಡೇರಿಸುವ ಹೊಣೆಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ . ಹೀಗಾಗಿ ಇವರು ಕಳೆದ ಮೂರೂವರೆ ವರ್ಷಗಳಿಂದ ಯಾವುದೇ ಅಡೆತಡೆ ಇಲ್ಲದೆ ಮುಂದುವರಿಯು ತ್ತಿದ್ದಾರೆ ಎಂದೂ ತಿಳಿದುಬಂದಿದೆ.
ನಿಯಮದ ಪ್ರಕಾರ ಜೈಲಿನಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶವಿದೆ. ಅದಕ್ಕಾಗಿ ಅಂಗಡಿ, ಕ್ಯಾಂಟೀನ್ ಮತ್ತು ಬೇಕರಿ ಗಳಿವೆ. ಆದರೆ ಈ ಅಂಗಡಿ ಮತ್ತು ಕ್ಯಾಂಟೀನ್ಗಳು ಈಗ ಹೊರ ಜಗತ್ತಿನಲ್ಲಿ ಸಿಗುವ ಎಲ್ಲ ಐಷಾರಾಮಿ ವಸ್ತುಗಳನ್ನೂ ಅಕ್ರಮ ವಾಗಿ ಪೂರೈಸುವ ಕೇಂದ್ರಗಳಾಗಿವೆ. ಹೀಗಾಗಿ ಜೈಲಲ್ಲಿ ಮೊಬೈಲ, ಮದ್ಯ ಸೇರಿ ಅನೇಕ ನಿಷೇಧಿತ ವಸ್ತುಗಳು ಸುಲಭವಾಗಿ ಸಿಗುತ್ತಿವೆ. ಇವುಗಳನ್ನು ಪೂರೈಸಲು ಏಜೆಂಟ್ ಮಾದರಿ ಕೈದಿಗಳೇ ಅನೇಕರಿದ್ದಾರೆ. ಇವರ ಬೆನ್ನಿಗೆ ಎಸ್ಪಿಗೆ ಸಮಾನ ಅಧಿಕಾರಿಗಳು ನಿಂತಿದ್ದು, ಸೌಲಭ್ಯ ಪೂರೈಕೆ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿ ಕೊಳ್ಳುತ್ತಾರೆ ಎಂದು ಹೇಳಲಾಗಿದೆ.
ಅಂದಮಾತ್ರಕ್ಕೆ ಈ ಎಲ್ಲ ಐಷಾರಾಮಿ ಸೇವೆಗಳು ಶ್ರೀಮಂತ ಕೈದಿಗಳಲ್ಲದೆ ಮತ್ಯಾರಿಗೂ ಸಿಗುವುದಿಲ್ಲ. ಇಲ್ಲಿ ಕೈದಿಗಳು ಅಧಿಕಾರಿಗಳ ಕೈಗಳನ್ನು ಹೇಗೆ ಬೆಚ್ಚಗೆ ಮಾಡುತ್ತಾರೆ ಎನ್ನುವುದರ ಮೇಲೆ ಸೌಲಭ್ಯಗಳ ಲಭ್ಯತೆ ನಿರ್ಧಾರವಾಗುತ್ತವೆ. ಹೀಗಾಗಿ ಇಲ್ಲಿ ಅನ್ನದಿಂದ ಔಷಧಿ ವರೆಗಿನ ಸೌಲಭ್ಯಗಳನ್ನು ಸಾಮಾನ್ಯ ಕೈದಿಗಳು ತಮ್ಮ ಕಿಸಿಗೆ ಪದೇಪದೇ ಕೈ ಹಾಕಲೇ ಬೇಕಿದೆ. ಬೇಸರದ ಸಂಗತಿ ಎಂದರೆ, ಇಲ್ಲಿ ಕಾಸಿಲ್ಲದ ಕೈದಿಗಳಿಗೆ ಶೌಚಾಲಯ ಸೇವೆಯಾದರೆ, ಕೈ ಬೆಚ್ಚಗೆ ಮಾಡುವ ಕೈದಿಗಳಿಗೆ ಭಕ್ಷ್ಯ ಭೋಜನ, ಸುಖನಿದ್ರೆ ಸೇವೆ ಲಭ್ಯವಿದೆ ಎಂದು ಸಿಬ್ಬಂದಿಯೇ ಹೇಳುತ್ತಿದ್ದಾರೆ.
ಇದರೊಂದಿಗೆ ಅಪರಾಧಿಗಳನ್ನು ದಂಡಿಸಿ ಮನಪರಿವರ್ತನೆಗೆ ಪ್ರೇರಣೆಯಾಗದ ಕಾರಾಗೃಹ ಇದೀಗ ಶ್ರೀಮಂತ ಕೈದಿಗಳ ಐಷಾರಾಮಿ ಬದುಕಿನ ತಾಣವಾಗಿದೆ. ಆದರೆ ಬಂಧೀಖಾನೆ ಖಾತೆ ಹೊತ್ತಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಈ ಅಕ್ರಮಗಳ ಅಸಲಿ ಸತ್ಯ ತಿಳಿಯದೆ ಜೈಲುಗಳ ಸುಧಾರಣೆಗೆ ಕೈ ಹಾಕಿದ್ದಾರೆ. ಅಷ್ಟೇ ಅಲ್ಲ. ಜೈಲುಗಳಲ್ಲಿ ಅಽಕಾರಿಗಳು ಮತ್ತು ಕೈದಿಗಳ ಸೌಲಭ್ಯ ಹೆಚ್ಚಿಸಲು ಹೊಸ ವಿಧೇಯಕವನ್ನೇ ಮಂಡಿಸಿದ್ದಾರೆ.