Saturday, 23rd November 2024

ನಾಟಿ ಔಷಧದಿಂದ ಸಂಧಿವಾತ ನಿವಾರಣೆ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಾಟಿ ವೈದ್ಯ ಕೆ.ಜಿ.ರಾಘವೇಂದ್ರ ಅವರಿಂದ ಅರಿವಿನ ಉಪನ್ಯಾಸ

ಬೆಂಗಳೂರು: ಸಂಧಿವಾತ ಕಾಯಿಲೆ ಬರದಂತೆ ತಡೆಯಲು ನಮ್ಮ ಆಹಾರ ಪದ್ಧತಿ ಬದಲಾವಣೆಯಾಗಬೇಕು. ರಾಗಿ, ಬದನೆಕಾಯಿ, ಆಲೂಗಡ್ಡೆ, ಹಸಿ ಮೆಣಸಿಕಾಯಿ ತಿನ್ನು ವುದು ಕಡಿಮೆ ಮಾಡಬೇಕು.

40 ವರ್ಷದ ನಂತರ ಆತ್ಮಸ್ಥೈರ್ಯ ಹಾಗೂ ಶಕ್ತಿ ಕುಗ್ಗಿದಾಗ ಸಂಧಿವಾತ ಕಾಯಿಲೆ ಬರುತ್ತದೆ. ನಾಟಿ ಔಷಧದಿಂದ ಸಂಧಿವಾತ ರೋಗ ಸಂಪೂರ್ಣವಾಗಿ ಗುಣಪಡಿಸಬಹು ದಾಗಿದೆ ಎಂದು ನಾಟಿ ವೈದ್ಯ ಕೆ.ಜಿ.ರಾಘವೇಂದ್ರ ತಿಳಿಸಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸಂಧಿವಾತ ಕುರಿತು ಅರಿವಿನ ಉಪನ್ಯಾಸ ನೀಡಿದ ಅವರು, ನಮ್ಮ ಆಹಾರ ಪದ್ಧತಿಯಿಂದ ಸಂಧಿ ವಾತ ಕಾಯಿಲೆ ಬರುತ್ತದೆ. ಸಂಧಿವಾತ ಎಂಬುದು 45-50 ವರ್ಷಕ್ಕೆ ಮಹಿಳೆಯರನ್ನು ಹೆಚ್ಚು ಕಾಡುತ್ತದೆ. ಬಾಣಂತನ, ಮಕ್ಕಳ ಹೆರಿಗೆ ವೇಳೆ ಆರೈಕೆಯಲ್ಲಿ ಸಮಸ್ಯೆಗಳಿಂದ ಈ ಸಮಸ್ಯೆ ಬರುತ್ತದೆ. ಮಕ್ಕಳಿಗೆ ಎದೆಹಾಲು ಕುಡಿಸದಿ ದ್ದಾಗ ಮಕ್ಕಳಲ್ಲಿ ದೃಷ್ಟಿ ಸಮಸ್ಯೆ ಕಾಡುತ್ತದೆ.

ಮುಟ್ಟು ನಿಂತ ಮೇಲೆ ಸಂಧಿವಾತ ಸಮಸ್ಯೆಗೆ ನಾಟಿ ಔಷಧ ಕೊಡಲಾಗುತ್ತದೆ. ಕರಾವಳಿ ಭಾಗದಲ್ಲಿ ಹೆಚ್ಚಾಗಿ ಸಂಧಿವಾತ ಸಮಸ್ಯೆ ಕಾಡುತ್ತದೆ ಎಂದು ಅವರು ಮಾಹಿತಿ ನೀಡಿದರು. ಸಂಧಿವಾತದಲ್ಲಿ ಮೂಳೆ ಸವೆತ ಕಾಣಬಹುದಾಗಿದೆ. ಇದಕ್ಕೆ ಮೂರು ತಿಂಗಳು ನಾಟಿ ಔಷಧ ತೆಗೆದುಕೊಳ್ಳಬೇಕು. ಒಂದೆರೆಡು ವಾರದಲ್ಲಿ ಶೇ.100ರಲ್ಲಿ 70 ರಷ್ಟು ಜನಕ್ಕೆ ಸಮಸ್ಯೆ ಬಹುತೇಕ ಬಗೆಹರಿಯುತ್ತದೆ. ಆದರೆ, ತುಂಬಾ ತಂಪಿರುವ ದೇಹಕ್ಕೆ ನಾಟಿ ಔಷಧ ಬೇಗ ಹೊಂದಾಣಿಕೆ ಯಾಗುವುದಿಲ್ಲ ಎಂದ ಅವರು. ನಾವು ಹೇಳುವ ವಿಧಾನ ದಂತೆ ಔಷಧ ಬಳಸಬೇಕು ಎಂದು ಕಿವಿಮಾತು ಹೇಳಿದರು.

ಧೂಮಪಾನವೂ ಕಾರಣ: ಸಂಧಿವಾತಕ್ಕೆ ಧೂಮಪಾನ ಒಂದು ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ನಿತ್ಯ ವ್ಯಾಯಾಮ, ನಡೆಯುವುದು, ದೇಹದ ತೂಕ ಇಳಿಸಿಕೊಳ್ಳುವುದರಿಂದ ಸಂಧಿವಾತದ ನೋವು ಕಡಿಮೆ ಮಾಡಿಕೊಳ್ಳಬಹುದು
ಎಂದು ಹೇಳಿದರು.

ಸಂಧಿವಾತ ಎಂಬ ಪದವನ್ನು ದೇಹದ ಕೀಲು ಅಥವಾ ಸಂದುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ರೋಗಗಳನ್ನು ಹೆಸರಿಸಲು ಉಪಯೋಗಿಸಲಾಗುತ್ತದೆ. ಸಂಧಿವಾತದಲ್ಲಿ ಸಾಮಾನ್ಯವಾಗಿ ಎರಡು ರೀತಿ ಕಂಡುಬರುತ್ತದೆ. ಒಂದು ಕೀಲುಗಳಲ್ಲಿ ಮೂಳೆಗಳು ಕ್ಷೀಣಗೊಳ್ಳುವ ಸಂಧಿವಾತ, ಇನ್ನೊಂದು ಕೀಲುಗಳಲ್ಲಿ ಊರಿಯೂತ. ಸಹಜವಾಗಿ ಬಾಗಲು, ಕುಳಿತುಕೊಳ್ಳಲು ಕಷ್ಟವಾಗುವಂತಹ ಅಸಹಜ ಸ್ಥಿತಿ ಕಾಣಿಸಿಕೊಳ್ಳುತ್ತದೆ. ಆರಂಭದಿಂದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯದಿದ್ದರೆ ಕೈ, ಪಾದ, ಮಣಿಕಟ್ಟು, ಭುಜಗಳು, ಮೊಣಕಾಲು ಮತ್ತು ಪಾದದ ಸಣ್ಣಕೀಲುಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೆನ್ನೆಲುಬಿಗೆ ತೊಂದರೆ ಯಾಗುವ ಸಾಧ್ಯತೆಯೂ ಇದೆ ಎಂದರು.

ನಾವು ಬಳಸುವ ಔಷಧ ವಿಶಿಷ್ಟ
ಸಂಧಿವಾತದ ಔಷಧಕ್ಕೆ ನಾಲ್ಕು ಜಾತಿಯ ಸೊಪ್ಪು ಬಳಸುತ್ತೇವೆ. ಸೊಪ್ಪುಗಳನ್ನು ಪೌಡರ್ ಮಾಡಿ ಎಣ್ಣೆಯಲ್ಲಿ ಹಾಕಿ ಔಷಧ ತಯಾರಿಸಲಾಗುತ್ತದೆ. ನಾಟಿ ಔಷಧ ಪದ್ಧತಿ ಯಲ್ಲಿ ಔಷಧದ ಹೆಸರು ಹೇಳುವುದಿಲ್ಲ. ದೇವರಿಗೆ ಪೂಜೆ ಮಾಡುವ ವಸ್ತು ಅದರಲ್ಲಿ ಬಳಕೆ ಮಾಡುತ್ತೇವೆ. ನಾಟಿ ಔಷಧ ತೆಗೆದುಕೊಳ್ಳುವವರಿಗೆ ತಾಳ್ಮೆ ಇರಬೇಕು. ಅವರ ದೇಹದ ಹೊಂದಾಣಿಕೆ ಆಧಾರದ ಮೇಲೆ ನಾಟಿ ಔಷಧ ಕಾರ್ಯನಿರ್ವಹಿಸುತ್ತದೆ. ಮಂಡಿ ನೋವು, ಮಂಡಿ ಊತ ಕಾಯಿಲೆಗಳು ಇರುವವರು ರಾಗಿಯಿಂದ ತಯಾರಿಸುವ ಆಹಾರ ತಿನ್ನಬಾರದು ಎಂದು ನಾಟಿ ವೈದ್ಯ ಕೆ.ಜಿ. ರಾಘವೇಂದ್ರ ಹೇಳಿದರು.

***

ಎಲ್ಲ ನೋವುಗಳು ಮನುಷ್ಯನಿಗೆ ಕಷ್ಟ ಕೊಡುತ್ತವೆ. ಅದರಲ್ಲೂ ಹಲ್ಲು ಮತ್ತು ಹೆರಿಗೆ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು. ಸಂಧಿವಾತ ಎಂಬುದು ಜೀವನ ಇರುವ ತನಕ ಕಾಡುತ್ತಿರುತ್ತದೆ. ಕೆ.ಜಿ.ರಾಘವೇಂದ್ರ ಅವರು ಸಾಕಷ್ಟು ಮಂದಿಯಲ್ಲಿ ಸಂಧಿವಾತ ಸಮಸ್ಯೆ ಗುಣಪಡಿಸಿದ್ದಾರೆ. ಮೂಳೆ ಮುರಿತ ಹಾಗೂ ಸಂಧಿವಾತ ಸಮಸ್ಯೆ ಇರುವವರಿಗೆ ಕಳೆದ 20 ವರ್ಷಗಳಿಂದ ಔಷಧ ಕೊಡುತ್ತಿದ್ದಾರೆ. ತಮಿಳುನಾಡು ಆಂಧ್ರಪ್ರದೇಶ, ಕೇರಳದವರು ಇವರ ಬಳಿ ಚಿಕಿತ್ಸೆ ಪಡೆಯುತ್ತಾರೆ.

-ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು