Monday, 6th January 2025

ಹಣದಿಂದ ಮಾನವೀಯ ಮೌಲ್ಯಗಳು ಕುಸಿತ

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ – 133

ಬೆಂಗಳೂರು : ಇಂದು ಮಾನವೀಯ ಮೌಲ್ಯಗಳು ಉಳಿದಿವೆಯಾದರೂ ಅದು ವ್ಯಾಪಾರೀಕರಣವಾಗಿದೆ. ಜನ ಹಣಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಮೌಲ್ಯಗಳಿಗೆ ನಂತರದ ಸ್ಥಾನವಿದೆ. ಹಣದಿಂದ ಮಾನವೀಯ ಮೌಲ್ಯಗಳು ಕುಸಿದಿವೆ. ಹಿಂದಿನ ಕಾಲದ
ಮಾನವೀಯ ಮೌಲ್ಯಗಳು ಪಾಲನೆಯಾಗುತ್ತಿಲ್ಲ ಎಂದು ಅಡ್ವರ್ಟೈಸಿಂಗ್ ಫಿಲಂ ಮೇಕರ್ ಎಚ್.ಕೆ. ವಿವೇಕಾನಂದ ಅಭಿಪ್ರಾಯ
ಪಟ್ಟಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮಂಗಳವಾರ ಮಾತನಾಡಿದ ಅವರು, ಮಾನವೀಯ ಮೌಲ್ಯಗಳ ಜಾಗೃತಿಗೆ ಜ್ಞಾನಭಿಕ್ಷಾ ಪಾದ ಯಾತ್ರೆ ನಡೆಸುತ್ತಿದ್ದೇನೆ. ರಾಜ್ಯಾದ್ಯಂತ ಈಗಾಗಲೇ ಪಾದಯಾತ್ರೆ ನಡೆಸಲಾಗುತ್ತಿದ್ದು, 11 ಜಿಲ್ಲೆಗಳ ಪ್ರವಾಸ ಮುಗಿದಿದೆ. ಉಳಿದ 21 ಜಿಲ್ಲೆಗಳು 45 ದಿನದಲ್ಲಿ ಮುಕ್ತಾಯಗೊಳ್ಳಲಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಯಲ್ಲಿ ಯಾತ್ರೆ ಕೊನೆಗೊಳ್ಳಲಿದೆ ಎಂದರು.

2020ರ ನವೆಂಬರ್ 1ರಂದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವನಮಾರ್ಪಳ್ಳಿ ಯಿಂದ ಪ್ರಾರಂಭವಾದ ಜ್ಞಾನ ಭಿಕ್ಷಾ ಪಾದಯಾತ್ರೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿಗೆ ತಲುಪಿದ ಹಾದಿ ಒಂದು ರೋಚಕ ಅನುಭವ. ಯಾರಿಂದಲೂ ಹಣ ಪಡೆಯದೆ, ಯಾವುದೇ ಸ್ವಂತ ಹಣ ಖರ್ಚು ಮಾಡದೆ, ವಾಹನ ಉಪಯೋಗಿಸದೆ, ನಿಜ ಮನುಷ್ಯರ ಹುಡುಕಾಟದ ಈ ಜ್ಞಾನ ಭಿಕ್ಷಾ ಪಾದಯಾತ್ರೆ ಕೇವಲ ಓದುಗ ಗೆಳೆಯರ ಸಹಕಾರದಿಂದ ಮಾನವೀಯ ಮೌಲ್ಯಗಳ ಪುನರುತ್ಥಾನದ ಬಗ್ಗೆ ಒಂದು ಸಣ್ಣ ಮಟ್ಟದ ಚರ್ಚೆ ಹುಟ್ಟು ಹಾಕುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆ.

ನಾನು ಕುಸಿದು ಬಿದ್ದರೂ ಯಾತ್ರೆ ನಿಲ್ಲಿಸುವುದಿಲ್ಲ ಎಂದು ಸಂಕಲ್ಪ ಮಾಡಿದೆ. ಒಂದೊಂದು ಭಾಗದಲ್ಲಿ ವಿಭಿನ್ನ ಸಮಸ್ಯೆಗಳನ್ನು ಎದುರಿಸಿದೆ. ಒಂದು ದಿನವೂ ಉಪವಾಸ ಇರಲಿಲ್ಲ. ನಿಪ್ಪಾಣಿ ಮತ್ತು ಖಾನಾಪುರದಲ್ಲಿ ಕನ್ನಡ ಮಾತನಾಡದ ಜನ ಕೂಡ ಹಲವು ವ್ಯವಸ್ಥೆ ಮಾಡಿದ್ದರು ಎಂದು ಹೇಳಿದರು.

240 ತಾಲೂಕುಗಳಲ್ಲಿ ಪಾದಯಾತ್ರೆ ಕೈಗೊಂಡಿದ್ದೇನೆ. 11 ಸಾವಿರ ಕಿ.ಮೀ ನಷ್ಟು ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದ್ದೇನೆ. ಶಿರಸಿ, ಸಿದ್ಧಾಪುರ, ಯಲ್ಲಾಪುರಕ್ಕೆ ಬರುವ ಸಂದರ್ಭದಲ್ಲಿ ಲಾಕ್‌ಡೌನ್ ಇತ್ತು. ಉತ್ತರ ಕನ್ನಡಕ್ಕೆ ಬಂದೆ. ಏನು ಸಮಸ್ಯೆಗಳು
ಎದುರಾಗುತ್ತವೆ ಎಂಬುದನ್ನು ಲಾಕ್‌ಡೌನ್‌ನಿಂದ ತಿಳಿದೆ. ಯಾವುದೇ ದಾಖಲೆಗಳನ್ನು ಮಾಡಲು, ಸಾಧನೆ ಮಾಡಲು ಯಾತ್ರೆ ಮಾಡುತ್ತಿಲ್ಲ. ಕಾರವಾರದಿಂದ ಭಟ್ಕಳದ ನಡುವಿನ ಪಾದಯಾತ್ರೆ ದೇಹವನ್ನು ಹಿಂಡಿ ಹಿಪ್ಪೆ ಮಾಡಿತ್ತು ಎಂದು ವಿವರಿಸಿದರು. ಪ್ರಸಂಗ ವಿವರಿಸಿದರು.

ಯುವಕರು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಸ್ವಾಮೀಜಿಗಳು, ವೈದ್ಯರು, ಪೊಲೀಸರು, ಶಿಕ್ಷಕರು ಮತ್ತು ವಕೀಲರು ಮಾನವೀಯ ಮೌಲ್ಯಗಳನ್ನು ಉಳಿಸುವ ಈ ಸಮಾಜದ ಆಧಾರಸ್ಥಂಭ ಗಳಾಗಿದ್ದಾರೆ. ಬೆಳೆಸುವ ಜವಾಬ್ದಾರಿ ಯುವ ಸಮೂಹದ್ದು ಎಂದು ಹೇಳಿದರು.

ನಾನು ಇತಿಹಾಸದ ವಿದ್ಯಾರ್ಥಿಯಾದ ಕಾರಣ ಸಮಕಾಲೀನ ವಿಷಯಗಳ ಕುರಿತು ಆಸಕ್ತಿ ಇತ್ತು. ನನ್ನ ತಂದೆ ವಿವೇಕಾನಂದ ಎಂಬ ಹೆಸರು ಇಟ್ಟ ಕಾರಣ ಸ್ವಾಮಿ ವಿವೇಕಾನಂದರ ಪ್ರಭಾವ ನನ್ನ ಮೇಲಾಯಿತು. ಸಮಾಜಕ್ಕಾಗಿ ಏನಾದರೂ ಮಾಡ
ಬೇಕಾದ ಹಂಬಲ ನನ್ನಲ್ಲಿತ್ತು. 2015ರಿಂದ ಸಾಮಾಜಿಕ ಜಾಲತಾಣ ಬಳಕೆ ಮಾಡುವ ಮೂಲಕ ಪ್ರಬುದ್ಧ ಸಮಾಜ, ಮನಸ್ಸುಗಳ ಅಂತರಂಗದ ಚಳವಳಿ ವಿಷಯ ಕುರಿತು ಬರೆಯಲಾಗುತ್ತಿತ್ತು ಎಂದರು.

ಬಾರ್‌ಗಳು ಮಿಣ ಮಿಣ, ಲೈಬ್ರರಿಗಳು ಜೀರೋ ಕ್ಯಾಂಡಲ್ ಲೈಟು
ಸುಮಾರು ವರ್ಷಗಳ ಹಿಂದೆ ಸಾರಾಯಿ ಅಂಗಡಿಗಳು ಊರಿನಿಂದ ದೂರವಿರುತ್ತಿತ್ತು. ಬದಲಾದ ಸನ್ನಿವೇಶದಲ್ಲಿ ಮಿಣ ಮಿಣ ಐಟುಗಳಂತೆ ಬೀದಿ ಬೀದಿಗೂ ಬಾರುಗಳು ತಲೆ ಎತ್ತಿವೆ. ನಮ್ಮ ದೇಶದಲ್ಲಿ ಯಾವುದಕ್ಕೆ ಮೊದಲು ಪ್ರಾಶಸ್ತ್ಯ ನೀಡಬೇಕು ಎಂಬು ದನ್ನು ಆಲೋಚಿಸಬೇಕು. ರಾಜ್ಯದಲ್ಲಿ ಸಾಕಷ್ಟು ಗ್ರಂಥಾಲಯಗಳು ಮುಚ್ಚಿ ಜೀರೋ ಕ್ಯಾಂಡಲ್ ಲೈಟುಗಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕೊಠಡಿಗಳಲ್ಲಿ ಗ್ರಂಥಾಲಯಗಳನ್ನು ತೆರೆಯಲು ಪಾದಯಾತ್ರೆ ಕೈಗೊಂಡ ಪ್ರದೇಶಗಳಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ನಾನು ಹೇಳುತ್ತಿದ್ದೇನೆ. ಮಕ್ಕಳು ಗ್ರಂಥಾಲಯದಲ್ಲಿ ಜ್ಞಾನ ವೃದ್ಧಿಸಿಕೊಳ್ಳಬಹುದು. ಆದರೆ, ಬಾರ್‌ಗಳು ಇಡೀ ದೇಹವನ್ನೇ ಸುಡಲಿದೆ
ಎಂಬ ಸಂದೇಶ ಸಾರಿದೆ. ಭಾಷಣಗಳಿಂದ ಸಂಸ್ಕೃತಿ ಬೆಳೆಯುವುದಿಲ್ಲ ಎಂದು ಎಚ್.ಕೆ. ವಿವೇಕಾನಂದ ಹೇಳಿದರು.

ವಿವೇಕಾನಂದರ ಸಂದೇಶಗಳು
ಮನುಷ್ಯ ಹೋರಾಡುವುದು ಬದುಕಿಗಾಗಿ

ಅರಣ್ಯ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಾಡಬೇಕು.

ಪ್ಲಾಸ್ಟಿಕ್ ಬಳಕೆ ಮಾಡುವುದು ಕಡಿಮೆ ಮಾಡಬೇಕು

ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು

ಆರೋಗ್ಯವಾಗಿರಲು ದೈಹಿಕ, ಮಾನಸಿಕ ಸದೃಢತೆ ಮುಖ್ಯ

ತಾಳ್ಮೆ, ಸಂಯಮ ಎಂಬುದು ನಿಜವಾದ ಪ್ರಬುದ್ಧತೆ

Leave a Reply

Your email address will not be published. Required fields are marked *