Thursday, 12th December 2024

ಪ್ರೀತಿಯೊಂದೇ ಕಾಣಿಕೆ

ಲಕ್ಷ್ಮೀಕಾಂತ್ ಎಲ್. ವಿ.

ಮಳೆಯ ಹನಿಗಳು ಒಂದೊಂದಾಗಿ ಬಿದ್ದಂತೆಲ್ಲಾ ನಿನ್ನ ನೆನಪು ದ್ವಿಗುಣಗೊಳ್ಳುತ್ತಾ ಹೋಗುತ್ತಿದೆ ಗೆಳತಿ. ಅದರ ಮಧುರ ಅನುಭವದಲ್ಲೇ ನಿನಗಾಗಿ ಕಾಯುತ್ತಿರುವೆ. ನೀ ಬಂದು ನನ್ನ ಕಣ್ತಣಿಸುವುದು ಯಾವಾಗ!

ಎಲೆಯ ಮೇಲೆ ಕುಳಿತ ಮಂಜಿನ ಹನಿಯೊಂದು ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡು ಮೆಲ್ಲನೆ ಜಾರುತ್ತದೆ. ಆದರೆ ಎಲ್ಲಿಯೂ ತನ್ನ ಜಾಡನ್ನು ಬಿಡುವುದಿಲ್ಲ. ಆದಾಗ್ಯೂ ಹನಿಗೆ ಮಾತ್ರ ಎಲೆಯ ಮೇಲೆ ಅದೆಷ್ಟು ಪ್ರೀತಿ! ಪ್ರತಿ ಬಾರಿಯೂ ಹನಿಯು ಎಲೆಯನ್ನು ತಬ್ಬಿ ತನ್ನ ಸೌಂದರ್ಯವನ್ನು ಮತ್ತೆ ಮತ್ತೆ ಹೆಚ್ಚಿಸಿಕೊಳ್ಳುತ್ತದೆ.

ಎಲೆಯು ಕೂಡ ಬೇಸರಿಸದೆ ಹನಿಯನ್ನು ಬಾಚಿ ಅಪ್ಪುತ್ತದೆ. ಅದೇ ರೀತಿ ಈ ಪ್ರೀತಿ. ಮೈಮನಗಳಿಗೆ ನವಿರಾದ ಭಾವವನ್ನು ಚಿಮ್ಮುವ ಅನವರತ ವರ. ಹದಿಹರೆಯದ ವಯಸ್ಸೇ ಹೀಗೆ. ಎದೆಯಾಳಕ್ಕೆ ಇಳಿದು ಮನಸ್ಸಿನೊಳಗೆ ಕಚಗುಳಿ ಇಟ್ಟು, ಅಲ್ಲೊಂದು ಪ್ರೇಮದ ಹೂ ಅರಳಿಬಿಡುತ್ತದೆ. ಅದಕ್ಕೆ ಸಮಯದ ಇತಿಮಿತಿಯೇ ಇರುವುದಿಲ್ಲ. ಮನದ ಮೂಲೆಯಲ್ಲಿ ಅರಳುವ ಪ್ರೀತಿ ನೆನಪುಗಳ ಸರಮಾಲೆಯನ್ನು ಹೊದ್ದುಕೊಂಡು ಮೆಲ್ಲನೆ ಜಾರುತ್ತಾ, ಸದ್ದಿಲ್ಲದೆ ತನ್ನ ಇರುವಿಕೆಯನ್ನು ತೋರಿಸಿ ಪ್ರೀತಿಯ ಶಕ್ತಿಯನ್ನು ಇಮ್ಮಡಿಗೊಳಿಸುತ್ತದೆ.

ಒಲವಿನ ಒರತೆ
ಅಂತೆಯೇ, ನಿನ್ನ ಒಲವಿನ ಕಾರಂಜಿ ಸುಕ್ಕುಗಟ್ಟಿದ ಈ ಎದೆಯೊಳಗೆ ಜಿನುಗಿ ಬಿಗಿದ ಕನಸಿನೊಳಗೆ ತುಂಬಿಕೊಂಡು ಕಣ್ಣಂಚಲ್ಲಿ ಜಾರುತ್ತಿದೆ ಕಣೆ. ಮೌನ ಮನಸ್ಸಿನ ಮಾತು ಗಳ ಸುಳಿಯೊಳಗೆ ಸಿಲುಕಿದ ಈ ಮನಸ್ಸು ನಿನ್ನ ಹೆಸರನ್ನು ಬಿಡದೆ ಜಪಿಸುತ್ತಿದೆ. ಪ್ರೀತಿಯ ಕಡಲೊಳಗೆ ಸಿಲುಕಿದ ಜೀವ ನಿನ್ನದೇ ಹಾದಿಯನ್ನೇ ಅನುಸರಿಸಿ ಹುಡುಕುತ್ತಾ ಸೆಳೆತ ಕ್ಕೊಳಗಾಗಿ ಸಾಗುತ್ತಿದೆ. ಈಗೀಗ ಮೌನವೂ ಮಾತಾಡುತ್ತಿದೆ; ಅದೇನು ಅನುರಾಗದ ಸೆಲೆಯೋ! ಸದಾ ಒಲವಿನ ಒರತೆ ಉಕ್ಕುವ ಚಿಲುಮೆಯೋ! ನಾನರಿಯೆ.

ಮುಂಗಾರಿನಲ್ಲಿ ಸುರಿಯುವ ಸೋನೆಯು ಭೂಮಿಯನ್ನು ಬಾಚಿ ಅಪ್ಪುವಂತೆ ನಿನ್ನ ಒಲವಿನ ಸುಧೆ ನನ್ನನ್ನು ಆವರಿಸಿಬಿಟ್ಟಿತ್ತು. ಆ ತೋಳ ಬಂಧನ ಮತ್ತಷ್ಟು ಹಿತವೆನಿಸಿ ಪ್ರೀತಿ ಭವಿಷ್ಯದ ಆಸೆಗಳನ್ನು ಚಿಗುರಿಸಿತ್ತು. ಬಿಸಿಲಲ್ಲಿ ಬೇಯುತ್ತಾ ನೋವಲ್ಲಿ ನರಳುತ್ತಾ ಕುಳಿತವನಿಗೆ ಹಿತವಾದ ತಂಗಾಳಿ ಬೀಸಿದಂತೆ ನಿನ್ನ ಪ್ರೀತಿಯು ಅಮೃತವನ್ನು ನೀಡಿತ್ತು. ಗೆಳತಿ, ಕವಿದ ಮೋಡ ಒಮ್ಮೆಲೆ ಸುರಿಸಿದ ಸೋನೆಗೂ ಎಲ್ಲಿ ನಿನ್ನ ಮೇಲೆ ಪ್ರೀತಿಯಾಗಿ ಬಿಡುವುದೋ ಎಂಬ ಭಯವಿದೆ ಕಣೆ. ಏಕೆಂದರೆ ನಮ್ಮ
ಈ ಪ್ರೇಮಲೋಕದಲ್ಲಿ ನಾನೊಬ್ಬನೇ ನಿನ್ನ ಮನಸಿಗೆ ನಾಯಕನಾಗಬೇಕೆಂಬ ಹುಚ್ಚು ಬಯಕೆ ನನ್ನದು!

ತೋಳ ಬಂಧಿ
ದೂರ ತೀರದ ಯಾನ ನಡೆಸಿ, ಅಲ್ಲೊಂದು ಮರಳ ಮನೆಯನ್ನು ನಿರ್ಮಿಸಿ ಆಡಿದ ಸವಿಗಳಿಗೆಯನ್ನು ಮರೆಯಲು ಸಾಧ್ಯವೆ ಗೆಳತಿ? ಅಂದು ಮರಳ ಮೇಲೆ ಬರೆದ ಹೆಸರನ್ನು ಅಲೆಯೊಂದು ಬಂದು ಅಳಿಸಿದಾಗ ಅದೆಷ್ಟು ಚಡಪಡಿಸಿದ್ದೆ. ಗುಬ್ಬಿಯಂತೆ ಎದೆಗೆ ಒರಗಿ ಬಿಕ್ಕಿ ಬಿಕ್ಕಿ ಅತ್ತಾಗ ಆ ನಿನ್ನ ಮುದ್ದು ಮೊಗದ ಚೆಂದಕ್ಕೆ ದೃಷ್ಟಿಯಾದೀತೆಂದು ನನ್ನ ತುಟಿಗಳಿಂದ ದೃಷ್ಟಿ ತೆಗೆದದ್ದು ಇನ್ನೂ ಮನಸ್ಸಿನಿಂದ ಮಾಸಿಲ್ಲ ಕಣೆ. ಜೀವಕ್ಕೆ ಜೀವವೆಂದು ನಿನ್ನ ತೋಳಲ್ಲಿ ಬಂಧಿ ಯಾದಾಗ ಮೂಡಿದ ಆಸೆಗಳು ಅದೆಷ್ಟೋ..! ಕನಸಿಗೂ ಮಾತು ಕಲಿಸುವ ನಿನ್ನ ಪ್ರೀತಿಗೆ ನನ್ನ ಪ್ರೀತಿಯೊಂದೇ ಕಾಣಿಕೆ.

ದೈವ ಹರಸಿದ ಪ್ರೀತಿಯೆಂದು ನನ್ನ ಹೆಜ್ಜೆಗೆ ಜೊತೆಯಾಗಿ ನಿನ್ನ ಹೆಜ್ಜೆ ಸೇರಿಸಿ ನಡೆದ ಮಧುರಾತಿ ಅನುಭವ ನನ್ನೆಲ್ಲ ಜನುಮಕೂ
ನಿನ್ನೇ ಸಂಗಾತಿಯಾಗಿ ಬೇಡುವೆ. ಹೆಚ್ಚಾದರೆ ಪ್ರೀತಿಯೂ ಹುಚ್ಚಾಗುತ್ತದೆ ಎನ್ನುವ ಮಾತನ್ನು ಒಪ್ಪುವುದಿಲ್ಲ ಕಣೆ. ನನ್ನ ಪ್ರೀತಿ ಎಂದೂ ನಿನಗೆ ಹೆಚ್ಚೇ ಹೊರತು ಹುಚ್ಚಲ್ಲ. ಹಚ್ಚಿಕೊಂಡ ಮನಸಿಗೆ ತುಂತುರು ನೆನಪುಗಳು ಸುಳಿದು ಕಚಗುಳಿ ಇಡುವ ಆ ಖುಷಿಯ ಮುಂದೆ ಬೇರೆಲ್ಲವೂ ನಗಣ್ಯ.

ಹೃದಯ ಮಿಡಿತ
ಜನುಮಕೆ ಜೊತೆಯಾದ ಬಂಧವೊಂದು ಕಿರುಬೆರಳ ಆಸರೆ ಬಯಸಿ ಹೃದಯದಲ್ಲಿ ಮೂಡಿದ ಅನುರಾಗ ಅನುದಿನವೂ ಚೈತ್ರದ ಚಿಗುರಾಗುವ ಸದಾಭಿಲಾಷೆ ನನ್ನದು ಕಣೆ. ಒಲವು ಹರಿಸುವ ರಾಗಕ್ಕೆ ನಿನ್ನ ಹೆಸರನ್ನೇ ಇಟ್ಟು ಪ್ರೇಮ ತಂತಿಯನ್ನು ಮೀಟುವಾಸೆ. ಜೀವಭಾವ ಬೆರೆತು ಅಪ್ಪಿದ ಅಧರದಲ್ಲಿ ಕಾಡುವ ನೆನಪು ನಿನ್ನದೇ ಗೆಳತಿ.

ಹಿಡಿದಿಟ್ಟ ನಿನ್ನ ನೆನಪುಗಳಲ್ಲಿ ಈ ಪ್ರೀತಿಯ ಯಾತ್ರೆ ಸಾಗಿದೆ. ನಿನ್ನ ಆ ಒಂದು ಸಣ್ಣ ನಗುವಿನಲ್ಲಿ ಈ ಹೃದಯದ ಮಿಡಿತ ಅಡಗಿದೆ. ಮೊಗ್ಗಾಗಿದ್ದ ಪ್ರೀತಿ ಅರಳಿ ಹೂವಾಗುವ ಈ ಸೊಬಗು ಹೀಗೆಯೇ ಸದಾ ನಗುತಿರಲಿ ಎನ್ನುವ ಆಶಯ ನನ್ನದು. ಕೈಗಳು ಬೆಸೆದು ಜತೆ ಜತೆಯಲಿ ನಡೆಯುವ ಆನಂದ ಸದಾ ನನಗಿರಲಿ; ನಿನ್ನೊಲುಮೆಯು ಎಂದಿಗೂ ಜೀವಂತವಾಗಿರಲಿ.

ದಿನೇ ದಿನೇ ವಿರಹದ ಸೆಳೆತಕ್ಕೆ ಸೋಲುವ ಈ ಮನಸ್ಸು ಚುಕ್ಕಿ ಚಿತ್ತಾರಗಳ ತುಂಬಾ ನಿನ್ನ ಕನಸುಗಳನ್ನೇ ಹೆಣೆದು ಅದಕ್ಕೊಂದು ನೆಪಮಾಡಿ ನೆನಪುಗಳಾಗಿ ಈ ಬಾಳಿಗೆ ಮತ್ತೆ ಹೆಸರಿಡಲು ಬರುವೆಯಾ? ನಿನಗಾಗಿ ಕಾಯುತ್ತಿರುವೆ.