Saturday, 23rd November 2024

ಟಿ20 ಸರಣಿ: ಭಾರತ – ನ್ಯೂಜಿಲೆಂಡ್ ಎರಡನೇ ಪಂದ್ಯ ನಾಳೆ

ರಾಂಚಿ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಜಾರ್ಖಂಡ್‌ನ ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಯಾಗಿ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಬುಧವಾರ ರಾತ್ರಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರೋಹಿತ್ ಪಡೆ 5 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ. ಟಿ20 ವಿಶ್ವಕಪ್‌ನಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡ ಕಾರಣ ಸೆಮಿಫೈನಲ್ ಹಂತಕ್ಕೇರಲು ಭಾರತ ವಿಫಲವಾಗಿತ್ತು. ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲೆಂಡ್ ಪಡೆ ಭಾರತದ ವಿರುದ್ಧ ಅಮೋಘ ಆಟವನ್ನು ಪ್ರದರ್ಶಿಸಿ ಭಾರತಕ್ಕೆ ಭಾರೀ ಹಿನ್ನಡೆಯುಂಟು ಮಾಡಿತ್ತು. ಇದರಿಂದಾಗಿ ಟೀಮ್ ಇಂಡಿಯಾ ಈ ಬಾರಿ ಟೂರ್ನಿಯ ಆರಂಭಕ್ಕೂ ಮುನ್ನ ಭಾರೀ ನಿರೀಕ್ಷೆ ಮೂಡಿಸಿದ್ದರೂ ಸೆಮಿಫೈನಲ್ ಹಂತಕ್ಕೇರುವಲ್ಲಿ ಕೂಡ ವಿಫಲವಾಯಿತು.

ಸರಣಿಯ ಮೊದಲ ಟಿ20 ಕಿವೀಸ್ ಪಡೆ ದೊಡ್ಡ ಮೊತ್ತವನ್ನು ಗಳಿಸುವ ಭೀತಿ ಹುಟ್ಟಿಸಿತ್ತಾರೂ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಅವರ ಅದ್ಭುತ ಬೌಲಿಂಗ್ ದಾಳಿಯಿಂದಾಗಿ ರನ್ ವೇಗಕ್ಕೆ ಕಡಿವಾಣ ಬಿತ್ತು. ಚಾಂಪ್‌ಮನ್ ಹಾಗೂ ಗ್ಲೆನ್ ಫಿಲಿಪ್ಸ್ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಕಿವೀಸ್ ಪಡೆಗೆ ಕಡಿವಾಣ ಹಾಕಿದರು. ಹೀಗಾಗಿ 170ಕ್ಕೂ ಕಡಿಮೆ ಮೊತ್ತಕ್ಕೆ ನ್ಯೂಜಿಲೆಂಡ್ ತನ್ನ ಹೋರಾಟ ಅಂತ್ಯಗೊಳಿಸಿತು.

ಬ್ಯಾಟಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಪ್ರದರ್ಶನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಜಾರ್ಖಂಡ್‌ನ ರಾಂಚಿಯಲ್ಲಿರುವ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.

ಸಂಭಾವ್ಯ ಆಡುವ ಬಳಗ

ಟೀಮ್ ಇಂಡಿಯಾ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್/ಯುಜವೇಂದ್ರ ಚಾಹಲ್, ರವಿ ಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್/ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.

ನ್ಯೂಜಿಲೆಂಡ್: ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಟಿಮ್ ಸೀಫರ್ಟ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟಾಡ್ ಆಸ್ಟಲ್, ಲಾಕಿ ಫರ್ಗ್ಯೂಸನ್, ಟ್ರೆಂಟ್ ಬೋಲ್ಟ್