ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕರೋನಾ ವೈರಸ್‌ನ ರೂಪಾಂತರ ತಳಿ ಒಮಿಕ್ರಾನ್ ಕುರಿತಂತೆ ವಿಶ್ವದಾದ್ಯಂತ ಆತಂಕ ಮನೆ ಮಾಡಿದೆ. ಅತ್ಯಂತ ಅಪಾಯಕಾರಿ ಎನ್ನಲಾಗುತ್ತಿರುವ ಈ ತಳಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು ‘ಇದು ಡೆಲ್ಟಾ ರೀತಿಯೇ ಕಳವಳಕಾರಿ ಮತ್ತು ಹೆಚ್ಚು ಸಾಂಕ್ರಾಮಿಕವಾಗಬಲ್ಲ ತಳಿ’ ಎಂದು ಹೇಳಿದೆ. ಹೀಗಾಗಿ ಇದನ್ನು ನಿರ್ಲಕ್ಷಿಸಿದರೆ ಮತ್ತೊಂದು ಅಪಾಯ ಎದುರಾಗಲಿದೆ.
ಬಹುತೇಕ ಜನರು ಕರೋನಾ ಹೋಯಿತು ಎಂಬ ಭಾವನೆಯಲ್ಲಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರವನ್ನು ಮರೆತುಬಿಟ್ಟಿದ್ದಾರೆ. ಇದು ಹೀಗೆಯೇ ಮುಂದು ವರಿದರೆ ಮತ್ತೊಂದು ಅಪಾಯ ಎದುರಿಸುವ ಸ್ಥಿತಿ ಬರುತ್ತದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ. ಬ್ರಿಟನ್, ಜರ್ಮನಿ, ಸಿಂಗಪುರ, ಇಸ್ರೇಲ್, – ಮತ್ತು ಇಟಲಿ ದೇಶಗಳಲ್ಲಿ ದಕ್ಷಿಣ ಆಫ್ರಿಕಾ ವಿಮಾನಗಳಿಗೆ ನಿರ್ಬಂಧ ಹೇರಿದ ಸಂದರ್ಭದ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಒಮಿಕ್ರಾನ್ ರೂಪಾಂತರ ಪತ್ತೆಯಾಗಿರುವ ದಕ್ಷಿಣ ಆಫ್ರಿಕಾ, ಹಾಂಗ್ ಕಾಂಗ್, ಬೊತ್ಸ್ವಾನಾಗಳಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ ಈಗಾಗಲೇ ಸೂಚಿಸಿದೆ. ಅಧಿಕಾರಿಗಳು ಕೇಂದ್ರದ ಸೂಚನೆಯನ್ನು ಕಡ್ಡಾಯ ವಾಗಿ ಪಾಲಿಸಬೇಕು. ಮಾರ್ಗಸೂಚಿಯಂತೆ ವಿದೇಶದಿಂದ ಬರುವವರನ್ನು ಪರೀಕ್ಷೆಗೆ ಒಳಪಡಿಸ ಬೇಕು. ಈ ಸೋಂಕಿನ ಅಪಾಯದಲ್ಲಿರುವ ರಾಷ್ಟ್ರಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಜತೆಗೆ ಕರೋನಾ ಲಸಿಕೆ ಪಡೆಯುವಲ್ಲಿ ಜನರ ನಿರ್ಲಕ್ಷ್ಯ ಕೂಡ ಮತ್ತೊಂದು ಅಪಾಯಕ್ಕೆ ಒಡ್ಡಬಹುದು. ಅಂಕಿ ಅಂಶಗಳ ಪ್ರಕಾರ ರಾಜ್ಯ ದಲ್ಲೂ ಮೊದಲನೇ ಡೋಸ್ ಕೋವಿಡ್ ಲಸಿಕೆ ಪಡೆದಿರುವವರ ಪೈಕಿ ೪೫ ಲಕ್ಷ ಮಂದಿ ಇನ್ನೂ ಎರಡನೇ ಡೋಸ್ ಪಡೆದಿಲ್ಲ ಎನ್ನಲಾಗಿದೆ.
ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಮೂರನೇ ಡೋಸ್ ತೆಗೆದುಕೊಳ್ಳುತ್ತದ್ದರೂ ನಮ್ಮಲ್ಲಿ ಎರಡನೇ ಡೋಸ್ ತೆಗೆದುಕೊಳ್ಳಲು ಏಕೆ ಅಸಡ್ಡೆ ಎಂಬುದು ಅರ್ಥವಾಗು ತ್ತಿಲ್ಲ. ಎರಡೂ ಡೋಸ್ ಪಡೆದರೂ ಕರೋನಾ ತಗುಲುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದರೂ ಜನರು ಡೋಸ್ ಪಡೆಯಲು ನಿರಾಸಕ್ತಿ ವಹಿಸುತ್ತಿರು ವುದು ಸರಿಯಲ್ಲ. ಕರೋನಾ ನಿಯಂತ್ರಣಕ್ಕೆ ತರಲು ಈ ದೇಶದ ಪ್ರತಿಯೊಬ್ಬರೂ ಸೈನಿಕನಂತೆ ಶ್ರಮಿಸಿದ್ದಾರೆ. ಇದೀಗ ಈ ಒಮಿಕ್ರಾನ್ ಕೂಡ ಈ ನೆಲದಲ್ಲಿ ಕಾಲಿಡದಂತೆ ನೋಡಿಕೊಳ್ಳಲು ಪ್ರತಿಯೊಬ್ಬರೂ ಸೈನಿಕನಂತೆ ಜಾಗೃತೆ ವಹಿಸಬೇಕಿದೆ.