Saturday, 23rd November 2024

12 ಪ್ರತಿಪಕ್ಷ ಸಂಸದರ ಅಮಾನತು ಪ್ರತಿಭಟಿಸಿ ಸಭಾತ್ಯಾಗ, ಕ್ಷಮೆಗೆ ಆಗ್ರಹ

ನವದೆಹಲಿ: ರಾಜ್ಯಸಭೆಯ 12 ಪ್ರತಿಪಕ್ಷ ಸಂಸದರ ಅಮಾನತನ್ನು ಪ್ರತಿಭಟಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷದ ಸದಸ್ಯರು ಮಂಗಳವಾರ ಸಂಸತ್ತಿನ ಉಭಯ ಸದನಗಳಲ್ಲಿ ಸಭಾತ್ಯಾಗ ಮಾಡಿದರು ಮತ್ತು ಕ್ಷಮೆ ಕೋರುವಂತೆ ಸಭಾಪತಿಗಳು ಸೂಚಿಸಿದ ಬಳಿಕ ರಾಜ್ಯಸಭೆಯಲ್ಲಿ ದಿನದ ಕಲಾಪಗಳನ್ನು ಬಹಿಷ್ಕರಿ ಸಿದರು.

ಸಭಾತ್ಯಾಗದ ಬಳಿಕ ಸಂಸತ್ ಸಂಕೀರ್ಣದಲ್ಲಿ ಮಹಾತ್ಮಾ ಗಾಂಧಿ ಪುತ್ಥಳಿಯೆದುರು ಸರಕಾರ ಮತ್ತು ಅದರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಘೋಷಣೆ ಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದ ಪ್ರತಿಪಕ್ಷ ಸಂಸದರು, ಈ ವಿಷಯದಲ್ಲಿ ಧ್ವನಿಯೆತ್ತುವುದನ್ನು ತಾವು ಮುಂದುವರಿಸುತ್ತೇವೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದ ಎಂಟು ಪ್ರತಿಪಕ್ಷ ನಾಯಕರು ಅಮಾನತನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದರು. ಸದನದ ಸೂಕ್ತ ಕಾರ್ಯ ನಿರ್ವಹಣೆ ಮತ್ತು ತಮ್ಮ ದುರ್ವರ್ತನೆಗಾಗಿ ಅವರಿಂದ ಕ್ಷಮಾಯಾಚನೆ ಹೊರತು ಅದು ಸಾಧ್ಯವಾಗದಿರ ಬಹುದು ಎಂದು ನಾಯ್ಡು ಪ್ರತಿಪಕ್ಷ ನಾಯಕರಿಗೆ ತಿಳಿಸಿದ್ದಾಗಿ ಬಲ್ಲ ಮೂಲಗಳು ತಿಳಿಸಿದವು.

‘ಯಾವುದಕ್ಕೆ ಕ್ಷಮೆ? ಸಂಸತ್ತಿನಲ್ಲಿ ಜನತೆಯ ವಿಷಯಗಳನ್ನು ಎತ್ತಿದ್ದಕ್ಕಾಗಿಯೇ? ಎಂದಿಗೂ ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್‌ ನಲ್ಲಿ ಘೋಷಿಸಿದ್ದಾರೆ.

ಅಮಾನತನ್ನು ಹಿಂದೆಗೆದುಕೊಳ್ಳಬೇಕೆಂಬ ತಮ್ಮ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಪ್ರತಿಭಟನೆ ಯಾಗಿ ರಾಜ್ಯಸಭೆಯ ದಿನದ ಕಲಾಪಗಳನ್ನು ಬಹಿಷ್ಕರಿಸಲು ಪ್ರತಿ ಪಕ್ಷ ಸದಸ್ಯರು ನಿರ್ಧರಿಸಿದರು. ಆದಾಗ್ಯೂ ಲೋಕ ಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷವು ಚರ್ಚೆಗಳಲ್ಲಿ ಭಾಗವಹಿಸಲು ನಿರ್ಧರಿಸಿತು.

ಸೋಮವಾರ ಇಡೀ ಚಳಿಗಾಲದ ಅಧಿವೇಶನದ ಅವಧಿಗೆ ಅಮಾನತುಗೊಂಡಿರುವ 12 ಸಂಸದರಲ್ಲಿ ಕಾಂಗ್ರೆಸ್‌ನ ಆರು,ಟಿಎಂಸಿ ಮತ್ತು ಶಿವಸೇನೆಯ ತಲಾ ಇಬ್ಬರು ಹಾಗೂ ಸಿಪಿಎಂ ಮತ್ತು ಸಿಪಿಐನ ತಲಾ ಓರ್ವರು ಸೇರಿದ್ದಾರೆ.

ಕಾಂಗ್ರೆಸ್‌ನ ಛಾಯಾ ವರ್ಮಾ,ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಮತ್ತು ಟಿಎಂಸಿಯ ಡೋಲಾ ಸೇನ್ ಸೇರಿದಂತೆ 12 ಸಂಸದರನ್ನು ಹಿಂದಿನ ಅಧಿವೇಶನ ದಲ್ಲಿ ತಮ್ಮ ದುರ್ವರ್ತನೆ ಮತ್ತು ಅಶಿಸ್ತಿನ ನಡವಳಿಕೆಗಾಗಿ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಂಡಿದ್ದಾರೆ.