ದೇಶದ ಅನೇಕ ತುರ್ತು ವಿಷಯಗಳ ಬಗೆಗೆ ಸರಕಾರದ ಗಮನ ಸೆಳೆದು, ಗಂಭೀರವಾದ ಚರ್ಚೆಗಳನ್ನು ನಡೆಸುವುದಕ್ಕಾಗಿಯೇ ಸಂಸತ್ತಿನ ಅಧಿವೇಶನ ಕರೆಯಲಾಗುತ್ತದೆ. ಆದರೆ ಪ್ರತಿಪಕ್ಷಗಳು ಈ ಬಾರಿ ಸಂಸತ್ ಅಧಿವೇಶನದಲ್ಲೂ ಅಂತಹ ಯಾವುದೇ ಚರ್ಚೆಗೆ ಅವಕಾಶ ಮಾಡಿಕೊಡುವ ಲಕ್ಷಣಗಳು ಕಾಣುತ್ತಿಲ್ಲ. ಸದನದಲ್ಲಿ ದುರ್ವರ್ತನೆ ತೋರಿದ ೧೨ ರಾಜ್ಯಸಭಾ ಸದಸ್ಯರನ್ನು ಅಮಾನತುಗೊಳಿಸಿರುವ ಸಭಾಧ್ಯಕ್ಷರ ನಿರ್ಣಯ ಖಂಡಿಸಿ, ಅಧಿವೇಶನ ಮುಗಿಯುವವರೆಗೂ ಪ್ರತಿಪಕ್ಷಗಳು ಕಲಾಪವನ್ನು ಬಹಿಷ್ಕರಿಸುವುದಾಗಿ ಘೋಷಿಸಿರುವುದು ಸಂಸದೀಯ ಪದ್ಧತಿಗೆ ಕೊಡುವ ಗೌರವವಲ್ಲ.
ಇತ್ತೀಚೆಗೆ ಆದ ಬದಲಾವಣೆಗಳನ್ನು ಅಸ್ತ್ರವಾಗಿಸಿಕೊಂಡು ಸಂಸತ್ ಅಧಿವೇಶನದಲ್ಲಿ ಚರ್ಚೆ ಮಾಡುವ ಮೂಲಕ ಆಡಳಿತ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಎಲ್ಲ ಅಸ್ತ್ರಗಳೂ ಪ್ರತಿಪಕ್ಷಗಳ ಬಳಿ ಇದ್ದರೂ ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಗಿವೆ. ಬೆಲೆ ಏರಿಕೆ, ಕೃಷಿ ಕಾಯಿದೆ ಸೇರಿದಂತೆ ಅನೇಕ ವಿಷಯಗಳ ಮೇಲೆ ಆಡಳಿತ ಮತ್ತು ಪ್ರತಿಪಕ್ಷಗಳು ಚರ್ಚೆ ಮಾಡಿದ್ದರೆ ಸದನದ ಸಮಯ, ವೆಚ್ಚಕ್ಕೆ ಅರ್ಥ ಬರುತ್ತಿತ್ತು. ಆದರೆ ಅದ್ಯಾವುದೂ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಗಂಭೀರ ವಿಷಯಗಳ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಪ್ರತಿ ಬಾರಿಯೂ ಬಹಿಷ್ಕಾರವೊಂದೇ ಮಾರ್ಗವೆಂದರೆ ಹೇಗೆ? ಪ್ರತಿ ಬಾರಿಯೂ ಇದೇ
ವರ್ತನೆ ತೋರುವುದಾದರೆ ಸಂಸತ್ತಿನ ಅಗತ್ಯವಾದರೂ ಏನಿದೆ? ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ದಾರಿದೀಪ ವಾಗಿರುವ ಇಂಗ್ಲೆಂಡಿನ ಎರಡೂ ಸದನಗಳ ಚರ್ಚೆಗಳು ಎಲ್ಲರಿಗೂ ಮಾದರಿ. ಅಲ್ಲಿನ ಚರ್ಚೆಗಳು, ಪ್ರಬುದ್ಧರ ವಿಷಯ ಮಂಡನೆಗಳು ಒಂದು ದಿಕ್ಸೂಚಿ.
ಇಲ್ಲಿ, ಸಂಸತ್ತಿನಲ್ಲಿನ ಚರ್ಚೆಗಳಿಗೆ ವಿ.ಕೆ. ಕೃಷ್ಣ ಮೆನನ್, ಆಚಾರ್ಯ ಕೃಪಲಾನಿ, ಎನ್.ಜಿ.ರಂಗಾ, ಮೀನೂ ಮಸಾನಿ, ಲೋಹಿಯಾ, ಹೇಮ್ ಬರುವಾ, ಹಿರೇನ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ ಅಂತಹವರ ಕೊಡುಗೆ ಅಪಾರ. ಇದಕ್ಕೆ ಕಾರಣ, ಅವರು ಮಾತನಾಡುವುದಕ್ಕೆ ಸಿಕ್ಕ ಅವಕಾಶ. ಜತೆಗೆ, ಅವರ ಚರ್ಚೆಗಳೂ ಮುಂದಿನ ಪೀಳಿಗೆಗೆ ಆದರ್ಶವಾಗಿರುತ್ತಿತ್ತು. ಸಂಸತ್ತು ಮತ್ತು ವಿಧಾನಮಂಡಲಗಳು ಅನೇಕರ ವಿದ್ವತ್ತು ಪ್ರಕಾಶಿಸುವುದರ ದ್ಯೋತಕ.
ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಮೆರುಗು ಕೊಡುವುದೇ ಶಾಸನಸಭೆಗಳ ಮುಕ್ತ, ಪ್ರಬುದ್ಧ ಚರ್ಚೆಗಳು. ಇವುಗಳಿಗೆ ಅವಕಾಶ ಇರದಿದ್ದರೆ ಕಲಾಪಗಳು ಬರಡು.