ಎಲ್ಲ ಮನುಷ್ಯರೊಳಗೂ ಒಬ್ಬ ದೇವನೂ ಇರುತ್ತಾನೆ, ರಾಕ್ಷಸನೂ ಇರುತ್ತಾನೆ. ಯಾರನ್ನು ಆತ ಪ್ರಚೋದಿಸುತ್ತಾನೆ; ಯಾರನ್ನು ನಿಯಂತ್ರಿಸುತ್ತಾನೆ ಎಂಬುದರ ಮೇಲೆ ಆ ವ್ಯಕ್ತಿಯ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಎಲ್ಲ ಮನುಷ್ಯನಿಗೂ ಚಪಲಗಳಿರುತ್ತವೆ. ಎಲ್ಲರೊಳಗೂ ವಿಕೃತಿಗಳಿರುತ್ತವೆ.
ಕಾಮ, ಕ್ರೋದಾದಿ ಎಲ್ಲವೂ ಮನುಷ್ಯನದ್ದೇ ಸಹಜ ಗುಣ. ಹಾಗೆಂದು ಅದನ್ನು ಎಲ್ಲಿ, ಎಷ್ಟು ಪ್ರದರ್ಶಿಸ ಬೇಕೆಂಬುದರ ಅರಿವಿರಬೇಕು. ಅದಿಲ್ಲದಿದ್ದರೆ ಸುಶಿಕ್ಷಿತ ಎನಿಸಿಕೊಳ್ಳುವುದಿಲ್ಲ. ಸದನದಲ್ಲಿ ಗುರುವಾರ, ಕಾಂಗ್ರೆಸ್‌ನ ಹಿರಿಯ ಸದಸ್ಯ ರಮೇಶ್ ಕುಮಾರ್ ‘ಅತ್ಯಾಚಾರ’ದ ಕುರಿತು ಆಡಿದ ಮಾತುಗಳಿಗೆ ಇದು ಅಕ್ಷರಶಃ ಅನ್ವಯ. ಭಾರೀ ವಿವೇಚನಾಶೀಲರೆಂಬಂತೆ ಬಿಂಬಿಸಿಕೊಳ್ಳುವ ರಮೇಶ್ ಕುಮಾರ್ ಅವರ ಸಂವೇದ ನಾರಾಹಿತ್ಯ ಇದೇ ಹೊಸದೇನಲ್ಲ.
ಆಪ್ತವಲಯದಲ್ಲಿ, ಕೌಟುಂಬಿಕ ಸ್ತರದಲ್ಲಿ ಮನಬಂದಂತೆ ನಾಲಗೆ ಹರಿಬಿಡುವುದು ಇದ್ದೇ ಇದೆ. ಅದರಲ್ಲೂ ಕೋಲಾರದ ಚುನಾವಣಾ ರಾಜಕೀಯ ಸನ್ನಿವೇಶದಲ್ಲಿ ಅವರ ‘ಬಣ್ಣ’ವೇ ಬೇರೆ ಎಂಬುದು ಜನಜನಿತ. ಆದರೆ, ಶಾಸನಸಭೆಯಂಥ ಗೌರವಯುತ, ಪವಿತ್ರ ಜಾಗದಲ್ಲಿ, ಅದೂ ಎರಡೆರಡು ಬಾರಿ ಸ್ಪೀಕರ್ ಆಗಿದ್ದ, ಕಿರಿಯರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕಿರುವ ಅವರು ಈ ರೀತಿ ಕೀಳು ಅಭಿರುಚಿಯ ಮಾತನಾಡಿದ್ದು ಖಂಡಿತಾ ಸಮ್ಮತ ವಲ್ಲ.
ತಮ್ಮದು ಅತ್ಯಂತ ವಿದ್ವತ್‌ಪೂರ್ಣ ವ್ಯಕ್ತಿತ್ವ ಎಂದು ತೋರಿಸಿಕೊಳ್ಳುವ, ಜಾಗತಿಕ ಲೇಖಕರು, ಸಾಮಾಜಿಕ ಕ್ರಾಂತಿಕಾರರ ಹೇಳಿಕೆಗಳನ್ನು ಆಗಾಗ ಉದ್ದರಿಸುವ ಅವರ ನೈಜ ಒಳಮನಸಿನ ಅಭಿವ್ಯಕ್ತಿ ಈ ಮೂಲಕ ಆಗಿದೆ. ಸಮಾಜದ ಮೇಲ್ವರ್ಗದಲ್ಲಿ ಹುಟ್ಟಿಯೂ ತಾವು ಸಮಾನತೆಯ ಹರಿಕಾನೆಂಬಂತೆ ವರ್ತಿಸುವ ಅವರು, ಸಮಾಜವಾದದ ಹೆಸರನ್ನು ಚಪಲಗಳ ಮಿತಿ ಸಮರ್ಥನೆಗೆ ಬಳಸುವುದು ಗೊತ್ತಿಲ್ಲದ್ದೇನಲ್ಲ. ಎಷ್ಟೇ ಮುಖ ವಾಡ ಧರಿಸಿ ಓಡಾಡಿದರೂ ಕೆಲವೊಮ್ಮೆ ಅರಿವಿಲ್ಲದೇ ಒಳಗಿನ ಮುಖ ಬಯಲಾಗಿಬಿಡುತ್ತದೆ ಎಂಬುದಕ್ಕೆ ಗುರುವಾರ ಅವರಾಡಿದ ಮಾತುಗಳು ನಿದರ್ಶನ.
ಅದಿಲ್ಲದಿದ್ದರೆ ಅತ್ಯಾಚಾರದ ಬಗ್ಗೆ ಅವರು ಕೀಳಮಟ್ಟದಲ್ಲಿ ಬಹಿರಂಗ ಹೇಳಿಕೆ ನೀಡುವಾಗ ಸದನದಲ್ಲಿ ಮಹಿಳಾ ಸದಸ್ಯರೂ ಉಪಸ್ಥಿತರಿರುತ್ತಾರೆ ಎಂಬ ಕನಿಷ್ಠ ವಿವೇಚನೆಯಾದರೂ ಇರಬೇಕಿತ್ತಲ್ಲವೇ? ಇಂಗ್ಲಿಷ್‌ನಲ್ಲಿ ಸಾಮಾನ್ಯವೆಂದೆನಿಸಬಹುದಾದ ಇಂಥ ಸಾಲುಗಳು, ಭಾರತ ದಂಥ ನೆಲದ ಮನಸುಗಳನ್ನು ಘಾಸಿ ಗೊಳಿಸುತ್ತವೆ.