Saturday, 23rd November 2024

ಒಡಿಶಾದ ಅತಿ ಉದ್ದದ ಸೇತುವೆ ಉದ್ಘಾಟಿಸಿದ ಪಟ್ನಾಯಕ್

ಭುವನೇಶ್ವರ: ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೋಮವಾರ ಕಟಕ್‌ ಜಿಲ್ಲೆಯ ಗೋಪಿನಾಥಪುರದಲ್ಲಿ ಮಹಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಒಡಿಶಾದ ಅತಿ ಉದ್ದದ ಸೇತುವೆಯನ್ನು ಉದ್ಘಾಟಿಸಿದರು.

ಸಿಂಗನಾಥ್ ಪೀಠದಿಂದ ಕಟಕ್‌ ಜಿಲ್ಲೆಯ ಬೈದೇಶ್ವರ್‌ಗೆ ಸಂಪರ್ಕ ಕಲ್ಪಿಸುವ ಈ ಸೇತುವೆ 3.4 ಕಿ.ಮೀ ಉದ್ದವಿದೆ. ಸುಮಾರು ಐದು ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಎರಡೂ ಸ್ಥಳಗಳ ನಡುವೆ ಈ ಮೊದಲು 45 ಕಿ.ಮೀ ಕ್ರಮಿಸಬೇಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ  ಪಟ್ನಾಯಕ್‌ ಅವರು 2014ರ ಫೆಬ್ರುವರಿ 28 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.

ಕಥಾಜೋಡಿ ನದಿಗೆ ತ್ರಿಸುಲಿಯಾದಲ್ಲಿ ನಿರ್ಮಿಸಿರುವ 2.88 ಕಿ.ಮೀ. ಉದ್ದದ ನೇತಾಜಿ ಸುಬಾಷ್ ಚಂದ್ರ ಬೋಸ್ ಸೇತುವೆ ಯನ್ನು ಪಟ್ನಾಯಕ್ 2017 ರಲ್ಲಿ ಉದ್ಘಾಟಿಸಿದ್ದರು. ಇದುವರೆಗೆ ಸೇತುವೆಯು ರಾಜ್ಯದ ಅತಿ ಉದ್ದದ ಸೇತುವೆ ಎನಿಸಿತ್ತು. ಇದು ಭುವನೇಶ್ವರದಿಂದ ಕಟಕ್‌ಗೆ ಬಾರಂಗ್‌ ಮಾರ್ಗವಾಗಿ ಸಂಪರ್ಕ ಕಲ್ಪಿಸುತ್ತದೆ.

ಪಟ್ನಾಯಕ್‌ ಭೇಟಿ ಹಿನ್ನೆಲೆಯಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಲು ಮುಂದಾಗಿದ್ದ ಮಾಜಿ ಶಾಸಕ ದೇವಾ ಸಿಸ್ ಪಟ್ನಾಯಕ್‌ ಸೇರಿದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿಯ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಕಿ ಪಟ್ಟಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.