Monday, 25th November 2024

ಮಹಾಮಾರಿ ಕರೋನಾ ಸೋಂಕಿನಿಂದ ರಾಜ್ಯದ 136 ಮಕ್ಕಳು ಅನಾಥ

#covid

ವಿಶ್ವವಾಣಿ ವಿಶೇಷ

ಬೆಂಗಳೂರು: ಮಹಾಮಾರಿ ಕರೋನಾ ಸೋಂಕು ಸಾಕಷ್ಟು ಮಂದಿಯ ಜೀವ, ಜೀವನ ಹಾಳು ಮಾಡಿದೆ. ಅದರಲ್ಲೂ ರಾಜ್ಯದಲ್ಲಿ ೧೩೬ ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ.

ಹೌದು, ಕರೋನಾ ಕಾರಣ ದಿಂದ ರಾಜ್ಯದ ೧೩೬ ಮಕ್ಕಳು ತಮ್ಮ ತಂದೆ-ತಾಯಿಯರನ್ನು  ಕಳೆದುಕೊಂಡಿದ್ದಾರೆ. ಅಂತಹ ಮಕ್ಕಳಿಗೆ ಪೋಷಕರ ಸ್ಥಾನದಲ್ಲಿ ನಿಂತು ಬೆಳೆಸುವವರು ಬೇಕಾಗಿದ್ದಾರೆ. ಅವರ ಭವಿಷ್ಯವನ್ನು ಉಜ್ವಲಗೊಳಿಸುವವರ ಅಗತ್ಯ ಬಂದಿದೆ.

ದೇಶಾದ್ಯಂತ ಕರೋನಾ ಸೋಂಕಿಗೊಳಗಾಗಿ ೩,೬೨೧ ಮಕ್ಕಳು ತಮ್ಮ ತಂದೆ-ತಾಯಿಯರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಈ ಪೈಕಿ ೧೩೬ ಮಕ್ಕಳು ಕರ್ನಾಟಕದಲ್ಲಿದ್ದಾರೆ. ಆ ಮಕ್ಕಳ ಮನಸ್ಸು ಪ್ರತಿ ನಿತ್ಯ ಅಮ್ಮನ ವಾತ್ಸಲ್ಯ, ಅಪ್ಪನ ಅಪ್ಪುಗೆಗಾಗಿ ಕನವರಿಸುತ್ತಿವೆ. ರಾಜ್ಯದ ಇತರೆ ಜಿಗಳಗಿಂತ ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ ೧೮ ಮಕ್ಕಳು ತಮ್ಮ ಪಾಲಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಉಳಿದಂತೆ ಚಿಕ್ಕಬಳ್ಳಾಪುರ ೧೨, ಮೈಸೂರು ೯, ಕೋಲಾರ ಮತ್ತು ಬೆಳಗಾವಿ ತಲಾ ೭, ಬಳ್ಳಾರಿ, ಬೀದರ್, ಯಾದಗಿರಿ ಮತ್ತು ಹಾಸನ ತಲಾ ೬, ಚಿಕ್ಕಮಗಳೂರು, ಗದಗ, ಶಿವಮೊಗ್ಗ, ತುಮಕೂರು, ಕೊಡಗು, ದಕ್ಷಿಣ ಕನ್ನಡ ಮತ್ತು ಬಾಗಲಕೋಟೆ ತಲಾ ೫, ಧಾರವಾಡ ಮತ್ತು ರಾಮನಗರ ತಲಾ ೪, ಕೊಪ್ಪಳ ಮತ್ತು ಮಂಡ್ಯ ತಲಾ ೩, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯಪುರ ತಲಾ ೨, ಚಾಮರಾಜನಗರ, ಕಲಬುರಗಿ, ಹಾವೇರಿ ಹಾಗೂ ರಾಯಚೂರು ತಲಾ ೧ ಮಕ್ಕಳು ಅನಾಥರಾಗಿವೆ.

ಹೆತ್ತವರನ್ನು ಕಳೆದುಕೊಂಡು ತಬ್ಬಲಿಗಳಾದ ಮಕ್ಕಳ ಬದುಕು ಡೋಲಾಯಮಾನವಾಗಿದೆ. ಅಜ್ಜಿ, ಚಿಕ್ಕಮ್ಮ, ಚಿಕ್ಕಪ್ಪ ಮತ್ತು ಅತ್ತೆ ಸೇರಿ ಆಪ್ತರ ಮನೆಗಳಲ್ಲಿ ಆಶ್ರಯ ಪಡೆದಿದ್ದರೂ ಹೆತ್ತವರ ಪ್ರೀತಿಗಾಗಿ ಹಾತೊರೆಯುತ್ತಿವೆ. ತಮ್ಮ ಪ್ರೀತಿ ಪಾತ್ರರಾದವರನ್ನು ಕಳೆದುಕೊಂಡು ಬದುಕು ಸಾಗಿಸುವುದು ಸುಲಭವಲ್ಲ. ಆದ್ದರಿಂದ, ಇವರ ಬದುಕು ಅನಿಶ್ಚಿತತೆಯಲ್ಲಿ ಮುಳುಗಿದೆ. ಮಕ್ಕಳು ಪಾಲಕರ ಜತೆಗಿನ ಭಾವನಾತ್ಮಕ ಸಂಬಂಧ ಕಳೆದುಕೊಳ್ಳುವ ಜತೆಗೆ ಹಣಕಾಸಿನ ಬೆಂಬಲವೂ ಇಲ್ಲದಂತಾಗಿದೆ.

ಸರಕಾರದಿಂದ ನಡೆಸುವ ಆರೈಕೆ ಕೇಂದ್ರಗಳಿಗೆ ಸೇರಿಸಿದರೆ ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂಬ ಭಯ ಸದ್ಯ ಮಕ್ಕಳನ್ನು ನೋಡಿಕೊಳ್ಳುವವರಿಗಿದೆ. ಈ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಉತ್ತಮ ಭವಿಷ್ಯದ ಅಗತ್ಯವಿದೆ. ಅದಕ್ಕಾಗಿ ಆ ಮಕ್ಕಳು ಪಾಲಕರ ಮಡಿಲಿನಲ್ಲಿ ಕುಳಿತು ಕಾಯುತ್ತಿದ್ದಾರೆ.

ವಿವಿಧ ಯೋಜನೆ
ಕರೊನಾದಿಂದ ಪಾಲಕರನ್ನು ಕಳೆದುಕೊಂಡ ಅನಾಥರಾದ ಮಕ್ಕಳಿಗೆ ರಾಜ್ಯ ಸರಕಾರ ‘ಮುಖ್ಯಮಂತ್ರಿ ಬಾಲಸೇವಾ ಯೋಜನೆ’ ಜಾರಿಗೊಳಿಸಿದೆ. ಈ ಯೋಜನೆಯಡಿ ಅನಾಥ ಮಕ್ಕಳಿಗೆ ೧೮ ವರ್ಷ ಪೂರ್ಣಗೊಳ್ಳುವರೆಗೆ ಮಾಸಿಕ ೩,೫೦೦ ರೂ ಹಾಗೂ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಎಲ್ಲ ಮಕ್ಕಳಿಗೆ ಲ್ಯಾಪ್‌ ಟಾಪ್ ಮತ್ತು ಟ್ಯಾಬ್ ನೀಡಲಾಗುತ್ತದೆ.

ಅಲ್ಲದೆ, ಹೆಣ್ಣು ಮಕ್ಕಳಿಗೆ ೨೧ ವರ್ಷ ತುಂಬಿದ ನಂತರ ವಿವಾಹ, ಉನ್ನತ ಶಿಕ್ಷಣ ಹಾಗೂ ಸ್ವಯಂ ಉದ್ಯೋಗದ ಉದ್ದೇಶಗಳಿಗಾಗಿ ಒಂದು ಲಕ್ಷ ರು. ಆರ್ಥಿಕ ಧನ ಸಹಾಯ ಒದಗಿಸಲಾಗುತ್ತದೆ. ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ಮಕ್ಕಳನ್ನು ಮಾನಸಿಕ ಆಘಾತದಿಂದ ಹೊರತರಲು ‘ಬಾಲ ಹಿತೈಷಿ’ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಒಬ್ಬ ಮಾರ್ಗದರ್ಶಕರನ್ನು ಒಂದು ಮಗುವಿಗೆ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಮಾರ್ಗ ದರ್ಶನ ನೀಡಲು ಕ್ರಮವಹಿಸಲಾಗಿದೆ.

೧೮ ವರ್ಷದೊಳಗಿನ ಮಕ್ಕಳಿಗೆ ಪಾಲನೆ ಮತ್ತು ರಕ್ಷಣೆ ಒಳಗೊಂಡಂತೆ ಆರೋಗ್ಯ ವಿಮೆ, ಶಿಕ್ಷಣ ಮತ್ತು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಜೀವನ ನಿರ್ವಹಣೆಗೆ ನೆರವು ನೀಡಲಾಗುತ್ತಿದೆ. ಪ್ರಧಾನ ಮಂತ್ರಿಗಳ ಪಿಎಂ ಕೇರ್ಸ್ ಚಿಲ್ಡ್ರನ್’ ಯೋಜನೆಯಡಿ ಪ್ರತಿ ಮಗುವಿಗೆ ೨೩ ವರ್ಷ ತುಂಬಿದ ನಂತರ ೧೦ ಲಕ್ಷ ರು. ಸಿಗಲಿದೆ.

***

ತಂದೆ-ತಾಯಿ ತಮ್ಮ ಮಕ್ಕಳಿಗೆ ಕೊಡುವ ಪ್ರೀತಿಯನ್ನು ಬೇರೆ ಯಾರೂ ಕೊಡಲು ಸಾಧ್ಯವಿಲ್ಲ. ಚಿಕ್ಕ ವಯಸ್ಸಿನಲ್ಲಿ ಸಿಗಬೇಕಾದ ಪ್ರೀತಿ, ವಾತ್ಸಲ್ಯ
ಸಿಗದಿದ್ದರೆ ಖಿನ್ನತೆ, ಆತಂಕ. ಅಪೌಷ್ಟಿಕತೆ, ಮಾನಸಿಕ ಯಾತನೆ ಮತ್ತು ದೈಹಿಕ ಬದಲಾವಣೆ ಸೇರಿ ಇನ್ನಿತರ ಸಮಸ್ಯೆಗಳಿಂದ ಬಳಲುವಂತಾಗುತ್ತದೆ. ಅಂಥ ಮಕ್ಕಳಿಗೆ ವಿಶೇಷ ಆರೈಕೆ ಒದಗಿಸಬೇಕು.
-ಡಾ.ಎಸ್.ಶ್ರೀನಿವಾಸ್, ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಮಕ್ಕಳ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ