Friday, 22nd November 2024

ಪೊಲೀಸರ ಹಲ್ಲೆ ವಿರೋಧಿಸಿ ತ್ರಿಪುರಾ ಬಂದ್‌

ಗುವಾಹತಿ: ಸೋಮವಾರ ಮುಂಜಾನೆಯಿಂದ ಮುಸ್ಸಂಜೆವರೆಗೆ ಬಂದ್ ಆಚರಿಸಲು ರಾಜ್ಯದ ಪ್ರಬಲ ವಿದ್ಯಾರ್ಥಿ ಸಂಘಟನೆ ಟ್ರೈಬಲ್ ಸ್ಟೂಡೆಂಟ್ಸ್ ಫೆಡರೇಷನ್ (ಟಿಎಸ್‌ಎಫ್) ಕರೆ ನೀಡಿದೆ.

ಮುಖ್ಯಮಂತ್ರಿ ಬಿಪ್ಲವ್ ದೇವ್ ಅವರ ಬೆಂಗಾವಲು ವಾಹನ ತೆರಳುವ ಮಾರ್ಗದ ಬದಿಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದ್ದಕ್ಕಾಗಿ ಬುಡಕಟ್ಟು ಜನಾಂಗಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಿ ಕರೆ ನೀಡಿದೆ.

“ನಮ್ಮ ದ್ವಿಚಕ್ರ ವಾಹನ ಕೆಟ್ಟು ಹೋದ ಕಾರಣ ಅಲ್ಲಿ ನಿಲ್ಲಿಸಲಾಗಿತ್ತೇ ವಿನಃ ಮುಖ್ಯಮಂತ್ರಿಯವರ ಮಾರ್ಗಕ್ಕೆ ತಡೆ ಒಡ್ಡುವುದು ತಮ್ಮ ಉದ್ದೇಶವಾಗಿರಲಿಲ್ಲ” ಎಂದು ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದರೂ, ಪೊಲೀಸರು ಪ್ರಕರಣ ದಾಖಲಿಸಿದ್ದರು.

ದೈಹಿಕ ಹಲ್ಲೆ ನಡೆಸಿದ ಸಂಚಾರಿ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿ ದ್ದಾರೆ ಎಂದು ವಿದ್ಯಾರ್ಥಿಗಳು ಆಪಾದಿಸಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿ ತೊಡೆ ಸಂಧಿಗೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾಗಿ ವಿದ್ಯಾರ್ಥಿ ದೂರಿದ್ದಾರೆ.

ಈ ಘಟನೆ ಬಗ್ಗೆ ತನಿಖೆಗೆ ತ್ರಿಪುರಾ ಪೊಲೀಸ್ ಅಧಿಕಾರಿಗಳು ಆದೇಶಿಸಿ, ಘಟನೆಯ ಸಂಬಂಧ ಆರೋಪಿ ಪೊಲೀಸ್‌ನನ್ನು ಕರ್ತವ್ಯದಿಂದ ಹೊರಗಿಟ್ಟಿದ್ದೂ, ಟಿಎಸ್‌ಎಫ್ ಬಂದ್‌ಗೆ ಕರೆ ನೀಡಿದೆ.