Sunday, 5th January 2025

ಇವರು ಎಲಾನ್ ಮಸ್ಕ್ ಮುಂದೆ ಬೆತ್ತಲಾಗಿದ್ದಾರೆ

ಸಕಾಲಿಕ

ಪ್ರಕಾಶ್ ಶೇಷರಾಘವಾಚಾರ‍್

ಎಂತಹ ದೌರ್ಭಾಗ್ಯ! ಒಂದು ಪಕ್ಷ ಮತ್ತು ವ್ಯಕ್ತಿಯ ಮೇಲೆ ಇರುವ ಅಪರಿಮಿತ ದ್ವೇಷದ ಸಲುವಾಗಿ ಸಮಸ್ಯೆಯ ಅರಿವೆ ಇಲ್ಲದೆ ತಮ್ಮ ಟ್ವೀಟ್ ಮೂಲಕ ವಿರೋಧ ಪಕ್ಷಗಳ ಸರಕಾರಗಳು ವಿದೇಶಿ ಕಂಪನಿಯ ಮುಂದೆ ಅಪಹಾಸ್ಯಕ್ಕೆ ಈಡಾಗೀರುವುದು ಅತ್ಯಂತ ನೋವಿನ ಸಂಗತಿ.

ಕೊರೊನಾ ವೇಳೆ ಉಂಟಾದ ಆರ್ಥಿಕ ಸಂಕಷ್ಟವನ್ನು ಎದುರಿಸಲು ದೇಶೀಯ ಉತ್ಪಾದನೆಗೆ ಒತ್ತು ಕೊಡುವ ಸಲುವಾಗಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತಕ್ಕೆ ಕರೆ ನೀಡಿದರು. ಇದರರ್ಥ ಕೇವಲ ಸ್ವದೇಶಿ ವಸ್ತುಗಳನ್ನು ಉಪಯೋಗಿಸಿ ಎಂದಾಗಿರಲಿಲ್ಲ. ಬದಲಿಗೆ ಭಾರತದಲ್ಲಿ ಉತ್ಪಾದನೆಗೆ ಮುಂದಾಗುವ ಉತ್ತೇಜನಕರ ನೀತಿಗೆ ನಾಂದಿಯಾಗಿತ್ತು. ಆತ್ಮನಿರ್ಭರ ಭಾರತದ ಕಲ್ಪನೆ ಫಲವಾಗಿ ರಕ್ಷಣಾ ಕ್ಷೇತ್ರದಲ್ಲಿ ಬಹುದೊಡ್ಡ ಬದಲಾವಣೆಯು ಕಂಡಿತು.

ಸ್ವದೇಶಿ ನಿರ್ಮಿತ 83 ತೇಜಸ್ ಜೆಟ್ ಖರೀದಿಯಿಂದ ಹಿಡಿದು ಎಕೆ 203 ಗನ್‌ಗಳನ್ನು ರಷ್ಯಾ ದೇಶದ ಸಹಯೋಗದಲ್ಲಿ ದೇಶೀಯವಾಗಿಯೇ ಉತ್ಪಾದಿಸಲು ಆರಂಭ ಮಾಡುವಂತಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಆಮದಿಗೆ ಕಡಿವಾಣ ಹಾಕಿ ದೇಶೀಯ ಉತ್ಪಾದನೆಯ ರಕ್ಷಣಾ ಉಪಕರಣಗಳನ್ನು ಖರೀದಿಸಲು ಆದ್ಯತೆ ಯನ್ನು ನೀಡುವಂತಾಗಿ ರಕ್ಷಣಾ ಬಜೆಟ್‌ನ ಶೇಕಡಾ 63ರಷ್ಟು ಹಣವನ್ನು ದೇಶೀಯ ನಿರ್ಮಿತ ರಕ್ಷಣಾ ಉಪಕರಣ ಖರೀದಿಸಲು ಮೀಸಲಿಡಲಾಗಿದೆ. ಸದ್ಯತಾಳೆ ಎಣ್ಣೆಯನ್ನು ಮಲೇಷೀಯಾ ಮತ್ತು ಇಂಡೊನೇಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ಇದನ್ನು ತಪ್ಪಿಸಿ, ಕೃಷಿ ಕ್ಷೇತ್ರದಲ್ಲಿ ಎಣ್ಣೆ ಕಾಳುಗಳಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಮಹತ್ವದ ಹೆಜ್ಜೆ ಇಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಡುಗೆ ಎಣ್ಣೆಯ ಬೆಲೆಯಿಂದ ಸರಕಾರಕ್ಕೆ ಮತ್ತು ಬಳಕೆದಾರ ರಿಗೆ  ಹೊರೆಯಾಗುತ್ತಿರುವ ಕಾರಣ ದೇಶೀಯ ತಾಳೆಗಿಡಗಳ ಕೃಷಿಗೆ 10040 ಕೋಟಿ ರು. ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ  ಬರುವ ದಿನಗಳಲ್ಲಿ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಭಾರತವನ್ನು ಉತ್ಪಾದಕ ದೇಶವನ್ನಾಗಿ ಬದಲಾಯಿಸಲು ಮತ್ತು ರಪ್ತಿಗೆ ಹೆಚ್ಚು ಉತ್ತೇಜನ ನೀಡುವ ಉದ್ದೇಶದಿಂದ ಉತ್ಪಾದನೆಗೆ ಸಂಬಂಧಿಸಿದ ಪ್ರೋತ್ಸಾಹಕರ ಯೋಜನೆಯನ್ನು ಮೋದಿ ಸರ್ಕಾರ 13 ವಿವಿಧ ಕ್ಷೇತ್ರಗಳಲ್ಲಿ ಜಾರಿಗೆ ತಂದಿದೆ.

ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಮೊಬೈಲ್ ಸೆಟ್, ಲ್ಯಾಪ್‌ಟ್ಯಾಪ್, ಟ್ಯಾಬ್‌ಲ್ಟ್ ಮುಂತಾದವುಗಳನ್ನು ದೇಶೀಯವಾಗಿ ಉತ್ಪಾದಿಸಲು ಉತ್ತೇಜಿಸಲು 47 ಸಾವಿರ
ಕೋಟಿ ರು.ಯೋಜನೆ ಜಾರಿಗೆ ತಂದ ಪರಿಣಾಮ ಭಾರತ ಇಂದು ಮೊಬೈಲ್ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ. 2014ರ ಮೊದಲು ದೇಶದಲ್ಲಿ ಕೇವಲ 2 ಮೊಬೈಲ್ ಉತ್ಪಾದಿಸುವ ಘಟಕಗಳು ಇದ್ದವು, ಈಗ ಅದರ ಸಂಖ್ಯೆ 200 ರ ಗಡಿ ದಾಟಿದೆಯಲ್ಲದೆ, 60 ಮಿಲಿಯನ್ ಸೆಟ್‌ನಿಂದ 30 ಬಿಲಿಯನ್ ಡಾಲರ್ ಮೊತ್ತದ 290 ಮಿಲಿಯನ್ ಮೊಬೈಲ್ ಸೆಟ್‌ಗಳ ಉತ್ಪಾದನೆಯಾಗುತ್ತಿದೆ.

ಆಹಾರ ಪದಾರ್ಥಗಳ ಸಂಸ್ಕರಣೆ ಹೆಚ್ಚಿಸಲು ವಿಶೇಷವಾಗಿ ಸಿದ್ದಪಡಿಸಿದ ಆಹಾರ, ಸಮುದ್ರ ಉತ್ಪನ್ನಗಳು, ಹಣ್ಣು ಮತ್ತು ತರಕಾರಿ. ಜೇನುತುಪ್ಪ, ಸಾವಯವ ಮೊಟ್ಟೆ ಮತ್ತು ಕೋಳಿಮಾಂಸ ಇವುಗಳಲ್ಲಿ ಆತ್ಮನಿರ್ಭರತೆ ಸಾಧಿಸಲು 10900ಕೋಟಿ ರು. ಉತ್ಪಾದನಾ ಪ್ರೋತ್ಸಾಹ ಯೋಜನೆಯನ್ನು ಜಾರಿಗೊಳಿಸಿದೆ. ದೂರಸಂರ್ಪಕ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸಲು 4ಜಿ ಮತ್ತು 5ಜಿ ನೆಟ್ ವರ್ಕ್ ಉಪಕರಣ ಮತ್ತು ನಿಸ್ತಂತು ಉಪಕರಣಗಳ ದೇಶೀಯ ಉತ್ಪಾದನೆಗೆ 12195ಕೋಟಿ ರು. ನೀಡಲಾಗುತ್ತಿದೆ.

ಆಟೋಮೊಬೈಲ್ ಕ್ಷೇತ್ರದಲ್ಲಿ ಬಹುತೇಕ ವಾಹನ ಬಿಡಿ ಭಾಗಗಳನ್ನು ಚೀನಾ ದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ದೇಶೀಯ ಉತ್ಪಾದನೆ
ಉತ್ತೇಜಿಸಲು 57042 ಕೋಟಿ ರು. ಪ್ರೋತ್ಸಾಹಕರ ಯೋಜನೆಯನ್ನು ಈ ಕ್ಷೇತ್ರಕ್ಕೆ ಮೀಸಲಿಟ್ಟ ಪರಿಣಾಮ 115 ಕಂಪನಿಗಳು ತಮ್ಮ ಘಟಕಗಳನ್ನು ಸ್ಥಾಪನೆ ಮಾಡಲು ಅರ್ಜಿ ಸಲ್ಲಿಸಿವೆ. ಈ ಕ್ಷೇತ್ರದಲ್ಲಿಯೂ ಭಾರತ ಸ್ವಾವಲಂಬನೆ ಸಾಧಿಸುವ ದಿನ ದೂರವಿಲ್ಲ. ದೇಶಾದ್ಯಂತ ಕರೋನಾ ಹೆಚ್ಚಾದಾಗ ದೇಶದ ವೈದ್ಯಕೀಯ ಮೂಲಭೂತ ಸೌಕರ್ಯದ ಕೊರತೆಯು ಬಟ್ಟ ಬಯಲಾಯಿತು. ಈ ಕೊರತೆಯನ್ನು ನೀಗಿಸಲು ಮತ್ತು ಆಮದಿನ ಮೇಲೆ ಅವಲಂಬನೆ ಕಡಿತಗೊಳಿಸಲು
ದೇಶೀಯವಾಗಿ ವೈದ್ಯಕೀಯ ಉಪಕರಣಗಳ ಉತ್ಪಾದನೆ ಹೆಚ್ಚಿಸುವ ಸಲುವಾಗಿ 18420ಕೋಟಿ ರು.ಯೋಜನೆ ಜಾರಿಗೆ ತರಲಾಗಿದೆ. ಈಗಾಗಲೇ ಹತ್ತು ಕಂಪನಿಗಳ ಅರ್ಜಿಯನ್ನು ಸರ್ಕಾರ ಅನುಮೋದಿಸಿದೆ.

ಇತ್ತೀಚೆಗೆ ಮೈಕ್ರೋಚಿಪ್ಸ್ ಕೊರತೆಯಿಂದ ವಾಹನ ಉತ್ಪಾದನೆಗೆ ದೊಡ್ಡ ಹೊಡೆತ ಬಿದ್ದಿದೆ. ದೇಶೀಯವಾಗಿ ಮೈಕ್ರೋ ಚಿಪ್ಸ್ ಉತ್ಪಾದನೆಯಿಲ್ಲದೆ ನಮ್ಮ ಎಲ್ಲಾ ಅಗತ್ಯತೆಗಳಿಗಾಗಿ ನಾವು ಚೀನಾ ದೇಶದ ಮೇಲೆ ಅವಲಂಬನೆಯಾಗಬೇಕಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಭಾರತದಲ್ಲಿ ಇದರ ಉತ್ಪಾದ ನೆಯನ್ನುತ್ತೇಜಿಸಲು 76000 ಕೋಟಿ ರು. ಉತ್ಪಾದನಾ ಜೋಡಣೆಯ ಪ್ರೋತ್ಸಾಹ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ಇಂಟೆಲ್‌ನಂತಹ ದೈತ್ಯ ಕಂಪನಿಯು ಸೇರಿದಂತೆ 6 ಕಂಪನಿಗಳು ಹಾಗೂ ವೇದಾಂತ ಕಂಪನಿಯವರು ಕರ್ನಾಟಕದಲ್ಲಿ ತಮ್ಮ ಕಾರ್ಖಾನೆ ತೆರೆಯಲು
ಮುಂದಿ ಬಂದಿದ್ದಾರೆ ಎನ್ನಲಾಗಿದೆ. ಡ್ರೋನ್ ತಂತ್ರಜ್ಞಾನ ಬಹುಬೇಗ ಜನಪ್ರಿಯವಾದ ಕ್ಷೇತ್ರ. ಈ ಬಹುಉಪಯೋಗಿ ಉಪಕರಣ ಹೆಚ್ಚಿನದಾಗಿ ಆಮದುಗೆ ಸಿಮೀತವಾಗಿದೆ. ಭಾರತವನ್ನು ಡ್ರೋನ್ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು 120ಕೋಟಿ ರು.ಯೋಜನೆ ಘೋಷಿಸಲಾಗಿದೆ.

ಔಷಽಯ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸಲು 21940 ಕೋಟಿ ರು. ನೀಡಲಾಗುತ್ತಿದೆ. ಕರೋನಾ ಲಸಿಕೆ ಉತ್ಪಾದನೆಗೆ ಕೇಂದ್ರ ಸರಕಾರ ದೇಶೀಯ ಲಸಿಕೆ ಅಭಿವೃದ್ಧಿಗೆ ಮುಂದಾಗದಿದ್ದರೆ ಇಂದು ಭಾರತ ಬಹು ದೊಡ್ಡ ಸಂಕಷ್ಟದಲ್ಲಿ ಸಿಲುಕುತ್ತಿತ್ತು. ಅಪಾರ ಹಣವನ್ನು ವೆಚ್ಚ ಮಾಡಿ ಲಸಿಕೆಯನ್ನು ಖರೀದಿಸಬೇಕಾ ಗುತ್ತಿತ್ತು, ಹಾಗೂ ಅಗತ್ಯವಿದ್ದಷ್ಟು ಲಸಿಕೆಯು ದೊರೆಯುವುದು ದುರ್ಭರವಾಗುತ್ತಿತ್ತು. ಮೋದಿ ಸರಕಾರದ ದೂರದೃಷ್ಟಿಯ ಕಾರಣವಾಗಿ ಮೂರು ಕಂಪನಿಗಳು ಕರೋನಾ ಲಸಿಕೆಯನ್ನು ಉತ್ಪಾದಿಸುತ್ತಿವೆ. ಇದರ ಪರಿಣಾಮವಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ 156 ಕೋಟಿ ಡೋಸ್ ಲಸಿಕೆಯನ್ನು ಭಾರತ ಸುಲಭವಾಗಿ ನೀಡಿ ಜನರ ಆರೋಗ್ಯವನ್ನು ಕಾಪಾಡಿದೆ ಎಂದರೆ ಅತಿಶಯೋಕ್ತಿಯಲ್ಲ.

ಸಿದ್ದ ಉಡುಪು ಕ್ಷೇತ್ರ, ನವೀಕರಿಸಿದ ಇಂಧನ ಕ್ಷೇತ್ರ ಮತ್ತು ವೈಟ್‌ಗೊಡ್ಸ್ ಗಳ ಉತ್ಪಾದನೆಗೆ ಒತ್ತು ನೀಡಲು 26 ಸಾವಿರ ಕೋಟಿ ರು. ಉತ್ಪಾದನಾ ಉತ್ತೇಜನ ಯೋಜನೆಯನ್ನು ಜಾರಿಗೆ ತಂದಿದೆ. ವಿಶ್ವದ ದೊಡ್ಡ ದೊಡ್ಡ ಕಂಪನಿಗಳು ಇಲ್ಲಿಯ ತನಕ ತಮ್ಮ ಉತ್ಪಾದನ ಘಟಕಗಳನ್ನು ಸ್ಥಾಪಿಸಲು ಕೇವಲ ತಮ್ಮ ಗಮನವನ್ನು ಚೀನಾ ದೇಶದ ಕಡೆ ನೋಡುತ್ತಿದ್ದವು. ಇದರ ಫಲವಾಗಿ ಚೀನಾ ಜಗತ್ತಿನ ಅತಿ ದೊಡ್ಡ ಉತ್ಪಾದನಾ ದೇಶವಾಗಿ ಹೊರಹೊಮ್ಮಿದೆ. ಭಾರತವೂ ಸೇರಿ ಬಹುತೇಕ ರಾಷ್ಟ್ರಗಳು ಅನೇಕ ಪದಾರ್ಥಗಳಿಗೆ ಚೀನಾ ಮೇಲೆ ಅವಲಂಬಿಸುವುದು ಅನಿವಾರ್ಯವಾಗಿದೆ.

ದೇಶೀಯ ಉತ್ಪಾದನೆಗೆ ನೀಡುತ್ತಿರುವ ನೆರವು ನೀತಿಯ ಫಲವಾಗಿ ಕಳೆದ 70 ವರ್ಷದಲ್ಲಿ ಮೊದಲ ಬಾರಿಗೆ ಕಳೆದ 9 ತಿಂಗಳಿನಲ್ಲಿ ಭಾರತದ ರಪ್ತು 300 ಬಿಲಿಯನ್ ಡಾಲರ್ ಮುಟ್ಟಿದೆ. ಮುಂದಿನ ಮೂರು ತಿಂಗಳಿನಲ್ಲಿ 400 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇರುವುದು. ಭಾರತದಲ್ಲಿ ಮಾರಾಟ ಮಾಡ ಬೇಕೆಂದರೆ ಭಾರತದಲ್ಲಿಯೇ ಉತ್ಪಾದಿಸಿ ಎಂಬ ಸ್ಪಷ್ಟ ನೀತಿಯನ್ನು ಮೋದಿ ಸರಕಾರ ಅನುಸರಿಸುತ್ತಿದೆ. ಇದರ ಫಲವಾಗಿ ಅನೇಕ ವಿದೇಶಿ ಉದ್ದಿಮೆಗಳು ಭಾರತದಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಆರಂಭಿಸುತ್ತಿವೆ. ಇದರಿಂದ ವಿದೇಶಿ ವಿನಿಮಯ ಉಳಿತಾಯ ಮತ್ತು ಉದ್ಯೋಗಾವಕಾಶ ಹೆಚ್ಚಾಗಿದೆ.

ವಿದ್ಯುತ್ ಚಾಲಿತ ಕಾರ್ ಉತ್ಪಾದನೆಯಲ್ಲಿ ಎಲಾನ್ ಮಸ್ಕ್‌ರವರ ಟೆಸ್ಲಾ ಕಾರನ್ನು ಮೀರಿಸಲು ಸಾಧ್ಯವಿಲ್ಲ ದಂತಹ ವರ್ಚಸ್ಸು ಅದರದು. ಭಾರತದಲ್ಲಿ ವಿದ್ಯುತ್
ಚಾಲಿತ ಕಾರುಗಳಿಗೆ ದೊರೆಯುತ್ತಿರುವ ವಿನಾಯತಿಗಳಿಂದ ಅವು ಹೆಚ್ಚು ಜನಪ್ರಿಯವಾಗುತ್ತಿವೆ. ಇದರ ಲಾಭವನ್ನು ವಿಶ್ವದ ಅತಿ ದೊಡ್ಡ ಕಾರು ಉತ್ಪಾದಕ ಎಲಾನ್ ಮಸ್ಕ್ ಸಹಾ ಪಡೆಯಲು ಮುಂದಾಗುವುದು ಸಹಜ. ತನ್ನ ಕಾರನ್ನು ಭಾರತದಲ್ಲಿ ಮಾರಾಟ ಮಾಡಲು ಆಮದು ಶುಲ್ಕದಲ್ಲಿ ರಿಯಾಯತಿ ಕೇಳಿದಾಗ ಭಾರತ ಸರಕಾರ ತಾವು ಚೀನಾದಿಂದ ಕಾರು ತಂದು ಭಾರತದಲ್ಲಿ ಮಾರುವ ಬದಲು ಭಾರತದಲ್ಲಿಯೇ ಉತ್ಪಾದನೆ ಮಾಡಿ ಎಂದು ಸ್ಪಷ್ಟವಾಗಿ ತಿಳಿಸಿತು.

ಎಲಾನ್ ಮಸ್ಕ್ ತನ್ನ ಟ್ವೀಟ್ ಮೂಲಕ Still working through a lot of challenges with govt ಎಂದು ಮಾಹಿತಿ ನೀಡಿದ ಕೂಡಲೇ
ಸವಾಲೇನು? ಟ್ವೀಟ್ ನ ಹಿಂದಿನ ಉದ್ದೇಶವೇನು ಎಂದು ಆಲೋಚನೆಯನ್ನು ಮಾಡದೇ ಮಹಾರಾಷ್ಟ್ರ, ತೆಲಂಗಾಣ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಸಚಿವರು ನಮ್ಮ ರಾಜ್ಯಕ್ಕೆ ಬನ್ನಿ ಕೆಂಪುಗಂಬಳಿ ಹಾಕಿ ಸ್ವಾಗತಿಸುತ್ತೇವೆ ಎಂದು ಟ್ವೀಟ್ ಮೂಲಕ ಎಲಾನ್ ಮಸ್ಕ್‌ಗೆ ಆಹ್ವಾನ ನೀಡಿದ್ದಾರೆ. ಕೇಂದ್ರ ಸರಕಾರವನ್ನು ಉಪೇಕ್ಷೀಸಿ ವಿದೇಶಿ ಕಂಪನಿಗೆ ಸ್ವಾಗತ ಕೋರಿದರೆ ದೇಶದ ಘನತೆ ಮಣ್ಣು ಪಾಲಾಗುವುದಲ್ಲದೆ ತಮ್ಮ ಮಾನವು ಹೋಗುತ್ತದೆ ಎಂಬುದು ಮರೆತಿದ್ದಾರೆ.

ತಮ್ಮ ಇತಿ ಮಿತಿಯ ಅರಿವಿಲ್ಲದೆ ದೇಶದ ಗೌರವವನ್ನು ಹರಾಜು ಹಾಕಿ ವಿದೇಶಿ ಕಂಪನಿಯ ಮುಂದೆ ಬೆತ್ತಲಾಗಿ ನಿಂತಿದ್ದಾರೆ. ಒಂದು ಕಡೆ ಕೇಂದ್ರ ಸರ್ಕಾರ ದೇಶೀಯ ಉತ್ಪಾದನೆಗೆ ಆದ್ಯತೆ ನೀಡುವ ನೀತಿ ಯನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದ್ದರೆ ಈ ರಾಜ್ಯ ಸರ್ಕಾರಗಳು ಕೀಳುಮಟ್ಟದ ರಾಜಕೀಯ ಮಾಡುವ
ಆತುರದಲ್ಲಿ ದೇಶದ ನೀತಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ.

ಕೊರೊನಾ ಲಸಿಕೆಯನ್ನು ನಾವೇ ನೇರವಾಗಿ ಆಮದು ಮಾಡಿಕೊಳ್ಳುತ್ತೇವೆ ಎಂದು ಮಹಾರಾಷ್ಟ್ರ ಮತ್ತು ದೆಹಲಿ ಸರಕಾರಗಳು ಫೈಜರ್ ಮತ್ತು ಮಾಡ್ರನಾ ಕಂಪನಿಗಳನ್ನು ಸಂರ್ಪಕಿಸಿದಾಗ ಭಾರತ ಸರಕಾರದ ಖಾತರಿ ಇಲ್ಲದೆ ಕೊಡಲಾಗುವುದಿಲ್ಲ ಎಂದು ಉತ್ತರಿಸಿ ಇವರ ಮಾನ ಕಳೆದಿದ್ದವು. ಅದರಿಂದ ಪಾಠ ಕಲಿಯದೆ ವಿರೋಧ ಪಕ್ಷಗಳು ಮೋದಿ ಯವರಿಗೆ ಮುಜುಗರವನ್ನುಂಟು ಮಾಡಲು ದೇಶದ ಘನತೆಗೆ ಧಕ್ಕೆ ತಂದಿರುವುದಲ್ಲದೆ ವಿದೇಶಿ ಕಂಪನಿಯ ಮುಂದೆ ಅಪಹಾಸ್ಯಕ್ಕೆ ಒಳಗಾಗಿದ್ದಾರೆ. ಈ ರಾಜ್ಯ ಸರಕಾರಗಳು ತಮ್ಮ ಕುಚೇಷ್ಟೆಯಿಂದ ಮೋದಿಯವರನ್ನು ಇಕ್ಕಟಿಗೆ ಸಿಲುಕಿಸುವುದಕ್ಕಿಂತ ಹೆಚ್ಚಾಗಿ ತಮ್ಮ ಮರ್ಯಾದೆ ಹಾಳಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಸಾಮಾನ್ಯ ಜ್ಞಾನವನ್ನು ಕಳೆದುಕೊಂಡಿದ್ದಾರೆ.

ನರೇಂದ್ರ ಮೋದಿಯವರನ್ನು ಮಣಿಸಲು ಇವರ ಬತ್ತಳಿಕೆಯಲ್ಲಿ ಇರುವ ಬಾಣಗಳೆ ಮುಗಿದಿದ್ದರಿಂದ ಈಗ ಹೀಗೆ ಮಾಡುತ್ತಿದ್ದಾರೆ. ಈ ಸರ್ಕಾರಗಳು ಮೋದಿ ಯವರ ಮೇಲೆ ದ್ವೇಷವನ್ನು ಭಾರತದ ಮೇಲೆ ತೋರಿಸಿ 135 ಕೋಟಿ ಭಾರತೀಯರಿಗೆ ಅಪಮಾನವನ್ನು ಮಾಡಲೂ ಹಿಂಜರಿಯುತ್ತಿಲ್ಲ ಇದಕ್ಕಾಗಿ ದೇಶದ ಐಕ್ಯತೆ ಮತ್ತು ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಿ ವಿದೇಶೀಯನ ಮುಂದೆ ಮಂಡಿಯೂರಿ ಕುಳಿತುಕೊಳ್ಳಲು ಹೇಸದ ವಿರೋಧ ಪಕ್ಷಗಳಿಗೆ ಈ ದೇಶದ ಗೌರವ ಘನತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯಎಂಬುದನ್ನು ನೆನಪಿಸಬೇಕಾದ ಸಮಯ ಬಂದಿದೆ.