Thursday, 12th December 2024

ಭಾಷಾ ವಿಷಯದಲ್ಲಿ ರಾಜಕೀಯ ಬೇಡ

ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಕರೋನಾ ಸೋಂಕು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅದರ ನಿರ್ವಹಣೆ ಹೇಗೆ ಎನ್ನುವ ಬಗ್ಗೆ ಸರಕಾರ ಹಾಗೂ ಆಡಳಿತ ವರ್ಗ ಚಿಂತಿಸುತ್ತಿದೆ. ಎರಡನೇ ಅಲೆಯ ಆಘಾತದಿಂದ ಹೊರಬಾರದ ಜನರಿಗೆ, ಮೂರನೇ ಅಲೆಯಿಂದ ಇನ್ನಷ್ಟು ಆತಂಕ ಸೃಷ್ಟಿಯಾಗಿದೆ.

ಆದರೆ ಈ ಎಲ್ಲದರ ನಡುವೆ ಕಳೆದ ಎರಡು ದಿನದಿಂದ ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವುದು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಿರುವ ಬಗ್ಗೆ. ಕನ್ನಡಪರ ಸಂಘಟನೆಗಳು, ಪ್ರಗತಿಪರ ಚಿಂತಕರು ಹಾಗೂ ಕಾಂಗ್ರೆಸ್ ನಾಯಕರು ರಾಜ್ಯ ಸರಕಾರ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನೇ ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಸಹಜ ಎನ್ನುವಂತೆ ಬಿಜೆಪಿ ಹಾಗೂ ಬಲಪಂಥೀಯ ಚಿಂತಕರು ಪ್ರತಿಕ್ರಿಯೆ ನೀಡಲು ಶುರುಮಾಡಿದ್ದಾರೆ.

ಈ ಸಮಯದಲ್ಲಿ ಕರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಸಲಹೆ ಸೂಚನೆ ನೀಡಬೇಕಾದ ಪ್ರತಿಪಕ್ಷಗಳು ಈ ರೀತಿ ಭಾಷಾ ರಾಜಕೀಯ ಮಾಡಿಕೊಂಡು ಕೂರುವುದು ಸರಿಯಲ್ಲ. ಅಷ್ಟಕ್ಕೂ ಸಂಸ್ಕೃತ ವಿಶ್ವವಿದ್ಯಾಲಯ ಆರಂಭವಾಗಿರುವುದು ಈಗಲ್ಲ. ಬದಲಿಗೆ 2010ರಲ್ಲಿಯೇ ಆರಂಭವಾಗಿರುವ ವಿವಿಗೆ ಈಗಿರುವ ಸರಕಾರ, ಅನುದಾನ ಹಾಗೂ ಸ್ವಂತ ಕಟ್ಟಡ ನಿರ್ಮಾಣಕ್ಕೆ ಹಣವನ್ನು ಒದಗಿಸಿದೆ.

ದೇವಭಾಷೆಯಾಗಿರುವ ಸಂಸ್ಕೃತದ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಅದಕ್ಕಾಗಿ ಪ್ರತ್ಯೇಕ ವಿವಿ ಅಗತ್ಯವಿದೆ ಎನ್ನುವ ಕಾರಣಕ್ಕೆ ಆರಂಭಿಸಿರುವ ವಿವಿಯನ್ನು ಅಭಿವೃದ್ಧಿಗೊಳಿಸುವಲ್ಲಿ ಇರುವ ತಪ್ಪೇನು? ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುವ ಬದಲು ಸಂಸ್ಕೃತ ವಿವಿಗೆ ಅನುದಾನ ನೀಡಲಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಕನ್ನಡ ವಿವಿಗೆ ಅನುದಾನ ನೀಡಿ ಎಂದು ಬೇಡಿಕೆ ಸಲ್ಲಿಸುವುದು ಸರಿ ಹಾಗೂ ಕರ್ನಾಟಕ ಸರಕಾರ ಕನ್ನಡ ವಿವಿಗೆ ಅನುದಾನ ನೀಡುವುದು ತಪ್ಪಲ್ಲ. ಆದರೆ ಸಂಸ್ಕೃತ ವಿವಿಗೆ ಇರುವ ಅನುದಾನವನ್ನು ಕಡಿತಗೊಳಿಸಿ ಎನ್ನುವುದು ಸರಿಯಲ್ಲ.