ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವೇತನದಾರ ಮತ್ತು ಮಧ್ಯಮ ವರ್ಗದವರಿಗೆ ಯಾವುದೇ ಪರಿಹಾರ ಕ್ರಮಗಳನ್ನು ಘೋಷಿಸದೆ ದ್ರೋಹ ಮಾಡಿದ್ದಾರೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.
ದೇಶದ 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ್ದು, ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ವೇತನ ಕಡಿತ ಮತ್ತು ಹೆಚ್ಚಿನ ಹಣದುಬ್ಬರದಿಂದಾಗಿ ಸಂಬಳದಾರರು ಮತ್ತು ಮಧ್ಯಮ ವರ್ಗದ ಜನರು ತೊಂದರೆಗೀಡಾಗಿ ದ್ದಾರೆ ಎಂದು ಟೀಕಿಸಿದರು.
ಭಾರತದ ಸಂಬಳ ಪಡೆಯುವ ವರ್ಗ ಮತ್ತು ಮಧ್ಯಮ ವರ್ಗವು ಪರಿಹಾರಕ್ಕಾಗಿ ಆಶಿಸುತ್ತಿದ್ದರು. ನೇರ ತೆರಿಗೆ ಕ್ರಮಗಳಲ್ಲಿ ಹಣಕಾಸು ಸಚಿವೆ ಮತ್ತು ಪ್ರಧಾನಮಂತ್ರಿಗಳು ಮತ್ತೊಮ್ಮೆ ಅವರನ್ನು ಆಳವಾಗಿ ನಿರಾಶೆಗೊಳಿಸಿ ದ್ದಾರೆ, ಇದು ಭಾರತದ ಸಂಬಳದ ವರ್ಗ ಮತ್ತು ಮಧ್ಯಮ ವರ್ಗದ ದ್ರೋಹ ವಾಗಿದೆ,” ಎಂದು ಟ್ವಿಟರ್‌ನಲ್ಲಿ ಕಿಡಿಕಾರಿದ್ದಾರೆ.
ಬಜೆಟ್ ಡಾಕ್ಯುಮೆಂಟ್ ಅನ್ನು “ನಥಿಂಗ್ ಬಜೆಟ್’ ಎಂದು ಕರೆದಿದ್ದಾರೆ. ಸಂಬಳದಾರರು ಮತ್ತು ಮಧ್ಯಮ ವರ್ಗದವರಿಗೆ ಮತ್ತು ರೈತರು ಮತ್ತು ಯುವಕರಿಗೆ “ಜೇಬು ಖಾಲಿಯಾಗಿದೆ’ ಎಂದು ಹೇಳಿದರು. ಸಣ್ಣ ಪ್ರಮಾಣದ ಉದ್ಯಮವನ್ನು ಉತ್ತೇಜಿಸಲು ಬಜೆಟ್‌ನಲ್ಲಿ ಏನೂ ಇಲ್ಲ ಎಂದು ಹೇಳಿದರು.
ಕ್ರಿಪ್ಟೋ ಕರೆನ್ಸಿಗಳು ಕಾನೂನುಬದ್ಧವಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲದಿರುವಾಗ, ಸರ್ಕಾರವು ಅದರ ಲಾಭದ ಮೇಲೆ ಹೇಗೆ ತೆರಿಗೆಯನ್ನು ವಿಧಿಸು ತ್ತಿದೆ ಎಂದು ಸುರ್ಜೆವಾಲಾ ಕೇಳಿದರು. ದಯವಿಟ್ಟು ರಾಷ್ಟ್ರಕ್ಕೆ ತಿಳಿಸಿ, ನೀವು ಕ್ರಿಪ್ಟೋ ಕರೆನ್ಸಿಗೆ ತೆರಿಗೆ ವಿಧಿಸಿದಂತೆ, ಕ್ರಿಪ್ಟೋಕರೆನ್ಸಿ ಬಿಲ್ ಅನ್ನು ತರದೆಯೇ ಈಗ ಕ್ರಿಪ್ಟೋ ಕರೆನ್ಸಿ ಕಾನೂನುಬದ್ಧವಾಗಿದೆಯೇ? ಎಂದು ಪ್ರಶ್ನಿಸಿದರು.
ಕ್ರಿಪ್ಟೋ ಎಕ್ಸ್‌ಚೇಂಜ್‌ಗಳ ನಿಯಂತ್ರಣದ ಬಗ್ಗೆ ಏನು ಕ್ರಮ? ಹೂಡಿಕೆದಾರರ ರಕ್ಷಣೆಯ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ? ಎಂದು ಕಾಂಗ್ರೆಸ್ ವಕ್ತಾರರು ಟ್ವೀಟ್‌ನಲ್ಲಿ ಕೇಳಿದ್ದಾರೆ.
ರೈತರಿಗೆ ಏನೂ ಇಲ್ಲ. ಮಧ್ಯಮ ವರ್ಗದವರಿಗೆ ಏನೂ ಇಲ್ಲ. ಮತ್ತೆ ನಿರ್ಮಲಾ ಮೇಡಂ ಫೇಲ್ ಆಗಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ವಿಪ್ ಆಗಿರುವ ಟ್ಯಾಗೋರ್ ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ.