Monday, 23rd December 2024

ಪ್ರಧಾನಿ ಹುದ್ದೆಗಲ್ಲ, ರಾಷ್ಟ್ರಮಟ್ಟದಲ್ಲಿ ಬದಲಾವಣೆಗೆ ಹೋರಾಟ: ಚಂದ್ರಶೇಖರ್ ರಾವ್‌

ಹೈದರಾಬಾದ್‌: ‘ನಾನು ಪ್ರಧಾನಿಯಾಗಲು ಹೋರಾಡುತ್ತಿಲ್ಲ. ಆದರೆ, ರಾಷ್ಟ್ರಮಟ್ಟದಲ್ಲಿ ಬದಲಾವಣೆ ತರಲು ಹೋರಾಡುತ್ತೇನೆ’ ಎಂದು ‘ರಾಷ್ಟೀಯ ನಾಯಕತ್ವ’ ವಹಿಸಿಕೊಳ್ಳಲು ಸಿದ್ಧರಿರುವುದಾಗಿ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್‌ ಘೋಷಿಸಿದ್ದಾರೆ.

ರಾಷ್ಟ್ರೀಯ ನಾಯಕತ್ವದಲ್ಲಿ ಬದಲಾವಣೆಯ ಅಗತ್ಯವಿದೆ. ಅಭಿವೃದ್ಧಿ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳೆಂದು ಕರೆಯಲ್ಪಡುವ (ಕಾಂಗ್ರೆಸ್‌, ಬಿಜೆಪಿ) ಎರಡೂ ಪಕ್ಷಗಳು ವಿಫಲವಾಗಿವೆ. ವಾಸ್ತವವಾಗಿ ನಮಗೆ ಹೊಸ ಸಂವಿಧಾನದ ಅಗತ್ಯವಿದೆ. ಕೇಂದ್ರ ಸರ್ಕಾರ ಸಹಕಾರಿ ಒಕ್ಕೂಟದ ಹಾದಿಯಲ್ಲಿ ಕೆಲಸ ಮಾಡಲು ವಿಫಲವಾಗಿ ರುವುದರಿಂದ ಚರ್ಚೆಯ ಅಗತ್ಯವಿದೆ’ ಎಂದರು.

‘ಉತ್ತರ ಪ್ರದೇಶದಲ್ಲಿ ಬಿಜೆಪಿ ಪುನರಾಯ್ಕೆಯಾದರೂ ಅವರ ವರ್ಚಸ್ಸು ಗಣನೀಯವಾಗಿ ಕಡಿಮೆಯಾಗಲಿದೆ. ಒಂದು ವೇಳೆ ಬಿಜೆಪಿ ಗೆದ್ದರೆ ಅವರಿಗೆ ದುರಹಂಕಾರ ಹೆಚ್ಚುತ್ತದೆ’ ಎಂದು ಕೆಸಿಆರ್‌ ಟೀಕಿಸಿದ್ದಾರೆ.

‘ನಾನು ರಾಷ್ಟ್ರಮಟ್ಟದಲ್ಲಿ ನಾಯಕತ್ವ ಬದಲಾವಣೆಗಾಗಿ ಅನೇಕ ನಾಯಕರನ್ನು ಭೇಟಿ ಮಾಡಿದ್ದೇನೆ. ದೇಶದ ಯುವನಜತೆ ಎಚ್ಚೆತ್ತುಕೊಂಡು ಬದಲಾವಣೆ ತರಲು ಮನಸ್ಸು ಮಾಡಬೇಕಿದೆ. ನಾನು ಖಂಡಿತವಾಗಿಯೂ ಹೋರಾಟ ನಡೆಸುತ್ತೇನೆ’ ಎಂದು ತಿಳಿಸಿದ್ದಾರೆ.

2019ರ ಲೋಕಸಭೆ ಚುನಾವಣೆಗೂ ಮುನ್ನ ಕೆಸಿಆರ್‌ ಅವರು, ಕೇರಳ ಸಿಎಂ ಪಿಣರಾಯಿ ವಿಜಯನ್, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮತ್ತು ಮಮತಾ ಬ್ಯಾನರ್ಜಿ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ತೃತೀಯ ರಂಗ ರಚಿಸುವಂತೆ ಒತ್ತಾಯಿಸಿದ್ದರು.

ಕೆಸಿಆರ್‌ ಅವರು ಇತ್ತೀಚೆಗೆ ಕೇಂದ್ರ ವಿರೋಧ ಪಕ್ಷಗಳ ನಾಯಕರನ್ನು ಭೇಟಿಯಾಗುವ ಮೂಲಕ ‘ತೃತೀಯ ರಂಗ’ ರಚನೆ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದ್ದಾರೆ.