Monday, 25th November 2024

ಉರಗ ರಕ್ಷಕ ವಾವಾ ಸುರೇಶ್ ಆರೋಗ್ಯದಲ್ಲಿ ಚೇತರಿಕೆ

ತಿರುವನಂತಪುರಂ: ವಾವಾ ಸುರೇಶ್ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ವೆಂಟಿಲೇಟರ್ ಸಹಾಯವಿಲ್ಲದೇ ಅವರು ಉಸಿರಾಡಲು ಆರಂಭಿಸಿದ್ದಾರೆ. ಆದರೆ ವೆಂಟಿಲೇಟರ್ ವ್ಯವಸ್ಥೆಯಲ್ಲಿಯೇ ಅವರನ್ನು ಇಟ್ಟು ಆರೋಗ್ಯದ ಬಗ್ಗೆ ನಿಗಾವಹಿಸಲಾಗಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ವೆಂಟಿಲೇಟರ್ ಸಹಾಯವಿಲ್ಲದೇ ಉಸಿರಾಟ ನಡೆಸಿದ್ದಾರೆ. ಅವರ ಶ್ವಾಸಕೋಶ, ಹೃದಯ ಸಹಜ ಸ್ಥಿತಿಗೆ ಮರಳುತ್ತಿರುವುದಕ್ಕೆ ಇದು ಸೂಚನೆಯಾಗಿದೆ. ವೈದ್ಯರ ತಂಡ ಅವರ ಆರೋಗ್ಯ ಬಗ್ಗೆ ನಿಗಾ ವಹಿಸಿದೆ ಎಂದು ಆಸ್ಪತ್ರೆ ಹೇಳಿದೆ.

 

ಹಾವು ಕಚ್ಚಿದ 24 ರಿಂದ 48 ಗಂಟೆಗಳ ಕಾಲ ಬಹಳ ಪ್ರಮುಖವಾದದ್ದು, ಆ ಅವಧಿಯಲ್ಲಿ ವೆಂಟಿಲೇಟರ್ ಸಹಾಯದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ವಾವಾ ಸುರೇಶ್ ಆರೋಗ್ಯದಲ್ಲಿನ ಚೇತರಿಕೆ ಅವರ ಮೆದುಳಿಗೆ ರಕ್ತ ಪೂರೈಕೆ ಸಹಜವಾಗಿ ಆಗುತ್ತಿದೆ ಎಂಬುದಕ್ಕೆ ಸೂಚನೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಜನವರಿ 31ರಂದು ಕೊಟ್ಟಾಯಂ ಸಮೀಪ ನಾಗರ ಹಾವು ರಕ್ಷಣೆ ಮಾಡಿದ್ದರು ವಾವಾ ಸುರೇಶ್. ಹಾವನ್ನು ಚೀಲಕ್ಕೆ ಹಾಕುವಾಗ ಅದು ಅವರ ಬಲಗಾಲಿನ ಮೊಣಕಾಲಿನ ಸಮೀಪ ಕಚ್ಚಿತ್ತು. ತಕ್ಷಣ ಅವರನ್ನು ಕೊಟ್ಟಾಯಂ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ವಾವಾ ಸುರೇಶ್‌ ಕೇರಳದ ಖ್ಯಾತ ಉರಗ ರಕ್ಷಕರು. ಫೇಸ್‌ಬುಕ್‌ನಲ್ಲಿ ಅವರಿಗೆ 2.1 ಮಿಲಿನನ್ ಫಾಲೋಯರ್ಸ್‌ಗಳಿದ್ದಾರೆ.

ವಾವಾ ಸುರೇಶ್‌ಗೆ ಹಲವು ಬಾರಿ ಹಾವು ಕಡಿದಿದೆ. 2020ರಲ್ಲಿ ತಿರುವನಂತಪುರಂನಲ್ಲಿ ಹಾವು ಕಡಿದಿತ್ತು. ಆಗ ಒಂದು ವಾರಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದು ಗುಣಮುಖಗೊಂಡಿದ್ದರು.